ಶಿಕ್ಷಣ ಇಲಾಖೆಯ ಆಯುಕ್ತರ ಆದೇಶಕ್ಕೆ ಕ್ಯಾರೆ ಎನ್ನದ ಉಪ ನಿರ್ದೇಶಕ, ಮಕ್ಕಳ ಕಲಿಕೆಯ ಸಮಸ್ಯೆ ಕೇಳುವವರಾರು?
ರಾಯಚೂರು ಆಗಸ್ಟ್ 09: ಶೈಕ್ಷಣಿಕವಾಗಿ ಹಿಂದುಳಿದ ರಾಯಚೂರು ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ಸರ್ಕಾರ ವಿವಿಧ ಕಾರ್ಯಕ್ರಮ ನಿರ್ವಹಿಸುತ್ತಿರುವುದು ಒಂದೆಡೆಯಾದರೆ ಶೈಕ್ಷಣಿಕ ಪ್ರಗತಿಗೆ ಶ್ರಮಿಸಬೇಕಿರುವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಬಿಇಒಗಳು ಸರ್ಕಾರದ ಆದೇಶ ಪಾಲನೆ ಮಾಡದೇ ಶಿಕ್ಷಕರಿಗೆ ಬಾಸ್ ಆಗಿ ಅಧಿಕಾರ ಚಲಾಯಿಸುತ್ತಿದ್ದಾರೆ. ಇದರಿಂದ ಮಕ್ಕಳ ಕಲಿಕೆಗೆ ತೊಡಕಾಗಿದೆ.
ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ವಿಷಯವಾರು ಶಿಕ್ಷಕರ ಕೊರತೆ, ಕೊಠಡಿಗಳ, ಶೌಚಾಲಯ, ಕುಡಿಯುವ ನೀರು ಮೂಲಸೌಕರ್ಯದ ಕೊರತೆಯಿಂದ ನಲುಗುತ್ತಿದೆ. ಮತ್ತೊಂದೆಡೆ ಲಭ್ಯ ವಿರುವ ಶಿಕ್ಷಕರನ್ನು ಅನ್ಯ ಕಾರ್ಯಗಳಿಗೆ ನಿಯೋಜಿಸಿದ ಕಾರಣ ವಿದ್ಯಾರ್ಥಿಗಳ ಪರಿಕ್ಷಾ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ.

ರಾಜ್ಯದ ಎಲ್ಲಾ ಜಿಲ್ಲೆ, ತಾಲೂಕುಗಳಲ್ಲಿ ನಿಯೋಜನೆ ಮೇರೆಗೆ ಕಚೇರಿ ಹಾಗೂ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಸಹ ಶಿಕ್ಷಕರ ನಿಯೋಜನೆ ಆಯಾ ವರ್ಷಾಂತ್ಯಕ್ಕೆ ರದ್ದುಪಡಿಸಿ ಮೂಲ ಶಾಲೆಗೆ ಕಳುಹಿಸಬೇಕು ಎಂಬ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಆದೇಶ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವೃಷಭೇಂದ್ರಯ್ಯ ಆದೇಶ ಪಾಲನೆ ಮಾಡದೇ ಕರ್ತವ್ಯಲೋಪ ಎಸಗಿದ್ದು ಬೆಳಕಿಗೆ ಬಂದಿದೆ.
ಮಕ್ಕಳ ಶೈಕ್ಷಣಿಕ ಹಿತಾಸಕ್ತಿಯ ಗಮನದಲ್ಲಿರಿಸಿ ಸರ್ಕಾರದಿಂದ ಆದೇಶವಾಗಿರುವ ಪ್ರಕರಣಗಳನ್ನು ಹೊರತುಪಡಿಸಿ ನಿಯೋಜನೆ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರನ್ನು ತಕ್ಷಣದಿಂದಲೇ ಬಿಡುಗಡೆಗೊಳಿಸಿ ಮೂಲ ಶಾಲೆಯಲ್ಲಿ ಕರ್ತವ್ಯಕ್ಕೆ ಕಳುಹಿಸಬೇಕು ಗೈರಾಗಿದ್ದಲ್ಲಿ ಶಿಸ್ತುಕ್ರಮ ಜರುಗಿಸಿ ವೇತನ ತಡೆಹಿಡಿಯಬೇಕು ಎಂದು ಕಳೆದ ಜೂನ್ 27ರಂದು ಆದೇಶ ಹೊರಡಿಸಿದೆ ಜುಲೈ 5ರ ಒಳಗೆ ಬಿಡುಗಡೆ ಮಾಡಿರುವ ಹಾಗೂ ಮೂಲ ಶಾಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿರುವ ಶಿಕ್ಷಕರ ಪಟ್ಟಿಯನ್ನು ಆಯುಕ್ತರ ಕಚೇರಿಗೆ ಕಳುಹಿಸಲು ತಿಳಿಸಿದೆ. ಆದೇಶ ಮೀರಿ ಯಾವುದೇ ಶಿಕ್ಷಕರನ್ನು ನಿಯೋಜನೆಯ ಮೇಲೆ ಮುಂದುವರೆಸಿದರೆ ಡಿಡಿಪಿಐ ಹಾಗೂ ಬಿಇಒ ಹಾಗೂ ಸಂಬಂಧಿಸಿದ ಸಿಬ್ಬಂದಿಯನ್ನು ಕರ್ತವ್ಯ ನಿರ್ಲಕ್ಷ್ಯದ ಆರೋಪದ ಮೇರೆಗೆ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಆದರೆ ಆಯುಕ್ತರ ಆದೇಶ ಪಾಲಿಸದೇ ಡಿಡಿಪಿಐ ಅನೇಕ ಶಿಕ್ಷಕರನ್ನು ಸಾಕ್ಷರತಾ ಕಾರ್ಯ, ಶಿಕ್ಷಣ ಇಲಾಖೆಯ ವಿವಿಧ ಕಾರ್ಯಗಳಿಗೆ ನಿಯೋಜಿಸಿಕೊಂಡಿದೆ. ಇದರಿಂದಾಗಿ ಮೂಲ ಶಾಲೆಗೆ ಗೈರಾಗುವ ಕಾರಣ ಮಕ್ಕಳ ಶೈಕ್ಷಣಿಕ ಕಲಿಕೆಯ ಮೇಲೆ ಪರಿಣಾಮ ಬೀರಿದೆ ಎಂದು ಅನೇಕ ತಾಲೂಕಿನ ಅನೇಕ ಶಾಲೆಗಳ ಮುಖ್ಯಗುರುಗಳು ಹಾಗೂ ಎಸ್ ಡಿಎಂಸಿ ಅಧ್ಯಕ್ಷರು, ಸದಸ್ಯರು ಡಿಡಿಪಿಐ ಕಚೇರಿಗೆ ನಿಯೋಜಿಸಿದ ಶಿಕ್ಷಕರನ್ನು ಬಿಡುಗಡೆಗೊಳಿಸಲು ಪತ್ರ ಬರೆದರೂ ಸ್ಪಂದಿಸದೇ ಕಾಲಹರಣ ಮಾಡುತ್ತಿದ್ದಾರೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ.

ತಾಲೂಕಿನ ಜೇಗರಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕನ್ನಡ ವಿಷಯ ಶಿಕ್ಷಕ ಗಿರಿಯಪ್ಪ ಎಂ ಅವರನ್ನು ಸಾಕ್ಷರತಾ ಕಾರ್ಯಕ್ರಮದ ಸಹಾಯಕರ ಹುದ್ದೆಗೆ ನಿಯೋಜಿಸಲಾಗಿದೆ. ಇವರು ವಾರದಲ್ಲಿ ಮೂರು ದಿನ ಸಾಕ್ಷರತಾ ಕಾರ್ಯಕ್ರಮ ಕೆಲಸ ಮಾಡಿ ಉಳಿದ ಮೂರು ದಿನ ಮಾತ್ರ ಶಾಲೆ ಬೋಧನೆ ಮಡುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗಿದೆ. ಈ ಶಾಲೆಯಲ್ಲಿ ಒಟ್ಟು 550 ಮಕ್ಕಳು ಅಭ್ಯಾಸ ಮಾಡುತ್ತಿದ್ದು ಗಿರಿಯಪ್ಪ ಅವರು 8ನೇ ತರಗತಿಯ ಬಿ ವಿಭಾಗದ ವರ್ಗ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಕ್ಷರತಾ ಕೆಲಸಕ್ಕೆ ನಿಯೋಜಿಸಿದ ಕಾರಣ ವಿದ್ಯಾರ್ಥಿಗಳ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಿದೆ. ಕೂಡಲೇ ನಿಯೋಜಿಸಿದ ಹುದ್ದೆ ರದ್ದುಪಡಿಸದಿದ್ದರೆ ಶಾಲೆಗೆ ಬೀಗ ಹಾಕಿ ಪ್ರತಿಭಟನೆ ಮಾಡಲಾಗುವುದು ಎಂದು ಎಸ್ ಡಿಎಂಸಿ ಅಧ್ಯಕ್ಷ ಜಿಂದಪ್ಪ, ಸದಸ್ಯ ದೇವಪ್ಪ, ಯಲ್ಲಪ್ಪ ಡಿಡಿಪಿಐಗೆ ಪತ್ರ ಬರೆದು ಎಚ್ಚರಿಕೆ ನೀಡಿದ್ದಾರೆ.
ತಾಲೂಕಿನ ಮಟಮಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಮಹಾದೇವಪ್ಪನವರು ಸುಮಾರು ಎರಡು ವರ್ಷಗಳಿಂದ ರಾಯಚೂರು ಬಿಇಒ ಕಚೇರಿಯಲ್ಲಿ ಎರವಲು ಸೇವೆಗೆ ನಿಯೋಜಿಸಿಕೊಳ್ಳಲಾಗಿದೆ. ಸದಾ ರಾಜಕೀಯ ಕಾರ್ಯಗಳಲ್ಲಿ ಸಕ್ರಿಯರಾಗಿರುವ ಇವರು ಶಾಲೆಯಲ್ಲಿ ಇರುವುದಿಲ್ಲ. ಮಹಾದೇವಪ್ಪ ಅವರನ್ನು ಮೂಲ ವೃತ್ತಿ ನಿರ್ವಹಿಸಲು ಮಾತೃ ಶಾಲೆಗೆ ಕಳುಸಹಿಬೇಕು ಎಂದು ಆಯುಕ್ತರಿಗೆ ಮನವಿ ಮಾಡಿದರೂ ಡಿಡಿಪಿಐ ವೃಷಭೇಂದ್ರಯ್ಯ ಆದೇಶ ಪಾಲನೆ ಮಾಡುತ್ತಿಲ್ಲ. ಮಕ್ಕಳ ಕಲಿಕೆಗೆ ಸಮಸ್ಯೆಯಾಗುತ್ತಿದೆ ಎಂದು ಪಾಲಕರು ಡಿಡಿಪಿಐ ಕಚೇರಿಗೆ ದೂರು ನೀಡಿದರೂ ಕ್ಯಾರೆ ಎನ್ನುತ್ತಿಲ್ಲ ಎಂದು ಕರ್ನಾಟಕ ರಾಜ್ಯ ಕುರುಬ ಸಂಘದ ರಾಜ್ಯ ನಿರ್ದೇಶಕ ನೀಲಕಂಠ ಬೇವಿನ ಆರೋಪಿಸುತ್ತಾರೆ.












Click it and Unblock the Notifications