ಅಮಿತ್ ಶಾ ಡಿಕೆಶಿ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ; ಲಿಂಗಪ್ಪ
ರಾಮನಗರ, ಆಗಸ್ಟ್ 31: "ಬಿಜೆಪಿ ನಾಯಕರು ಡಿಕೆಶಿಗೆ ಅನಗತ್ಯ ಕಿರುಕುಳ ನೀಡುತ್ತಿದ್ದಾರೆ. ಅಮಿತ್ ಶಾ ಪ್ರತೀಕಾರ ತೀರಿಸಿಕೊಳ್ಳುತ್ತಿದ್ದಾರೆ" ಎಂದು ಆರೋಪಿಸಿದ್ದಾರೆ ಎಂಎಲ್ ಸಿ ಸಿ.ಎಂ. ಲಿಂಗಪ್ಪ.
ಡಿ.ಕೆ.ಶಿವಕುಮಾರ್ ಅವರ ಇಡಿ ವಿಚಾರಣೆ ನಡೆಯುತ್ತಿದ್ದು, ಈ ಕುರಿತು ರಾಮನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿರುವ ಲಿಂಗಪ್ಪ ಅವರು, "ಡಿಕೆಶಿ ಅವರು ಗುಜರಾತ್ ಶಾಸಕರನ್ನು ಇಲ್ಲಿಟ್ಟುಕೊಂಡಿದ್ದರು. ಆಗ ಮೂರು ಜನರನ್ನು ಬಿಡುವಂತೆ ಅಮಿತ್ ಶಾ ಹೇಳಿದ್ದರು. ಆದರೆ ಡಿಕೆಶಿ ಒಪ್ಪಿರಲಿಲ್ಲ. ಅಂದಿನಿಂದಲೇ ಡಿಕೆಶಿ ಮೇಲೆ ಸೇಡು ಶುರುವಾಗಿದೆ. ನನ್ನ ಮಾತನ್ನು ಆಗ ಯಾರೂ ನಂಬಿರಲಿಲ್ಲ" ಎಂದರು.
"ಬಿಜೆಪಿಯ ಈ ನಡೆಯನ್ನು ಸಹಿಸಲು ಸಾಧ್ಯವಿಲ್ಲ. ಈ ಚಾಳಿಯನ್ನು ಬಿಜೆಪಿಯವರು ಬಿಡಬೇಕು. ಕಾಫೀ ಡೇ ಸಿದ್ಧಾರ್ಥ ಅವರ ಸಾವಿಗೂ ಐಟಿಯವರೇ ಕಾರಣ ಎಂಬುದನ್ನು ಮರೆಯಬಾರದು. ಡಿಕೆಶಿ ಜೊತೆ ನಾವಿದ್ದೇವೆ" ಎಂದು ತಿಳಿಸಿದರು.

ಕನಕಪುರದಲ್ಲಿ ಬೀದಿಗಿಳಿದ ಡಿಕೆಶಿ ಬೆಂಬಲಿಗರು: ಡಿಕೆಶಿ ಇಡಿ ವಿಚಾರಣೆ ಹಿನ್ನೆಲೆಯಲ್ಲಿ ಕನಕಪುರ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಡಿ.ಕೆ. ಶಿವಕುಮಾರ್ ಬೆಂಬಲಿಗರು ಪ್ರತಿಭಟನೆ ನಡೆಸಿದರು. ಕನಕಪುರ ಚನ್ನಬಸಪ್ಪ ವೃತ್ತದಲ್ಲಿ ಟೈರಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್ ಕೃಷ್ಣಮೂರ್ತಿ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ನೂರಾರು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಭಾಗಿಯಾಗಿದ್ದರು.












Click it and Unblock the Notifications