ರಾಯಚೂರು ಅಪಘಾತದಲ್ಲಿ ಮಕ್ಕಳು ಸಾವು: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದೇನು..?
ರಾಯಚೂರು, ಸೆಪ್ಟೆಂಬರ್ 06: ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಗ್ರಾಮದ ಬಳಿ ನಿನ್ನೆ ಶಾಲಾ ಬಸ್ ಹಾಗೂ ಸರ್ಕಾರಿ ಬಸ್ ನಡುವೆ ಅಪಘಾತ ಸಂಭವಿಸಿದೆ. ಶಾಲೆಗೆ ಹೊರಟಿದ್ದ ವೇಳೆ ಮಾನ್ವಿ ಹೊರವಲಯದಲ್ಲಿ ಶಾಲಾ ಬಸ್‌ಗೆ ರಾಯಚೂರು ಕಡೆಗೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿದೆ. ಈ ಘಟನೆಯಲ್ಲಿ ಶಾಲಾ ವಿದ್ಯಾರ್ಥಿಗಳಾದ ಸಮರ್ಥ್(7) ಹಾಗೂ ಶ್ರೀಕಾಂತ್(12) ದಾರುಣವಾಗಿ ಸಾವನ್ನಪ್ಪಿದ್ದಾರೆ.
ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, 32 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಈ ಭೀಕರ ಅಪಘಾತದಲ್ಲಿ ಮೂವರು ವಿದ್ಯಾರ್ಥಿಗಳ ಕೈ, ಕಾಲು ಕಟ್ ಆಗಿದೆ. 32 ಜನರ ಪೈಕಿ 18 ಗಾಯಾಳುಗಳಿಗೆ ರಿಮ್ಸ್ ಆಸ್ಪತ್ರೆಯಲ್ಲಿ ಮತ್ತು 14 ವಿದ್ಯಾರ್ಥಿಗಳಿಗೆ ರಾಯಚೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಈ ಘಟನೆಯ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಯಿಸಿದ್ದು, ರಾಯಚೂರು ಜಿಲ್ಲೆ ಮಾನ್ವಿಯ ಕಪಗಲ್ ಬಳಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ ಮತ್ತು ಶಾಲಾ ಬಸ್ ನಡುವೆ ಉಂಟಾದ ಅಪಘಾತದಲ್ಲಿ ಮೃತಪಟ್ಟ ಇಬ್ಬರು ವಿದ್ಯಾರ್ಥಿಗಳಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೆನೆ. ಹಲವರು ತೀವ್ರವಾಗಿ ಗಾಯಗೊಂಡಿರುವುದಕ್ಕೆ ತೀವ್ರ ವಿಷಾದ ವ್ಯಕ್ತಪಡಿಸುತ್ತೇನೆ.
ಪ್ರತಿಯೊಂದು ಜೀವವು ಅತ್ಯಮೂಲ್ಯವಾದದ್ದು, ಯಾವುದೇ ಪರಿಹಾರದಿಂದಲೂ ಜೀವಕ್ಕೆ ಬೆಲೆ ಕಟ್ಟಲಾಗದು. ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದ್ದಾಗ್ಯೂ ಸಹ ಚಾಲಕರ ಅತಿಯಾದ ವೇಗ, ನಿರ್ಲಕ್ಷ್ಯ ಮತ್ತು ರಸ್ತೆ ಸುರಕ್ಷತಾಕ್ರಮಗಳನ್ನು ಪಾಲಿಸದಿರುವುದರಿಂದ ಅಪಘಾತಗಳು ಸಂಭವಿಸುತ್ತಿರುವುದು ತೀವ್ರ ಕಳವಳಕಾರಿ.
ಚಾಲಕರು ರಸ್ತೆ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು, ಸದರಿ ಪ್ರಕರಣದಲ್ಲಿ ಸಾರಿಗೆ ನಿಗಮದ ಚಾಲಕರ ನಿರ್ಲಕ್ಷ ಕಂಡುಬಂದಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಈ ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿಗಳ ಕುಟುಂಬದವರಿಗೆ ಸಾಂತ್ವನ ತಿಳಿಸುತ್ತಾ ಸಾರಿಗೆ ಸಂಸ್ಥೆ ವತಿಯಿಂದ ತಲಾ ₹5 ಲಕ್ಷಗಳ ಪರಿಹಾರ ಹಾಗೂ ತೀವ್ರ ಗಾಯಗೊಂಡವರಿಗೆ ತಲಾ ₹3 ಲಕ್ಷಗಳ ಪರಿಹಾರ ಹಾಗೂ ಸಣ್ಣಪುಟ್ಟ ಗಾಯಗೊಂಡವರ ಚಿಕಿತ್ಸೆ ನೀಡಲು ಹಾಗೂ ಖುದ್ದು ಸ್ಥಳಕ್ಕೆ ತೆರಳಿ ವ್ಯವಸ್ಥೆ ಕಲ್ಪಿಸಲು ವ್ಯವಸ್ಥಾಪಕ ನಿರ್ದೇಶಕರು, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಶ್ರೀ ಬಿ.ರಾಚಪ್ಪ ಅವರಿಗೆ ಸೂಚಿಸಿದ್ದೇನೆ ಎಂದು ಸಚಿವರು ತಿಳಿಸಿದ್ದಾರೆ.












Click it and Unblock the Notifications