ರಾಯಚೂರುನಲ್ಲೇ ಹತ್ತಾರು ಸಮಸ್ಯೆ: ಸಣ್ಣ ನೀರಾವರಿ ಸಚಿವರೆದುರು ದೊಡ್ಡ ಸವಾಲುಗಳು!
ರಾಯಚೂರು, ಜೂನ್ 5: ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ನೂತನ ಸರ್ಕಾರದ ಸಂಪುಟ ಸೇರಿ ಸಣ್ಣ ನೀರಾವರಿ ಖಾತೆ ವಹಿಸಿಕೊಂಡಿರುವ ಎನ್.ಎಸ್.ಬೋಸರಾಜ್ ಅವರಿಗೆ ಜಿಲ್ಲೆಯಲ್ಲೇ ದೊಡ್ಡ ದೊಡ್ಡ ಸವಾಲುಗಳಿವೆ. ಎರಡು ನದಿಗಳ ಹೇರಳ ಜಲಸಂಪನ್ಮೂಲವಿದ್ದರೂ ಅರ್ಧ ಜಿಲ್ಲೆ ಬರಪೀಡತವಾಗಿದ್ದು ಇನ್ನಾದರೂ ಬಿಸಿಲೂರು ಇನ್ನಾದರೂ ಹಸಿರೂರು ಆಗುವುದೇ ಎಂಬ ಕುತೂಹಲವಿದೆ.
ತುಂಗಭದ್ರಾ ಎಡದಂಡೆ ಕಾಲುವೆ, ನಾರಾಯಣಪುರ ಬಲದಂಡೆ ಕಾಲುವೆ ಮೂಲಕ ಜಿಲ್ಲೆಯಲ್ಲಿ ನೀರಾವರಿ ಸೌಲಭ್ಯ ಸಾಕಾರಗೊಂಡಿದೆ. ಆದರೆ ಎರಡು ಕಾಲುವೆಗಳ ರೈತರಿಗೆ ಮಾತ್ರ ಗೋಳಾಟ ತಪ್ಪುತ್ತಿಲ್ಲ. ಕೊನೆ ಭಾಗದ ರೈತರು ಸಕಾಲಕ್ಕೆ ಬೆಳೆಗೆ ನೀರು ದಕ್ಕದೆ ಲಕ್ಷಾಂತರ ರೂಪಾಯಿ ನಷ್ಕಕ್ಕೀಡಾಗುವ ಸ್ಥಿತಿ ಇದೆ. ಮೇಲ್ಭಾಗದಲ್ಲಿ ನಡೆಯುತ್ತಿರುವ ಅಕ್ರಮ ನೀರಾವರಿಯಿಂದಲೇ ಈ ಸಮಸ್ಯೆ ಎಂಬುದು ಮುಚ್ಚಿಟ್ಟ ಸಂಗತಿಯೇನಲ್ಲ. ಇದೆಲ್ಲ ಸರ್ಕಾರದ ಗಮನಕ್ಕಿರದ ವಿಚಾರವೂ ಅಲ್ಲ. ಆದರೆ ಅಕ್ರಮ ನೀರಾವರಿಗೆ ಕಡಿವಾಣ ಹಾಕಿ ಕೊನೆ ಭಾಗದ ರೈತರಿಗೆ ನೀರೊದಗಿಸುವ ಗಟ್ಟಿ ನಿರ್ಧಾರ ಮಾತ್ರ ಯಾವ ನಾಯಕರು ಕೈ ಗೊಂಡಿಲ್ಲ.

ಈಗ ಸಣ್ಣ ನೀರಾವರಿ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ಎನ್.ಎಸ್.ಬೋಸರಾಜ್ ಅವರಾದರೂ ಈ ವಿಚಾರದಲ್ಲಿ ದೃಢ ನಿರ್ಧಾರ ಕೈಗೊಳ್ಳುವರೇ ಎಂಬ ನಿರೀಕ್ಷೆಗಳು ಗರಿಗೆದರಿವೆ.
ಜಿಲ್ಲೆಯಲ್ಲಿ ತುಂಗಭದ್ರಾ ಮತ್ತು ಕೃಷ್ಣಾನದಿ ವ್ಯಾಪ್ತಿಯಲ್ಲಿ ಅನೇಕ ಏತ ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ರಾಯಚೂರು ತಾಲೂಕು ತೊಂದರಲ್ಲೇ ತುಂಗಭದ್ರಾ ನದಿ ವ್ಯಾಪ್ತಿಯಲ್ಲಿ ಎನ್.ಮಲ್ಕಾಪುರ, ತಲಮಾರಿ, ಗಂಗವಾರ, ಗುಂಡರವಲ್ಲಿ ತುಂಗಭದ್ರಾ , ಕೃಷ್ಣಾನದಿ ವ್ಯಾಪ್ತಿ ಯಲ್ಲಿ ಆತ್ಕೂರು ಸೇರಿದಂತೆ ಅನೇಕ ಯೋಜನೆಗಳಿವೆ. ಈ ಯೋಜನೆಗಳಿಗೆ ಮರುಜೀವ ನೀಡಿದರೆ ಸಹಸ್ರಾರು ಎಕರೆ ಪ್ರದೇಶಕ್ಕೆ ನೀರುಣಿಸಬಹುದು. ಕೆಲವೊಂದು ಯೋಜನೆಗಳು ಅರ್ಧಕ್ಕೆ ನಿಂತರೆ ಇನ್ನೂ ಕೆಲವು ಆರಂಭಿಕ ಹಂತದಲ್ಲೇ ಉಳಿದಿವೆ.
ಇನ್ನೂ ಟಿಎಲ್‌ಬಿಸಿ, ಎನ್‌ಆರ್‌ಬಿಸಿ ಟೆಲೆಚಿಡ್ ಭಾಗದಲ್ಲಿ ಕಾಲುವೆಗಳು ಹೂಳು ತುಂಬಿ ಮುಚ್ಚಿ ಹೋಗಿ ಬಿಟ್ಟಿವೆ. ಕೃಷಿ ಭೂಮಿ ಮಾತ್ರ ಪಹಣಿಯಲ್ಲಿ ನೀರಾವರಿ ಎಂದು ನಮೂದಾಗಿದ್ದು ಜಮೀನಿಗೆ ಮಾತ್ರ ಹನಿ ನೀರು ಬರಲ್ಲ. ಇದೇ ಕಾರಣಕ್ಕೆ ಬರ ಪರಿಹಾರವು ಸಿಗುತ್ತಿಲ್ಲ ಎಂಬುದು ರೈತರ ಅಳಲು.

ಲಿಂಗಸೂಗೂರು, ದೇವದುರ್ಗ , ಮಾನ್ವಿ , ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಇಂದಿಗೂ ಬಯಲು ಸೀಮೆ ಹೆಚ್ಚಾಗಿದೆ. ನೀರಾವರಿ ತಜ್ಞರು ಹೇಳುವ ಪ್ರಕಾರ ಪ್ರತಿ ವರ್ಷ ನೆರೆ ಬಂದಾಗ ತುಂಗಭದ್ರಾ ಮತ್ತು ಕೃಷ್ಣಾನದಿಯಿಂದ ಸರಿ ಸುಮಾರು 300 ಟಿಎಂಸಿಗೂ ಅಧಿಕ ನೀರು ವೃಥಾ ಹರಿದು ಆಂಧ್ರಪ್ರದೇಶದ ಪಾಲಾಗುತ್ತಿದೆ. ಈ ನೀರಿನ ಸದ್ಭಳಕೆಯಾದಲ್ಲಿ ಇಡೀ ಜಿಲ್ಲೆಯನ್ನು ನೀರಾವರಿಗೆ ಒಳಪಡಿಸಬಹುದೆಂಬ ವಿಚಾರ ಅನೇಕ ಬಾರಿ ಪುನರೆಪಿಯಾಗಿದೆ.
ನಾನು ಅಧಿಕಾರಕ್ಕೆ ಬಂದರೆ ಕ್ಷೇತ್ರವನ್ನು ಸಂಪೂರ್ಣ ನೀರಾವರಿ ಮಾಡುವುದಾಗಿ ಭರವಸೆ ನೀಡಿದ್ದ ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಅವರು ಈಗ ಉಭಯ ಸಂಕಟಕ್ಕೆ ಸಿಲುಕಿದಂತಾಗಿದೆ. ತಮ್ಮನ್ನು ಸೋಲಿಸಲು ಎನ್.ಎಸ್.ಬೋಸರಾಜ್ ಸೇರಿದಂತೆ ಕೆಲವರು ಶ್ರಮಿಸಿದ್ದಾರೆಂದು ಹೈಕಮಾಂಡ್ ದೂರು ಸಲ್ಲಿಸಿದವರಲ್ಲಿ ಬಸನಗೌಡ ಕೂಡ ಒಬ್ಬರಾಗಿದ್ದಾರೆ ಎನ್ನಲಾಗಿದೆ.
ಅಚ್ಚರಿಯ ಬೆಳವಣಿಗೆಯೆಂಬಂತೆ ಶಾಸಕ, ವಿಧಾನಪರಿಷತ್ ಸದಸ್ಯರಲ್ಲದಿದ್ದರೂ ಎನ್.ಎಸ್.ಬೋಸರಾಜ್ ಸಚಿವರಾಗಿದ್ದರು ಅದರಲ್ಲೂ ಸಣ್ಣ ನೀರಾವರಿ ಶಾಖೆ ಸಿಕ್ಕಿದೆ. ಇದರಿಂದ ಗ್ರಾಮೀಣ ಕ್ಷೇತ್ರದ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಯಾವ ರೀತಿ ಪರಿಣಾಮ ಬೀರುವುದೋ ನೋಡಬೇಕಿದೆ.
ರಾಯಚೂರು ತಾಲ್ಲೂಕಿನಲ್ಲಿ ಎರಡು ನದಿಗಳು ಹರಿಯುತ್ತಿದ್ದರೂ ನೀರಾವರಿ ಸೌಲಭ್ಯ ಮಾತ್ರ ಸಿಕ್ಕಿಲ್ಲ. ತುಂಗಭದ್ರಾ ಮತ್ತು ಕೃಷ್ಣಾನದಿ ವ್ಯಾಪ್ತಿಯಲ್ಲಿ ಅನೇಕ ಏತ ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಅವುಗಳ ಅನುಷ್ಠಾನಕ್ಕೆ ಯಾವುದೇ ಸರ್ಕಾರಗಳು ಇಚ್ಛಾಶಕ್ತಿ ತೋರಿಲ್ಲ. ಎನ್.ಎಸ್.ಬೋಸರಾಜ್ ಅವರು ಸಣ್ಣ ನೀರಾವರಿ ಸಚಿವರಾಗಿದ್ದು ಈ ಎಲ್ಲ ಸಮಸ್ಯೆಗಳಿವೆ ಕೊನೆ ಹಾಡುವರೇ ನೋಡಬೇಕಿದೆ ಎಂದು ಜೆಡಿಎಸ್ ಮುಖಂಡ ಮಹ್ಮದ್ ನಿಜಾಮುದ್ದೀನ್ ಹೇಳಿದರು.












Click it and Unblock the Notifications