ರಾಯರ ಸನ್ನಿಧಿಯಲ್ಲಿ 108 ಅಡಿ ಎತ್ತರದ ಶ್ರೀರಾಮನ ಏಕ ಶಿಲಾ ವಿಗ್ರಹ ಕೆತ್ತನೆ ಆರಂಭ
ರಾಯಚೂರು, ಅಕ್ಟೋಬರ್ 02: ಭಕ್ತಿಯ ತಾಣ, ಅಧ್ಯಾತ್ಮದ ಕೇಂದ್ರ ಮಂತ್ರಾಲಯವನ್ನು 2030ರೊಳಗೆ ದೇಶದ ಪ್ರಸಿದ್ಧ ಪ್ರವಾಸಿ ಸ್ಥಳಗಳಲ್ಲಿ ಒಂದು ಮಾಡಲು ಶ್ರೀಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಯೋಜಿಸಿದ್ದು ಸಾಕಾರಕ್ಕೆ ಸಿದ್ಧತೆ ನಡೆದಿದ್ದು ಭಕ್ತರ ವಲಯದಲ್ಲಿ ಸಂಭ್ರಮ ಮನೆ ಮಾಡಿದೆ.
ಮಂತ್ರಾಲಯ ಶ್ರೀಕ್ಷೇತ್ರ ಅಧ್ಯಾತ್ಮಿಕವಾಗಿ ನಿತ್ಯವೂ ಧಾರ್ಮಿಕ ಸ್ಪರ್ಶದಲ್ಲಿ ವೇಗವಾಗಿ ಬೆಳೆಯುತ್ತಿದೆ. ಇಡೀ ವಿಶ್ವವೇ ತಿರುಗಿ ನೋಡುವ ರೀತಿಯಲ್ಲಿ ಪ್ರಭು ಶ್ರೀ ರಾಮಚಂದ್ರರ 108 ಅಡಿ ಎತ್ತರದ ಬೃಹತ್ ಪಂಚಲೋಹದ ರಾಮನ ಮೂರ್ತಿ ಕೆತ್ತನೆ ಕಾರ್ಯ ಮುಗಿಯುವ ಹಂತಕ್ಕೆ ತಲುಪಿದೆ.

ಶ್ರೀರಾಘವೇಂದ್ರ ಸ್ವಾಮಿಗಳ ಪವಾಡ, ಅಧ್ಯಾತ್ಮದ ಶಕ್ತಿಯಿಂದಾಗಿ ದೇಶಾದ್ಯಂತ ಕೋಟ್ಯಂತರ ಭಕ್ತರಿದ್ದು ಅವರಿಗೆ ಸೂಕ್ತ ಆಸರೆಯಾಗಬೇಕು,ಶ್ರೀರಾಮ, ರಾಯರ ದರ್ಶನಾಶೀರ್ವಾದ ಸರಳವಾಗಿ ಸಿಗಬೇಕು ಎಂಬ ಆಶಯದೊಂದಿಗೆ ಶ್ರೀಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಪಂಚಲೋಹದ ಶ್ರೀರಾಮನ ಏಕ ಶಿಲಾ ವಿಗ್ರಹ ಪ್ರತಿಷ್ಠಾಪನೆಗೆ ಸಿದ್ಧತೆ ನಡೆಸಿರುವುದು ಪ್ರಶಂಸೆ ವ್ಯಕ್ತವಾಗಿದೆ.
ಶ್ರೀ ಮಠದಲ್ಲಿಅನೇಕ ವರ್ಷಗಳಿಂದ ಪೀಠಾಧಿಪತಿಗಳು ಮೂಲರಾಮ ದೇವರಿಗೆ ಸಂಸ್ಥಾನ ಪೂಜೆ ನೆರವೇರಿಸಿಕೊಂಡು ಬರುತ್ತಿರುವ ಪ್ರತೀತಿ ಇದೆ. ಈಗಿನ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ಮಿಗಿಲಾಗಿ ಶ್ರೀರಾಮನ ದೇಗುಲ ನಿರ್ಮಿಸಿ ಮಂತ್ರಾಲಯವನ್ನು ಮತ್ತಷ್ಟು ಧಾರ್ಮಿಕವಾಗಿ ಶ್ರದ್ಧಾ ಭಕ್ತಿಯ ಕೇಂದ್ರವಾಗಿ ರೂಪಿಸಲು ಸಂಕಲ್ಪ ತೊಟ್ಟಿದ್ದಾರೆ.
2021ರ ಮಾರ್ಚ್ 14, 15 ರಂದು ರಾಯಚೂರು ಮೂಲಕ ಮಂತ್ರಾಲಯ ಪ್ರವೇಶಿಸುವ ಮುಖ್ಯ ದ್ವಾರದ ಮುಂದೆ ಸುಮಾರು 32 ಅಡಿ ಎತ್ತರದ ಏಕಶಿಲಾ ಅಭಯಾಂಜನೇಯ ಸ್ವಾಮಿ ವಿಗ್ರಹ ಸ್ಥಾಪಿಸಿದ್ದು, ಪ್ರಸ್ತುತ ಅಭಯಾಂಜನೇಯ ಸ್ವಾಮಿ ಮುಂದುಗಡೆ ಸುಮಾರು ಆರು ಎಕರೆ ಪ್ರದೇಶದಲ್ಲಿಈಗ ಶ್ರೀಅಭಯ ರಾಮನ 33 ಅಡಿ ಎತ್ತರದ ಏಕಶಿಲಾ ಮೂರ್ತಿ ಪ್ರತಿಷ್ಠಾಪನೆ ಕೆಲಸ ಭರದಿಂದ ಸಾಗಿದೆ.

ಆಯೋಧ್ಯೆಯಲ್ಲಿ ಶ್ರೀರಾಮ ದೇವಸ್ಥಾನ ಉದ್ಘಾಟನೆ ವೇಳೆಗೆ ಇಲ್ಲಿಶ್ರೀರಾಮನ ಬೃಹತ್ ಮೂರ್ತಿ ಪ್ರತಿಷ್ಠಾಪಿಸಲು ಶ್ರೀಗಳು ಚಿಂತನೆ ನಡೆಸಿದ್ದಾರೆ. ಶ್ರೀಅಭಯರಾಮನ 33 ಅಡಿ ಎತ್ತರದ ಏಕಶಿಲಾ ಮೂರ್ತಿ ಕೆತ್ತನೆ ಕೆಲಸವನ್ನು ಆಂಧ್ರದ ಕುಪ್ಪಂನ 10 ಜನ ಶಿಲ್ಪಿಗಳು ಮಾಡುತ್ತಿದ್ದು, ಈಗಾಗಲೇ ಶ್ರೀರಾಮನ ಮುಂದಿನ ಭಾಗವನ್ನು ಸಂಪೂರ್ಣವಾಗಿ ಕೆತ್ತನೆ ಮಾಡಿದ್ದು, ಹಿಂಭಾಗ ಮಾತ್ರ ಉಳಿದಿದ್ದು ಕೆಲವೇ ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಶಿಲ್ಪಿಗಳು ಮಾಹಿತಿ ನೀಡಿದ್ದಾರೆ.
ಮಂತ್ರಾಲಯದ ಸಮೀಪದ ಯಾಮಿಗನೂರು ರಸ್ತೆಯಲ್ಲಿ ಆಂಧ್ರದ ಜೈ ಶ್ರೀ ರಾಮ್ ಫೌಂಡೇಶನ್‌ನಿಂದ 108 ಅಡಿ ಎತ್ತರದ ಬೃಹತ್ ಪಂಚಲೋಹದ ರಾಮನ ಮೂರ್ತಿ ಸ್ಥಾಪನೆಗೆ ಭೂಮಿಪೂಜೆ ಸಲ್ಲಿಸಲಾಗಿದೆ. ಮಂತ್ರಾಲಯ ಮಠದ ಪವಿತ್ರ ಕೆಲಸಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವರ್ಚುವಲ್ ಮೂಲಕ ಶಂಕು ಸ್ಥಾಪನೆ ನೆರವೇರಿಸಿದ್ದು ಇನ್ನೆರಡುವರೆ ವರ್ಷದೊಳಗೆ ಕೆಲಸ ಮುಗಿಸಲು ಚಿಂತನೆ ನಡೆದಿದೆ.
ರಾಯರ ಮಠದ ಮುಖ್ಯದ್ವಾರದ ಬಳಿ ಶ್ರೀರಾಮನ ಆರು ಅಡಿಗೂ ಎತ್ತರದ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಈ ಎರಡು ದೇಗುಲಗಳು ಭಕ್ತರಿಗೆ ವರವ ಕರುಣಿಸುವ ತಾಣಗಳಾಗಲಿವೆ. ತಿರುಪತಿ ತಿಮ್ಮಪ್ಪನ ದೇವಸ್ಥಾನ, ತಮಿಳುನಾಡಿನ ಶ್ರೀರಂಗಂ ದೇವಸ್ಥಾನ, ಆಂಧ್ರದ ಅಹೋಬಲ ನರಸಿಂಹಸ್ವಾಮಿ ದೇಗುಲ ಸೇರಿದಂತೆ ಪ್ರಮುಖ ಕಡೆಯ ದೇಗುಲಗಳಿಂದ ರಾಯರ ಆರಾಧನೆ ವೇಳೆ ಶೇಷ್ಠ ವಸ್ತ್ರಗಳನ್ನು ರಾಯರ ಬೃಂದಾವನಕ್ಕೆ ಸಮರ್ಪಿಸಲಾಗುತ್ತಿದೆ.
ಇದೇ ಕಾರಣಕ್ಕೆ ಎಲ್ಲ ಕ್ಷೇತ್ರಗಳ ಫಲ ಮಂತ್ರಾಲಯಕ್ಕೆ ಬರುತ್ತಿದ್ದು, ಇದೊಂದು ದೈವ ಸಂಗಮದ ತಾಣವಾಗಿದೆ ಎಂದು ಶ್ರೀಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಬಣ್ಣಿಸುತ್ತಾರೆ. ಆಯೋಧ್ಯೆಯಲ್ಲಿ ರಾಯರ ಶಾಖಾಮಠ ಸ್ಥಾಪನೆಗೆ ಚಿಂತನೆ ನಡೆಸಿದ್ದು, ಸಾಕಾರಗೊಳಿಸಲು ಶ್ರೀಮಠ ಸನ್ನದ್ಧವಾಗಿದೆ.
ನಿತ್ಯ 10 ಜನ ಶಿಲ್ಪಿಗಳಿಂದ ಶ್ರೀಅಭಯರಾಮನ 33 ಅಡಿ ಎತ್ತರದ ಏಕಶಿಲಾ ಮೂರ್ತಿ ಕೆತ್ತನೆ ಮಾಡುತ್ತಿದ್ದು, ಈಗಾಗಲೇ ಅರ್ಧ ಕೆತ್ತನೆ ಪೂರ್ಣಗೊಂಡಿದೆ. ತ್ವರಿತವಾಗಿ ಶ್ರೀರಾಮನ ಹಿಂಭಾಗದ ಕೆತ್ತನೆ ಪೂರ್ಣಗೊಳ್ಳಲಿದೆ ಎಂದು ಆಂಧ್ರಪ್ರದೇಶ ಕುಪ್ಪಂ, ಶಿಲ್ಪಿ ರವಿ ಹೇಳಿದ್ದಾರೆ.












Click it and Unblock the Notifications