ನಾನು ಮತ್ತೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದು ಹೈಕಮಾಂಡ್ ನಿರ್ಧರಿಸುತ್ತದೆ: ಡಿಕೆ ಶಿವಕುಮಾರ್
ರಾಯಚೂರು, ಸೆಪ್ಟೆಂಬರ್ 12: ಅಕ್ಟೋಬರ್ 16 ರಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಭಾರತ ಜೋಡೋ ಕಾರ್ಯಕ್ರಮದ ಪೂರ್ವಭಾವಿ ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ನಾನು ಅಧ್ಯಕ್ಷನಾಗಿ ಎರಡು ವರ್ಷಗಳು ಪೂರ್ಣವಾಗುತ್ತಿದೆ. ನಾನು ಮತ್ತೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದು ನಾಯಕರು ತೀರ್ಮಾನ ಮಾಡುತ್ತಾರೆ. ಎಐಸಿಸಿ ಈಗಾಗಲೇ ಪ್ರಕಟಿಸಿದಂತೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬೆಂಗಳೂರಿನ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಮತದಾನ ಪ್ರಕ್ರಿಯೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಹಗರಣಗಳನ್ನು ಬಯಲಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ" ಕಳೆದ ಮೂರು ವರ್ಷಗಳಿಂದಲೂ ಬಿಜೆಪಿಯವರು ಕಾಂಗ್ರೆಸ್ ಹಗರಣ ಬಯಲಿಗೆ ಎಳೆಯುವುದಾಗಿ ಹೇಳುತ್ತಿದ್ದಾರೆ. ಹಗರಣ ಬಯಲು ಮಾಡುವುದು ಸರಕಾರದ ಕರ್ತವ್ಯ, ಇಂದಿನಿಂದಲೇ ಆ ಕೆಲಸ ಮಾಡಲಿ"ಎಂದು ವ್ಯಂಗ್ಯವಾಡಿದರು.

ನಮ್ಮ ಆರೋಪಗಳಿಗೆ ಏಕೆ ಉತ್ತರಿಸುತ್ತಿಲ್ಲ
ಬಿಜೆಪಿಯವರಿಗೆ ನನ್ನ ಹಾಗೂ ಸಿದ್ದರಾಮಯ್ಯರ ಮೇಲೆ ಪ್ರೀತಿ ಜಾಸ್ತಿ ಅದಕ್ಕೆ ನಮ್ಮ ಬಗ್ಗೆ ಹಗರಣದ ಆರೋಪ ಮಾಡುತ್ತಾರೆ . ನಾವು 40 % ಕಮಿಷನ್ ಆರೋಪ ಮಾಡುತ್ತಿರುವುದಕ್ಕೆ ನಮ್ಮ ಮೇಲೆ ಈ ರೀತಿ ಆರೋಪ ಮಾಡಲು ಶುರು ಮಾಡಿದ್ದಾರೆ. ಆದರೆ ಬಿಜೆಪಿಯವರ ಬೆದರಿಕೆಗೆ ನಾವು ಹೆದರುವುದಿಲ್ಲ. ದಿಟ್ಟತನದಿಂದ ಉತ್ತರಿಸುತ್ತೇವೆ. ಸಾಮಾಜಿಕ ಮಾಧ್ಯಮಗಳ ಮೂಲಕ ಬಿಜೆಪಿಯವರಿಗೆ ಪ್ರತಿದಿನ ಒಂದು ಪ್ರಶ್ನೆ ಕಳುತ್ತಿದ್ದೇವೆ. ಆ ಪ್ರಶ್ನೆಗಳಿಗೆ ಬಿಜೆಪಿ ಉತ್ತರಿಸುತ್ತಿಲ್ಲ ಏಕೆ ಎಂಬುದನ್ನು ಮಾಧ್ಯದವರೇ ಅವರನ್ನು ಕೇಳಬೇಕು' ಎಂದು ತಿಳಿಸಿದರು.
ಬಿಜೆಯವರು ಈ ಮೊದಲು ಜನೋತ್ಸವ ಮಾಡುವುದಾಗಿ ಹೇಳುತ್ತಿದ್ದರು. ಈಗ ಜನಸ್ಪಂದನೆ ಮಾಡಲು ಮುಂದಾಗಿದ್ದಾರೆ. ಇದುವರೆಗೂ ಜನಸ್ಪಂದನೆ ಮಾಡುವುದಕ್ಕೆ ಏಕೆ ಆಗಿಲ್ಲವೆ ಎಂದು ಪ್ರಶ್ನಿಸಿದರು.

ರಾಹುಲ್‌ರಿಂದ ದೇಶ ಒಗ್ಗೂಡಿಸುವ ಕೆಲಸ
ಅಕ್ಟೋಬರ್ 22 ಮತ್ತು 23 ರಂದು ಭಾರತ ಜೋಡೋ ಪಾದಯಾತ್ರೆ ರಾಯಚೂರು ಜಿಲ್ಲೆಗೆ ಬರಲಿದೆ. ಕೃಷ್ಣ ನದಿಯಿಂದ ತುಂಗಭದ್ರಾ ನದಿವರೆಗೂ ಪಾದಯಾತ್ರೆ ನಡೆಸುವರು. ರಾಹುಲ್ ಗಾಂಧಿಯವರು ಎಲ್ಲ ಜನರನ್ನು ಜೋಡಿಸುವ ಕೆಲಸವನ್ನು ಸೂಜಿಯ ಮೂಲಕ ಹೊಲಿಯುವ ಮೂಲಕ ಮಾಡುತ್ತಿದ್ದಾರೆ. ದೇಶ ಒಂದು ಮಾಡಲು ಅವರು ನಡೆಯುತ್ತಿದ್ದಾರೆ, ಬೆಲೆ ಏರಿಕೆ ತಪ್ಪಿಸಲು, ರೈತರಿಗೆ ಪ್ರೋತ್ಸಾಹ ಬೆಲೆ ಸಿಗಲು ನಡೆಯುತ್ತಿದ್ದಾರೆ. ಎಂದು ಹೇಳಿದರು.

ಆಕಾಂಕ್ಷಿಗಳಿಂದ ಪಾದಯಾತ್ರೆಯಲ್ಲಿ ಶಕ್ತಿ ಪ್ರದರ್ಶನ
ಕೊಪ್ಪಳ, ಕಲಬುರಗಿ, ಬೀದರ್, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಯ ಕಾಂಗ್ರೆಸ್ ನಾಯಕರು ಹಾಗೂ ಬೆಂಬಲಿಗರು ರಾಯಚೂರಿನ ಪಾದಯಾತ್ರೆಯಲ್ಲಿ ಭಾಗಹಿಸುವರು. ಹಾಲಿ ಶಾಸಕರು ಮತ್ತು ಟಿಕೆಟ್ ಆಕಾಂಕ್ಷಿಗಳು ಈ ಪಾದಯಾತ್ರೆಯಲ್ಲಿ ಶಕ್ತಿ ಪ್ರದರ್ಶನ ಮಾಡಬೇಕು. ಬಿಜೆಯವರು ಈ ಮೊದಲು ಜನೋತ್ಸವ ಮಾಡುವುದಾಗಿ ಹೇಳುತ್ತಿದ್ದರು. ಈಗ ಜನಸ್ಪಂದನೆ ಮಾಡುತ್ತಿದ್ದಾರೆ. ಇಷ್ಟದಿನ ಜನಸ್ಪಂದನೆ ಮಾಡುವುದಕ್ಕೆ ಏಕೆ ಆಗಿರಲಿಲ್ಲ. 600 ಭರವಸೆ ಕೊಟ್ಟಿದ್ದರೂ, ಇದರಲ್ಲಿ 10% ಸಹ ಈಡೇರಿಸಿಲ್ಲ. ಇದು ವಚನ ಭ್ರಷ್ಟ ಸರಕಾರ ಎಂದು ಆರೋಪಿಸಿದರು.

ಸಿದ್ದರಾಮಯ್ಯ ಫೋಟೋ ಮಾಯ
ಪೂರ್ವಸಭೆಯ ಬ್ಯಾನರ್ನಲ್ಲಿ ಸಿದ್ದರಾಮಯ್ಯ ಭಾವಚಿತ್ರ ಮಾಯವಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ನಾನು ನನ್ನ ಫೋಟೋನೂ ಹಾಕಬೇಡಿ ಅಂದಿದ್ದೆ. ಫೋಟೋನೇ ರಾಜಕೀಯ ಅಲ್ಲ, ಫೋಟೋ ಹಾಕದಿದ್ದರೇ ಏನಾಯ್ತು? ಸಿದ್ದರಾಮಯ್ಯ ಅವರು ಪ್ರತಿಪಕ್ಷದ ನಾಯಕರು, ಅವರ ಕೆಲಸ ಅವರು ಮಾಡುತ್ತಿದ್ದಾರೆ. ಅವರು ಬಂದಾಗ ಅವರ ಫೋಟೋ ಹಾಕುತ್ತಾರೆ ಎಂದರು.












Click it and Unblock the Notifications