Bidadi: ಒಂದೇ ಮನೆಯಲ್ಲಿ 25 ಮನುಷ್ಯರ ತಲೆಬುರುಡೆ ಪತ್ತೆ: ಬೆಚ್ಚಿಬಿದ್ದ ಬಿಡದಿ ಮಂದಿ
ರಾಮನಗರ, ಮಾರ್ಚ್ 11: ಶಿವರಾತ್ರಿ ಮುಗಿಯುತ್ತಿದ್ದಂತೆ ಒಂಟಿ ಮನೆಯೊಂದರಲ್ಲಿ ಒಂದಲ್ಲ..ಎರಡಲ್ಲ ಬರೋಬ್ಬರಿ 25 ಮನುಷ್ಯರ ತಲೆಬುರುಡೆಗಳು ಪತ್ತೆಯಾಗಿದ್ದು, ಒಂದೇ ಕಡೆ ಬಹುಸಂಖ್ಯೆಯ ತಲೆ ಬುರುಡೆ ಕಂಡು ಜನ ಬೆಚ್ಚಿಬಿದ್ದಿದ್ದಾರೆ.
ಮನುಷ್ಯರ ತಲೆಬುರುಡೆಗಳು ಪತ್ತೆಯಾಗಿದ್ದು ಮಾತ್ರವಲ್ಲದೇ, ಅರಶಿನ, ಕುಂಕುಮ ಹಾಗೂ ಬಳಿಯ ಪಟ್ಟಿಗಳನ್ನು ಈ ಬುರುಡೆಗಳಿಗೆ ಬಳಿಯಲಾಗಿದೆ. ರಾಮನಗರ ಜಿಲ್ಲೆಯ ಬಿಡದಿ ಬಳಿಯ ಜೋಗನಹಳ್ಳಿ ಗ್ರಾಮದ ತೋಟದ ಮನೆಯೊಂದರಲ್ಲಿ ಇಪ್ಪತೈದು ಮನುಷ್ಯರ ತಲೆಬುರುಡೆಗಳು ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಪ್ರಕರಣ ಕೂಡ ದಾಖಲಾಗಿದ್ದು, ಬಿಡದಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಬಿಡದಿ ಸಮೀಪದ ಜೋಗನಹಳ್ಳಿ ಗ್ರಾಮದ ಬಲರಾಮ್ ಎಂಬ ವ್ಯಕ್ತಿಯ ಮನೆಯಲ್ಲಿ ಈ 25 ಮನುಷ್ಯರ ತಲೆಬುರುಡೆಗಳು ಕಂಡುಬಂದಿದೆ. ಬಲರಾಮ್ ಎನ್ನುವಾತ ತಲೆ ಬುರುಡೆ ಸಂಗ್ರಹ ಮಾಡುತ್ತಿದ್ದಾನೆ ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಬಲರಾಮ್ ತಲೆ ಬುರಡೆಗಳನ್ನು ಸಂಗ್ರಹಿಸಿ ಅವುಗಳಿಂದ ಮಾಟ-ಮಂತ್ರಕ್ಕೆ ಬಳಸಿಕೊಳ್ಳುತ್ತಾನೆ ಎಂದು ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಶಿವರಾತ್ರಿ ಮುಗಿದ ಬಳಿಕ ಬಲರಾಮ್ ಸ್ಮಶಾನದಲ್ಲಿ ಪೂಜೆ ಮಾಡುತ್ತಿದ್ದದನ್ನು ನೋಡಿದ ಜನರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗ್ರಾಮಸ್ಥರ ದೂರಿನ ಮೇರೆಗೆ ಸ್ಮಶಾನಕ್ಕೆ ಬಂದ ಬಿಡದಿ ಪೊಲೀಸರು ವಿಚಾರಣೆ ನಡೆಸಿ ಬಲರಾಮ್ನನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಪರಿಶೀಲನೆ ನಡೆಸಿದಾಗ ಬಲರಾಮ್ ತೋಟದ ಮನೆಯಲ್ಲಿ ಅನೇಕ ಮಾನವರ ತಲೆ ಬುರಡೆಗಳು ಪತ್ತೆಯಾಗಿವೆ.

ಬಲರಾಮ್ ತೋಟದ ಮನೆಯಲ್ಲಿರುವ ಮನುಷ್ಯರ ತಲೆಬುರುಡೆಗಳನ್ನು ಕಂಡ ಜನರು ಬೆಚ್ಚಿಬಿದ್ದಿದ್ದಾರೆ. ವಿಚಾರಣೆ ನಡೆಸಿದಾಗ ನಮ್ಮ ತಾತನ ಕಾಲದಿಂದಲೂ ಬುರುಡೆ ಪೂಜೆ ಮಾಡುತ್ತಾ ಬಂದಿದ್ದೇವೆ ಎಂದು ಬಲರಾಮ್ ಪೊಲೀಸರಿಗೆ ತಿಳಿಸಿದ್ದಾನೆ ಎನ್ನಲಾಗಿದೆ.
ಸದ್ಯ ಬಿಡದಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಬಲರಾಮ್ ಮನುಷ್ಯರ ತಲೆಬುರುಡೆಗಳನ್ನು ಎಲ್ಲಿಂದ ಸಂಗ್ರಹಿಸುತ್ತಿದ್ದಾನೆ, ಯಾಕೆ ಸಂಗ್ರಹಿಸುತ್ತಿದ್ದಾನೆ, ಈತನ ಅಸಲಿ ಉದ್ದೇಶವೇನು ಎನ್ನುವುದರ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.












Click it and Unblock the Notifications