ಪಾಳುಬಿದ್ದ ರಾಯಚೂರಿನ ಸಿದ್ದಮ್ಮನ ಗವಿ: ಅಭಿವೃದ್ಧಿಗಾಗಿ ಗ್ರಾಮಸ್ಥರ ಒತ್ತಾಯ
ರಾಯಚೂರು, ಸೆಪ್ಟೆಂಬರ್ 27: ಜಿಲ್ಲೆಯ ಹಟ್ಟಿಚಿನ್ನದಗಣಿ ಸಮೀಪದ ರೋಡಲಬಂಡ (ತವಗ) ಗ್ರಾಮದಲ್ಲಿರುವ ಸಿದ್ದಮ್ಮನ ಗವಿಯು ಅಭಿವೃದ್ಧಿ ಕಾಣದೇ ಅವನತಿಯ ಹಾದಿಯಲ್ಲಿದೆ. ಮತ್ತು ಇದರ ಎದುರುಗಡೆ ಹೊಂದಿಕೊಂಡಿರುವ ಅಪೂರ್ಣವಾದ ಈಶ್ವರ ದೇವಸ್ಧಾನವೂ ಸಂರಕ್ಷಣೆ ಇಲ್ಲದೇ ಪಾಳು ಬಿದ್ದಿದೆ.
ಪ್ರತಿ ವರ್ಷ ಶ್ರಾವಣ ಮಾಸದ ಮೂರು ಅಥವಾ ನಾಲ್ಕನೇ ಸೋಮವಾರ ಈ ಸ್ಥಳದಲ್ಲಿ ಜಾತ್ರೆ ನಡೆಯುತ್ತದೆ. ಈಶ್ವರ ದೇವಸ್ಥಾನಕ್ಕೆ ಹೊಂದಿಕೊಂಡರೂ ಇದಕ್ಕೆ ಗ್ರಾಮಸ್ಧರು ಸಿದ್ದಮ್ಮನ ಗವಿ ಎಂದೇ ಕರೆದುಕೊಂಡು ಬಂದಿದ್ದಾರೆ. ಗ್ರಾಮದ ಮಧ್ಯೆ ಇರುವ ಮಲ್ಲಯ್ಯನ ದೇವಸ್ಧಾನದಲ್ಲಿ ಗವಿ ಇರುವುದು ಗ್ರಾಮದ ವಿಶಿಷ್ಟತೆ. ಇಲ್ಲಿಂದ ಸಿದ್ದಮ್ಮನ ಗವಿಗೆ ಸಂಪರ್ಕವಿದೆ ಎಂದು ಕೆಲವರು ಹೇಳುತ್ತಾರೆ.

ಕೊಡೇಕಲ್ ಬಸವಣ್ಣ ಹಾಗೂ ತಿಂಥಣಿ ಮೌನೇಶ್ವರರ ಕಾಲದ ಸಂದರ್ಭದಲ್ಲಿ ಪಿಡ್ಡಮ್ಮ, ಗಂಗಮ್ಮ ಹಾಗೂ ಸಿದ್ದಮ್ಮ ಎಂಬ ಶಿವಶರಣೆಯರು ಇದ್ದರಂತೆ. ಆ ಪೈಕಿ ಸಿದ್ದಮ್ಮ ವಾಸ ಮಾಡಿದ ಸ್ಧಳವನ್ನು ಅಭಿವೃದ್ಧಿಪಡಿಸಬೇಕು ಎಂದು ಗ್ರಾಮಸ್ಧರಾದ ಮಂಜುನಾಥ ಹಾಗೂ ರಂಗಪ್ಪ ವಡ್ಡರ ಒತ್ತಾಯಿಸುತ್ತಾರೆ.
ಕಲ್ಯಾಣ ಚಾಲುಕ್ಯರ ಕಾಲದಿಂದಲೂ ಈ ನಾಡು ಸಾಂಸ್ಕೃತಿಕವಾಗಿ ಸಂಪದ್ಭರಿತವಾಗಿದೆ. ಸಿದ್ದಮ್ಮ ಗಂಗಮ್ಮ ಪಿಡ್ಡಮ್ಮ ಎಂಬ ಶಿವಶರಣೆಯರು ತಿಂಥಣಿ ಮೌನೇಶ್ವರ ಕಾಲದಲ್ಲಿದ್ದರು. ಈ ಬಗ್ಗೆ ಹೆಚ್ಚಿನ ಸಂಶೋಧನೆ ಅವಶ್ಯಕ ಎಂದು ಲಿಂಗಸೂಗೂರುವಸಂಶೋಧಕ ಮಹಾದೇವಪ್ಪ ಹೇಳಿದ್ದಾರೆ.
ಐತಿಹಾಸಿಕ ಸ್ಧಳವನ್ನು ಅಭಿವೃದ್ಧಿಪಡಿಸುವ ಮೂಲಕ ಹಿಂದುಳಿದ ಗ್ರಾಮವನ್ನು ಪ್ರೇಕ್ಷಣಿಯ ಸ್ಧಳವನ್ನಾಗಿಸಬೇಕು ಎಂಬುದು ಇಲ್ಲಿನ ಜನರ ಒತ್ತಾಯವಾಗಿದೆ.

ಇನ್ನು ಈಶ್ವರ ದೇವಸ್ಧಾನದ ಕಲ್ಲುಗಳು ನೆಲಕ್ಕೆ ಉರುಳಿವೆ. ಗೋಪುರ ನೆಲಕಚ್ಚಿದೆ. ಗರ್ಭ ಗುಡಿಯಲ್ಲಿ ಲಿಂಗ ಸ್ಧಾಪನೆ ಮಾಡಲಾಗಿದೆ. ಪುರಾತನ ಪಳೆಯುಳಿಕೆಗಳು ಹಾಳಾಗಿವೆ. ಈ ದೇವಸ್ಧಾನದ ಜಿರ್ಣೋದ್ಧಾರ ಮಾಡಬೇಕು ಎಂದು ರೋಡಲಬಂಡ ಗ್ರಾಮಸ್ಧರು ಒತ್ತಾಯಿಸಿದ್ದಾರೆ.
ದೇವಸ್ಥಾನದ ಎದುರುಗಡೆ ಮೂರು ಪುರಾತನ ಬಾವಿಗಳಿವೆ. ಅದರಲ್ಲಿ ಎರಡು ಹಾಳಾಗಿವೆ. ಒಂದರಲ್ಲಿ ನೀರು ತುಂಬಿರುತ್ತದೆ. ಈ ಬಾವಿಯಲ್ಲಿ ಮೀನುಗಳನ್ನು ಬಿಟ್ಟರೆ ದೇವದುರ್ಗ ತಾಲೂಕಿನ ಮುಂಡರಗಿ ಬಾವಿಗಳಲ್ಲಿ ಪ್ರತ್ಯಕ್ಷ್ಯವಾಗುತ್ತಿದ್ದವಂತೆ ಎಂದು ಹೇಳುತ್ತಾರೆ ಇಲ್ಲಿನ ಹಿರಿಯರು. ಅಂತರ್ಜಲ ಸಂಪರ್ಕ ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತದೆ.












Click it and Unblock the Notifications