ರಾಮನಗರ: ವೈದ್ಯಾಧಿಕಾರಿಗಳನ್ನು ಕ್ವಾರಂಟೈನ್ ಗೆ ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ
ರಾಮನಗರ, ಜೂನ್ 16: P-6,857 ಮಹಿಳೆಗೆ ಕೋವಿಡ್-19 ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮತ್ತು ಇತರೆ ಸಿಬ್ಬಂದಿಗಳನ್ನು ಕ್ವಾರಂಟೈನ್ ಮಾಡಬೇಕೆಂದು ಆಗ್ರಹಿಸಿ ರಾಮನಗರ ತಾಲೂಕಿನ ಬನ್ನಿಕುಪ್ಪೆ ಗ್ರಾಮಸ್ಥರು ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ಪ್ರತಿಭಟನೆ ನಡೆಸಿದರು.
ಕೊರೊನಾ ವೈರಸ್ ಸೋಂಕಿಗೆ ರಾಮನಗರದಲ್ಲಿ ಮೊದಲ ಬಲಿ
ಬನ್ನಿಕುಪ್ಪೆ ಗ್ರಾಮದ ಪಕ್ಕದ ಲಕ್ಕೋಜನಹಳ್ಳಿ ಗ್ರಾಮದ ವೃದ್ಧ ಮಹಿಳೆಗೆ ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದ್ದು, ಅವರು ಈಗ ಸದ್ಯ ವಿಕ್ಟೋರಿಯಾ ಆಸ್ಪತ್ರೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಾಥಮಿಕವಾಗಿ ಬನ್ನಿಕುಪ್ಪೆ ಆಸ್ಪತ್ರೆಯಲ್ಲಿ ಎರಡು ದಿನ ಚಿಕಿತ್ಸೆ ಪಡೆದಿದ್ದರು.
ಆ ಸಂದರ್ಭದಲ್ಲಿ ಬನ್ನಿಕುಪ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 9 ಮಂದಿ ಕರ್ತವ್ಯದಲ್ಲಿದ್ದರು. ಕೇವಲ ಒಬ್ಬರು ವೈದ್ಯಾಧಿಕಾರಿ ಇಬ್ಬರು ಸಿಬ್ಬಂದಿಗಳನ್ನು ಮಾತ್ರ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಕ್ಕೆ ಕಳಿಸಲಾಗಿತ್ತು, ಉಳಿದ ಸಿಬ್ಬಂದಿ ಮತ್ತು ವೈದ್ಯರನ್ನು ಕ್ವಾರಂಟೈನ್ ನಿಂದ ದೂರ ಉಳಿಸಿ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆ.
ಇದರಿಂದ ಸಿಟ್ಟಿಗೆದ್ದ ಗ್ರಾಮಸ್ಥರು, ಹಿರಿಯ ಅಧಿಕಾರಿಗಳು ಲಾಬಿ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದರಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೆ ಕೊರೊನಾ ವೈರಸ್ ಸೋಂಕು ಹರಡುವ ಭಯ ಹೆಚ್ಚಾಗಿದೆ. ಕೂಡಲೇ ಉಳಿದ ವೈದ್ಯರು ಹಾಗೂ ಇತರ ಸಿಬ್ಬಂದಿಗಳನ್ನು ಕ್ವಾರಂಟೈನ್ ಮಾಡಬೇಕೆಂದು ಬನ್ನಿಕುಪ್ಪೆ ಗ್ರಾಮಸ್ಥರು ಒತ್ತಾಯ ಮಾಡಿದರು.