ಬೆಂಗಳೂರು ಗ್ರಾಮಾಂತರ; ವಿಧಾನ ಪರಿಷತ್ ಚುನಾವಣೆಗೆ ಹೆಚ್ಚಾದ ಆಕಾಂಕ್ಷಿಗಳ ಕಸರತ್ತು
ರಾಮನಗರ, ನವೆಂಬರ್ 16: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಡಿ.10ರಂದು ಚುನಾವಣೆ ನಿಗದಿಯಾಗಿರುವ ಹಿನ್ನಲೆಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ಬೆಂಗಳೂರು ಗ್ರಾಮಾಂತರ ಅವಿಭಜಿತ ಜಿಲ್ಲೆಯ (ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆ) ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಒಬ್ಬರು ಆಯ್ಕೆಯಾಗಲು ಅವಕಾಶವಿದೆ. ಹೀಗಾಗಿ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಮೂರೂ ರಾಜಕೀಯ ಪಕ್ಷಗಳಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದೆ.
ಕಳೆದ 2015ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೋದರ ಸಂಬಂಧಿ ಎಸ್. ರವಿ 2267 ಮತ ಪಡೆದು ಪ್ರತಿಸ್ಪರ್ಧಿ ಜೆಡಿಎಸ್ ಅಭ್ಯರ್ಥಿ ಇ. ಕೃಷ್ಣಪ್ಪ (1889ಮತ) ವಿರುದ್ಧ 378 ಮತಗಳ ಅಂತರದಿಂದ ಗೆಲವು ಸಾಸಿದ್ದರು. ಬಿಜೆಪಿಯ ಹನುಮಂತೇಗೌಡರಿಗೆ ಕೇವಲ 170 ಮತಗಳು ಲಭಿಸಿದ್ದವು.
ಈ ಕ್ಷೇತ್ರವನ್ನು ಉಳಿಸಿಕೊಳ್ಳುವುದು ಕಾಂಗ್ರೆಸ್ ಪಾಲಿಗೆ ಸವಾಲು ತಂದೊಡ್ಡಿದೆ. ಜೆಡಿಎಸ್ ಗೆಲ್ಲುವ ಅಭ್ಯರ್ಥಿಯನ್ನು ಕಣಕ್ಕಿಳಿಸಿ ತನ್ನ ಕೋಟೆಯನ್ನು ಭದ್ರ ಪಡಿಸಿಕೊಳ್ಳಲು ಹಾಗೂ ಆಡಳಿತರೂಢ ಬಿಜೆಪಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಕೇಸರಿ ಪತಾಕೆ ಹಾರಿಸುವ ಉತ್ಸಾಹದೊಂದಿಗೆ ಚುನಾವಣೆ ಎದುರಿಸಲು ಸಜ್ಜಾಗುತ್ತಿವೆ.

ಕಾಂಗ್ರೆಸ್ ಪಕ್ಷದಿಂದ ಇಬ್ಬರು ಆಕಾಂಕ್ಷಿಗಳು
ಕೆಪಿಸಿಸಿ ಸಾರಥಿ ಡಿ.ಕೆ. ಶಿವಕುಮಾರ್‌ರವರಿಗೆ ವಿಧಾನ ಪರಿಷತ್ ಚುನಾವಣೆ ಪ್ರತಿಷ್ಠೆಯಾಗಿದ್ದು, ತನ್ನ ತವರು ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಈ ಬಾರಿ ಕೂಡ ತನ್ನ ಸಂಬಂಧಿಗೆ ಮಣೆ ಹಾಕುತ್ತಾರಾ ಅಥವಾ ಹೊಸ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುತ್ತಾರಾ ಕಾದು ನೋಡಬೇಕಿದೆ.
ಕಾಂಗ್ರೆಸ್‌ನಿಂದ ಎಸ್. ರವಿ ಮೂರನೇ ಬಾರಿಗೆ ಟಿಕೆಟ್ ಬಯಸಿದ್ದಾರೆ. ಮಾಗಡಿ ಕ್ಷೇತ್ರದ ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣರವರ ಸೋದರ ಸಂಬಂಧಿಯಾದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಎನ್. ಅಶೋಕ (ತಮ್ಮಾಜಿ) ಆಕಾಂಕ್ಷಿಯಾಗಿದ್ದು, ಸ್ಪರ್ಧೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಸಂಸದ ಡಿ.ಕೆ. ಸುರೇಶ್‌ರವರು ರವಿ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ. ಆದರೆ, ಡಿ.ಕೆ. ಶಿವಕುಮಾರ್‌ರವರು ಕುಟುಂಬ ರಾಜಕಾರಣ ಅಪವಾದದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಹೊಸಬರಿಗೆ ಅವಕಾಶ ಕಲ್ಪಿಸಲು ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಆದರೆ ಪಕ್ಷದ ಹೈಕಮಾಂಡ್ ರವಿ ಅವರಿಗೇ ಅವಕಾಶ ಕೊಡಲಿದೆಯೇ ಅಥವಾ ಹೊಸಬರಿಗೆ ಅವಕಾಶ ನೀಡುವ ಮೂಲಕ ಪ್ರಯೋಗಕ್ಕೆ ಮುಂದಾಗಲಿದೆಯೇ ನೋಡಬೇಕಿದೆ.

ಜೆಡಿಎಸ್‌ನಿಂದ ರಮೇಶಗೌಡ ಹೆಸರು ಮುನ್ನೆಲೆಗೆ
ಮಾಜಿ ಸಿಎಂ ಕುಮಾರಸ್ವಾಮಿಯವರಿಗೆ ರಾಮನಗರ ಕರ್ಮಭೂಮಿಯಾಗಿರುವ ಕಾರಣ ಜೆಡಿಎಸ್ ಪಕ್ಷಕ್ಕೆ ಈ ಚುನಾವಣೆ ಪ್ರತಿಷ್ಠೆ ತಂದೊಡ್ಡಿದೆ. ಅಲ್ಲದೇ ಸಂಘಟನೆ ದೃಷ್ಟಿಯಿಂದ ಹಲವು ಪ್ರಯೋಗಗಳಿಗೆ ಮುಂದಾಗಿರುವ ಎಚ್‌ಡಿಕೆಯವರು ಈ ಬಾರಿ ಯಾವ ದಾಳ ಉರುಳಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಕಳೆದ ಬಾರಿ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದ ಚಿತ್ರ ನಿರ್ಮಾಪಕ ಇ. ಕೃಷ್ಣಪ್ಪ, ಬಮೂಲ್ ಮಾಜಿ ನಿರ್ದೇಶಕ ಚನ್ನಪಟ್ಟಣದ ಲಿಂಗೇಶ್ ಕುಮಾರ್ ಹಾಗೂ ವಿಧಾನ ಪರಿಷತ್ ಸದಸ್ಯ ರಮೇಶ್ ಗೌಡ ಹೆಸರು ಕೇಳಿಬರುತ್ತಿವೆ.
ವಿಧಾನ ಪರಿಷತ್ ಚುನಾವಣೆಗೆ ಇ. ಕೃಷ್ಣಪ್ಪ ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ. ದಳಪತಿಗಳ ಮನವೊಲಿಸಿ ಟಿಕೆಟ್ ಪಡೆಯಲು ಲಿಂಗೇಶ್ ಕುಮಾರ್ ಲಾಭಿ ಆರಂಭಿಸಿದ್ದಾರೆ. ಇದರ ಜತೆಗೆ ಹಾಲಿ ವಿಧಾನ ಪರಿಷತ್ ಸದಸ್ಯ ರಮೇಶ ಗೌಡ ಹೆಸರು ಮುನ್ನಲೆಗೆ ಬಂದಿದೆ. ದೇವೇಗೌಡರ ಕುಟುಂಬಕ್ಕೆ ಆಪ್ತರಾಗಿರುವ ರಮೇಶ್ ಗೌಡರಿಗೆ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಿದೆ.

ಕಮಲ ಪಾಳಯದಲ್ಲಿ ಅಭ್ಯರ್ಥಿಗಾಗಿ ಹುಡುಕಾಟ
ವಿಧಾನ ಪರಿಷತ್ ಚುನಾವಣೆ ಬಿಜೆಪಿಗೆ ಸವಾಲಿನ ಪ್ರಶ್ನೆಯಾಗಿದೆ. ಚುನಾವಣೆ ಘೋಷಣೆಗೂ ಮುನ್ನವೇ ಹಲವು ಸುತ್ತಿನ ಪೂರ್ವಭಾವಿ ಸಭೆಗಳನ್ನು ನಡೆಸಿರುವ ಕಮಲ ಪಾಳಯದಲ್ಲಿ ಗೆಲ್ಲುವ ಕುದುರೆಗಾಗಿ ಹುಡುಕಾಟ ನಡೆದಿದೆ.
ಜೆಡಿಎಸ್ ವಿಧಾನ ಪರಿಷತ್ ಮಾಜಿ ಸದಸ್ಯ ಮರಿಲಿಂಗೇಗೌಡರನ್ನು ಸೆಳೆಯುವ ಪ್ರಯತ್ನ ನಡೆದಿದೆ. ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ದೊಡ್ಡಬಳ್ಳಾಪುರದ ಬಿ.ಸಿ. ನಾರಾಯಣಸ್ವಾಮಿ, ಹೊಸಕೋಟೆಯ ನಾರಾಯಣಸ್ವಾಮಿ ಆಕಾಂಕ್ಷಿಯಾಗಿದ್ದಾರೆ. ಅನ್ಯ ಪಕ್ಷದ ನಾಯಕರನ್ನು ಸೆಳೆದು ಕಣಕ್ಕಿಳಿಸಬೇಕೇ ಅಥವಾ ಪಕ್ಷದಲ್ಲಿರುವ ಆಕಾಂಕ್ಷಿಗೆ ಟಿಕೆಟ್ ನೀಡಬೇಕೆ ಎಂಬ ಚರ್ಚೆಗಳು ಬಿಜೆಪಿಯಲ್ಲಿ ನಡೆಯುತ್ತಿವೆ.
ಅಭ್ಯರ್ಥಿಗಳ ಹುಡುಗಾಟದ ನಡುವೆ ಮಾಜಿ ಸಚಿವ, ಹಾಲಿ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ತಮ್ಮ ಸಹೋದರ ಸಿ.ಪಿ. ರಾಜೇಶ್‌ರನ್ನು ಚುನಾವಣಾ ಕಣಕ್ಕೆ ಇಳಿಸುವ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಪ್ರಸ್ತುತ ಸರ್ಕಾರದಲ್ಲಿ ಮಂತ್ರಿಗಿರಿ ವಂಚಿತವಾಗಿರವ ಹಿನ್ನಲೆಯಲ್ಲಿ ತಮ್ಮ ಸಹೋದರನಿಗೆ ಟಿಕೆಟ್ ನೀಡುವಂತೆ ವರಿಷ್ಠರಲ್ಕಿ ಒತ್ತಡ ಹೇರಲಿದ್ದಾರೆ ಎನ್ನಲಾಗಿದೆ.

ಸ್ಥಳೀಯ ಕ್ಷೇತ್ರದ ವ್ಯಾಪ್ತಿ, ಮತದಾರ ಮತ್ತು ಮತಗಟ್ಟೆ ಸಂಖ್ಯೆ
ಬೆಂಗಳೂರು ಗ್ರಾಮಾಂತರ ಸ್ಧಳೀಯ ಸಂಸ್ಧೆಗಳ ಕ್ಷೇತ್ರಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲ್ಲೂಕುಗಳಾದ ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ ಹಾಗೂ ನೆಲಮಂಗಲ ತಾಲ್ಲೂಕು ಮತ್ತು ರಾಮನಗರ ಜಿಲ್ಲೆಯ ನಾಲ್ಕು ತಾಲ್ಲೂಕುಗಳಾದ ಮಾಗಡಿ, ರಾಮನಗರ, ಕನಕಪುರ ಮತ್ತು ಚನ್ನಪಟ್ಟಣ ತಾಲ್ಲೂಕುಗಳು ಒಳಪಟ್ಟಿವೆ.
2021ರ ನವೆಂಬರ್ 11ರಂದು ಮತದಾರರ ಪಟ್ಟಿಗಳ ಕರಡು ಪ್ರತಿಯನ್ನು ಪ್ರಕಟಿಸಲಾಗಿದ್ದು, ಅದರನ್ವಯ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ರಾಮನಗರ ಜಿಲ್ಲೆಗಳನ್ನು ಒಳಗೊಂಡಂತೆ ಈ ಕ್ಷೇತ್ರದಲ್ಲಿ ಒಟ್ಟು 3898 ಮತದಾರರಿದ್ದು, ಈ ಪೈಕಿ 1862 ಪುರುಷ ಮತದಾರರು ಹಾಗೂ 2036 ಮಹಿಳೆ ಮತದಾರರಿದ್ದಾರೆ.
ಬೆಂಗಳೂರು ಗ್ರಾಮಾಂತರ ಸ್ಥಳೀಯ ಸಂಸ್ಧೆಗಳ ಕ್ಷೇತ್ರದಲ್ಲಿ ಒಟ್ಟು 227 ಮತಗಟ್ಟೆಗಳಿದ್ದು, ಈಗಗಾಲೇ ಚುನಾವಣಾ ಆಯೋಗ ಎಲ್ಲಾ ತಯಾರಿಗಳನ್ನು ನಡೆಸಿದ್ದು, ಒಟ್ಟು 227 ಮತಗಟ್ಟೆಗಳಲ್ಲಿ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಗಳನ್ನು ಗುರುತು ಮಾಡಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಪೋಲಿಸ್ ಇಲಾಖೆಯೊಂದಿಗೆ ಚರ್ಚೆ ನಡೆಸಿದೆ.