ರಾಯಚೂರು: ನೀರಿಲ್ಲದೆ ತತ್ತರಿಸಿದ ಜಾನುವಾರಗಳು!
ರಾಯಚೂರು ಮಾರ್ಚ್ 6: ಈ ವರ್ಷ ಬಿಸಿಲಿನ ತೀವ್ರತೆ ಹೆಚ್ಚಿದೆ. ವಾತಾವರಣದಲ್ಲಿ ಗಾಳಿ ಕಡಿಮೆಯಾಗಿ ಸೆಕೆ ಅತಿಯಾದ ಕಾರಣ ನೆತ್ತಿ ಸುಟ್ಟು ಜನ-ಜಾನುವಾರು ಪರದಾಡುವಂತಾಗಿದೆ. ತಾಪಮಾನ ಏರಿಕೆಯಾಗಿದ್ದರಿಂದ ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದೆ.
ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ಮುದಗಲ್, ಕನ್ನಾಪುರಹಟ್ಟಿ, ಉಪ್ಪಾರ ನಂದಿಹಾಳ, ಉಳಿಮೇಶ್ವರ, ಭೋಗಾಪುರ ಸೇರಿ ಇನ್ನಿತರ ಗ್ರಾಮಗಳ ಕೆರೆಗಳಲ್ಲಿ ನೀರಿನ ಪ್ರಮಾಣ ಇಳಿಕೆಯಾಗಿದೆ. 15 ದಿನಗಳಿಂದ ಬಿಸಿಲಿನ ಝಳ ತೀವ್ರವಾಗಿದೆ. ಬೆಳಿಗ್ಗೆ 8ಕ್ಕೆ ನಿಗಿ ನಿಗಿಯಾಗುವ ಸೂರ್ಯನ ಪ್ರಖರತೆ ಸಂಜೆ 6 ಗಂಟೆಯಾದರೂ ಇಳಿಮುಖವಾಗುತ್ತಿಲ್ಲ.

ಈ ವರ್ಷದ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ವಾಡಿಕೆಯಷ್ಟು ಮಳೆ ಸುರಿದಿಲ್ಲ. ಚಳಿಗಾಲದಲ್ಲೂ ಚಳಿ ಇರಲಿಲ್ಲ. ವಾಡಿಕೆಯಂತೆ ಯುಗಾದಿ ಬಳಿಕ ವಾತಾವರಣದಲ್ಲಿ ತಾಪಮಾನ ಏರಿಕೆಯಾಗುತ್ತಿತ್ತು. ಆದರೆ, ಈ ಬಾರಿ ತೇವಾಂಶ ಕೊರತೆಯಾಗಿ ಈಗಾಗಲೇ ತಾಪಮಾನ ಹೆಚ್ಚಳವಾಗಿದೆ.
ಏಪ್ರಿಲ್, ಮೇ ತಿಂಗಳಲ್ಲಿ ಸರಾಸರಿ ಗರಿಷ್ಠ ಉಷ್ಣಾಂಶ 40 ಡಿಗ್ರಿ ದಾಖಲಾಗಿತ್ತು. ಈ ವರ್ಷ ಈಗಲೇ ಗರಿಷ್ಠ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್ ಇದೆ. ಜನ ಮಧ್ಯಾಹ್ನ ಮನೆಯಿಂದ ಹೊರಬರಲು ಹಿಂದೇಟು ಹಾಕುವ ಸ್ಥಿತಿ ಎದುರಾಗಿದೆ. ರಾತ್ರಿ ಹಾಗೂ ಬೆಳಿಗ್ಗೆ ತಾಪಮಾನ ಕೊಂಚ ಇಳಿಕೆಯಾದರೂ ಮಧ್ಯಾಹ್ನದ ಬಿಸಿಲು ನೆತ್ತಿ ಸುಡುತ್ತಿದೆ.
ಬೀದಿಬದಿ ವ್ಯಾಪಾರಿಗಳು, ವೃದ್ಧರು ಸೇರಿ ಹಲವರಿಗೆ ಬಿಸಿಲಿನ ಬೇಗೆ ತಟ್ಟಿದೆ. ದಿಢೀರ್ ತಾಪಮಾನ ಏರಿಕೆಯಿಂದ ಜನರು ಫ್ಯಾನ್ ಹಾಗೂ ಹವಾನಿಯಂತ್ರಿತ (ಎ.ಸಿ) ವ್ಯವಸ್ಥೆಯ ಮೊರೆ ಹೋಗುವಂತಾಗಿದೆ.
ಪಟ್ಟಣದ ಮುಖ್ಯ ರಸ್ತೆ ಸೇರಿ ಒಳಭಾಗದ ರಸ್ತೆಯಲ್ಲಿದ್ದ ಮರಗಳನ್ನು ರಸ್ತೆ ವಿಸ್ತರಣೆ ನೆಪದಲ್ಲಿ ಕಡಿದ ಪರಿಣಾಮ ರಸ್ತೆಯಲ್ಲಿ ನೆರಳು ಇಲ್ಲದಾಗಿದೆ. ಇದರಿಂದಾಗಿ ಉಷ್ಣಾಂಶದಲ್ಲಿ 2ರಿಂದ 3 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಲಿದೆ.
ತಾಪಮಾನದಿಂದ ಪಾರಾಗಲು ಜನರು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಎಳನೀರು, ಮಜ್ಜಿಗೆ, ಹಣ್ಣಿನ ಜ್ಯೂಸ್ ಸೇವಿಸುತ್ತಿದ್ದಾರೆ.
'ಕಾಲುವೆಗೆ ನೀರು ಹರಿಸಿ'
'ಸಮೀಪದ ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದರೂ ಜಾನುವಾರುಗಳಿಗೆ ಕುಡಿಯಲು ರಾಂಪುರ ಏತ ನೀರಾವರಿ ಕಾಲುವೆಗಳಿಗೆ ನೀರು ಹರಿಸಲು ನೀರಾವರಿ ಇಲಾಖೆ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಕಾಲುವೆಗೆ ನೀರು ಹರಿಸಿ ಎಂದು ವಿವಿಧ ಗ್ರಾಮಸ್ಥರು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ' ಎಂದು ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶಿವಪುತ್ರಗೌಡ ಆರೋಪಿಸಿದರು.
ರಸ್ತೆ ಕಾಮಗಾರಿಗೆ ಪಟ್ಟಣದ ಕೋಟೆ ಮುಂಭಾಗದ ಕಂದಕದಲ್ಲಿನ ನೀರು ತೆಗೆದುಕೊಂಡು ಹೋಗಲಾಗುತ್ತಿದೆ. ಮೇಯಲು ಅಡವಿಗೆ ಹೋದ ಜಾನುವಾರುಗಳು ಕುಡಿಯಲು ನೀರಿಲ್ಲದ ಕಾರಣ ತೊಂದರೆ ಅನುಭವಿಸುತ್ತಿವೆ. ಕುಡಿಯುವುದಕ್ಕಾಗಿ ಕಾಲುವೆಗೆ ನೀರು ಹರಿಸಬೇಕು ಎಂದು ಅವರು ಒತ್ತಾಯಿಸುತ್ತಾರೆ.












Click it and Unblock the Notifications