ಪ್ರವಾಹದ ಭೀತಿಯಲ್ಲೂ ಗುರ್ಜಾಪುರ್ ಬ್ಯಾರೇಜ್ ತೆರೆಯಲು ಕ್ರೇನ್ ಬಳಕೆ!
ರಾಯಚೂರು, ಜುಲೈ 12: ಕೃಷ್ಣಾ ನದಿ ಮೈದುಂಬಿ ಹರಿಯುತ್ತಿದ್ದು, ರಾಯಚೂರು ತಾಲೂಕಿನ ಗುರ್ಜಾಪುರ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ಬ್ರಿಡ್ಜ್ ಕಂ ಬ್ಯಾರೇಜ್ ಗೇಟ್‌ಗಳನ್ನು ತೆಗೆಯಲು ಕ್ರೇನ್‌ಗೆ ದಪ್ಪವಾದ ಹಗ್ಗವನ್ನು ಕಟ್ಟಿಕೊಂಡು ನದಿಯಲ್ಲಿ ಯುವಕನೊಬ್ಬ ಇಳಿಯಲು ಯತ್ನಿಸಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಪಾಯ ಲೆಕ್ಕಿಸದೇ ಸುಮಾರು 100 ಅಡಿ ಎತ್ತರದ ಸೇತುವೆಯಿಂದ ಯುವಕನನ್ನು ನದಿಗೆ ಇಳಿಸಲು ಆರ್‌ಟಿಪಿಎಸ್ ಅಧಿಕಾರಿಗಳು ಹುಚ್ಚಾಟಕ್ಕೆ ಸಾರ್ವಜನಿಕರು ಕಿಡಿಕಾರಿದ್ದಾರೆ.
Recommended Video
ನೀರಿನ ರಭಸದಲ್ಲಿ ಒಂದು ಕ್ಷಣ ಮೈಮರೆತರೂ ನದಿಯಲ್ಲಿ ಕೊಚ್ಚಿಕೊಂಡು ಹೋಗುವ ಸಾಧ್ಯತೆ ಹೆಚ್ಚಿದೆ. ಆದರೂ ಇದನ್ನು ಲೆಕ್ಕಿಸದೇ ಕ್ರೇನ್ ಮೂಲಕ ಯುವಕನನ್ನು ನದಿಗೆ ಇಳಿಸುವ ವಿಡಿಯೋ ಮಾಡಿದ ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ.
ಜಲಾಶಯದಿಂದ 1 ಲಕ್ಷ 50 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಹಿನ್ನೆಲೆಯಲ್ಲಿ ಕೃಷ್ಣಾನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಗುರ್ಜಾಪುರ ಬ್ಯಾರೇಜ್ ಬಾಕಿ ಇರುವ ನೂರು ಗೇಟ್‌ಗಳನ್ನು ತೆರೆಯಲು ಆರ್‌ಟಿಪಿಎಸ್ ಅಧಿಕಾರಿಗಳು ಈ ಸಾಹಸ ಮಾಡಿದ್ದಾರೆ.

ಗೇಟ್‌ಗಳನ್ನು ತೆಗೆಯಲು ಪ್ರಯತ್ನಿಸಿದ ಕಾರ್ಮಿಕ, ನದಿಯಲ್ಲಿ ನೀರಿನ ರಭಸ ಮತ್ತು ಸುಳಿ ಇದ್ದ ಕಾರಣ, ಭಯಪಟ್ಟು ಆಗುತ್ತಿಲ್ಲ ಎಂದು ಕೂಗಿ ಹೇಳಿದ್ದರಿಂದ ಮೇಲೆಕ್ಕೆ ಎತ್ತಿದ್ದಾರೆ. ನೀರಿನ ರಭಸದಲ್ಲಿ ಒಂದು ಕ್ಷಣ ಮೈಮರೆತರೂ ನದಿಯಲ್ಲಿ ಕಾರ್ಮಿಕ ಕೊಚ್ಚಿಕೊಂಡು ಹೋಗುವ ಸಾಧ್ಯತೆ ಇತ್ತು. ಆದರೂ ಇದನ್ನು ಲೆಕ್ಕಿಸದೇ ಆರ್‌ಟಿಪಿಎಸ್ ಅಧಿಕಾರಿಗಳು ಜೆಸಿಬಿ ಮೂಲಕ ಕಾರ್ಮಿಕನನ್ನು ನದಿಗೆ ಇಳಿಸಿ, ಆತನ ಪ್ರಾಣದ ಜೊತೆಗೆ ಚೆಲ್ಲಾಟವಾಡಿರುವುದಕ್ಕೆ ಆಕ್ರೋಶ ಕಾರಣವಾಗಿದೆ.
ಆರ್‌ಟಿಪಿಎಸ್ ವಿದ್ಯುತ ಘಟಕಗಳ ಉತ್ಪಾದನೆಗಾಗಿ ನೀರಿನ ಸಂಗ್ರಹಕ್ಕಾಗಿ ರಾಯಚೂರು ತಾಲೂಕಿನ ಗುರ್ಜಾಪುರ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಮಾಡಲಾಗಿದೆ. 2015ರ ಜನವರಿ 28ರಂದು ಬೆಂಗಳೂರು ಮೂಲದ ರಘು ಇನ್ಫ್ರಾ ಸಂಸ್ಥೆ ಕಾಮಗಾರಿಗೆ ಚಾಲನೆ ನೀಡಿದೆ. 0.46 ಟಿಎಂಸಿ ನೀರಿನ ಸಂಗ್ರಹದ ಯೋಜನೆ ಇದಾಗಿದೆ. 194 ಗೇಟ್ ಅಳವಡಿಸಲಾಗಿದೆ. 125 ಕೋಟಿ ರೂ.ಗೂ ಹೆಚ್ಚಿನ ಮೊತ್ತದಲ್ಲಿ 1170 ಮೀಟರ್ ಉದ್ದದ ಬ್ಯಾರೇಜ್ ನಿರ್ಮಾಣ ಮಾಡಲಾಗಿದೆ.
94 ಗೇಟ್‌ಗಳು ಮಾತ್ರ ತೆರವು
ಕೃಷ್ಣಾನದಿಗೆ ಅಡ್ಡಲಾಗಿ ಕಟ್ಟಿರುವ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್‌ನಲ್ಲಿ ಒಟ್ಟು 194 ಗೇಟ್‌ಗಳಿದ್ದು, 94 ಗೇಟ್‌ಗಳನ್ನು ತೆರೆಯಲಾಗಿದ್ದು, ಇನ್ನುಳಿದ 100 ಗೇಟ್‌ಗಳನ್ನು ಮುಚ್ಚಲಾಗಿದೆ. ಈಗ ಕೃಷ್ಣಾನದಿ ತುಂಬಿ ಹರಿಯುತ್ತಿದ್ದರೂ ಬ್ಯಾರೇಜ್‌ನ ಉಳಿದ ನೂರು ಗೇಟ್‌ಗಳನ್ನು ತೆರೆಯದ ಕಾರಣ, ನದಿ ದಡದ ಜಮೀನುಳಿಗೆ ನೀರು ನುಗ್ಗಿ ಜಲಾವೃತ್ತಗೊಂಡಿವೆ. ಆರ್‌ಟಿಪಿಎಸ್ ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ಬೆಳೆಗಳು ನಾಶವಾಗಿದ್ದು, ರೈತರ ಆಕ್ರೋಶಕ್ಕೆ ಕಾರಣವಾಗಿದೆ.

2019ರಲ್ಲಿ ಉಂಟಾಗಿದ್ದ ಪ್ರವಾಹದ ವೇಳೆ ನಾರಾಯಣಪುರ ಜಲಾಶಯದಿಂದ 3 ಲಕ್ಷ ಕ್ಯೂಸೆಕ್ಸ್ ನೀರು ಬಿಟ್ಟರೂ ಕೂಡ, ಯಾವುದೇ ಬೆಳೆಗಳಿಗೆ ತೊಂದರೆ ಆಗಿದಿಲ್ಲ. ಈಗ 1 ಲಕ್ಷ 50 ಸಾವಿರ ಕ್ಯೂಸೆಕ್ಸ್ ನೀರಿಗೆ ನದಿ ದಡದಲ್ಲಿನ ಬೆಳೆದ ಬೆಳೆಗಳು ಹಾನಿಯಾಗಿವೆ. ಇದೇ ರೀತಿ ಮುಂದುವರೆದರೆ , ನದಿ ದಡದ ಗ್ರಾಮಗಳಾದ ಗುರ್ಜಾಪರು, ಕರೇಕಲ್, ಕಾಡ್ಲುರು, ಅರಷಣಿಗಿ ಸೇರಿದಂತೆ ಸುತ್ತಲಿನ ಗ್ರಾಮಗಳು ಜಲಾವೃತ್ತಗೊಳ್ಳುವ ಭೀತಿ ಎದುರಾಗಿದೆ.












Click it and Unblock the Notifications