G Kumar Naik: ರಾಯಚೂರು ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಜಿ ಕುಮಾರ ನಾಯಕ್ ಪರಿಚಯ
ರಾಯಚೂರು ಮಾರ್ಚ್ 31: ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ರಾಯಚೂರು ಲೋಕಸಭಾ ಕ್ಷೇತ್ರದ ಚುನಾವಣೆಗೆ ಅಖಾಡ ರೆಡಿಯಾಗಿದ್ದು, ಕಾಂಗ್ರೆಸ್ ಪಕ್ಷದ ಅಭ್ಯಥಿ ಜಿ ಕುಮಾರ ನಾಯಕ್ ಸ್ಪರ್ಧಿಸಲು ಸಿದ್ಧರಾಗಿದ್ದಾರೆ. ಈ ಕ್ಷೇತ್ರದಲ್ಲಿ ಐಎಎಸ್ ನಿವೃತ್ತ ಅಧಿಕಾರಿ ಸ್ಪರ್ಧೆ ಮಾಡುತ್ತಿರುವುದು ಇದೇ ಮೊದಲು.
ಲೋಕಸಭಾ ಚುನಾವಣೆಯಲ್ಲಿ ಕೈ ಅಭ್ಯಥಿಯಾಗುವ ಮೂಲಕ ಜಿ.ಕುಮಾರ ನಾಯಕ್ ಅವರು ಇದೀಗ ರಾಜಕೀಯ ಇನ್ನಿಂಗ್ಸ್ ಆರಂಭಿಸಿದ್ದಾರೆ. ಅವರು ಐಎಎಸ್ ಅಧಿಕಾರಿಯಾಗಿ ಸರಕಾರದ ವಿವಿಧ ಉನ್ನತ ಹುದ್ದೆಗಳಿಗೇರಿದ್ದವರು. ಇದೀಗ ರಾಜಕಾರಣದಲ್ಲಿ ಧುಮುಕಿದ್ದಾರೆ. ಆದರೆ ಜನರು ಅವರನ್ನು ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಐಎಎಸ್ ನಿವೃತ್ತ ಅಧಿಕಾರಿಯೊಬ್ಬರು ಸ್ಪರ್ಧೆ ಮಾಡುತ್ತಿದ್ದು, ಚುನಾವಣೆಯಲ್ಲಿ ಪ್ರಥಮ ಬಾರಿಗೆ ಸ್ಪರ್ಧಿಸಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿರುದ್ಧ ಸೆಣಸಲಿದ್ದಾರೆ.

1990 ಬ್ಯಾಚ್ ಐಎಎಸ್ ಅಧಿಕಾರಿಯಾದ ಜಿ.ಕುಮಾರ್ ನಾಯಕ್ ಅವರು ಮೈಸೂರು ಜಿಲ್ಲೆಯ ಹುಣಸೂರು ಉಪ ವಿಭಾಗದ ಸಹಾಯಕ ಆಯುಕ್ತರಾಗಿ 1992ರಲ್ಲಿ ಸೇವೆ ಆರಂಭಿಸಿದರು. 2023ರ ಸೆಪ್ಟೆಂಬರ್‌ನಲ್ಲಿ ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ನಂತರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ನಿವೃತ್ತರಾದವರು.
1999 ರಿಂದ 2002ರವರೆಗೆ ರಾಯಚೂರು ಜಿಲ್ಲಾಧಿಕಾರಿಯಾಗಿ ಹಾಗೂ ನಿವೃತ್ತಿಗೂ ಮುಂಚೆ ರಾಯಚೂರು ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕ್ಷೇತ್ರದ ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಾರಿಕೆ ಇರುವುದರಿಂದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದೆ ಸಾಗಬೇಕಾಗದ ಅನಿವಾರ್ಯತೆ ಜಿ.ಕುಮಾರ ನಾಯಕ್ ಅವರ ಎದುರಿಗಿದೆ. ಒಂದು ಬಣದಲ್ಲಿ ಗುರುತಿಸಿಕೊಂಡರೆ ಇನ್ನೊಂದು ಬಣದವರು ಅಸಮಾಧಾನಗೊಳ್ಳುವ ಸಾಧ್ಯತೆಯಿರುವುದರಿಂದ ಈ ಎಲ್ಲವನ್ನು ಸರಿಪಡಿಸಿಕೊಂಡು ಕ್ಷೇತ್ರದ ಮತದಾರರನ್ನು ಸೆಳೆಯಬೇಕಿದೆ.
ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಎಂಟು ವಿಧಾನಸಭೆ ಕ್ಷೇತ್ರಗಳಿಗೆ 2023ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಐವರು, ಬಿಜೆಪಿಯಿಂದ ಇಬ್ಬರು ಹಾಗೂ ಜೆಡಿಎಸ್‌ನಿಂದ ಒಬ್ಬರು ಗೆಲುವು ಸಾಧಿಸಿದ್ದರು. ಮೇಲ್ನೋಟಕ್ಕೆ ಕಾಂಗ್ರೆಸ್ ಬಲಿಷ್ಠವಾಗಿ ಕಂಡರೂ ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದರಿಂದ ಬಿಜೆಪಿಯೂ ಬಲಿಷ್ಠವಾಗಿ ಕಂಡು ಬರುತ್ತಿದೆ.
ಯಾದಗಿರಿ, ಶಹಾಪುರ, ಮಾನ್ವಿ, ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ರಾಯಚೂರು, ಲಿಂಗಸೂಗೂರಲ್ಲಿ ಬಿಜೆಪಿ ಶಾಸಕರು ಹಾಗೂ ದೇವದುರ್ಗದಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಸುರಪುರ ವಿಧಾನಸಭಾ ಕ್ಷೇತ್ರದ ಶಾಸಕರು ನಿಧನರಾಗಿರುವುದರಿಂದ ಉಪ ಚುನಾವಣೆ ನಡೆಯುತ್ತಿದೆ.












Click it and Unblock the Notifications