ಮಾನ್ವಿ: 27 ಎಂಜಿನಿಯರ್ ಹುದ್ದೆ ಖಾಲಿ, ಇಲ್ಲಿದೆ ವಿವರ, ಇಲ್ಲಿದೆ ಸಂಪೂರ್ಣ ವಿವರ
ರಾಯಚೂರು, ಮೇ 26: ಜಿಲ್ಲೆಯ ಮಾನ್ವಿ ತಾಲೂಕಿನ ಜಲಸಂಪನ್ಮೂಲ ಇಲಾಖೆಯ ಉಪ ವಿಭಾಗದ ಕಚೇರಿಗಳಲ್ಲಿ 27 ಎಂಜಿನಿಯರ್ ಹುದ್ದೆಗಳ ಭರ್ತಿಗೆ ಹಿಂದಿನ ಸರ್ಕಾರಗಳು ನಿರ್ಲಕ್ಷ್ಯ ವಹಿಸಿರುವುದು ಪ್ರತಿ ವರ್ಷ ಕಾಲುವೆ ನೀರಿನ ಅಸಮರ್ಪಕ ನಿರ್ವಹಣೆಗೆ ಮುಖ್ಯ ಕಾರಣವಾಗಿದೆ.
ತುಂಗಭದ್ರಾ ಎಡದಂಡೆ ನಾಲೆ ವ್ಯಾಪ್ತಿಯ ಕೊನೆ ಭಾಗಕ್ಕೆ ಒಳಪಡುವ ಮೈಲ್ 70 ರಿಂದ 104ರವರೆಗೆ 20 ವಿತರಣಾ ಕಾಲುವೆಗಳ ನೀರು ನಿರ್ವಹಣೆಯ ಜವಾಬ್ದಾರಿಯನ್ನು ಜಲಸಂಪನ್ಮೂಲ ಇಲಾಖೆಯ ಸಿರವಾರ ಮುಖ್ಯ ವಿಭಾಗ ಹೊಂದಿದೆ. ಸಿರವಾರ ಮುಖ್ಯ ವಿಭಾಗದ ಅಡಿಯಲ್ಲಿ ತುಂಗಭದ್ರಾ ಎಡದಂಡೆ ನಾಲೆಯಿಂದ ಮಾನ್ವಿ ಹಾಗೂ ಸಿರವಾರ ತಾಲ್ಲೂಕಿನ ಸುಮಾರು 1.75 ಲಕ್ಷ ಎಕರೆ ಪ್ರದೇಶ ಅಧಿಕೃತವಾಗಿ ನೀರಾವರಿ ಸೌಲಭ್ಯ ಪಡೆದಿದೆ.

ಈ ಪ್ರದೇಶದಲ್ಲಿ ವಿತರಣಾ ಕಾಲುವೆ ಹಾಗೂ ಉಪ ಕಾಲುವೆಗಳ ಮೂಲಕ ಕಾಲುವೆ ನೀರು ನಿರ್ವಹಣೆಗಾಗಿ 4 ಉಪ ವಿಭಾಗಗಳ ಕಚೇರಿಗಳು ಇವೆ. ಸಿರವಾರ ಮುಖ್ಯ ವಿಭಾಗದ ಕಚೇರಿಯಲ್ಲಿ ಒಬ್ಬ ಸಹಾಯಕ ಎಂಜಿನಿಯರ್, 3 ಕಿರಿಯ ಎಂಜಿನಿಯರ್ ಹಾಗೂ ಒಬ್ಬ ತಾಂತ್ರಿಕ ಸಹಾಯಕ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳು ಸೇರಿ ಒಟ್ಟು 27 ಎಂಜಿನಿಯರ್ ಹುದ್ದೆಗಳು ಖಾಲಿ ಇವೆ.
ಸಿರವಾರ, ಮಾನ್ವಿ, ಹಿರೇಕೊಟ್ನೇಕಲ್ ಹಾಗೂ ಕವಿತಾಳ ಉಪ ವಿಭಾಗಗ ಕಚೇರಿಗಳಲ್ಲಿ ಮಂಜೂರಾದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಸಹಾಯಕ ಎಂಜಿನಿಯರ್, ಕಿರಿಯ ಎಂಜಿನಿಯರ್, ತಾಂತ್ರಿಕ ಸಹಾಯಕ ಹುದ್ದೆಗಳು ಹಲವು ವರ್ಷಗಳಿಂದ ಖಾಲಿ ಇವೆ.
ತುಂಗಭದ್ರಾ ಎಡದಂಡೆ ನಾಲೆ ವ್ಯಾಪ್ತಿಯ ಮೇಲ್ಭಾಗದಲ್ಲಿ ಸುಮಾರು 2 ಲಕ್ಷ ಎಕರೆ ಪ್ರದೇಶ ಅನಧಿಕೃತವಾಗಿ ನೀರಾವರಿ ಸೌಲಭ್ಯ ಪಡೆದಿರುವ ಬಗ್ಗೆ ದೂರುಗಳು ಇವೆ. ಹಾಗಾಗಿ ಪ್ರತಿ ವರ್ಷ ಕೊನೆಭಾಗದ ರೈತರು ಕಾಲುವೆ ನೀರಿನ ಸಮಸ್ಯೆಯಿಂದ ತೊಂದರೆ ಅನುಭವಿಸುವಂತಾಗಿದೆ. ಕೊನೆಭಾಗಕ್ಕೆ ಸಮರ್ಪಕವಾಗಿ ಕಾಲುವೆ ನೀರು ಹರಿಸಲು ಖಾಲಿ ಇರುವ ಎಂಜಿನಿಯರ್ ಹುದ್ದೆಗಳ ಭರ್ತಿಯಾಗಬೇಕು. ಈ ನಿಟ್ಟಿನಲ್ಲಿ ನೂತನ ಶಾಸಕರು, ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಗಮನಹರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯ ರೈತರ ಒತ್ತಾಯ.

ಕಾಲುವೆ ನೀರಿನ ಸಮರ್ಪಕ ನಿರ್ವಹಣೆಗಾಗಿ ಖಾಲಿ ಇರುವ ಎಂಜಿನಿಯರ್ ಹುದ್ದೆಗಳ ಭರ್ತಿಗೆ ಸರ್ಕಾರ ಗಮನಹರಿಸಬೇಕು ಎಂದು ರೈತ ಮುಖಂಡ ಶರಣಬಸವ ಬೆಟ್ಟದೂರು ಆಗ್ರಹಿಸಿದ್ದಾರೆ. ಇನ್ನು ಹುದ್ದೆಗಳು ಖಾಲಿ ಇರುವ ಕುರಿತು ಜಲಸಂಪನ್ಮೂಲ ಇಲಾಖೆಯ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಮಾನ್ವಿ ಸಹಾಯಕ ಎಂಜಿನಿಯರ್ ರಷೀದ್ ಖಾನ್ ತಿಳಿಸಿದ್ದಾರೆ.
ಮಾನ್ವಿ ತಾಲೂಕಿನ ಜಲಸಂಪನ್ಮೂಲ ಇಲಾಖೆಯ ಉಪ ವಿಭಾಗದ ಕಚೇರಿಗಳಲ್ಲಿ ಖಾಲಿ ಇರುವ ಎಂಜಿನಿಯರ್ ಹುದ್ದೆಗಳ ವಿವರ: ಸಿರವಾರದಲ್ಲಿ ಎಇಇ-2, ಎಇ-4 ಹುದ್ದೆಗಳು ಖಾಲಿ ಇದೆ. ಮಾನ್ವಿಯಲ್ಲಿ ಎಇಇ-3, ಎಇ-2, ಕವಿತಾಳದಲ್ಲಿ ಎಇಇ-1, ಎಇ-2 ಹಾಗೂ ಜೆಇ-2 , ಹಿರೇಕೊಟ್ನೇಕಲ್‌ನಲ್ಲಿ ಎಇಇ-1, ಎಇ-2 ಹಾಗೂ ಜೆಇ-3 , ಹಾಗೂ ಸಿರವಾರ ಮುಖ್ಯವಿಭಾಗದಲ್ಲಿ ಎಇ-1 ಹಾಗೂ ಜೆಇ-4 ಹುದ್ದೆಗಳು ಖಾಲಿ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications