ಲೋಕಸಭೆ ಚುನಾವಣೆ: ರಾಯಚೂರಿನಲ್ಲಿ ಕೈ-ಕಮಲ ಟಿಕೆಟ್ ಆಕಾಂಕ್ಷಿಗಳು ಯಾರ್ಯಾರು..?
ರಾಯಚೂರು, ಸೆಪ್ಟೆಂಬರ್ 08: 2024ರ ಲೋಕಸಭಾ ಚುನಾವಣೆಗೆ ಇನ್ನೂ ಸುಮಾರು ಒಂಬತ್ತು ತಿಂಗಳು ಕಾಯಬೇಕಿದೆ. ಆದರೆ ರಾಯಚೂರು ಲೋಕಸಭಾ ಕ್ಷೇತ್ರದ ಆಕಾಂಕ್ಷಿಗಳು ಅಲ್ಲಿಯವರೆಗೆ ಕಾಯಲು ಸಿದ್ಧರಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತ ಪ್ರಮುಖರು ಹಾಗೂ ಟಿಕೆಟ್ ವಂಚಿತರು ಲೋಕಸಮರಕ್ಕೆ ಈಗಲೇ ತಾಲೀಮು ನಡೆಸಿದ್ದಾರೆ.
ರಾಜ್ಯದ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ಪಟ್ಟಿ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ವಂಚಿತರಾದ ಕಾಂಗ್ರೆಸ್ ಮುಖಂಡ ದೇವಣ್ಣ ವಕೀಲ , ಸಚಿವ ಸತೀಶ್ ಜಾರಕಿಹೊಳಿ ಅವರ ಸಂಬಂಧಿ ರವಿ ಪಾಟೀಲ್ , ಮಾಜಿ ಸಂಸದ ದಿ.ವೆಂಕಟೇಶ ನಾಯಕ ಅವರ ಕುಟುಂಬದ ಸೊಸೆಯಂದಿರು ಈ ಬಾರಿ ಅಭ್ಯರ್ಥಿಯಾಗುವ ಇಂಗಿತ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದ ಮೂಲಕ ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ.

ಹಿಂದಿನ ಬಹುತೇಕ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ಹೆಚ್ಚು ಬಾರಿ ಗೆಲುವು ಸಾಧಿಸಿದ್ದು , ರಾಯಚೂರು ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ ಎನಿಸಿದೆ. ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿರುವುದು ಆಕಾಂಕ್ಷಿಗಳ ಹುಮ್ಮಸ್ಸು ದ್ವಿಗುಣಗೊಳಿಸಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಟಿಕೆಟ್ ಇನ್ನಿಲ್ಲದ ಬೇಡಿಕೆ ವ್ಯಕ್ತವಾಗಿದೆ.
ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2 ವಿಧಾನಸಭಾ ಕ್ಷೇತ್ರಗಳಲ್ಲಷ್ಟೇ ಬಿಜೆಪಿ ಗೆಲುವು ಸಾಧಿಸಿದೆ. ಈ ಮಧ್ಯೆಯೂ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ ಅವರು, ಮುಂದಿನ ಚುನಾವಣೆ ಬಗ್ಗೆಯೂ ಆಶಾವಾದ ಹೊಂದಿದ್ದಾರೆ. ಮತ್ತೊಮ್ಮೆ ಮೋದಿ ಅಲೆಯಲ್ಲಿ ಚುನಾವಣೆಗೆ ಸ್ಪರ್ಧಿಸುವ ಹೆಬ್ಬಯಕೆ ಹೊಂದಿದ್ದಾರೆ. ಆದರೆ ಟಿಕೆಟ್ ಪಡೆಯುವುದು ಸದ್ಯ ಅವರ ಮುಂದಿರುವ ದೊಡ್ಡ ಸವಾಲಾಗಿದೆ.

ಕಳೆದ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡ ಬಿ.ವಿ.ನಾಯಕ ಅವರು ಬಿಜೆಪಿ ಟಿಕೆಟ್ ನೀಡಿದರೆ ಮಾತ್ರ ಆ ಪಕ್ಷದಲ್ಲಿ ಉಳಿದುಕೊಳ್ಳುವ ಸಂಭವವಿದೆ ಎಂಬ ಮಾತು ಕೇಳಿ ಬಂದಿದೆ. ಈ ಮಧ್ಯೆ ಮಾಜಿ ಶಾಸಕ ಸುರುಪುರದ ರಾಜುಗೌಡ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ವಿಶೇಷ ಒಲವು ತೋರಿದ್ದಾರೆ.
ಮತ್ತೊಂದೆಡೆ ಮಾಜಿ ಸಚಿವ ಕೆ.ಶಿವನಗೌಡ ನಾಯಕ ಅವರೂ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲುಂಡಿದ್ದಕ್ಕೆ ಸೇಡು ತೀರಿಸಿಕೊಳ್ಳಲು ವೇದಿಕೆ ಹುಡುಕುತ್ತಿದ್ದಾರೆ. ಈ ಮಧ್ಯೆ ಬಿಜೆಪಿ ಎಸ್.ಟಿ.ಮೋರ್ಚಾ ರಾಜ್ಯಾಧ್ಯಕ್ಷ ತಿಪ್ಪರಾಜು ಹವಾಲ್ದಾರ್ ಕೂಡ ಆಕಾಂಕ್ಷಿಯಾಗಿದ್ದು ಟಿಕೆಟ್‌ಗಾಗಿ ಪ್ರಯತ್ನ ನಡೆಸುತ್ತಿದ್ದಾರೆ.
ಸದ್ಯಕ್ಕೆ ಕಾಂಗ್ರೆಸ್ ಬಿಜೆಪಿಯಲ್ಲಿ ವಿವಿಧ ಆಕಾಂಕ್ಷಿಗಳ ಹೆಸರು ತೇಲಿ ಬರುತ್ತಿವೆ. ಆದರೆ ಜೆಡಿಎಸ್ ಸೇರಿ ಇತರ ಪಕ್ಷಗಳಲ್ಲಿ ಇಲ್ಲಿಯವರೆಗೆ ಆಕಾಂಕ್ಷಿಗಳ ಹೆಸರು ಹೊರಬಿದ್ದಿಲ್ಲ. 'ರಾಯಚೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಬೇಕೆಂಬ ಆಕಾಂಕ್ಷಿಗಳಲ್ಲಿ ನಾನು ಒಬ್ಬ . ಪಕ್ಷದ ಹೈಕಮಾಂಡ್ ಸೂಚನೆ ಮೇರೆಗೆ ಕೆಲಸ ಮಾಡುತ್ತಿರುವೆ . ಒಂದು ವೇಳೆ ನನಗೆ ಟಿಕೆಟ್ ನೀಡಿದರೆ ಸೇವೆ ಸಲ್ಲಿಸುವೆ' ಎಂದು ಕಾಂಗ್ರೆಸ್ ಮುಖಂಡ ರವಿ ಪಾಟೀಲ್ ಹೇಳಿದ್ದಾರೆ.












Click it and Unblock the Notifications