'ಬಿಜೆಪಿಯವರು ಹೊಡೆದಂಗೆ ಮಾಡ್ತಾರೆ, ಕಾಂಗ್ರೆಸ್ ನವರು ಅತ್ತಂಗೆ ಮಾಡ್ತಾರೆ, ಇಬ್ಬರದು ಬರೀ ಡ್ರಾಮಾ'
ರಾಮನಗರ, ಡಿ 24: ವಿಧಾನ ಮಂಡಲದ ಅಧಿವೇಶನದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಜನ ಪ್ರತಿನಿಧಿಯಾಗಿ ಗೆಸ್ಟ್ ಅಪೀಯರೆನ್ಸ್ ರೀತಿಯಲ್ಲಿ ಬಂದು ಹೋದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮತಾಂತರ ನಿಷೇಧ ಕಾಯಿದೆ ವಿಧಾನಸಭೆಯಲ್ಲಿ ಪಾಸ್ ಆಗಿದ್ದಕ್ಕೆ ಕಾಂಗ್ರೆಸ್ ನಾಯಕರನ್ನು ಲೇವಡಿ ಮಾಡಿದ್ದಾರೆ.
"ಮತಾಂತರ ನಿಷೇಧ ಕಾಯ್ದೆಯ ಬಗ್ಗೆ ಎರಡು ನಾಲಗೆಯ ನೀತಿ ಅನುಸರಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಸರಿಯಾಗಿ ಮಂಗಳಾರತಿ ಆಗಿದೆ. ಕಾಂಗ್ರೆಸ್ ನಾಯಕರು ಮತಾಂತರ ನಿಷೇಧ ಕಾಯ್ದೆ ಬಗ್ಗೆ ವೀರಾವೇಶದಿಂದ ಭಾಷಣ ಬಿಗಿದರು. ಕ್ರೈಸ್ತ ಫಾದರ್‌ಗಳ ಜತೆಗೆ ಸಭೆ ಮಾಡಿದ್ದರು" ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.
"ಮತಾಂತರ ನಿಷೇಧ ಮಸೂದೆ ಮಂಡಿಸುವ ಬಗ್ಗೆ ಸಿದ್ದರಾಮಯ್ಯ ಚಿಂತನೆ ನಡೆಸಿದ್ದರು. ಈಗ ಬೆಳಗಾವಿ ಅಧಿವೇಶನದಲ್ಲಿ ಅವರ ಮುಖಕ್ಕೆ ಮಂಗಳಾರತಿಯಾಗಿದೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಆಗ ಕಾನೂನು ಮಂತ್ರಿ ಆಗಿದ್ದ ಜಯಚಂದ್ರ ಅವರು ಈ ಕಾಯ್ದೆಯ ನೋಟ್ ತಂದಾಗ ಸಹಿ ಹಾಕಿದ್ದರು. ಬಳಿಕ ಅದನ್ನು ಆಗಿನ ಸಾಮಾಜ ಕಲ್ಯಾಣ ಖಾತೆ ಸಚಿವ ಆಂಜನೇಯ ಅವರ ಮುಂದೆ ಕೂಡ ಈ ನೋಟ್ ಹೋಗಿತ್ತು" ಎಂದು ಕುಮಾರಸ್ವಾಮಿ ಹೇಳಿದರು.
"ಈಗ ಯಾವ ಮುಖ ಹೊತ್ತುಕೊಂಡು ಕಾಂಗ್ರೆಸ್ ನಾಯಕರು ಮತಾಂತರದ ಬಗ್ಗೆ ಮಾತನಾಡ್ತಾರೆ. ಇವರು ಈ ನಾಡಿನ ಜನತೆಗೆ ರಕ್ಷಣೆ ಕೊಡುತ್ತಾರಾ? ಈಗಾಗಲೇ ಕಾಂಗ್ರೆಸ್ ನಾಯಕರು ಅಧಿಕಾರ ಹಿಡಿದೆವು ಎನ್ನುವ ಭ್ರಮಾ ಲೋಕದಲ್ಲಿದ್ದಾರೆ. ಆ ಭ್ರಮೆಯನ್ನು ಜನರೇ ಇಳಿಸುತ್ತಾರೆ, ಸ್ವಲ್ಪ ಕಾದು ನೋಡೋಣ" ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಈ ಮಹಾನ್ ನಾಯಕರಿಂದ ನಾವು ಪಾಠ ಕಲಿಯಬೇಕಿಲ್ಲ
"ಈ ಕಾಯ್ದೆಯ ಬಗ್ಗೆ ಚರ್ಚೆ ಮಾಡಲು ಕಾಂಗ್ರೆಸ್ ನಾಯಕರಿಗೆ ನೈತಿಕತೆ ಇಲ್ಲ, ಯಾವ ಮುಖ ಇದೆ? ಇವರ ಸರ್ಕಾರ ಇದ್ದಾಗ ಈ ಮಸೂದೆಯನ್ನು ಕ್ಯಾಬಿನೆಟ್ ಮುಂದೆ ಇವರೇ ತಂದಿದ್ದರು. ಈಗ ಬಿಜೆಪಿಯವರಿಗೆ ಅವರೇ ಅಸ್ತ್ರ ಕೊಟ್ಟಿದ್ದಾರೆ. ರಾಜ್ಯದ ಜನರಿಗೆ ರಕ್ಷಣೆ ಕೊಡುವ ಬಗ್ಗೆ ಈ ಮಹಾನ್ ನಾಯಕರಿಂದ ನಾವು ಪಾಠ ಕಲಿಯಬೇಕಿಲ್ಲ. 2023ಕ್ಕೆ ಜೆಡಿಎಸ್ ಶಕ್ತಿ ಏನೆಂದು ಜನ ತೋರಿಸುತ್ತಾರೆ"ಎನ್ನುವ ವಿಶ್ವಾಸದ ಮಾತನ್ನು ಕುಮಾರಸ್ವಾಮಿ ಆಡಿದ್ದಾರೆ.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನಿಜ ಬಣ್ಣ ಅಧಿವೇಶನದಲ್ಲಿ ಬಯಲು
"ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನಿಜ ಬಣ್ಣ ಅಧಿವೇಶನದಲ್ಲಿ ಬಯಲಾಗಿದೆ. ಬಿಜೆಪಿಯವರು ಹೊಡೆದಂಗೆ ಮಾಡುತ್ತಾರೆ, ಕಾಂಗ್ರೆಸ್ ನವರು ಅತ್ತಂಗೆ ಮಾಡ್ತಾರೆ. ಇವೆರಡು ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳು. ಮತಾಂತರ ನಿಷೇಧ ಕಾಯ್ದೆ ಬಗ್ಗೆ ಜೆಡಿಎಸ್ ವಿರೋಧ ಇದೆ. ನಮ್ಮ ಶಾಸಕರು ವಿರೋಧವಾಗಿ ಮತ ಹಾಕಿದ್ದಾರೆ" ಎಂದು ಕುಮಾರಸ್ವಾಮಿ ಈ ಸಂದರ್ಭದಲ್ಲಿ ಹೇಳಿದರು.

ಕಾಂಗ್ರೆಸ್ ನಾಯಕರು ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂದು 2013ರಲ್ಲಿ ಪಾದಯಾತ್ರೆ
"ಕಾಂಗ್ರೆಸ್ ನಾಯಕರು ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂದು 2013ರಲ್ಲಿ ಪಾದಯಾತ್ರೆ ಮಾಡಿದರು. ಪ್ರತಿ ವರ್ಷ 10 ಸಾವಿರ ಕೋಟಿ ಕೊಡುತ್ತೇವೆಂದು ಹೇಳಿದ್ದರು. ಕಳೆದ ದಿನ ಅಧಿವೇಶನದಲ್ಲಿ ಇದರ ಬಗ್ಗೆ ಚರ್ಚೆ ಮಾಡಿದ್ದೇನೆ. ವರ್ಷಕ್ಕೆ 10 ಸಾವಿರ ಕೋಟಿ ಕೊಡುತ್ತೇವೆ ಎಂದು ನಂಬಿಸಿದ್ದರು. ಈಗ 5 ವರ್ಷಕ್ಕೆ 8 ಸಾವಿರ ಕೋಟಿ ಕೊಟ್ಟಿದ್ದಾರೆ. ಈ 8 ಸಾವಿರ ಕೋಟಿಯಲ್ಲಿ ರೈತರ ಜಮೀನಿಗೆ ಒಂದು ಹನಿ ನೀರು ಹೋಯಿತಾ? ಮುಖ್ಯ ಕಾಲುವೆಯಲ್ಲಿ ಹನಿ ನೀರು ಹರಿಯಲಿಲ್ಲ. ಗುತ್ತಿಗೆದಾರರ ಜತೆ ಸೇರಿ ದುಡ್ಡು ಹಂಚಿಕೊಂಡರು" ಎನ್ನುವ ಆರೋಪವನ್ನು ಕುಮಾರಸ್ವಾಮಿ ಮಾಡಿದ್ದಾರೆ.

ಜನರನ್ನ ಮರಳು ಮಾಡಲು ಹೊರಟ್ಟಿದ್ದಾರೆ, ಕುಮಾರಸ್ವಾಮಿ ಆರೋಪ
"ಈಗ ಮೇಕೆದಾಟು ಬಗ್ಗೆ ರೌಂಡ್ ಹಾಕಿಕೊಂಡು ಬರುತ್ತಾರಂತೆ. ಕನಕಪುರ, ರಾಮನಗರ, ಬಿಡದಿ ಮಾರ್ಗವಾಗಿ 9 ದಿನ ಪಾದಯಾತ್ರೆ ಮಾಡುತ್ತಾರಂತೆ. ಯಾವ ಪುರುಷಾರ್ಥಕ್ಕೆ ಪಾದಯಾತ್ರೆ ಮಾಡ್ತಾರೆ ಇವರು? ಜೆಡಿಎಸ್ ಕೊಟ್ಟ ನೀರಾವರಿಗೂ ಕಾಂಗ್ರೆಸ್ ನೀರಾವರಿ ಕುರಿತ ಬೂಟಾಟಿಕೆಗೂ ಬಹಳ ವ್ಯತ್ಯಾಸವಿದೆ. ಜನರ ಪರವಾಗಿ, ನೀರಾವರಿ ಬಗ್ಗೆ ಮೊದಲು ರಾಜ್ಯದಲ್ಲಿ ಪಾದಯಾತ್ರೆ ಪ್ರಾರಂಭವಾಗಿದ್ದೆ ದೇವೇಗೌಡರಿಂದ. ಈಗ ಅದೇ ಪರಿಕಲ್ಪನೆಯನ್ನು ಹೈಜಾಕ್ ಮಾಡಿಕೊಂಡು ಈ ಭಾಗದ ಜನರನ್ನ ಮರಳು ಮಾಡಲು ಹೊರಟ್ಟಿದ್ದಾರೆ"ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.












Click it and Unblock the Notifications