ಕೆಲ ಸ್ನೇಹಿತರು ಕುತಂತ್ರ ರೂಪಿಸಿ ಬೆನ್ನಿಗೆ ಚೂರಿ ಹಾಕಿದ್ದಾರೆ-ಜನಾರ್ದನ ರೆಡ್ಡಿ ಬೇಸರ
ರಾಯಚೂರು ಜನವರಿ 7: ನನ್ನ ಜೀವನದಲ್ಲಿ ಕಷ್ಟಪಟ್ಟು ದುಡಿದು ಈ ಹಂತಕ್ಕೆ ಬಂದಿದ್ದೇನೆ. ಆದರೆ ಪ್ರಾಮಾಣಿಕವಾಗಿ ದುಡಿದು ಅಧಿಕಾರಕ್ಕೆ ತಂದ ಬಿಜೆಪಿ ಪಕ್ಷ ಹಾಗೂ ನನ್ನ ಜೊತೆಯಲ್ಲೇ ಇದ್ದ ಕೆಲ ಸ್ನೇಹಿತರು ಕುತಂತ್ರ ರೂಪಿಸಿ ಬೆನ್ನಿಗೆ ಚೂರಿ ಹಾಕಿ ದ್ರೋಹ ಬಗೆದ್ದಾರೆ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಜನಾರ್ದನ ರೆಡ್ಡಿ ಬೇಸರ ವ್ಯಕ್ತಪಡಿಸಿದ್ದಾರೆ.
ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದ ಸ್ತ್ರೀಶಕ್ತಿ ಭವನದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ವತಿಯಿಂದ ನಡೆದ ಕಾರ್ಯಕರ್ತರ ಬೃಹತ್ ಸಭೆ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜನರು ಕೈಕೊಡುವುದಿಲ್ಲವೆಂದು ನಂಬಿ ಹೊಸ ಪಕ್ಷ ಸ್ಥಾಪಿಸಿದ್ದೇನೆ. ಯಾವ ರಾಜಕಾರಣಿಯನ್ನೂ ನಂಬಿ ಅಲ್ಲ' ಎಂದು ಹೇಳಿದರು.
ನಾನು ಮುಖ್ಯಮಂತ್ರಿ ಆಗತ್ತೇನೆಂಬ ಭಯದಿಂದ ನನ್ನನ್ನು ಜೈಲಿಗೆ ತಳ್ಳಿದರು. ಆದರೆ 12 ವರ್ಷಗಳಿಂದ ನಾನು ಕೈಲಾಗದೆ ಕುಳಿತುಕೊಂಡಿಲ್ಲ. ನನ್ನ ಕೈಯಲ್ಲಿ ಎಲ್ಲವೂ ಆಗುತ್ತದೆ. ಅದು ನನಗೂ-ನಿಮಗೂ ಗೊತ್ತು ಎಂದಿದ್ದಾರೆ.

ಹೊಸ ಪಕ್ಷ ಸ್ಥಾಪಿಸುತ್ತಿದ್ದಂತೆ ಬಿಜೆಪಿ ಸರ್ಕಾರ ಮತ್ತೆ ದಾಳಿ ಮಾಡುತ್ತಿದೆ
ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಹೆಬ್ಬಾಗಿಲು ತೆರೆದದ್ದು, ಉತ್ತರ ಕರ್ನಾಟಕದ 110 ಕ್ಷೇತ್ರಗಳಲ್ಲಿ 40 ಅಭ್ಯರ್ಥಿಗಳನ್ನು ಗೆಲ್ಲಿಸಿದ್ದು ನಾನು. 2018ರಲ್ಲೇ ಪಕ್ಷ ಸ್ಥಾಪಿಸಲು ಕಾರ್ಯಯೋಜನೆ ಹಾಕಿಕೊಂಡಿದ್ದೆ. ಆಗ ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನ ಕೈ ತಪ್ಪಲು ಅಡ್ಡಿಯಾಗುತ್ತೇನೆಂಬ ದೃಷ್ಟಿಯಿಂದ ಹಿಂದೆ ಸರಿದೆ. ಈಗ ಹೊಸ ಪಕ್ಷ ಸ್ಥಾಪಿಸುತ್ತಿದ್ದಂತೆ ಬಿಜೆಪಿ ಸರ್ಕಾರ ಮತ್ತೆ ದಾಳಿ ನಡೆಸುವ ಭಯ ತೋರಿಸುತ್ತಿದೆ ಎಂದು ಹೇಳಿದರು.

ಸಿಂಧನೂರಿನ ನಾಯಕರು ರೈತರಿಗೆ ಮೋಸ ಮಾಡುತ್ತಿದ್ದಾರೆ
ನನ್ನ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕಾದರೆ ನೂರು ಜನ್ಮ ಬೇಕು. ಕಷ್ಟಪಟ್ಟು ದುಡಿದು ಹಣ ಸಂಪಾದಿಸಿದ ಹಿನ್ನೆಲೆಯಲ್ಲಿ ಇಂದು ಜನರ ಮುಂದೆ ಬಂದಿದ್ದೇನೆ. ಬೇರೆ ಹಣ ಆಗಿದ್ದರೆ ಏನಾದರೂ ಆಗಿ ಹೋಗುತ್ತಿದ್ದೆ. ಸಿಂಧನೂರಿನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದವರು ನೀರಿನ ರಾಜಕಾರಣ ಮಾಡುತ್ತಾ ರೈತರಿಗೆ ಮೋಸ ಮಾಡುತ್ತಿದ್ದಾರೆ. ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿದರೆ ನೀರು ಬಿಡಿ ಅಂತ ಕೇಳುವ ಪರಿಸ್ಥಿತಿ ಬರುವುದಿಲ್ಲ ಎಂದು ಜನರಿಗೆ ಭರವಸೆ ನೀಡಿದರು.

ಆರು ಕೋಟಿ ಜನ ನಾವಿದ್ದೇವೆಂದು ಪ್ರೀತಿ ತೋರಿಸಿದ್ದಾರೆ
ನಾನಿಂದು ಒಬ್ಬಂಟಿಯಾಗಿಯೇ ಹೊಸ ಪಕ್ಷ ಕಟ್ಟಿದ್ದು, ರಾಜ್ಯದ ಆರು ಕೋಟಿ ಜನ ರೆಡ್ಡಿ ಜೊತೆ ನಾವಿದ್ದೇವೆಂದು ಪ್ರೀತಿ, ವಿಶ್ವಾಸ ತೋರುತ್ತಿದ್ದಾರೆ. ಇನ್ನೂ ನೂರು ದಿನಗಳಲ್ಲಿ ಕಲ್ಯಾಣ ಕರ್ನಾಟಕದ 13 ಜಿಲ್ಲೆ ಸೇರಿ ಚಿಕ್ಕಬಳ್ಳಾಪುರ, ಕೋಲಾರ, ಚಾಮರಾಜನಗರಗಳ ಪ್ರತಿ ಹಳ್ಳಿಯಲ್ಲಿಯೂ ಸಂಚರಿಸಿ ಪಕ್ಷ ಸಂಘಟಿಸಿ ಚುನಾವಣೆ ಕಣಕ್ಕಿಳಿಸಲಾಗುವುದು ಎಂದು ಮುಂದಿನ ವಿಧಾನಸಭಾ ಚುನಾವಣೆಗೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕಾರ್ಯಕರ್ತರು ಸ್ಪರ್ಧಿಸುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

250 ಸದಸ್ಯರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಸೇರ್ಪಡೆ
ಈ ವೇಳೆ ಉಪಸ್ಥಿತರಿದ್ದ ಸಿಂಧನೂರು ಟಿಕೆಟ್ ಆಕಾಂಕ್ಷಿ ಮಲ್ಲಿಕಾರ್ಜುನ ನೆಕ್ಕಂಟಿ ಮಾತನಾಡಿ 'ಈ ಪಕ್ಷಕ್ಕೆ ಜನಾಶೀರ್ವಾದ ಮಾಡಿ ಜನಾರ್ದನರೆಡ್ಡಿ ಅವರ ಕೈ ಬಲಪಡಿಸಿದರೆ ಸಿಂಧನೂರು ಮಾದರಿ ಕ್ಷೇತ್ರವಾಗಲಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತ್‌ನ ಮತ್ತು ತಾಲೂಕು ಪಂಚಾಯತ್‌ನ 250 ಸದಸ್ಯರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಸೇರ್ಪಡೆಗೊಂಡರು. ಮುಖಂಡರಾದ ಶ್ರೀಕಾಂತ ಬಂಡಿ, ಅಮರೇಶ ನಾಯಕ ಲಿಂಗಸುಗೂರು, ಮಲ್ಲನಗೌಡ ನಾಗರಬೆಂಚಿ, ಬಸವರೆಡ್ಡಿ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಪಕ್ಷ ಸೇರ್ಪಡೆಗೂ ಮುನ್ನ ಪಿಡಬ್ಲ್ಯುಡಿ ಕ್ಯಾಂಪಿನ ಅಂಬೇಡ್ಕರ್ ವೃತ್ತದಿಂದ ಸ್ತ್ರೀಶಕ್ತಿ ಭವನದವರೆಗೆ ಬೃಹತ್ ಬೈಕ್ ರ್ಯಾಲಿ ನಡೆಸಲಾಯಿತು. ಗಾಂಧಿ ವೃತ್ತದಲ್ಲಿ ಜೆಸಿಬಿ ಮೂಲಕ ಅಭಿಮಾನಿಗಳು ಬೃಹತ್ ಆಕಾರದ ಸೇಬಿನ ಹಾರ ಹಾಕಿ ಜನಾರ್ದನ ರೆಡ್ಡಿ ಅವರನ್ನು ಸ್ವಾಗತಿಸಿಕೊಂಡರು.












Click it and Unblock the Notifications