ರೈತರಿಂದ ನೇರವಾಗಿ ಗ್ರಾಹಕರಿಗೆ: ರಾಯಚೂರು ಮಾರುಕಟ್ಟೆ ತುಂಬ ಮಾವಿನ ಘಮಲು
ರಾಯಚೂರು ಜೂನ್ 5: ಮಾರುಕಟ್ಟೆಯಲ್ಲಿ ಈಗ ಹಣ್ಣುಗಳ ರಾಜ ಮಾವಿನ ಹಣ್ಣಿನ ಘಮಲು. ತರಹೇವಾರಿ ಹಣ್ಣುಗಳನ್ನು ಖರೀದಿಸಲು ಗ್ರಾಹಕರು ಮುಗಿ ಬೀಳುತ್ತಿದ್ದಾರೆ. ಇನ್ನೊಂದೆಡೆ ರೈತರು ತಾವು ಬೆಳೆದ ಮಾವಿನ ಹಣ್ಣುಗಳನ್ನು ಆಟೋದಲ್ಲಿ ನಗರಕ್ಕೆ ತಂದು ಕೈ ಗೆಟುಕುವ ಬೆಲೆಯಲ್ಲಿ ಗ್ರಾಹಕರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ.
ಸಗಟು ಮಾರುಕಟ್ಟೆಯಲ್ಲಿ ಮಾರಾಟ ಮಾಡಬೇಕೆಂದರೆ ಮದ್ಯವರ್ತಿಗಳ ಕಾಟ. ಇದರಿಂದ ಬೇಸತ್ತ ರೈತರು ಆಟೋಗಳ ಮೂಲಕ ಮುಖ್ಯ ರಸ್ತೆಗಳ ಇಕ್ಕೆಲಗಳಲ್ಲಿ ಮಾರಾಟ ಮಾಡುವ ಮೂಲಕ ತಾವೂ ಲಾಭ ಮಾಡಿಕೊಳ್ಳುವುದರ ಜೊತೆಗೆ ಗ್ರಾಹಕರಿಗೂ ಕಡಿಮೆ ಬೆಲೆಯಲ್ಲಿ ನೈಸರ್ಗಿಕ ಹಣ್ಣುಗಳನ್ನು ತಲುಪಿಸುತ್ತಿದ್ದಾರೆ.

ರಾಯಚೂರು ತಾಲೂಕಿನ ಚಂದ್ರಬಡಾ, ಯರಗೇರಾ, ತುಂಗಭದ್ರಾ ಕೃಷ್ಣಾನದಿ ತೀರದ ಗ್ರಾಮಗಳಲ್ಲಿ ಮಾವು ಬೆಳೆಯಲಾಗಿದೆ. ಜಿಲ್ಲೆಯಲ್ಲಿ ಸುಮಾರು 3,500 ಎಕರೆ ಪ್ರದೇಶದಲ್ಲಿ ಮಾವು ಬೆಳೆಯಲಾಗಿದ್ದು ಎಕರೆಗೆ ಕನಿಷ್ಠ 10 ರಿಂದ 15 ಟನ್ ಇಳುವರಿ ಬರುತ್ತದೆ. ಆದರೆ ಈ ಬಾರಿ ಕೇವಲ 5 ರಿಂದ 6 ಟನ್ ಮಾತ್ರ ಇಳುವರಿ ಬಂದಿದ್ದು ರೈತರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎನ್ನುವಂತಾಗಿದೆ.
ಈ ಬಾರಿ ಸ್ಥಳೀಯ ರೈತರು ಕಡಿಮೆ ಬೆಲೆಗೆ ಮಾರಾಟ ಮಾಡದೆ ಸ್ವತಃ ತಾವೇ ವ್ಯಾಪಾರಕ್ಕೆ ಮುಂದಾಗಿರುವುದರಿಂದ ದಲ್ಲಾಳಿಗಳು ಬೇರೆ ರಾಜ್ಯಗಳಿಂದ ಹಣ್ಣು ಆಮದು ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಬೆಲೆಯೂ ಹೆಚ್ಚಾಗಿದೆ. ಕಳೆದ ವರ್ಷ ಕೆ.ಜಿಗೆ 50 ರೂಪಾಯಿಗೆ ಇದ್ದ ಮಾವು, ಈ ಬಾರಿ 40 ರೂಪಾಯಿಗೆ ಮಾರಾಟವಾಗುತ್ತಿದೆ. ಇವುಗಳ ಜೊತೆಗೆ ಮಲಗೋಬಾ, ತೋತಾಪುರಿ, ರಸಪುರಿ, ಸಿಂಧೂರ ಸೇರಿ ನಾನಾ ತಳಿಯ ಹಣ್ಣುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.
ಮಾವಿನ ತೋಟ ಹೊಂದಿರುವ ಮಾಲೀಕರು 100 ಮಾವಿನ ಗಿಡಕ್ಕೆ ವರ್ಷಕ್ಕೆ ಈ ಬಾರಿ 4 ಲಕ್ಷ ರೂಪಾಯಿಗೆ ತೋಟವನ್ನು ಲೀಸ್‌ಗೆ ಕೊಟ್ಟಿದ್ದಾರೆ. ಮಾವಿನ ತೋಟಕ್ಕೆ ಔಷಧ ರಸಗೊಬ್ಬರ ಸೇರಿ ಸುಮಾರು 8 ಲಕ್ಷ ರೂಪಾಯಿ ಖರ್ಚಾಗಿದ್ದು ಹಾಕಿದ ಬಂಡವಾಳದಲ್ಲಿ ಕೇವಲ ೨ ಲಕ್ಷ ರೂಪಾಯಿ ಬಂದರೂ ಸಾಕು ಎಂದು ಮಾವು ಬೆಳೆಗಾರರು ಪರಿತಪಿಸುತ್ತಿದ್ದಾರೆ. ಬ್ಯಾಂಕ್‌ಗಳಲ್ಲಿ ಸಾಲ ಪಡೆದ ಹಿನ್ನೆಲೆಯಲ್ಲಿ 2 ಲಕ್ಷ ರೂಪಾಯಿ ಬಂದರೂ ಬಡ್ಡಿ ಪಾವತಿಸಬಹುದು ಎಂಬ ಲೆಕ್ಕಾಚಾರದಲ್ಲಿದ್ದಾರೆ.

ಜಿಲ್ಲೆಯಲ್ಲಿ ಶೇ.90ಕ್ಕೂ ಹೆಚ್ಚು ರೈತರು ಬೆನಿಶಾನ್ ತಳಿಯ ಮಾವು ಬೆಳೆದಿದ್ದು, ಇಲ್ಲಿಯ ವಾತಾವರಣಕ್ಕೆ ಇದು ಹೆಚ್ಚು ಸೂಕ್ತವಾಗಿದೆ. ಅದು ಬಿಟ್ಟರೆ ಅಲ್ಲಲ್ಲಿ ಕೇಸರಿ ತಳಿಯ ಮಾವು ಬೆಳೆಯಲಾಗಿದೆ. ರೈತರು ಮಾವಿನ ಹಣ್ಣುಗಳನ್ನು ಮಾರುಕಟ್ಟೆಗೆ ತಂದರೆ 30 ರೂಪಾಯಿಯಂತೆ ಪಡೆದುಕೊಳ್ಳುವ ವ್ಯಾಪಾರಿಗಳು ಕೆಜಿಗೆ 100ರಂತೆ ಮಾರಾಟ ಮಾಡುತ್ತಾರೆ. ಇದರಿಂದ ಬೇಸತ್ತ ರೈತರು ಸುಮಾರು 20ಕ್ಕೂ ಹೆಚ್ಚು ಆಟೋಗಳಲ್ಲಿ ತಾವೇ ಮಾರುಕಟ್ಟೆಗೆ ಹಣ್ಣು ತಂದು ಪ್ರತಿ ಕೆ.ಜಿಗೆ 70 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ.
ಈ ಬಗ್ಗೆ ಮಾತನಾಡಿರುವ ಚಂದ್ರಬಡಾ ಮಾವು ಬೆಳೆಗಾರ ಲಕ್ಷ್ಮಣ್ ಮಾತನಾಡಿದ್ದು, ಮಾವಿನ ಹಣ್ಣುಗಳನ್ನು ತೋಟದಿಂದ ನೇರವಾಗಿ ಆಟೋ ಮೂಲಕ ದೊಡ್ಡ ದೊಡ್ಡ ನಗರಗಳಿಗೆ ತಂದು ಮಾರಾಟ ಮಾಡುತ್ತಿದ್ದೇವೆ. ಯಾವುದೇ ರಾಸಾಯನಿಕ ಬಳಸದೇ ನೈಸರ್ಗಿಕವಾಗಿ ಮಾಗಿಸಿ ಗ್ರಾಹಕರಿಗೆ ತಲುಪಿಸುತ್ತಿದ್ದೇವೆ ಎಂದರು.












Click it and Unblock the Notifications