ಬಿಸಿಲನಾಡು ರಾಯಚೂರಿನಲ್ಲಿ ನೆತ್ತಿ ಸುಡುತ್ತಿರುವ ಬಿಸಿಲು, ಕಲ್ಲಂಗಡಿ ಹಣ್ಣಿನ ಮೊರೆಹೋದ ಜನ
ರಾಯಚೂರು, ಮಾರ್ಚ್, 12: ರಾಯಚೂರು ಜಿಲ್ಲೆಯಲ್ಲಿ ಬಿಸಿಲಧಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನರು ಈ ಧಗೆಯನ್ನು ಕಡೆಮೆ ಮಾಡಿಕೊಳ್ಳಲು ಕಲ್ಲಂಗಡಿ, ಕರ್ಬೂಜ ಹಣ್ಣಿನ ಮೊರೆ ಹೋಗುತ್ತಿದ್ದಾರೆ. ಆದ್ದರಿಂದ ಜಿಲ್ಲೆಯಲ್ಲಿ ಕರಬೂಜ, ಕಲ್ಲಂಗಡಿ ಹಣ್ಣಿನ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದೆ.
ಬೇಸಿಗೆ ಪ್ರಾರಂಭವಾದರೆ ಸಾಕು ಜಿಲ್ಲೆಯಲ್ಲಿ ಜನರು ಬಿಸಿಲಿನ ತಾಪಕ್ಕೆ ನಲುಗುತ್ತಿದ್ದು, ತಣ್ಣನೆಯ ಪದಾರ್ಥ, ಎಳನೀರು ಹಾಗೂ ಕಲ್ಲಂಗಡಿ ಮೊರೆ ಹೋಗುತ್ತಿದ್ದಾರೆ. ಇದರಿಂದ ಕಲ್ಲಂಗಡಿ ಮಾರಾಟಗಾರರು ಬೇಸಿಗೆಗೂ ಮುನ್ನವೇ ಹೆಚ್ಚಿನ ಲಾಭ ಪಡೆಯುತ್ತಿದ್ದಾರೆ. ಜಿಲ್ಲಾ ಕೇಂದ್ರದ ಪ್ರಮುಖ ರಸ್ತೆ ಬದಿಗಳಲ್ಲಿ ವ್ಯಪಾರಿಗಳು ತಂದ ರಾಶಿ ರಾಶಿ ಕಲ್ಲಂಗಡಿ ಹಣ್ಣುಗಳು ಇದೀಗ ದಾರಿಹೋಕರನ್ನು ದಾಹ ತಣಿಸಲು ಕೈಬೀಸಿ ಕರೆಯುತ್ತಿವೆ.

ಬಿಸಿಲನಾಡಿನಲ್ಲಿ ಕಲ್ಲಂಗಡಿಗೆ ಭಾರಿ ಬೇಡಿಕೆ
ಹಾಗೆಯೇ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ, ನಗರಸಭೆ ಕಚೇರಿ ರಸ್ತೆ, ಬಸ್ ನಿಲ್ದಾಣ, ಸ್ಟೇಷನ್ ರಸ್ತೆ ಸೇರಿ ಹಲವಡೆ ವ್ಯಾಪಾರಿಗಳು ಕಲ್ಲಂಗಡಿ ಸ್ಟಾಲ್ ತೆಗೆದು ಭರ್ಜರಿ ವ್ಯಾಪಾರದಲ್ಲಿ ಕಾರ್ಯನಿರತರಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಬೇಸಿಗೆ ಸಮಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗಿತ್ತು. ಇದರಿಂದ ಕಲ್ಲಂಗಡಿ ವ್ಯಾಪಾರ ನಡೆಯದೇ ಖರೀದಿಸಿ ಮಾರಾಟಕ್ಕಿಟ್ಟ ಹಣ್ಣುಗಳು ಇಟ್ಟಲ್ಲೇ ಕೊಳೆಯುತ್ತಿದ್ದು, ಇದರಿಂದ ತುಂಬಾ ನಷ್ಟ ಅನುಭವಿಸಿದ್ದೆವು ಎಂದು ಆತಂಕ ವ್ಯಕ್ತಪಡಿಸಿದರು.
ಕಲ್ಲಂಗಡಿ ದರಗಳ ವಿವರ ಇಲ್ಲಿದೆ
ಇದೀಗ ವ್ಯಾಪಾರ ಹೆಚ್ಚಾಗಿದೆ. ಒಂದು ಹಣ್ಣು 3 ರಿಂದ 7 ಕೆ.ಜಿಯವರೆಗೆ ತೂಗೂತ್ತದೆ. ಒಂದು ಹೋಳು ಕಲ್ಲಂಗಡಿ ಹಣ್ಣನ್ನು 20 ರೂಪಯಿಗೆ ಮಾರಟ ಮಾ0ಡಲಾಗುತ್ತಿದೆ. ತೂಕದ ಲೆಕ್ಕದಲ್ಲಿ ಇದು ಲಾಭದಾಯಕವಾಗಿದೆ. ಇದಲ್ಲದೇ ಕೆಜಿಗಟ್ಟಲೇ ಹಾಗೂ ಹಣ್ಣಿನ ಗಾತ್ರದ ಮೇಲೆ ಮಾರುವುದರಿಂದ ಲಾಭವಾಗುತ್ತದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ.
ನೆರೆಯ ಆಂಧ್ರಪ್ರದೇಶ, ತೆಲಂಗಾಣ ಹಾಗೂ ವಿಜಯಪುರ ,ಕೋಲಾರ ಭಾಗಗಳಿಂದ ಲೋಡ್‌ಗಟ್ಟಲೇ ಕಲ್ಲಂಗಡಿ ಹಣ್ಣುಗಳು ಜಿಲ್ಲೆಗೆ ಬರುತ್ತಿದೆ. ತೋಟದ ಮಾಲೀಕನಿಂದ ಪ್ರತಿ ಕೆ.ಜಿ.ಯನ್ನು 8 ರಿಂದ 10 ರೂಪಾಯಿಗೆ ಖರೀದಿಸಿ ವ್ಯಾಪಾರಿಗಳಿಗೆ 20 ರಿಂದ 30 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ಕಳೆದೊಂದು ವಾರದಿಂದ ಬಿಸಿಲಿನ ತಾಪ ಹೆಚ್ಚಾಗಿದ್ದು, ಕಲ್ಲಂಗಡಿ ಹಣ್ಣಿನ ವ್ಯಾಪಾರ ಚುರುಕು ಪಡೆದಿದೆ.

ದಿನಕ್ಕೆ ಎಷ್ಟು ಹಣ್ಣುಗಳು ಮಾರಾಟವಾಗುತ್ತಿವೆ?
ಸದ್ಯ ದಿನಕ್ಕೆ ನಗರದಲ್ಲಿ 3 ರಿಂದ 4 ಟನ್ ಹಣ್ಣು ಮಾರಾಟವಾಗುತ್ತಿದೆ. ಬಿಸಿಲಿನ ತಾಪ ಇನ್ನಷ್ಟು ತೀವ್ರ ಸ್ವರೂಪ ಪಡೆದರೆ ಕಲ್ಲಂಗಡಿಗೆ ಇನ್ನು ಭಾರಿ ಬೇಡಿಕೆ ಬರುತ್ತದೆ. ಅಲ್ಲದೇ ಶ್ರೀಶೈಲಕ್ಕೆ ಪಾದಯಾತ್ರೆ ಪ್ರಾರಂಭವಾದರಂತೂ ಭರ್ಜರಿ ವ್ಯಾಪಾರ ಆಗುತ್ತದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ಕಲ್ಲಂಗಡಿ ಸುಗ್ಗಿ ಈಗಷ್ಟೇ ಆರಂಭವಾಗಿದ್ದು, ಬಿಸಿಲಿನ ತಾಪ ಹೆಚ್ಚಾದರೆ ಹೊಟ್ಟೆ ತಂಪಾಗಿಸಲು ಕಲ್ಲಂಗಡಿ ಹಣ್ಣು ತಿನ್ನಲು ಜನರ ದಂಡೇ ಹರಿದುಬರುತ್ತದೆ.
ಜೂನ್‌ವರೆಗೂ ಕಲ್ಲಂಗಡಿ ವ್ಯಾಪಾರ ಮಾಡುತ್ತೇವೆ. ನಿತ್ಯ ನಮ್ಮಲ್ಲಿ 80 ರಿಂದ 100 ಹಣ್ಣು ಮಾರಾಟವಾಗುತ್ತಿದ್ದು, ದಿನಕ್ಕೆ 1 ರಿಂದ 2 ಸಾವಿರ ರೂಪಾಯಿವರೆಗೂ ಆದಾಯ ಗಳಿಸುತ್ತಿದ್ದೇವೆ. ಕಳೆದ ಎರಡು ವರ್ಷದಿಂದ ಮಹಾಮಾರಿ ಕೊರೊನಾ ಹಿನ್ನೆಲೆ ಜಿಲ್ಲೆಯಲ್ಲಿ ಕಲ್ಲಂಗಡಿ ಹಣ್ಣಿನ ವ್ಯಾಪಾರ ಕಡಿಮೆಯಾಗಿತ್ತು. ಇದರಿಂದ ನಮಗೆ ಸಂಪೂರ್ಣ ನಷ್ಟವಾಗಿತ್ತು. ಆದರೆ ಈ ವರ್ಷ ಬೇಸಿಗೆ ಮುನ್ನವೇ ಹೆಚ್ಚಿನ ಸಂಖ್ಯೆಯಲ್ಲಿ ಕಲ್ಲಂಗಡಿ ಮಾರಾಟವಾಗಿದೆ ಎಂದು ಕಲ್ಲಂಗಡಿ ವ್ಯಾಪಾರಿ ರಾಮಪ್ಪ ಹೇಳಿದರು.












Click it and Unblock the Notifications