ಜೆಡಿಎಸ್ ಪಕ್ಷಕ್ಕೆ ದ್ರೋಹ ಬಗೆದವರಿಗೆ ಮತದಾರರೇ ತಕ್ಕ ಉತ್ತರ ನೀಡಲಿದ್ದಾರೆ: ಎ.ಮಂಜುನಾಥ್ ಹೀಗೆ ಹೇಳಿದ್ದು ಯಾರಿಗೆ?
ಜೆಡಿಎಸ್ ಪಕ್ಷಕ್ಕೆ ಮೋಸ ಮಾಡಿದವರು ರಾಜಕೀಯವಾಗಿ ಎಂದೂ, ಎಲ್ಲಿಯೂ ಉದ್ಧಾರ ಆಗುವುದಿಲ್ಲ. ಹೀಗೆ ಎ.ಮಂಜುನಾಥ್ ಹೇಳಿದ್ದು ಯಾರಿಗೆ ಎಂದು ಇಲ್ಲಿ ತಿಳಿಯಿರಿ.
ರಾಮನಗರ, ಫೆಬ್ರವರಿ, 27: ಜೆಡಿಎಸ್ ಪಕ್ಷಕ್ಕೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಬೆನ್ನಿಗೆ ಚೂರಿ ಹಾಕಿ ಹೋದವರು ರಾಜಕೀಯವಾಗಿ ಎಂದೂ, ಎಲ್ಲಿಯೂ ಉದ್ಧಾರ ಆಗುವುದಿಲ್ಲ ಎಂದು ಮಾಗಡಿ ಶಾಸಕ ಎ.ಮಂಜುನಾಥ್ ಬಿಡದಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಂಚನಾಯಕನಹಳ್ಳಿ ಮತ್ತು ಬೈರಮಂಗಲ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಉಂಡ ಮನೆಗೆ ಕನ್ನ ಹಾಕಿ ಹೋದವರಿಗೆ ಮುಂದಿನ ಚುನಾವಣೆಯಲ್ಲಿ ಜನರೇ ತಕ್ಕ ಪಾಠ ಕಲಿಸಿದ್ದಾರೆ ಎಂದು ಮಾಜಿ ಶಾಸಕ ಬಾಲಕೃಷ್ಣ ಅವರಿಗೆ ಟಾಂಗ್ ನೀಡಿದರು.
ಅಲ್ಲದೇ ಜೆಡಿಎಸ್ ಎಷ್ಟು ಸೀಟು ಗೆಲ್ಲಲಿದೆ ಎಂಬ ಲೆಕ್ಕಾಚಾರ ಹಾಕುವ ಬದಲು ಕಾಂಗ್ರೆಸ್ ಎಷ್ಟು ಸೀಟು ಗಳಿಸಲಿದೆ ಎಂದು ಲೆಕ್ಕ ಹಾಕಲಿ. ರಾಮನಗರ, ತುಮಕೂರು, ಕೋಲಾರ, ಹಾಸನದಲ್ಲಿ ಯಾರ‍್ಯಾರು ಗೆಲ್ಲುತ್ತೇವೆ ಎಂಬುದನ್ನು ನಾವು ಈಗಲೇ ಹೇಳುತ್ತೇವೆ. ಧೈರ್ಯ ಇದ್ದರೆ ಅವರು ಗೆಲ್ಲುವ ಕ್ಷೇತ್ರಗಳ ಹೆಸರನ್ನು ಹೇಳಲಿ ಎಂದು ಶಾಸಕ ಎ.ಮಂಜುನಾಥ್ ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದರು.

ಕಾಂಗ್ರೆಸ್ ವಿರುದ್ದ ಎ. ಮಂಜುನಾಥ್ ಆಕ್ರೋಶ
ಇನ್ನು ಚನ್ನಪಟ್ಟಣ, ಬೆಂಗಳೂರು ದಕ್ಷಿಣ, ರಾಜರಾಜೇಶ್ವರಿ ನಗರ, ಅರಸಿಕೆರೆ, ಅರಕಲಗೂಡು, ಮದ್ದೂರು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳೇ ಇಲ್ಲ. ಆದರೂ ನಾವು 120 ಸ್ಥಾನ ಗೆಲ್ಲಲಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದಾರೆ. ಜೆಡಿಎಸ್ ಪಕ್ಷದ ಗಂಡುಗಳಿಗೆ ಗಾಳ ಹಾಕಲು ಅಭ್ಯರ್ಥಿಗಳ ಪಟ್ಟಿ ಪ್ರಕಟಿಸದೇ ಕಾಯುತ್ತಾ ಕುಳಿತಿದ್ದಾರೆ ಎಂದು ಟೀಕಿಸಿದರು.

ಎಚ್.ಸಿ.ಬಾಲಕೃಷ್ಣ ವಿರುದ್ಧ ವಾಗ್ದಾಳಿ
ಅಲ್ಲದೇ ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್‌ಗೆ ಬರುತ್ತಾರೆ ಎಂದು ಕಾಯುತ್ತಾ ಕುಳಿತಿದ್ದೀರಿ. ಪಕ್ಷದಲ್ಲಿದ್ದವರನ್ನು ಕಡೆಗಣಿಸಿ, ಪಕ್ಷದಿಂದ ಹೊರತಳ್ಳಿ, ಈಗ ಬೇರೆ ಪಕ್ಷದವರಿಗೆ ಗಾಳ ಹಾಕುವುದು ಕಾಂಗ್ರೆಸ್ ಸಂಸ್ಕೃತಿಯಾಗಿದೆ. ಸುಮಾರು 27 ಸಾವಿರ ಕೋಟಿ ರೂಪಾಯಿಯ ರೈತರ ಸಾಲ ಮನ್ನಾ ಮಾಡಿದ ದೇಶದ ಏಕೈಕ ಮುಖ್ಯಮಂತ್ರಿ ಕುಮಾರಣ್ಣ ಆಗಿದ್ದಾರೆ. ಆದರೆ ಅವರ ಹೆಸರು ಹೇಳಲು ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣಗೆ ಯೋಗ್ಯತೆ ಇಲ್ಲ. ಹತಾಶರಾಗಿ ಸುಳ್ಳು ಹೇಳಿಕೊಂಡು ತಿರುಗುವುದೇ ಅವರ ಕಾಯಕವಾಗಿದೆ.

ಜನವಿರೋಧಿ ನೀತಿಗೆ ಬೇಸತ್ತ ರಾಜ್ಯದ ಜನತೆ
ಎರಡೂ ರಾಷ್ಟ್ರೀಯ ಪಕ್ಷಗಳ ಜನವಿರೋಧಿ ನೀತಿಗಳಿಂದ ರಾಜ್ಯದ ಜನ ಬೇಸರಗೊಂಡು ಬದಲಾವಣೆಗಾಗಿ ಕಾಯುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಪಂಚರತ್ನ ರಥಯಾತ್ರೆ ಯಶಸ್ವಿಯಾಗಿದೆ. ರಾಜ್ಯದಲ್ಲಿ ಜೆಡಿಎಸ್ ಪರ ಅಲೆ ಎದ್ದಿರುವುದು ಪಂಚರತ್ನ ರಥಯಾತ್ರೆ ವೇಳೆ ಸಾಬೀತಾಗಿದೆ. ಮುಂಬರುವ ಚುನಾವಣೆಯಲ್ಲಿ 123ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಜೆಡಿಎಸ್ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸುಳ್ಳು ಹೇಳುವುದೇ ಮಾಜಿ ಶಾಸಕರ ಕಾಯಕ
ನಾನು ಸುಳ್ಳು ಹೇಳುತ್ತಿದ್ದೇನೆ ಎಂದು ಸುಳ್ಳು ಹೇಳಿಕೊಂಡು ತಿರುಗುವುದೇ ನಮ್ಮ ರಾಜಕೀಯ ವಿರೋಧಿಗಳ ಕಾಯಕವಾಗಿದೆ. ಯಾವುದರ ಬಗ್ಗೆ ನಾನು ಸುಳ್ಳು ಹೇಳುತ್ತಿದ್ದೇನೆ ಎಂದು ಒಂದೇ ಒಂದನ್ನು ಸಾಬೀತುಪಡಿಸುವಂತೆ ಸವಾಲು ಹಾಕಿದ್ದೇನೆ. ಆದರೂ ಅದನ್ನು ಅವರು ಸ್ವೀಕರಿಸಲು ಸಿದ್ಧರಿಲ್ಲ ಎಂದು ಬಾಲಕೃಷ್ಣ ವಿರುದ್ಧ ಶಾಸಕ ಎ.ಮಂಜುನಾಥ್ ವಾಗ್ದಾಳಿ ನಡೆಸಿದರು.
ಇನ್ನೂ ಈ ಬಾರಿಯ ಕಲಾಪದಲ್ಲಿ ರೇಷ್ಮೆ ಇಲಾಖೆಯಲ್ಲಿರುವ ನ್ಯೂನತೆಗಳ ಬಗ್ಗೆ ಸುದೀರ್ಘವಾಗಿ ಸದನದ ಗಮನ ಸೆಳೆದಿದ್ದೇನೆ. ರೇಷ್ಮೆ ಉದ್ದಿಮೆಗೆ ಉತ್ತೇಜನ ನೀಡಿದರೆ ಬೆಳೆಗಾರರ ಬದುಕು ಹಸನುಗೊಳ್ಳುವ ಜೊತೆಗೆ ರೇಷ್ಮೆ ಬೆಳೆಯುವ ಪ್ರದೇಶವೂ ಹೆಚ್ಚಳವಾಗಲಿದೆ. ಜೊತೆಗೆ ರೇಷ್ಮೆ ಮಾರಾಟಕ್ಕೆ ವಿಧಿಸುತ್ತಿರುವ ಜಿಎಸ್‍ಟಿಯನ್ನು ಕಡಿತಗೊಳಿಸಬೇಕು. ಈ ಬಗ್ಗೆ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದರು.
ರಾಜ್ಯದಲ್ಲಿ ಪ್ರತಿ ಲೀಟರ್ ಹಾಲಿಗೆ ಕೇವಲ 27 ರೂ. ನೀಡಲಾಗುತ್ತಿದೆ. ಅಕ್ಕಪಕ್ಕದ ರಾಜ್ಯಗಳಾದ ಕೇರಳ, ತಮಿಳುನಾಡು, ತೆಲಂಗಾಣ, ಆಂಧ್ರ ಪ್ರದೇಶ ರಾಜ್ಯಗಳಲ್ಲಿ ಪ್ರತಿ ಲೀಟರ್ ಹಾಲಿಗೆ 57 ರೂಪಾಯಿಗಳವರೆಗೂ ನೀಡಲಾಗುತ್ತಿದೆ. 10-15 ರೂಪಾಯಿ ಕಡಿಮೆ ದರ ನೀಡುವ ಮೂಲಕ ರಾಜ್ಯದ ಹೈನುಗಾರಿಕೆಗೆ ಏಕೆ ದ್ರೋಹ ಎಸಗಲಾಗುತ್ತಿದೆ? ಹಾಲಿನ ಉಪ ಉತ್ಪನ್ನಗಳನ್ನು ತಯಾರಿಸಿ, ಹೊರ ದೇಶಗಳಿಗೆ ರಫ್ತು ಮಾಡುವ ಕೌಶಲ್ಯ ವೃದ್ಧಿಯಾದರೆ ಮಾರ್ಕೆಟಿಂಗ್ ವಿಸ್ತರಣೆಯಾಗಿ ರೈತರಿಗೆ ಉತ್ತಮ ದರ ನೀಡಬಹುದು ಎಂದು ತಿಳಿಸಿದರು.












Click it and Unblock the Notifications