Raichur: ಬ್ಯಾಂಕ್ ಮ್ಯಾನೇಜರ್‌ನಿಂದಲೇ ಕೋಟಿ ಕೋಟಿ ಹಣ ವಂಚನೆ
ರಾಯಚೂರು ಮಾರ್ಚ್ 30: ಜನ ಬ್ಯಾಂಕ್‌ಗಳನ್ನು ನಂಬಿಕೊಂಡು ಹಣವನ್ನು ಇಡುತ್ತಾರೆ. ಆದರೆ ಇಲ್ಲೊಂದು ಬ್ಯಾಂಕ್‌ನಲ್ಲಿ ಮ್ಯಾನೇಜರ್ ಗ್ರಾಹಕರ ಹಣವನ್ನು ನುಂಗಿ ನೀರು ಕುಡಿದಿದ್ದಾನೆ. ಬೇಲಿಯೇ ಎದ್ದು ಹೊಲವನ್ನು ಮೇಯ್ದ ಘಟನೆ ರಾಯಚೂರಿನಲ್ಲಿ ನಡೆದಿದೆ.
ಹೌದು ರಾಯಚೂರು ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಭಾರೀ ಗೋಲ್‌ಮಾಲ್ ನಡೆದಿರುವ ಆರೋಪ ಕೇಳಿ ಬಂದಿದೆ. ಬ್ಯಾಂಕ್ ಮ್ಯಾನೇಜರ್‌ನಿಂದಲೇ ಕೋಟಿ ಕೋಟಿ ಹಣವನ್ನು ವಂಚನೆ ಮಾಡಲಾಗಿದೆ. ಗೋಲ್ಡ್ ಲೋನ್ ಹೆಸರಲ್ಲಿ ಸುಮಾರು 10.97 ಕೋಟಿ ವಂಚನೆ ಮಾಡಲಾಗಿದೆ. ಅಲ್ಲದೆ ಕಾರ್ ಲೋನ್ ಹೆಸರಲ್ಲೂ ಮ್ಯಾನೇಜರ್ ಹಣ ವಂಚನೆ ಮಾಡಿದ್ದಾನೆ.

ಮ್ಯಾನೇಜರ್ ಕೆ. ನರೇಂದ್ರ ರೆಡ್ಡಿ ಎಂಬಾತ ಅಸಲಿ ಚಿನ್ನ ಅಡವಿಟ್ಟು ಸಾಲ ಪಡೆದ ಗ್ರಾಹಕರಿಗೆ ನಕಲಿ ಚಿನ್ನ ಇಟ್ಟು ಮೋಸ ಮಾಡಿದ್ದಾನೆ. ಇದೀಗ ಗ್ರಾಹಕರು ಸೈಬರ್ ಪೊಲೀಸ್ ಠಾಣೆಗೆ ದೂರು ಕೊಟ್ಟು ನ್ಯಾಯ ನೀಡುವಂತೆ ಮನವಿ ಮಾಡಿದ್ದಾರೆ. ಬ್ಯಾಂಕ್‌ನಲ್ಲೂ ಸುರಕ್ಷತೆ ಇಲ್ಲ ಅಂತಾದರೆ ಜನ ಇನ್ನೆಲ್ಲಿ ಒಡವೆ ಬಂಗಾರ ದಾಖಲೆ ಇಡೋದು ಅಂತ ಚಿಂತೆಗೀಡಾಗಿದ್ದಾರೆ.
ಈ ಬಗ್ಗೆ ಮಾತನಾಡಿದ ಗ್ರಾಹಕರೊಬ್ಬರು, 'ನಮ್ಮದು ಈ ಬ್ಯಾಂಕ್ ಅಲ್ಲಿ ಅಕೌಂಟ್ ಇದ್ದು ಸುಮಾರು ಏಳು ಎಂಟು ವರ್ಷ ಆಗಿದೆ. ನಾವು ಲೋನ್ ಕಟ್ಟುತ್ತಾ ಬಂದಿದ್ದೇವೆ. ಕಾರು ಲೋನ್ ತೆಗೆದುಕೊಂಡು ಒಂದು ವರ್ಷ ಆಗಿದೆ. ಇತ್ತೀಚೆಗೆ ಪ್ರತೀ ತಿಂಗಳು ಹೆಚ್ಚುವರಿ ಹಣ ಕಡಿತಗೊಳಿಸಲಾಗಿದೆ. ಬ್ಯಾಂಕ್‌ಗೆ ಬಂದು ವಿಚಾರಿಸಿದಾಗ ಬ್ಯಾಂಕ್ ಸಿಬ್ಬಂದಿ ನೀವು ಸೈಬರ್ ಕ್ರೈಂಗೆ ಹೋಗಿ ದೂರು ನೀಡಿ ಎನ್ನುತ್ತಿದ್ದಾರೆ. ನಮ್ಮ ಕಡೆಯಿಂದ ಸಹಾಯ ಕೂಡ ಮಾಡುತ್ತೇವೆ ಎಂದು ಹೇಳಿದ್ದಾರೆ. ನಮಗೆ ಬ್ಯಾಂಕ್ ನವರೇ ಮೋಸ ಮಾಡಿದ್ದಾರೆ' ಎಂದು ಅವರು ಸುದ್ದಿಗಾರರ ಮುಂದೆ ಬೇಸರ ಹಂಚಿಕೊಂಡಿದ್ದಾರೆ.
ಮತ್ತೊಬ್ಬರು ಗ್ರಾಹಕರು ಹೇಳುವಂತೆ 'ನಮಗೆ ಬ್ಯಾಂಕ್ ಬ್ಯಾನೇಜರ್ ದಿಢೀರ್ ಆಗಿ ಹತ್ತು ಕೋಟಿ ವಂಚನೆ ಮಾಡಿದ್ದಾರೆ. ತಕ್ಷಣ ನಾವು ಬ್ಯಾಂಕ್‌ಗೆ ಬಂದು ವಿಚಾರಿಸಿದಾಗ ನಮಗೆ ಗೊತ್ತಾಗಿದೆ. ನಾವು ಚಿನ್ನವನ್ನು ಬ್ಯಾಂಕ್‌ನಲ್ಲಿ ಇಟ್ಟು ಅದರ ಮೇಲೆ ಸಾಲ ಪಡೆದುಕೊಂಡಿದ್ದೇವೆ. ಈಗ ಆ ಗೋಲ್ಡ್ ನಕಲಿ ಎಂದು ಹೇಳುತ್ತಿದ್ದಾರೆ. ನಮ್ಮ ಅಸಲಿ ಚಿನ್ನ ತೆಗೆದುಕೊಂಡು ಅದರ ಮೇಲೆ ಸಾಲಾ ಮಾಡಿ, ನಮ್ಮ ಅಸಲಿ ಚಿನ್ನಕ್ಕೆ ನಕಲಿ ಎಂದು ಮಾಡಿದ್ದಾರೆ. ಮತ್ತೆ ಹೊಸ ಲೋನ್‌ಗಳನ್ನು ಮಾಡಿಕೊಂಡ ಬ್ಯಾಂಕ್ ಮ್ಯಾನೇಜರ್ ಹತ್ತು ಕೋಟಿ ಹಣವನ್ನು ವಂಚಿಸಿದ್ದಾನೆ' ಎಂದು ಆರೋಪಿಸಿದ್ದಾರೆ.

ಬ್ಯಾಂಕ್ ಮ್ಯಾನೇಜರ್ ಗ್ರಾಹಕರ ಚಿನ್ನವನ್ನು ನಕಲಿ ಮಾಡಿ, ತನ್ನ ಮೊಬೈಲ್‌ಗೆ ಮೆಸೇಜ್ ಬರುವಂತೆ ಮಾಡಿಕೊಂಡಿದ್ದಾನೆ. ಅಷ್ಟೇ ಅಲ್ಲ ಗ್ರಾಹಕರ ಖಾತೆಗಳ ದಾಖಲೆಗಳನ್ನು ನಕಲಿ ಮಾಡಿ, ಅವರ ಓಟಿಪಿಗಳನ್ನು ತಮ್ಮ ನಂಬರ್‌ಗೆ ಬರುವಂತೆ ಮಾಡಿರುವುದು ಗೊತ್ತಾಗಿದೆ. ಜೊತೆಗೆ ಗ್ರಾಹಕರ ಹಣ ತನ್ನ ಖಾತೆಗೆ ಜಮಾ ಆಗುವಂತೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಕಾರ್ ಲೋನ್ ಕಂತು ಕಟ್ ಆದ ಕೂಡಲೇ ಗ್ರಾಹಕರೊಬ್ಬರು ಬ್ಯಾಂಕ್‌ಗೆ ಬಂದಾಗ ಆ ಹಣ ಐದು ಖಾತೆಗಳಿಗೆ ವರ್ಗಾವಣೆ ಆಗಿದೆ. ಆಗ ಗ್ರಾಹಕರಿಗೆ ಮೋಸ ಹೋಗಿರುವುದು ಗೊತ್ತಾಗಿದೆ. ಬ್ಯಾಂಕ್‌ನಲ್ಲಿ 28 ಖಾತೆಗಳಲ್ಲಿ ಗೋಲ್ಡ್ ಲೋನ್ ಪಡೆದ ಗ್ರಾಹಕರಿಗೂ ಈಗ ಅನುಮಾನ ಶುರುವಾಗಿದೆ. ಈಗಾಗಲೇ ತಾವಿಟ್ಟ ಅಸಲಿ ಚಿನ್ನ ನಕಲಿ ಆಗಿರುವ ಬಗ್ಗೆ ಸುದ್ದಿ ಗೋತ್ತಾಗುತ್ತಿದ್ದಂತೆ ಇನ್ನಷ್ಟು ಗ್ರಾಹಕರು ಬಂದು ಬ್ಯಾಂಕ್‌ನಲ್ಲಿ ವಿಚಾರಿಸಿದಾಗ ಅವರ ಚಿನ್ನ ಕೂಡ ನಕಲಿ ಆಗಿರುವುದು ಗೊತ್ತಾಗಿದೆ.
ಜೊತೆಗೆ 105 ನಕಲಿ ಖಾತೆಗಳನ್ನು ತಯಾರಿಸಿ ಅದರ ಮೂಲಕ ಗೋಲ್ಡ್ ಲೋನ್ ಪಡೆದು ಈಗಾಗಲೇ 10.97 ಕೋಟಿ ಹಣವನ್ನು ಬ್ಯಾಂಕ್ ಹಾಗೂ ಗ್ರಾಹಕರಿಗೆ ಈ ಮ್ಯಾನೇಜರ್ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಇನ್ನೂ ತನಿಖೆಯಿಂದ ಇನ್ನೂ ಎಷ್ಟು ಕೋಟಿ ಹಣ ವಂಚನೆ ಆಗಿದೆ ಎನ್ನುವುದು ಬಯಲಾಗಬೇಕಿದೆ.












Click it and Unblock the Notifications