ಬಿಡದಿ-ನೈಸ್ ರೋಡ್ ಸಂಪರ್ಕಿಸಲು ಹೊಸ ರಸ್ತೆ: ಮಹತ್ವದ ಘೋಷಣೆ?
ಬೆಂಗಳೂರು, ಫೆಬ್ರವರಿ 14: ಉದ್ಯಾನ ನಗರಿ ಬೆಂಗಳೂರಿಗೆ ಹತ್ತಿರ ಇರುವ ರಾಮನಗರ ಜಿಲ್ಲೆಯ ಬಿಡದಿ ಕೈಗಾರಿಕಾ ಹಬ್ ಆಗಿ ಬೆಳೆಯುತ್ತಿದೆ. ಆದರೆ ಮೈಸೂರು ರಸ್ತೆಯಲ್ಲಿನ ಸಂಚಾರ ದಟ್ಟಣೆ ಕೈಗಾರಿಕೆಗಳಿಗೆ ತಲೆನೋವು ತಂದಿದೆ. ಆದ್ದರಿಂದ ಅವರು ಸರ್ಕಾರದ ಮುಂದೆ ಹೊಸ ಬೇಡಿಕೆ ಇಟ್ಟಿದ್ದಾರೆ.
ಬೆಂಗಳೂರು ನಗರದಿಂದ 34 ಕಿ. ಮೀ. ಮತ್ತು ಕೆಂಗೇರಿಯಿಂದ ಸುಮಾರು 18-19 ಕಿ. ಮೀ. ದೂರದಲ್ಲಿರುವ ಬಿಡದಿ ಹಲವು ಕೈಗಾರಿಕೆಗಳಿಗೆ ಆಶ್ರಯ ನೀಡಿದೆ. ಪ್ರತಿನಿತ್ಯ ಸಾವಿರಾರು ವಾಹನಗಳು ಬಿಡಗಿಗೆ ಸರಕುಗಳನ್ನು ಹೊತ್ತು ಸಾಗುತ್ತವೆ. ಆದರೆ ಸಂಚಾರ ದಟ್ಟಣೆ ಈಗ ಸವಾಲಾಗುತ್ತಿದೆ.
ಬಿಡದಿ ಕೈಗಾರಿಕಾ ಪ್ರದೇಶದ ಉದ್ಯಮಿಗಳು ಮತ್ತು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕೆಎಎಸ್‌ಎಸ್‌ಐಎ) ಬಿಡದಿ ಮತ್ತು ನೈಸ್ ರಸ್ತೆಗೆ ಸಂಪರ್ಕ ಕಲ್ಪಿಸಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಇದರಿಂದಾಗಿ ಬಿಡದಿಗೆ ಬರುವ ವಾಹನಗಳು ಮೈಸೂರು ರಸ್ತೆಯ ಸಂಚಾರ ದಟ್ಟಣೆಯಲ್ಲಿ ಸಿಲುಕುವುದು ತಪ್ಪಲಿದೆ ಎಂದು ಹೇಳಿದ್ದಾರೆ.
ಕೈಗಾರಿಕೋದ್ಯಮಿಗಳ ಬೇಡಿಕೆ; ಮಿನಿ ಬೆಂಗಳೂರು ಆಗಿ ಬೆಳೆಯುತ್ತಿರುವ ಬಿಡದಿಯಲ್ಲಿ ಸುಮಾರು 250 ರಿಂದ 270 ಕೈಗಾರಿಕೆಗಳಿವೆ. ಸುಮಾರು 30 ಸಾವಿರಕ್ಕೂ ಅಧಿಕ ಜನರು ಪ್ರತಿನಿತ್ಯ ಸಂಚಾರ ನಡೆಸುತ್ತಾರೆ. 2500ಕ್ಕೂ ಅಧಿಕ ವಾಹನಗಳು ಓಡಾಡುತ್ತವೆ. ಆದರೆ ಎಲ್ಲದಕ್ಕೂ ಸಮಸ್ಯೆ ಉಂಟಾಗಿರುವುದು ಮೈಸೂರು ರಸ್ತೆಯ ಟ್ರಾಫಿಕ್.
2025ರ ವೇಳೆಗೆ ಬಿಡದಿಗೆ ಪ್ರತಿನಿತ್ಯ 500 ಕಂಟೈನರ್ ಲಾರಿಗಳು ಸೇರಿದಂತೆ 4000 ವಾಹನಗಳು ಆಗಮಿಸಲಿವೆ ಎಂದು ಅಂದಾಜಿಸಲಾಗಿದೆ. ಆದ್ದರಿಂದಲೇ ಈಗಲೇ ಯೋಜನೆ ರೂಪಿಸಿ ಮುಂದಿನ ದಿನಗಳಲ್ಲಿ ಆಗುವ ಸಂಚಾರದ ಸಮಸ್ಯೆಯನ್ನು ಬಗೆಹರಿಸಿ ಎಂದು ಸರ್ಕಾರವನ್ನು ಒತ್ತಾಯಿಸಲಾಗುತ್ತಿದೆ.
ಕೆಎಎಸ್‌ಎಸ್‌ಐಎ ಅಧ್ಯಕ್ಷ ಶಶಿಧರ್ ಶೆಟ್ಟಿ ಮಾತನಾಡಿ, "ಬಿಡದಿಗೆ ನೈಸ್ ರೋಡ್ ಸಂಪರ್ಕ ಕಲ್ಪಿಸಬೇಕು ಎಂಬುದು ಹಲವು ವರ್ಷಗಳ ಬೇಡಿಕೆಯಾಗಿದೆ. ಈ ಬೇಡಿಕೆಗೆ 2024-25ನೇ ಸಾಲಿನ ಬಜೆಟ್‌ನಲ್ಲಿ ಮನ್ನಣೆ ಸಿಗುವ ಸಾಧ್ಯತೆ ಇದೆ" ಎಂದು ಹೇಳಿದ್ದಾರೆ.
"ಬಿಡದಿ ಕೈಗಾರಿಕಾ ವಲಯ ಮತ್ತು ನೈಸ್ ರಸ್ತೆ ಸಂಪರ್ಕಿಸುವ ಸುಮಾರು 13 ಕಿ. ಮೀ. ರಸ್ತೆಯನ್ನು ನಿರ್ಮಾಣ ಮಾಡಬೇಕಿದೆ. ನೈಸ್ ರಸ್ತೆ ಯೋಜನೆಯಂತೆ ನಡೆದಿದ್ದರೆ ಬಿಡದಿಗೆ ಈಗಾಗಲೇ ರಸ್ತೆ ಸಂಪರ್ಕ ಸಿಕ್ಕಿರುತ್ತಿತ್ತು. ಆದರೆ ಆ ಯೋಜನೆ ಅಪೂರ್ಣಗೊಂಡ ಕಾರಣ ಬಿಡದಿ ನೈಸ್ ರಸ್ತೆ ಸಂಪರ್ಕವಾಗಿಲ್ಲ" ಎಂದು ಶಶಿಧರ್ ಶೆಟ್ಟಿ ತಿಳಿಸಿದ್ದಾರೆ.

ಕರ್ನಾಟಕದ ಕಾಂಗ್ರೆಸ್ ಸರ್ಕಾರ ಬಿಡದಿಯ ಅಭಿವೃದ್ಧಿಗೆ ಈಗಾಗಲೇ ಯೋಜನೆ ರೂಪಿಸುತ್ತಿದೆ. ಕೈಗಾರಿಕೆಗಳಿಗೆ ಅನುಕೂಲವಾಗುವಂತೆ ಬಿಡದಿ ಅಭಿವೃದ್ಧಿಪಡಿಸಬೇಕು ಎಂಬುದು ಸರ್ಕಾರದ ಆಶಯ. ಇದಕ್ಕಾಗಿಯೇ 8 ವರ್ಷಗಳ ಹಿಂದೆ 'ಬಿಡದಿ ಸ್ಮಾರ್ಟ್ ಸಿಟಿ ಪ್ಲಾನಿಂಗ್ ಅಥಾರಿಟಿ' ಸ್ಥಾಪನೆ ಮಾಡಲಾಗಿತ್ತು.
ಈಗ ಅದನ್ನು ಸರ್ಕಾರ ಗ್ರೇಟರ್ 'ಬೆಂಗಳೂರು-ಬಿಡದಿ ಸ್ಮಾರ್ಟ್ ಸಿಟಿ ಯೋಜನೆ' ಎಂದು ಬದಲಾಯಿಸಿದೆ. ಈ ಮೂಲಕ ಬಿಡದಿಯ ಅಭಿವೃದ್ಧಿಗೆ ಸರ್ಕಾರ ಮೊದಲ ಹೆಜ್ಜೆ ಇಟ್ಟಿದೆ. ಇತಂಹ ಸಮಯದಲ್ಲಿಯೇ ಬಿಡದಿಯ ಸಂಚಾರ ಸಮಸ್ಯೆಗೆ ಪರಿಹಾರವನ್ನು ನೀಡಿದರೆ ಕೈಗಾರಿಕೆಗಳಿಗೆ ಸಹ ಅನುಕೂಲವಾಗಲಿದೆ.
ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗುವುದು ಕೈಗಾರಿಕಾ ವಾಹನಗಳಿಗೆ ಕಷ್ಟವಾಗುತ್ತದೆ. ಆದ್ದರಿಂದ ನೈಸ್ ರಸ್ತೆಗೆ ಸಂಪರ್ಕಿಸಿದರೆ ಬೆಂಗಳೂರು-ಪುಣೆ ಹೆದ್ದಾರಿಯಲ್ಲಿ ಬರುವ ವಾಹನಗಳು ನೈಸ್ ರಸ್ತೆ ಮೂಲಕ ನೇರವಾಗಿ ಬಿಡದಿಗೆ ಬರಬಹುದು, ಸಮಯವೂ ಸಹ ಉಳಿತಾಯವಾಗುತ್ತದೆ ಎಂಬುದು ಕೈಗಾರಿಕೆಗಳ ಬೇಡಿಕೆಯಾಗಿದೆ.
ಒಂದು ಕಡೆ ಬೆಂಗಳೂರು-ಮೈಸೂರು ರಸ್ತೆ ಅಭಿವೃದ್ಧಿಯಾಗಿದೆ. ಮತ್ತೊಂದು ಕಡೆ ಕನಕಪುರ ರಸ್ತೆಯನ್ನೂ ಅಭಿವೃದ್ಧಿಗೊಳಿಸಲಾಗುತ್ತಿದೆ. ಹಾಗೆಯೇ ನೈಸ್ ರಸ್ತೆ, ಬಿಡದಿ ಸಂಪರ್ಕಿಸಿದರೆ ಕೈಗಾರಿಕೆಗಳಿಗೆ ಸಹಕಾರಿಯಾಗಲಿದೆ ಎಂದು ಸರ್ಕಾರದ ಮುಂದೆ ಬೇಡಿಕೆ ಇಡಲಾಗಿದೆ.












Click it and Unblock the Notifications