Vande Bharat Express: ಮಂತ್ರಾಲಯ ಭಕ್ತರಿಗೆ ಸಿಹಿಸುದ್ದಿ, ವಂದೇ ಭಾರತ್ ಸಮಯ ಪರಿಷ್ಕರಣೆ
ರಾಯಚೂರು, ಡಿಸೆಂಬರ್ 10: ಬೆಂಗಳೂರು ನಗರ-ಕಲಬುರಗಿ ನಡುವೆ ವಂದೇ ಭಾರತ್ ರೈಲು ಸೇವೆ ಇದೆ. ಮಂತ್ರಾಲಯಕ್ಕೆ ತೆರಳುವ ಭಕ್ತರಿಗೆ ಈ ಐಷಾರಾಮಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಸಹಾಯಕವಾಗಿದೆ. ಆದರೆ ಈ ರೈಲಿನ ವೇಳಾಪಟ್ಟಿಯನ್ನು ಮಂತ್ರಾಲಯಕ್ಕೆ ಭೇಟಿ ನೀಡುವ ಭಕ್ತರ ಅನುಕೂಲಕ್ಕೆ ತಕ್ಕಂತೆ ಬದಲಾವಣೆ ಮಾಡಬೇಕು ಎಂದು ಬೇಡಿಕೆ ಇಡಲಾಗಿದೆ. ಈ ಕುರಿತು ರೈಲ್ವೆ ಸಚಿವರಿಗೆ ಸಹ ಮನವಿ ಸಲ್ಲಿಕೆ ಮಾಡಲಾಗಿದೆ.
2024ರ ಮಾರ್ಚ್ 15ರಿಂದ ಬೆಂಗಳೂರು ನಗರದ ಬೈಯಪ್ಪನಹಳ್ಳಿಯಲ್ಲಿರುವ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್-ಕಲಬುರಗಿ ನಡುವೆ ಕೇಸರಿ ಬಣ್ಣದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ಆರಂಭವಾಗಿದೆ. ವಾರದಲ್ಲಿ 6 ದಿನ ಸಂಚಾರ ನಡೆಸುವ ರೈಲು ಪ್ರಯಾಣಿಕರ ಮೆಚ್ಚುಗೆಯನ್ನು ಪಡೆದಿದ್ದು, ಸೀಟುಗಳು ಭರ್ತಿಯಾಗುತ್ತಿವೆ.

ಬೆಂಗಳೂರು-ಕಲಬುರಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಮಂತ್ರಾಲಯ ರೋಡ್ ನಿಲ್ದಾಣದಲ್ಲಿ ನಿಲುಗಡೆ ಇದೆ. ಇದರಿಂದಾಗಿ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ದರ್ಶನಕ್ಕೆ ತೆರಳುವ ಭಕ್ತರಿಗೆ ಅನುಕೂಲವಾಗಿದೆ. ಆದರೆ ಮಂತ್ರಾಲಯ ದೇವಾಲಯದ ಸಮಯಕ್ಕೆ ತಕ್ಕಂತೆ ರೈಲಿನ ವೇಳಾಪಟ್ಟಿ ಪರಿಷ್ಕರಣೆ ಮಾಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
ರೈಲ್ವೆ ಸಚಿವರಿಗೆ ಮನವಿ ಸಲ್ಲಿಕೆ: ಇಂಧನ ಸಚಿವ ಕೆ. ಜೆ. ಜಾರ್ಜ್ ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಬೆಂಗಳೂರು-ಕಲಬುರಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ವೇಳಾಪಟ್ಟಿಯನ್ನು ಮಂತ್ರಾಲಯ ಭಕ್ತರ ಅನುಕೂಲಕ್ಕೆ ತಕ್ಕಂತೆ ಬದಲಾವಣೆ ಮಾಡಬೇಕು ಎಂದು ಮನವಿ ಸಲ್ಲಿಸಿದ್ದಾರೆ.
ಸದ್ಯದ ವೇಳಾಪಟ್ಟಿಯಂತೆ ರೈಲು ಕಲಬುರಗಿಯಿಂದ ಬೆಳಗ್ಗೆ 5.15ಕ್ಕೆ ಹೊರಟು, ಮಧ್ಯಾಹ್ನ 2ಕ್ಕೆ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್, ಬೈಯಪ್ಪನಹಳ್ಳಿಗೆ ಆಗಮಿಸುತ್ತದೆ. ಮಧ್ಯಾಹ್ನ 2.40ಕ್ಕೆ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಹೊರಟು ರಾತ್ರಿ 11.30ಕ್ಕೆ ಕಲಬುರಗಿಗೆ ಆಗಮಿಸುತ್ತದೆ.
ಮಂತ್ರಾಲಯದಲ್ಲಿ ಪ್ರತಿದಿನ ಬೆಳಗ್ಗೆ 6 ರಿಂದ ರಾತ್ರಿ 8.30ರ ತನಕ ದರ್ಶನಕ್ಕೆ ಅವಕಾಶವಿದೆ. ಆದ್ದರಿಂದ ಬೆಂಗಳೂರು-ಕಲಬುರಗಿ ವಂದೇ ಭಾರತ್ ರೈಲು ಎರಡೂ ಕಡೆಯಿಂದ ಹೊರಡುವ ಸಮಯ ಪರಿಷ್ಕರಣೆ ಮಾಡಿ ಮಂತ್ರಾಲಯದ ಭಕ್ತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಲಾಗಿದೆ.
ರೈಲು ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್, ಬೈಯಪ್ಪನಹಳ್ಳಿಯಿಂದ ಹೊರಡುವ ಸಮಯವನ್ನು ಬೆಳಗ್ಗೆ 7 ಅಥವ 8ಕ್ಕೆ ನಿಗದಿಗೊಳಿಸಬೇಕು. ಕಲಬುರಗಿಯಿಂದ ಹೊರಡುವ ಸಮಯವನ್ನು ಬೆಳಗ್ಗೆ 8.30 ಅಥವ 9 ಗಂಟೆಗೆ ಪರಿಷ್ಕರಣೆ ಮಾಡಬೇಕು. ಆಗ ರೈಲಿಗೆ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಲಿದೆ. ಭಕ್ತರಿಗೂ ಸಹಾಯಕವಾಗಲಿದೆ ಎಂದು ಸಚಿವ ಕೆ. ಜೆ. ಜಾರ್ಜ್ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.
ರೈಲ್ವೆ ಇಲಾಖೆ ಬೆಂಗಳೂರು-ಕಲಬುರಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಮಯವನ್ನು ಮಂತ್ರಾಲಯ ಭಕ್ತರಿಗೆ ಅನುಕೂಲವಾಗುವಂತೆ ಬದಲಾವಣೆ ಮಾಡಿದರೆ ಸ್ವಂತ ವಾಹನ ಬಿಟ್ಟು ಭಕ್ತರು ರೈಲಿನಲ್ಲಿ ಸಂಚಾರ ನಡೆಸುತ್ತಾರೆ. ಇದರಿಂದಾಗಿ ರೈಲ್ವೆ ಇಲಾಖೆ ಆದಾಯವೂ ಹೆಚ್ಚಳವಾಗಲಿದೆ, ರೈಲು ಸೇವೆಗೆ ಬೇಡಿಕೆಯೂ ಸಹ ಇರಲಿದೆ ಎಂದು ಸಚಿವ ಜಾರ್ಜ್ ಹೇಳಿದ್ದಾರೆ.
ನೈಋತ್ಯ ರೈಲ್ವೆ ಅಂಕಿ ಅಂಶಗಳ ಪ್ರಕಾರ ಬೆಂಗಳೂರು-ಕಲಬುರಗಿ ರೈಲಿಗೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಮಾರ್ಚ್ 15 ರಿಂದ ಮೇ 1ರ ತನಕ ಶೇ 93.33ರಷ್ಟು ಆಸನಗಳು ಭರ್ತಿಯಾಗಿ ರೈಲು ಸಂಚಾರ ನಡೆಸಿದೆ. ರಾಜಧಾನಿ ಬೆಂಗಳೂರು ಮತ್ತು ಕಲ್ಯಾಣ ಕರ್ನಾಟಕದ ಕಲಬುರಗಿ ನಡುವೆ ಸಂಚಾರ ನಡೆಸುವ ಜನರಿಗೆ ಅನುಕೂಲವಾಗಿದೆ.












Click it and Unblock the Notifications