Raichur: ರಾಯಚೂರಿನ ಎಸ್‌ಪಿ ಕಚೇರಿ ಮುಂದೆ ಶಾಸಕರ ಪ್ರತಿಭಟನೆ: ಇಬ್ಬರು ಪೊಲೀಸರ ಅಮಾನತು
ರಾಯಚೂರು ಏಪ್ರಿಲ್ 2: ಪೊಲೀಸರ ಥಳಿತದಿಂದ ಯುವಕನ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಯಚೂರಿನ ಎಸ್‌ಪಿ ಕಚೇರಿ ಮುಂದೆ ಶಾಸಕರು ಪ್ರತಿಭಟನೆ ಮಾಡಿದ್ದಾರೆ. ಶಾಸಕ ಶಿವರಾಜ್ ಪಾಟೀಲ್ ನೇತೃತ್ವದಲ್ಲಿ ಕಳೆದ ದಿನ ರಾತ್ರಿ ಪ್ರತಿಭಟನೆ ಮಾಡಲಾಗಿದ್ದು, ಪಶ್ಚಿಮ ಠಾಣೆ ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಲು ಒತ್ತಾಯ ಹೇರಲಾಗಿದೆ. ಸೂಕ್ತ ಕ್ರಮದ ಭರವಸೆ ನೀಡಿದ ಹಿನ್ನಲೆಯಲ್ಲಿ ಶಾಸಕರು ಹೋರಾಟ ಕೈ ಬಿಟ್ಟಿದ್ದಾರೆ. ಜೊತೆಗೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕೆಲ ಪೊಲೀಸರನ್ನು ಅಮಾನತ್ತು ಮಾಡಲಾಗಿದೆ.
ಹೌದು ಕೌಟುಂಬಿಕ ಕಲಹ ಕಾರಣಕ್ಕೆ ಪತ್ನಿ ಮತ್ತು ಪತ್ನಿ ಮನೆಯವರ ಯುವಕ ವೀರೇಶ್ ವಿರುದ್ಧ ದೂರು ನೀಡಿದ್ದರು. ದೂರಿನ ಮೇರೆಗೆ ಯುವಕನ ವಿಚಾರಣೆಗೆ ಪೊಲೀಸರು ಕರೆದೊಯ್ದಿದ್ದರು. ವಿಚಾರಣೆ ವೇಳೆ ಯುವಕ ವೀರೇಶ್‌ನನ್ನು ಚೆನ್ನಾಗಿ ಥಳಿಸಿದ ಆರೋಪ ಮಾಡಲಾಗಿದೆ. ಈ ವೇಳೆ ಯುವಕ ಸಾವನ್ನಪ್ಪಿದ್ದಾನೆ. ಪೊಲೀಸರ ಥಳಿತದಿಂದಲೇ ಯುವಕ ವೀರೇಶ್ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ.

ಲಾಕ್ ಅಪ್ ಡೆತ್ ಆಗಿದೆ. ಇದೊಂದು ಕೊಲೆ ಎಂದು ಆಕ್ರೋಶ ಹೊರಹಾಕಲಾಗಿದೆ. ಠಾಣೆಯಿಂದ ಮನೆಗೆ ಬಂದು ಆಸ್ಪತ್ರೆಗೆ ತೆರಳಿದ್ದಾಗ ವೀರೇಶ್ ಸಾವನ್ನಪ್ಪಿದ್ದಾರೆ. ಹೀಗಾಗಿ ಇದೊಂದು ಕೊಲೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಪೊಲೀಸರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಶಾಸಕರು ಪ್ರತಿಭಟನೆ ಮಾಡಿದ್ದಾರೆ.
ಶಾಸಕರ ಬೆಂಬಲಿಗರು ಹಾಗೂ ಕುಟುಂಬಸ್ಥರು ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ ಪ್ರತಿಭಟನೆ ಮಾಡಿದ್ದಾರೆ. ಇನ್ನೂ ಇಂದು ಯುವಕನ ಪೋಸ್ಟ್ ಮಾರ್ಟಮ್ ವರದಿಯಲ್ಲಿ ಎಲ್ಲಾ ಬಯಲಾಗಲಿದೆ. ಈ ಬಗ್ಗೆ ಮಾತನಾಡಿದ ರಾಯಚೂರು ನಗರ ಶಾಸಕ ಶಿವರಾಜ್ ಪಾಟೀಲ್, 'ಇಂದು (ಏಪ್ರಿಲ್ 1) ನಡೆದ ಘಟನೆಗೆ ಸಂಬಂಧಪಟ್ಟಂತೆ ಸೂಕ್ರ ಕ್ರಮದ ಭರವಸೆಯನ್ನು ನೀಡಿದ್ದಾರೆ. ಆ ಯುವಕನ ಮಕ್ಕಳು ತುಂಬಾ ಚಿಕ್ಕ ಮಕ್ಕಳು. ಆ ಮಕ್ಕಳಿಗೆ ಮುಂದೆ ಉದ್ಯೋಗ ನೀಡುವ ಭರವಸೆ ನೀಡಬೇಕು. ಜೊತೆಗೆ ಅವರಿಗೆ ಆರ್ಥಿಕ ಸಹಾಯ ಮಾಡಬೇಕು ಎಂದು ನಾವು ಮನವಿ ಮಾಡಿದ್ದೇವೆ. ನಾವೂ ಕೂಡ ಪರಿಹಾರ ನೀಡುವಂತಹ ಕೆಲಸ ಮಾಡುತ್ತೇವೆ. ನಾನು ಒಬ್ಬ ವೈದ್ಯನಾಗಿ ಆ ಪೋಸ್ಟ್ ಮಾರ್ಟಮ್ ನಲ್ಲಿ ಭಾಗವಹಿಸುತ್ತೇನೆ. ಮಧ್ಯಾಹ್ನದ ವೇಳೆಗೆ ಎಲ್ಲಾ ವರದಿ ಬರಲಿದೆ' ಎಂದಿದ್ದಾರೆ.
ಐಬಿ ರಸ್ತೆ ಈಶ್ವರನಗರದ ನಿವಾಸಿ 27 ವರ್ಷದ ವೀರೇಶ್ ನಾಯಕ್ ಮೃತ ದುರ್ದೈವಿ. ಈತನನ್ನು ಮಹಿಳಾ ಠಾಣೆ, ಸದರ್ ಬಜಾರ್ ಪೊಲೀಸ್ ಠಾಣೆ ಹಾಗೂ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಹೊಡೆಯಲಾಗಿದೆ. ಗಂಭೀರವಾಗಿ ಗಾಯಗೊಂಡ ಬಳಿಕ ಆತನನ್ನು ಮನೆಗೆ ಕಳುಹಿಸಲಾಗಿದೆ. ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಯುವಕನ ಪ್ರಾಣ ಹೋಗಿದೆ ಎಂದು ಆರೋಪಿಸಲಾಗಿದೆ. ವ್ಯಕ್ತಿಯ ಮರಣೋತ್ತರ ಪರೀಕ್ಷೆ ನಡೆಸಬೇಕು. ಅವರ ಕುಟುಂಬಕ್ಕೆ 2ಕೋಟಿ ಪರಿಹಾರ ಕೊಡಿಸಬೇಕು ಎಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಪ್ರತಿಭಟನೆ ಬಳಿಕ ಸಿಪಿಐ ನಾಗರಾಜ್ ಮೇಕ್, ಮಂಜುನಾಥ್ ಅವರನ್ನು ಅಮಾನತ್ತು ಮಾಡಲಾಗಿದೆ ಎಂದು ಶಾಸಕ ಶಿವರಾಜ ಪಾಟೀಲ ಹೇಳಿದ್ದಾರೆ.












Click it and Unblock the Notifications