ಶರಣಪ್ರಕಾಶ ಪಾಟೀಲ ಉಸ್ತುವಾರಿ ವಹಿಸಿದ ಜಿಲ್ಲೆಯಲ್ಲೇ ರಿಮ್ಸಗೆ ದುರ್ಗತಿ
ರಾಯಚೂರು ಜನವರಿ 10: ರಾಜ್ಯದಲ್ಲಿ ಮೂಲಭೂತ ಸೌಕರ್ಯಗಳಿಂದ ವಂಚಿತವಾದ ಜಿಲ್ಲೆಗಳಲ್ಲಿ ರಾಯಚೂರು ಕೂಡ ಒಂದು. ಸದ್ಯ ಇದಕ್ಕೆ ಪುಷ್ಠಿ ನೀಡುವಂತಹ ಸುದ್ದಿಯೊಂದು ಹೊರಬಂದಿದೆ. ಇಲ್ಲಿನ ರಿಮ್ಸ ಆಸ್ಪತ್ರೆಯ ಬಗ್ಗೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರು ರಾಯಚೂರು ಜಿಲ್ಲೆಯ ಉಸ್ತುವಾರಿಯಾಗಿದ್ದಾರೆ. ರಾಜ್ಯದ ಯಾವುದೇ ಜಿಲ್ಲೆಯಲ್ಲೂ ಇರದ ಕೊಳಕು ರಿಮ್ಸ್ ಆಸ್ಪತ್ರೆಯಲ್ಲಿ ಇದೆ. ಶರಣಪ್ರಕಾಶ ಅವರು ಜಿಲ್ಲೆಗೆ ಬರುವುದೇ ಅಪರೂಪ. ಹೀಗಾಗಿ ಜಟಿಲ ಸಮಸ್ಯೆಗಳೂ ಇಂದಿಗೂ ನಿವಾರಣೆಯಾಗಿಲ್ಲ. ಕಾಂಗ್ರೆಸ್ ಸರ್ಕಾರದಲ್ಲಿ ರಾಯಚೂರನ್ನು ಕೇಳುವವರೇ ಇಲ್ಲವಾಗಿದ್ದಾರೆ.

ಆಸ್ಪತ್ರೆಗೆ ರೋಗಿಗಳು ಮೂಗು ಮುಚ್ಚಿಕೊಂಡು ಬರಬೇಕಾದ ಸ್ಥಿತಿ ಇದೆ. ಆವರಣದಲ್ಲೂ ಸ್ವಚ್ಛತೆ ಇಲ್ಲ. ಲಿಫ್ಟ್ ಹಾಗೂ ಗೋಡೆಗಳ ಮೇಲೆ ಕಿಡಿಗೇಡಿಗಳು ಗುಟಾಕಾ ತಿಂದು ಉಗುಳಿದ್ದಾರೆ. ಆಸ್ಪತ್ರೆಯಲ್ಲಿ ಸೆಕ್ಯುರಿಟಿಗಳ ಕೊರತೆ ಇದೆ. ಆಸ್ಪತ್ರೆಯ ಆಡಳಿತ ಬಿಗುವಿಲ್ಲದ ಕಾರಣ ಅವ್ಯವಸ್ಥೆ ತಾಂಡವವಾಡುತ್ತಿದೆ.
ಜಿಲ್ಲೆಯ ಜನರ ಪಾಲಿಗೆ ಆರೋಗ್ಯ ಸಂಜೀವಿನಿಯಾಗಬೇಕಿದ್ದ ಇಲ್ಲಿನ ರಿಮ್ಸ್ ಆಸ್ಪತ್ರೆ ಅನೇಕ ಸಮಸ್ಯೆಗಳಿಂದ ನಲುಗುತ್ತಿದ್ದು ರೋಗಿಗಳು ಸೌಲಭ್ಯ ವಂಚಿತರಾಗಿದ್ದಾರೆ. ಜನಸಂಖ್ಯೆ ಬೆಳವಣಿಗೆಯಾಗುತ್ತಿದ್ದು ಅದಕ್ಕೆ ತಕ್ಕಂತೆ ಹೆಚ್ಚಿನ ಸೌಲಭ್ಯ ಕಲ್ಪಿಸಲು ರಿಮ್ಸ್ ಆಡಳಿತ ಮಂಡಳಿ ವಿಫಲವಾಗಿದ್ದು ಒಂದೆಡೆಯಾದರೆ ಲೋಪದೋಷಗಳನ್ನು ಸಿಪಡಿಸಿಕೊಂಡು ಸುಧಾರಣೆ ಮಾಡಿಕೊಳ್ಳದಿರುವುದು ಮತ್ತೊಂದು ಕಡೆ ಎಡವುತ್ತಿದೆ.

ಜಿಲ್ಲೆಯ ವಿವಿಧ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ದೊರೆಯದ ಆರೋಗ್ಯ ಸೇವೆಯ ಕೊರತೆಯನ್ನು ರಾಯಚೂರು ವೈದ್ಯಕೀಯ ವಿಜ್ಞಾನ (ರಿಮ್ಸ್) ಬೋಧಕ ಆಸ್ಪತ್ರೆವೊಂದೇ ನಿಭಾಯಿಸುತ್ತಾ ಬರುತ್ತಿರುವುದರಿಂದ ಆಸ್ಪತ್ರೆಯಲ್ಲಿ ಲಭ್ಯವಿರುವ ಮೂಲ ಸೌಕರ್ಯಗಳು ಸಾಕಾಗುತ್ತಿಲ್ಲ.
ರಿಮ್ಸ್ ಆಸ್ಪತ್ರೆಯ ಗೋಡೆಗಳಿಗೆ ಅಳವಡಿಸಿದ ಗಾಜುಗಳು ಹಲವಡೆ ಒಡೆದು ಚೂರಾಗಿದೆ ಅದನ್ನು ಬದಲಿಸಲು ಆಗುತ್ತಿಲ್ಲ. ಜಿಡಿ ಬೆಳೆದರೂ ಸಿಯಾದ ಸಮಯಕ್ಕೆ ಸ್ವಚ್ಛಗೊಳಿಸುತ್ತಿಲ್ಲ. ಆಸ್ಪತ್ರೆಯ ಸುತ್ತಮುತ್ತ ಅಸ್ವಚ್ಛತೆ ಎದ್ದು ಕಾಣುತ್ತದೆ. ಇದಕ್ಕೆ ಹಂದಿ, ನಾಯಿಗಳು ತಿರುಗಾಡುವುತ್ತಿರುವೇ ಸಾಕ್ಷಿಯಾಗಿದೆ.
ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಆಸ್ಪತ್ರೆಗೆ ಗರ್ಭಿಣಿಯರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಸೌಲಭ್ಯ ಸಿಗುತ್ತಿಲ್ಲ. ಸ್ಕ್ಯಾನಿಂಗ್ ಮಾಡಿಸಿಕೊಳ್ಳಲು ಟೋಕನ್ ಪಡೆದು 4ದಿನದಿಂದ ಒಂದು ವಾರ ಕಾಯಬೇಕು. ರಕ್ತ ಪರೀಕ್ಷೆಗಾಗಿ ತಾಸುಗಟ್ಟಲೇ ಸರತಿ ಸಾಲಿನಲ್ಲಿ ನಿಲ್ಲಬೇಕು. ಆಸ್ಪತ್ರೆಯ ನಾಲ್ಕು ದಿಕ್ಕುಗಳಲ್ಲಿ ತಲಾ ಎರಡರಂತೆ 8 ಲಿಫ್ಟ್ ಇದ್ದರೂ ಸರಿಯಾಗಿ ನಿರ್ವಹಣೆ ಮಾಡದ ಕಾರಣ ಸದಾ 3 ಅಥವಾ 4 ಮಾತ್ರ ಕಾರ್ಯನಿರ್ವಹಿಸುತ್ತವೆ. ಲಿಫ್ಟ್ ನಲ್ಲಿ ಗುಟ್ಕಾ, ಪಾನ್ ಪರಾಗ್ ಪ್ರಿಯರು ಕೆಂಪು ಬಣ್ಣ ಬಳಿದಿದ್ದು ಇದಕ್ಕೆ ಕಡಿವಾಣ ಇಲ್ಲದಂತಾಗಿದೆ. ರೋಗಿಗಳಿಗೆ ಸಾಗಿಸಲು ತಳ್ಳುಬಂಡಿ, ಗಾಲಿ ಕುರ್ಚಿ ಕಡಿಮೆಯಿದ್ದು ಅನೇಕ ಬಾರಿ ಮೇಲ್ಮಹಡಿಯಿಂದ ಕೆಳಗೆ ಹೋಗಲು ಹಾಗೂ ಸಮೀಪದ ಓಪೆಕ್ ಆಸ್ಪತ್ರೆಗೆ ಹೋಗಲು ಗಾಲಿ ಕುರ್ಚಿಗಾಗಿ ಕಾಯಬೇಕು.

ಸಮಯ ಪಾಲನೆ ಮಾಡದ ವೈದ್ಯರು:
ರಿಮ್ಸ್ ಹಾಗೂ ಓಪೆಕ್ ಆಸ್ಪತ್ರೆಯಲ್ಲಿ ವೈದ್ಯರು ಬೆಳಿಗ್ಗೆ ಮಾತ್ರ ಕೆಲಸ ಮಾಡಿ ಮಧ್ಯಾಹ್ನ ಬಯೋಮೆಟ್ರಿಕ್ ಹಾಜರಿ (ಥಮ್ ಒತ್ತಿ) ಕಣ್ಮರೆಯಾಗುತ್ತಾರೆ. ಆಸ್ಪತ್ರೆಯ ಬಹುತೇಕ ವೈದ್ಯರು ಖಾಸಗಿ ಕ್ಲೀನಿಕ್ ತೆರೆದಿದ್ದು ಬಹುತೇಕ ಸಮಯ ತಮ್ಮ ಕ್ಲಿನಿಕ್ ನಲ್ಲಿಯೇ ಕಳೆಯುತ್ತಾರೆ. ಈ ಬಗ್ಗೆ ಅನೇಕ ಸಂಘ-ಸಂಸ್ಥೆಗಳು ದೂರು ನೀಡಿ ಆಸ್ಪತ್ರೆಯ ಆವರಣದ ಮುಂದೆ ಪ್ರತಿಭಟನೆ ಮಾಡಿದರೂ ಪರಿಸ್ಥಿತಿ ಬದಲಾಗಿಲ್ಲ.
ವೈದ್ಯರಾಗಿದ್ದರೂ ಕಾಳಜಿ ವಹಿಸದ ಶಾಸಕ: ನಗರ ಶಾಸಕ ಡಾ.ಶಿವರಾಜ ಪಾಟೀಲರು ವೈದ್ಯ ವೃತ್ತಿಯಿಂದ ರಾಜಕೀಯಕ್ಕೆ ಬಂದವರು ವೈದ್ಯರೇ ಆಗಿರುವ ಇವರು ಕಾಳಜಿ ವಹಿಸಿ ನಗರದ ಆರೋಗ್ಯ ಕ್ಷೇತ್ರ ಸುಧಾರಣೆ ಮಾಡುವರು ಎಂದು ಆಲೋಚಿಸಿದ್ದ ಜನರಿಗೆ ನಿರಾಸೆ ಮಾಡಿದ್ದಾರೆ. ನಗರ ವಿಧಾನಸಭೆಯಿಂದ ಮೂರನೇ ಬಾರಿ ಶಾಸಕರಾಗಿ ಇತಿಹಾಸ ಸೃಷ್ಠಿ ಮಾಡಿದರೂ ಓಪೆಕ್ ಮೇಲ್ದರ್ಜೆಗೇರಿಸುವ ಬೇಡಿಕೆ ಹಾಗೂ ರಿಮ್ಸ್ ಗೆ ಅತ್ಯಾಧುನಿಕ ಸೌಕರ್ಯ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ ಎಂದು ಅನೇಕರು ಆಡಿಕೊಳ್ಳುತ್ತಾರೆ.

ರಿಮ್ಸ್ ಆಸ್ಪತ್ರೆ 2014 ರಲ್ಲಿ ಆರಂಭವಾದ ವರ್ಷದಲ್ಲಿ ದಿನಕ್ಕೆ ಸರಾಸರಿ 700 ರೋಗಿಗಳ ನೋಂದಣಿ ಆಗುತ್ತಿತ್ತು. ಆನಂತರ ಪ್ರತಿ ವರ್ಷವೂ ಹೊರರೋಗಿಗಳು ಮತ್ತು ಒಳರೋಗಿಗಳ ನೋಂದಣಿ ಏರುತ್ತಲೇ ಬಂದಿದ್ದು, ಈಗ ಪ್ರತಿನಿತ್ಯ 1,000 ರಿಂದ 1500ರ ವರೆಗೆ ಹೊರ ರೋಗಿಗಳು ನೋಂದಣಿ ಮಾಡಿಕೊಳ್ಳುತ್ತಿದ್ದಾರೆ.
ವೈದ್ಯಕೀಯ ಕಾಲೇಜಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆಯು 2018 ರಿಂದ ಜಾರಿಗೆ ಬರುವಂತೆ 100 ರಿಂದ 150 ಕ್ಕೆ ಏರಿಕೆ ಮಾಡಿರುವುದರಿಂದ ಕಾಲೇಜು ಕೋಣೆಗಳು ಮತ್ತು ಆಸ್ಪತ್ರೆಯ ಸೇವಾ ಸೌಲಭ್ಯಗಳನ್ನು ವಿಸ್ತರಿಸುವ ಅನಿವಾರ್ಯತೆ ಈಗ ಎದುರಾಗಿದೆ.
ಸ್ತ್ರೀ ರೋಗ ವಿಭಾಗ, ನೇತ್ರ ಚಿಕಿತ್ಸಾ ವಿಭಾಗ, ಕಿವಿ, ಮೂಗು, ಗಂಟಲು ಚಿಕಿತ್ಸೆ ವಿಭಾಗ ಸೇರಿದಂತೆ ಆಸ್ಪತ್ರೆಯಲ್ಲಿ 11 ವಿಭಾಗಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಗಂಭೀರ ಕಾಯಿಲೆಯ ರೋಗಿಗಳನ್ನು ಸೂಪರ್ ಸ್ಪೆಷಾಲಿಟಿ ಸೌಲಭ್ಯವಿರುವ ಒಪೆಕ್ ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡುವ ವ್ಯವಸ್ಥೆ ಇದೆ. ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ ವೈದ್ಯಕೀಯ ಕಾಲೇಜಿಗಾಗಿ ಹಾಗೂ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಸಹಾಯಕ ಪ್ರಾಧ್ಯಾಪಕರ ಹಾಗೂ ಸ್ಟಾಫ್ ನರ್ಸ್ ಹುದ್ದೆ ಇನ್ನಷ್ಟು ಭರ್ತಿ ಮಾಡಬೇಕಿದೆ.
ಆಸ್ಪತ್ರೆಯ ನೋಂದಣಿ ವಿಭಾಗದ ದಾಖಲೆಗಳ ಪ್ರಕಾರ, ಪಕ್ಕದ ಯಾದಗಿರಿ ಜಿಲ್ಲೆಯ ತಾಲ್ಲೂಕುಗಳಿಂದ ಹೆರಿಗೆ ಮಾಡಿಸಿಕೊಳ್ಳಲು ಹಾಗೂ ಅನಾರೋಗ್ಯ ಪೀಡಿತರು ರಿಮ್ಸ್ ಆಸ್ಪತ್ರೆಗೆ ದಾಖಲಾಗುತ್ತಾರೆ. ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಗಡಿ ಭಾಗದ ಗ್ರಾಮೀಣ ಜನರು ಕೂಡಾ ರಿಮ್ಸ್ ಆಸ್ಪತ್ರೆಯಲ್ಲಿ ಸೇವೆ ಪಡೆಯುತ್ತಾರೆ. 'ಸರ್ಕಾರಿ ನಿಯಮಾನುಸಾರ ಯಾರಿಗೂ ವೈದ್ಯಕೀಯ ಸೇವೆ ನಿರಾಕರಿಸಲು ಆಗುವುದಿಲ್ಲ. ಆಸ್ಪತ್ರೆಗೆ ಬರುವ ಎಲ್ಲ ರೋಗಿಗಳಿಗೆ ಲಭ್ಯವಿರುವ ಚಿಕಿತ್ಸೆ ಹಾಗೂ ಇತರೆ ಸೌಲಭ್ಯಗಳನ್ನು ಒದಗಿಸುತ್ತಿದ್ದೇವೆ. ಒಳರೋಗಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ 520 ರಷ್ಟಿದ್ದ ಆಸ್ಪತ್ರೆಯ ಹಾಸಿಗೆಗಳ ಸಂಖ್ಯೆಯನ್ನು 640 ಕ್ಕೆ ಹೊಂದಿಸಿ ಏರಿಕೆ ಮಾಡಲಾಗಿದೆ.
ಸೋಲಾರ್ ಕಂಬಗಳು ಹಾಳು:
ಬಿಸಿಲಿನ ಪ್ರಖರತೆ ಹೆಚ್ಚಿರುವ ಈ ಭಾಗದಲ್ಲಿ ಸೌರಶಕ್ತಿ ಮೂಲಕ ವಿದ್ಯುತ್ ಬಳಕೆ ಕಡಿಮೆ ಮಾಡಿ ಪರಿಸರ ಸ್ನೇಹಿಯಾಗಿ ಆಡಳಿತ ನಿರ್ವಹಿಸುವ ಉದ್ದೇಶದಿಂದ ಆಸ್ಪತ್ರೆಯ ಆವರಣದ ಸೋಲಾರ್ ಪ್ಯಾನಲ್ ಅಳವಡಿಸಲಾಗಿದೆ. ಆದರೆ ಆರಂಭದಲ್ಲಿ ಕೆಲ ದಿನ ನಿರ್ವಹಿಸಿ ಆನಂತರ ನಿರ್ಲಕ್ಷಿಸಿದ ಪರಿಣಾಮ ಸೋಲಾರ್ ಕಂಬಗಳು ಬಾಗಿವೆ. ಇದನ್ನು ದುರಸ್ತಿಗೊಳಿಸಲು ಮುಂದಾಗುತ್ತಿಲ್ಲ ಎಂದು ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವೈದ್ಯಕೀಯ ವಿದ್ಯಾರ್ಥಿಗಳಿಗೆ ವಿದ್ಯುತ್ ಸಮಸ್ಯೆ:
ರಿಮ್ಸ್ ವೈದ್ಯಕೀಯ ವಿದ್ಯಾರ್ಥಿಗಳ ವಸತಿ ನಿಲಯದಲ್ಲಿ ಜನರೇಟರ್ ಇಲ್ಲದ ಕಾರಣ ಕರೆಂಟ್ ಹೋದರೆ ಟಾರ್ಚ್ ಹಿಡಿದು ಕೂಡಬೇಕಿದೆ. ಅನೇಕ ಬಾರಿ ಪರೀಕ್ಷೆಯ ಸಮಯದಲ್ಲಿ ಓದುವಾಗ ಕರೆಂಟ್ ಹೋದರೆ ಟಾರ್ಚ್ ಹಿಡಿದುಕೊಂಡೇ ಅಭ್ಯಾಸ ಮಾಡಿದ್ದಾರೆ. ಬೇಸಿಗೆಯಲ್ಲಿ ಕೆಲವೊಮ್ಮೆ ಲೋಡ್ ಶೆಡ್ಡಿಂಗ್ ಇದ್ದಾಗ ಸಮಸ್ಯೆ ಹೇಳತೀರದು, ವಿದ್ಯಾರ್ಥಿಗಳಿಗೆ ನೀರಿನ ಸಂಗ್ರಹ ಮಾಡಲು ದೊಡ್ಡ ತೊಟ್ಟಿ, ಟ್ಯಾಂಕ್ ಇಲ್ಲದ ಕಾರಣ ಕೆಲವೊಮ್ಮೆ ರಾತ್ರಿ ವೇಳೆ ವಿದ್ಯುತ್ ಕಡಿತವಾದರೆ ಬೆಳಿಗ್ಗೆ ಸ್ನಾನ ಮಾಡಲು ನೀರು ಸಿಗುವುದಿಲ್ಲ ಎನ್ನುತ್ತಾರೆ ಇಲ್ಲಿನ ವೈದ್ಯಕೀಯ ವಿದ್ಯಾರ್ಥಿಗಳು. ವಸತಿ ನಿಲಯ ನಿರ್ವಹಣೆ ಸರ್ಕಾರದ ಜವಾಬ್ದಾರಿ. ಆದರೆ ಇಲ್ಲಿ ಪ್ರತಿ ವಿದ್ಯಾರ್ಥಿಗಳಿಂದ ಮಾಸಿಕ ₹2500 ಪಡೆಯಲಾಗುತ್ತಿದೆ ಆದರೂ ಗುಣಮಟ್ಟದ ಆಹಾರ ಹಾಗೂ ಮೂಲಸೌಕರ್ಯ ನೀಡುತ್ತಿಲ್ಲ ಎನ್ನುವುದು ವಿದ್ಯಾರ್ಥಿಗಳ ಆರೋಪ.
ಉದ್ಘಾಟನೆಯಾದರೂ ಬಳಕೆಯಾಗದ ಧರ್ಮಶಾಲಾ ಕಟ್ಟಡ:
ಆಸ್ಪತ್ರೆಯ ಆವರಣದ ಮುಂದೆ ರೋಗಿಗಳ ಸಂಬಂಧಿಕರಿಗೆ ತಂಗಲು ಧರ್ಮಶಾಲಾ ಕಟ್ಟಡ ನಿರ್ಮಿಸಲಾಗಿದೆ. ಆದರೆ ಅದರಲ್ಲಿ ಔಷಧಿಗಳ ದಾಸ್ತಾನು ಇಡಲಾಗಿದೆ. ಆಸ್ಪತ್ರೆಯಲ್ಲಿ ದೊಡ್ಡ ದಾಸ್ತಾನು ಇದ್ದರೂ ಇಲ್ಲಿ ಇಟ್ಟಿದ್ದರಿಂದ ಧರ್ಮಶಾಲಾ ಕಟ್ಟಡ ನಿರುಪಯುಕ್ತವಾಗಿದೆ.
ರಿಮ್ಸ್ ನಲ್ಲಿ ಇರುವ ಕ್ವಾಟರ್ಸ್ ವೈದ್ಯರಿಗೆ, ಸ್ಟಾಫ್ ನರ್ಸ್ ಗಳಿಗೆ ಹೊರತುಪಡಿಸಿ ಹೊರ ಗುತ್ತಿಗೆ ಕಾರ್ಮಿಕರಿಗೆ ನೀಡುವುದು ನಿಯಮ ಬಾಹೀರ. ಆದರೆ ಕಾನೂನು ಉಲ್ಲಂಘನೆ ಮಾಡಿ ನಿಯಮವಿಲ್ಲದಿದ್ದರೂ ವೈದ್ಯರ ಚಾಲಕರಿಗೆ, ಡಿ ಗ್ರುಪ್ ನೌಕರರಿಗೆ ಮನೆಗಳನ್ನು ನೀಡಲಾಗಿದೆ. ಹಿಂದಿನ ಮುಖ್ಯಸ್ಥ ಬಸವರಾಜ ಪೀರಾಪುರು ಅವರು ನಿಯಮ ಉಲ್ಲಂಘಿಸಿದ್ದಾರೆ. ಅರ್ಹರಿಗೆ ಅನ್ಯಾಯ ಮಾಡಿದ್ದಾರೆ. ರಿಮ್ಸ್ ನಲ್ಲಿ ಯಾವುದೇ ಹುದ್ದೆಗೆ ಸಿಬ್ಬಂದಿ ನೇಮಕ ಮಾಡಬೇಕಾದರೆ ಪ್ರಕಟಣೆ ನೀಡಿ ಅದಕ್ಕೆ ಅರ್ತಾ ಪರೀಕ್ಷೆ ನಡೆಸಿ ಸಮದರ್ಶನದ ಮೂಲಕ ಆಯ್ಕೆ ಮಾಡಬೇಕಿದೆ. ಆದರೆ ಸ್ಥಳೀಯ ಶಾಸಕರ ಮೌಖಿಕ ಆದೇಶದ ಮೇರೆಗೆ ಜವಾನ, ಕಾರಕೂನ, ಡಾಟಾ ಅಪರೇಟರ್ ಸೇರಿ ಅನೇಕ ಹುದ್ದೆಗಳಿಗೆ ಯಾವುದೇ ನೋಟಿಫಿಕೇಶನ್ ಕರೆಯದೇ ಕಾನೂನು ಬಾಹೀರವಾಗಿ ನೇಮಕ ಮಾಡಿದ್ದಾರೆ ಅವರಿಗೆ ವೇತನ ಹೇಗೆ ಪಾವತಿಯಾಗುತ್ತಿದೆ ಎಂದು ಸ್ಪಷ್ಟಪಡಿಸಿಲ್ಲ ಇದರ ವಿರುದ್ಧ ತನಿಖೆ ನಡೆಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಮೆಹಬೂಬ ಒತ್ತಾಯಿಸಿದ್ದಾರೆ.
ಗುಣಮಟ್ಟ ಚಿಕಿತ್ಸೆಗೆ ಪಣ:
ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೊಂದು ಕಟ್ಟಡ ( ಬಿ ಬ್ಲಾಕ್) ನಿರ್ಮಿಸಲಾಗುತ್ತಿದೆ. ಅಂತಿಮ ಹಂತದಲ್ಲಿದ್ದು ಶೀಘ್ರವೇ ಉದ್ಘಾಟನೆ ಮಾಡಲಾಗುವುದು. ಬಡ ಹಾಗೂ ಮಧ್ಯಮ ವರ್ಗದ ರೋಗಿಗಳಿಗೂ ಖಾಸಗಿ ಆಸ್ಪತ್ರೆಗಳಲ್ಲಿ ಸಿಗುವ ಸೌಲಭ್ಯ ಒದಗಿಸಲು ಮುಂದಾಗಿದ್ದೇವೆ. ನಾನು ಅಧಿಕಾರ ವಹಿಸಿಕೊಂಡು 3 ವಾರವಾಗಿದ್ದು 6 ಬಾರಿ ವೈದ್ಯರ ಸಭೆ ನಡೆಸಿದ್ದೇನೆ. ರಿಮ್ಸ್ ವೈದ್ಯರು ಕರ್ತವ್ಯದ ಸಮಯದಲ್ಲಿ ತಮ್ಮ ಖಾಸಗಿ ಕ್ಲಿನಿಕ್ ಗಳಲ್ಲಿ ಇರಬಾರದು ಎಂದು ತಾಕೀತು ಮಾಡಿದ್ದೇನೆ. ಪ್ರತಿ ದಿನ ಆಸ್ಪತ್ರೆಗೆ ರೌಂಡ್ಸ್ ಹಾಕಿ ವಸ್ತುಸ್ಥಿತಿ ಪರಿಶೀಲಿಸುತ್ತಿದ್ದೇನೆ. ಸ್ವಚ್ಚತೆ, ನೈರ್ಮಲ್ಯದ ಜಾಗೃತಿ ಮೂಡಿಸುತ್ತಿದ್ದೇನೆ. ರಿಮ್ಸ್ ನಲ್ಲಿ ಲಭ್ಯ ವಿರುವ ಚಿಕಿತ್ಸೆ ನೀಡದೇ ಬೇರೆಕಡೆ ರವಾನಿಸಬಾರದು ಎಂದು ವೈದ್ಯರಿಗೆ ಸೂಚನೆ ನೀಡಿದ್ದೇನೆ ಎನ್ನುವುದು ರಿಮ್ಸ್ ಮುಖ್ಯಸ್ಥ ಡಾ. ರಮೇಶ ಬಿ ಅವರ ವಿವರಣೆ.
ಇಂದಿರಾ ಕ್ಯಾಂಟೀನ್ ತೆರೆಯಲು ಒತ್ತಾಯ:
ಜಿಲ್ಲೆ ಸೇರಿ ಯಾದಗಿರಿ, ನೆರೆಯ ಆಂಧ್ರಪ್ರದೇಶ, ತೆಲಂಗಾಣ ರಾಜ್ಯದ ರೋಗಿಗಳು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ಬರುತ್ತಾರೆ. ಆಸ್ಪತ್ರೆಯ ಮುಂಭಾಗದಲ್ಲಿ ಎರಡು- ಮೂರು ಪಟ್ಟು ದರವಿದ್ದರೂ ಗುಣಮಟ್ಟದ ಊಟ ಸಿಗುತ್ತಿಲ್ಲ. ಆಸ್ಪತ್ರೆಯಲ್ಲಿ ಕೇವಲ ರೋಗಿಗೆ ಊಟ ನೀಡಲಾಗುತ್ತದೆ ಆದರೆ ಗುಣಮಟ್ಟದ ಊಟ ನೀಡುತ್ತಿಲ್ಲ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ವೆಚ್ಚ ಭರಿಸಲು ಆಗದೇ ರಿಮ್ಸ್ ಗೆ ಬರುತ್ತಾರೆ. ಆದರೆ ಇಲ್ಲಿ ರಕ್ತ ತಪಾಸಣೆ, ಎಕ್ಸ್ ರೇ, ಸ್ಕ್ಯಾನಿಂಗ್ ಗೆ ಹಣ ಪಾವತಿಸಬೇಕು.
ಬಿಪಿಎಲ್ ಕಾರ್ಡ್ ಇದ್ದವರಿಗೆ ಮಾತ್ರ ಅರ್ಧದಷ್ಟು ರಿಯಾಯತಿ ಇದೆ. ಹಳ್ಳಿಯ ಜನ ತರಾತುರಿಯಲ್ಲಿ ಬಂದಾಗ ತರುವುದಿಲ್ಲ. ಮೊಬೈಲ್ ನಲ್ಲಿ ತೋರಿಸಿದರೆ ಪ್ರಿಂಟ್ ಬೇಕು ಅಂತಾರೆ. ರಿಮ್ಸ್ ನಲ್ಲಿ ತುರ್ತು ಚಿಕಿತ್ಸಾ ಕೋಣೆಯ ಬಳಿ ಜೆರಾಕ್ಸ್ ಅಂಗಡಿ ಇದ್ದರೂ ಹೆಚ್ಚು ಹಣ ಕೇಳುತ್ತಾರೆ. ರೋಗಿಗಳಿಗೆ, ಜೊತೆಗೆ ಬಂದ ಕುಟುಂಬ ಸದಸ್ಯರಿಗೆ ಅನುಕೂಲವಾಗಲು ಇಂದಿರಾ ಕ್ಯಾಂಟೀನ್ ತೆರೆದು ಗುಣಮಟ್ಟದ ಆಹಾರ ನೀಡಬೇಕು ಹಾಗೂ ಆಸ್ಪತ್ರೆ ಆವರಣದ ಎರಡು ಕಡೆ ಜೆರಾಕ್ಸ್ ಅಂಗಡಿ ತೆರೆದು ಕಡಿಮೆ ದರದಲ್ಲಿ ದಾಖಲೆಗಳನ್ನು ಕಡಿಮೆ ದರದಲ್ಲಿ ಕಲಿಸುವ ವ್ಯವಸ್ಥೆ ಮಾಡಬೇಕು ಎಂದು ಎಲ್ ಬಿ.ಎಸ್ ನಗರದ ನಿವಾಸಿ ರಾಜಶೇಖರ, ಇಮಾಮ್ ಹುಸೇನ್ ಒತ್ತಾಯಿಸುತ್ತಾರೆ.
ಈ ಬಗ್ಗೆ ಮಾತನಾಡಿದ ರಿಮ್ಸ್ ಮುಖ್ಯಸ್ಥ ರಮೇಶ ಬಿ ಅವರು, ' ಕ್ವಾಟರ್ಸ್ ಹಂಚಿಕೆ, ಧರ್ಮಶಾಲಾ ಕಟ್ಟಡ ಸೇರಿದಂತೆ ಅನೇಕ ಹಿಂದಿನ ಅವಧಿಯಲ್ಲಿನ ಲೋಪದೋಷಗಳು ಹಾಗೂ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದು ಪರಿಶೀಲಿಸುವೆ. ನಾನು ಅಧಿಕಾರ ವಹಿಸಿಕೊಂಡ ಬಳಿಕ ರೋಗಿಗಳಿಗೆ ಅವರ ಹಕ್ಕು ಸಿಗುವಂತೆ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಎಲ್ಲರ ಸಹಕಾರದಿಂದ ಗುಣಮಟ್ಟದ ಚಿಕಿತ್ಸೆ ನೀಡಲಾಗವುದು' ಎಂದರು.
ದೇವರಾಜ ನಾಯಕ ಸ್ಥಳೀಯ ನಿವಾಸಿಯೊಬ್ಬರು ಮಾತನಾಡಿ, 'ರಿಮ್ಸ್ ಆಸ್ಪತ್ರೆಯಲ್ಲಿ 50 ಶೌಚಾಲಯವಿದೆ ಎಂಬ ಮಾಹಿತಿ ಇದೆ ಆದರೆ ಯಾವ ಕಡೆ ನೋಡಿದರೂ ಶೌಚಾಲಯ ಸುಸ್ಥಿತಿಯಲ್ಲಿಲ್ಲ. ಅಂಗವಿಕಲರಿಗೆ ಆಸ್ಪತ್ರೆಯಲ್ಲಿ ಇಳಿಜಾರು ನಿರ್ಮಿಸದೇ ಕಬ್ಬಿಣದ ರೆಡಿಮೇಡ್ ಹಾಕಿದ್ದು ಅದು ತುಕ್ಕು ಹಿಡಿದಿದ್ದರಿಂದ ಬೀಗ ಹಾಕಿದ್ದಾರೆ. ವಿಕಲಚೇತನರಿಗೆ ಪ್ರತ್ಯಕ ಶೌಚಾಲಯಗಳಿದ್ದರೂ ಬೀಗ ಹಾಕಲಾಗಿದೆ. ಲಿಫ್ಟ್ ಇದ್ದರೂ ಸರಿಯಾದ ನಿರ್ವಹಣೆಯಾಗದೇ ಪದೇ ಪದೇ ಕೆಟ್ಟುಹೋಗುವ ಕಾರಣ ತುರ್ತು ಸಂದರ್ಭದಲ್ಲಿ ಸಮಸ್ಯೆಯಾಗಿದೆ' ಎಂದರು.
-
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ












Click it and Unblock the Notifications