Bengaluru-Mysuru expressway: ಬಿಡದಿಯಿಂದ ಬಂದ್ರೂ 400 ರೂ. ಟೋಲ್ ಕಟ್ಟಬೇಕಾ? ಟೆಂಪೋ ಚಾಲಕನ ಪ್ರಶ್ನೆ
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಇತ್ತೀಚೆಗಷ್ಟೇ ಉದ್ಘಾನೆಯಾಗಿದ್ದು, ಇಂದಿನಿಂದ ಟೋಲ್ ಸಂಗ್ರಹ ಆರಂಭವಾಗಿದೆ. ಹಾಗೆಯೇ ಟೋಲ್ ಶುಲ್ಕ ಹೆಚ್ಚಳದ ವಿರುದ್ಧ ವಾಹನ ಸವಾರರು ಕೆಂಡಕಾರಿದ್ದಾರೆ.
ರಾಮನಗರ, ಮಾರ್ಚ್, 14: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಇತ್ತೀಚೆಗಷ್ಟೇ ಉದ್ಘಾನೆಯಾಗಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇಂದಿನಿಂದ ಟೋಲ್ ಸಂಗ್ರಹ ಮಾಡಲು ಮುಂದಾಗಿದೆ. ಹಾಗೆಯೇ ಶೇಷಗಿರಿಹಳ್ಳಿ ಟೋಲ್‌ನಲ್ಲಿ ಶುಲ್ಕದ ವಿಚಾರವಾಗಿ ವಾಹನ ಸವಾರರು ಮತ್ತು ಟೋಲ್ ಸಿಬ್ಬಂದಿಗಳ ನಡುವೆ ವಾಗ್ವಾದವೇ ನಡೆದಿದೆ.
400 ರೂಪಾಯಿ ಕೊಡಬೇಕಾ?
ಟೋಲ್ ಶುಲ್ಕವನ್ನು ಹೆಚ್ಚಳ ಮಾಡಿದ್ದರಿಂದ ವಾಹನ ಸವಾರರು ಅಲ್ಲಿನ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಬಿಡದಿಯಿಂದ ಬಂದಂತಹ ಟೆಂಪೋ ಚಾಲಕನೊಬ್ಬ ಟೋಲ್ ಸಿಬ್ಬಂದಿಗೆ ಹಿಗ್ಗಾಮುಗ್ಗ ಕ್ಲಾಸ್ ತೆಗೆದುಕೊಂಡಿದ್ದಾನೆ. ಬಿಡದಿಯಿಂದ ಬಂದಿದ್ದೀನಿ 400 ರೂಪಾಯಿ ಕೊಡಬೇಕಾ? ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು ಗಲಾಟೆಯನ್ನು ನಿಯಂತ್ರಣ ಮಾಡಲು ಹರಸಾಹಸ ಪಟ್ಟಿದ್ದಾರೆ.

ಟೋಲ್ ಶುಲ್ಕ ಹೆಚ್ಚಳ, ಆಕ್ರೋಶ
ಮೊದಲಿನಿಂದಲೂ ಬೆಂಗಳೂರು-ಮೈಸೂರು ಹೆದ್ದಾರಿ ವಿಚಾರವಾಗಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ನಡುವೆ ಕ್ರೆಡಿಟ್ ವಾರ್‌ಗಳೇ ನಡೆದವು. ಇದೀಗ ಟೋಲ್ ಸಂಗ್ರಹದ ಸಮಯದಲ್ಲೂ ಟೋಲ್ ಶುಲ್ಕದ ಹೆಚ್ಚಳ ವಿಚಾರವಾಗಿ ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಹಲವು ಸಂಘಟನೆಗಳ ಮುಖಂಡರು ಬಿಜೆಪಿ ಸರ್ಕಾರದ ವಿರುದ್ಧ ಕೆಂಡಕಾರುತ್ತಿದ್ದಾರೆ.
ಕಾರ್ಯನಿರ್ವಹಿಸದ ಸೆನ್ಸಾರ್‌ಗಳು
ಅಲ್ಲದೇ ಹಲರವಾರು ಕಡೆ ಟೋಲ್‌ಗಳಲ್ಲಿ ಸೆನ್ಸಾರ್‌ಗಳು ಕಾರ್ಯನಿರ್ವಹಿಸದಿರುವುದು ಕೂಡ ವಾಹನ ಸವಾರರನ್ನು ಸಿಟ್ಟಿಗೇಳುವಂತೆ ಮಾಡಿದೆ. ಟೋಲ್‌ನ ಸೆನ್ಸಾರ್‌ಗಳಲ್ಲಿ ತಾಂತ್ರಿಕ ದೋಷದಿಂದ ಮೂರ್ನಾಲ್ಕು ಕಾರುಗಳು ಡ್ಯಾಮೇಜ್ ಆಗಿವೆ. ಇದರಿಂದ ರೊಚ್ಚಿದ್ದ ವಾಹನ ಸವಾರರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಟೋಲ್ ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕಾಂಗ್ರೆಸ್ ನಾಯಕರು ಕೂಡ ಟೋಲ್ ಸಂಗ್ರಹ ವಿರೋಧಿಸಿ ಪ್ರತಿಭಟನೆ ನಡೆಸಿದೆ.

ಬೆಂಗಳೂರು ದಕ್ಷಿಣದ ಕಣಿಮಿಣಿಕೆ ಮತ್ತು ರಾಮನಗರ ಬಳಿಯ ಶೇಷಗಿರಿಹಳ್ಳಿ ಟೋಲ್‌ನಲ್ಲಿದ್ದ ಸೆನ್ಸಾರ್ ಸರಿಯಾಗಿ ವರ್ಕ್ ಆಗದೇ ಹಲವು ವಾಹನಗಳಿಗೆ ಡ್ಯಾಮೇಜ್ ಆಗಿದೆ. ಭೀಮರ್ ಸೆನ್ಸಾರ್ ವೈಫಲ್ಯದಿಂದ ಮೂರ್ನಾಲ್ಕು ಕಾರುಗಳಿಗೆ ಡ್ಯಾಮೇಜ್ ಆಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಟೋಲ್ ಸಂಗ್ರಹ ವಿರೋಧಿಸಿ ಪ್ರತಿಭಟನೆ
ಇದೇ ವೇಳೆ ಟೋಲ್ ಸಂಗ್ರಹ ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಾಗೆಯೇ ಘಟನಾ ಸ್ಥಳದಲ್ಲಿ ಸ್ವಲ್ಪ ಸಮಯದವರೆಗೂ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕಪ್ಪು ಪಟ್ಟಿ ಪ್ರದರ್ಶಿಸಿ ಬಿಜೆಪಿ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸುವಾಗ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಹಲವು ಸಂಘಟನೆಗಳ ಮುಖಂಡರನ್ನು ವಶಕ್ಕೆ ಪಡೆದಿದ್ದಾರೆ.












Click it and Unblock the Notifications