ರಾಯಚೂರು: ಲಿಂಗಸುಗೂರುನಲ್ಲಿ ಅದ್ಧೂರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
ರಾಯಚೂರು ಡಿ.11: ಲಿಂಗಸುಗೂರುನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅದ್ದೂರಿಯಾಗಿ ನಡೆಸಲಾಗಿದೆ. ಸಮ್ಮೆಳನದ ಅಧ್ಯಕ್ಷ ವೀರಹನುಮಾನ ಅವರನ್ನು ಅದ್ಧೂರಿ ಮೆರವಣಿಗೆ ಮಾಡಲಾಯಿತು. ಪುರಸಭೆ ಅಧ್ಯಕ್ಷೆ ಸುನಿತಾ ಕೆಂಭಾವಿ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯುದ್ದಕ್ಕೂ ಶಾಲಾ- ಕಾಲೇಜು ಮಕ್ಕಳು ಕನ್ನಡದ ಬಾವುಟ ಹಿಡಿದು ಹೆಜ್ಜೆ ಹಾಕಿದರು. ಕಲಾ ತಂಡಗಳು ಮೆರವಣಿಗೆಗೆ ಮೆರಗು ನೀಡಿದವು.
ಸಮ್ಮೇಳನ ಉದ್ಘಾಟಿಸಿ ಹಿರಿಯ ಸಾಹಿತಿ ಡಾ. ಹೇಮಾ ಪಟ್ಟಣಶೆಟ್ಟಿ ಮಾತನಾಡಿ, ಪ್ರಕರಣವೊಂದರಲ್ಲಿ 'ಸುಪ್ರೀಂ ಕೋರ್ಟ್ ಕಲಿಕೆಯ ಮಾಧ್ಯಮ ವ್ಯಕ್ತಿ ಸ್ವಾತಂತ್ರ್ಯದ (ಮಗುವಿನ ಪಾಲಕರ) ಆಯ್ಕೆಗೆ ಬಿಟ್ಟದ್ದು ಎಂದು ಅಭಿವ್ಯಕ್ತಿ ಸ್ವಾತಂತ್ರ್ಯದ ಪರ ತೀರ್ಪು ನೀಡಿರುವುದು, ಕನ್ನಡ ಸಮುದಾಯದ ಅಭ್ಯುದಯದ ಹಿನ್ನಡೆಗೆ ಕಾರಣ' ಎಂದು ಅಸಮಾಧಾನ ವ್ಯಕ್ತಪಡಿಸಿದರು.
'ಕನ್ನಡ ಮಾಧ್ಯಮದಲ್ಲಿ ಪರವಾನಗಿ ಪಡೆದು ಒಳಗಡೆ ಆಂಗ್ಲ ಮಾಧ್ಯಮ ಶಿಕ್ಷಣ ನೀಡುತ್ತಿದ್ದ ಶಾಲೆಗಳು ಇದನ್ನೆ ಬಂಡವಾಳವನ್ನಾಗಿಸಿಕೊಂಡು ಮಾತೃ ಭಾಷೆಯಲ್ಲಿ ಶಿಕ್ಷಣ ನೀಡದೆ ಮಲತಾಯಿ ಧೋರಣೆ ಅನುಸರಿಸುತ್ತ ಬಂದವು. ಈಗ ಸರ್ಕಾರವೇ ಮಾತೃಭಾಷೆ ಮರೆತು ಪ್ರಾಥಮಿಕ ಹಂತದಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಪ್ರೋತ್ಸಾಹಿಸುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ' ಎಂದರು.

ಕನ್ನಡ ಭಾಷೆ ಅಳಿವು ಉಳಿವು ರೈತರು, ಕೂಲಿಕಾರರು, ಮಹಿಳೆಯರ ಕೈಯಲ್ಲಿದೆ
'ಕನ್ನಡ ಸಾಹಿತ್ಯ ಸಮ್ಮೇಳನಗಳು ಸಾಹಿತ್ಯದ ಅಭಿವೃದ್ಧಿ ಜೊತೆಗೆ ಆಯಾ ಪ್ರದೇಶಗಳ ಸ್ಥಳೀಯ ಸಮಸ್ಯೆಗಳ ನಿವಾರಣೆ ಮೂಲಕ ಪ್ರಾದೇಶಿಕ ಅಸಮಾನತೆ ಸರಿದೂಗಿಸುವ ನಿಟ್ಟಿನಲ್ಲಿ ನಿರ್ಣಯಗಳನ್ನು ಮಂಡಿಸಬೇಕು. ಮಂಡಿಸಿದ ನಿರ್ಣಯಗಳು ಅನುಷ್ಠಾನಕ್ಕೆ ತರಲು ಚುನಾಯಿತ ಪ್ರತಿನಿಧಿಗಳು ಪ್ರೋತ್ಸಾಹಿಸಬೇಕು. ಕನ್ನಡ ಭಾಷೆ ಅಳಿವು ಉಳಿವು ರೈತರು, ಕೂಲಿಕಾರರು, ಮಹಿಳೆಯರ ಕೈಯಲ್ಲಿದೆ. ಗ್ರಾಮೀಣ ಜನತೆ ಕನ್ನಡ ಭಾಷೆ ಉಳಿವಿಗೆ ಗಟ್ಟಿಧ್ವನಿಯಾಗಿ ಹೊರಹೊಮ್ಮಬೇಕು' ಎಂದು ಮನವಿ ಮಾಡಿದರು.
ಸ್ವಾಗತ ಸಮಿತಿ ಅಧ್ಯಅಕ್ಷ ಡಿ.ಎಸ್ ಹೂಲಗೇರಿ ಮಾತನಾಡಿ, 'ಮಾತೃ ಭಾಷೆಗೆ ಮಹತ್ವ ನೀಡಬೇಕು ನಿಜ. ಅಧುನಿಕತೆ, ತಂತ್ರಜ್ಞಾನ ನಾಗಾಲೋಟ ಸಂದರ್ಭದಲ್ಲಿ ಇತರೆ ಭಾಷೆಗಳ ಕಲಿಕೆಗೂ ಆದ್ಯತೆ ನೀಡಿರಿ. ಸರ್ಕಾರಗಳು ವಿವಿಧ ಯೋಜನೆಗಳ ಮೂಲಕ ಕನ್ನಡ ಭಾಷೆ, ನೆಲ, ಜಲ ಸಂರಕ್ಷಣೆಗೆ ಆದ್ಯತೆ ನೀಡುತ್ತ ಬಂದಿವೆ' ಎಂದರು.

ಗಮನ ಸೆಳೆದ ಕೃಷಿ ಇಲಾಖೆ ವಸ್ತು ಪ್ರದರ್ಶನ
ಸಮ್ಮೇಳನದಲ್ಲಿ ಭಾಗವಹಿಸಿದ್ದ ಸಾಹಿತ್ಯಾಸಕ್ತರು ವಿವಿಧ ಬಗೆಯ ಪುಸ್ತಕ, ವಸ್ತುಗಳ ಮಾರಾಟ ಮಳಿಗೆಗಳ ಮುಂದೆ ತಂಡೋಪತಂಡವಾಗಿ ನೆರೆದಿದ್ದು ಕಂಡುಬಂತು. ರಾಜ್ಯದ ವಿವಿಧ ಭಾಗಗಳ ಪ್ರಕಾಶಕರು, ಬರಹಗಾರರು ಪುಸ್ತಕ ಅಂಗಡಿಗಳನ್ನು ಹಾಕಿದ್ದು ವೀಕ್ಷಣೆ ಮತ್ತು ಖರೀದಿಗೆ ಭಾರಿ ಸಂಖ್ಯೆಯ ಸಾಹಿತಿಗಳು, ಶಾಲಾ-ಕಾಲೇಜು ಮಕ್ಕಳು ನೆರೆದಿದ್ದರು.
ಕೃಷಿ ಇಲಾಖೆಯ ಮಾಹಿತಿ, ಸಿರಿ ಧಾನ್ಯಗಳ ಪ್ರದರ್ಶನ, ಬಳಕೆ, ಕೃಷಿ ತಂತ್ರಜ್ಞಾನ ಮಳಿಗೆ ಹಾಗೂ ಆರೋಗ್ಯ ಇಲಾಖೆ ರಕ್ತ ತಪಾಸಣೆ, ವಿವಿಧ ರೋಗಗಳ ಹರಡುವಿಕೆ ಮತ್ತು ನಿಯಂತ್ರಣ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಇಳಕಲ್ಲ ಸೀರೆ, ಖಾದಿ ಬಟ್ಟೆ ಮಾರಾಟ ಮಳಿಗೆಗಳು ಮಹಿಳೆಯರು ಮತ್ತು ಯುವತಿಯರ ಹೆಚ್ಚಿನ ಆಕರ್ಷಣೆ ಕೇಂದ್ರಗಳಾಗಿದ್ದವು. ಸ್ತ್ರೀಶಕ್ತಿ ಮತ್ತು ಸ್ವಸಹಾಯ ಗುಂಪು ಸದಸ್ಯರು ತಯ್ಯಾರಿಸಿದ ಅಲಂಕಾರಿಕ ವಸ್ತುಗಳು, ರೊಟ್ಟಿ, ಪಲ್ಯ, ವಿವಿಧ ಬಗೆಯ ತಿಂಡಿ ತಿನುಸು ಪ್ರದರ್ಶನ ಗಮನ ಸೆಳೆಯಿತು.
ಸಮ್ಮೇಳನದಲ್ಲಿ ಸಾಹಿತ್ಯಾಸಕ್ತರು ನೂಕು ನುಗ್ಗಲು ಮಧ್ಯೆ ಭೋಜನ ಸವಿದರು. ಶಾಸಕ ಡಿ.ಎಸ್ ಹೂಲಗೇರಿ ಅಭಿಮಾನಿಗಳು ಬೆಳಿಗ್ಗೆ ಉಪ್ಪಿಟ್ಟು, ಸಿರಾ ಹಾಗೂ ಮಧ್ಯಾಹ್ನ ವೇಳೆಗೆ ಮಾದಲಿ, ಬಜಿ, ಚಪಾತಿ, ಆಲುಗಡ್ಡೆ ಮತ್ತು ಬದನೆಕಾಯಿ ಪಲ್ಯೆ, ಅನ್ನ ಸಾಂಬಾರು, ಮಜ್ಜಿಗೆ ವ್ಯವಸ್ಥೆ ಮಾಡಿದ್ದರು.

ಸರ್ಕಾರ ಇಲ್ಲಿ ಬೃಹತ್ ಕೈಗಾರಿಕೆಗಳ ಸ್ಥಾಪನೆಗೆ ಮುಂದಾಗಿಲ್ಲ
'ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಭೂ ಗರ್ಭ ಮತ್ತು ಮೇಲ್ಭಾಗದಲ್ಲಿ ಖನಿಜ, ನೀರು ಸೇರಿದಂತೆ ಸಂಪದ್ಭರಿತ ಮಾನವ ಸಂಪೂನ್ಮೂಲ ಬಳಸಿಕೊಳ್ಳುವಲ್ಲಿ ಆಡಳಿತ ವ್ಯವಸ್ಥೆ ವಿಫಲತೆಯೇ ಹಿಂದುಳಿಯುವಿಕೆಗೆ ಕಾರಣ' ಎಂದು ಹಿರಿಯ ಸಾಹಿತಿ ಡಾ. ಅಮರೇಶ ಯತಗಲ್ ಕಳವಳ ವ್ಯಕ್ತಪಡಿಸಿದರು.
ಜಿಲ್ಲೆಯ ಅಭಿವೃದ್ಧಿ ಹೊಸ ಸಾಧ್ಯತೆಗಳ ಮೊದಲ ಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 'ಇತಿಹಾಸಕಾರರು, ಸಾಹಿತಿಗಳು, ರಾಜಕಾರಣಿಗಳು, ವಿವಿಧ ವೃಂದದಲ್ಲಿ ಕರ್ತವ್ಯ ನಿರ್ವಹಿಸುವ ಪ್ರಮುಖರೆಲ್ಲ ವಾಸ್ತವ ಸತ್ಯವನ್ನು ಮುಚ್ಚಿಟ್ಟು ಸಂದರ್ಭೋಚಿತ ಲಾಭದಿಂದ ಅಭಿವೃದ್ಧಿ ಕಂಡಿಲ್ಲ' ಎಂದರು.
ಡಾ. ಪ್ರಾಣೇಶ ಕುಲಕರ್ಣಿ ವ್ಯಾಪಾರ ಮತ್ತು ವಾಣಿಜ್ಯೋದ್ಯಮ ವಿಷಯ ಮಂಡಿಸಿ, 'ಸರ್ಕಾರಗಳು ಅಥವಾ ವಾಣಿಜ್ಯೋದ್ಯಮಿಗಳು ಈ ಪ್ರದೇಶದಲ್ಲಿ ಬೃಹತ್ ಕೈಗಾರಿಕೆಗಳ ಸ್ಥಾಪನೆಗೆ ಮುಂದಾಗಿಲ್ಲ. ವರ್ತಕರು ಕೂಡ ಇರುವಷ್ಟು ಸೌಲಭ್ಯ ಬಳಸಿಕೊಂಡು ಸ್ವಯಂ ಲಾಭಕ್ಕೆ ಸೀಮಿತರಾಗಿರುವುದು ನೋವಿನ ಸಂಗತಿಯಾಗಿದೆ' ಎಂದು ವಿವರಿಸಿದರು.

'ಕಾವ್ಯಗಳು ಸಾಹಿತ್ಯ ಬೆಳವಣಿಗೆಯ ತಳಹದಿಯಾಗಿವೆ'
'ಕತೆ, ಕವನ ರಚಿಸಲು ಪಾಂಡಿತ್ಯ ಪ್ರದರ್ಶನ ಬದಲು ಸೃಜನಶೀಲತೆ, ವಾಸ್ತವ ಸಂಗತಿಗಳನ್ನು ಮೈಗೂಡಿಸಿಕೊಳ್ಳಬೇಕು. ಸುತ್ತಮುತ್ತಲ ಪರಿಸರ, ನೊಂದವರ ಧ್ವನಿಯಾಗಿ, ಸಂಸ್ಕೃತಿಯ ಪ್ರತಿನಿಧಿತ್ವ ಬಿಂಬಿಸುವ ಅಂಶಗಳ ಕಾವ್ಯ ಹೆಚ್ಚು ಮೂಡಿಬರಲಿ' ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ ದಂಡಿನ್ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ದಾನಪ್ಪ ಮಸ್ಕಿ, 'ಕಾವ್ಯಗಳು ಸಾಹಿತ್ಯ ಬೆಳವಣಿಗೆಯ ತಳಹದಿಯಾಗಿವೆ. ಅನುಭವದಿಂದ ಬೆಳೆದು ಬರುವ ಕಾವ್ಯಗಳು ಗಟ್ಟಿಯಾಗಿ ಉಳಿಯುತ್ತವೆ. ಯುವಕರು ಸೃಜನಶೀಲ ಸಾಹಿತ್ಯ ಬೆಳೆಸಲು ಮುಂದಾಗಬೇಕು' ಎಂದು ಸಲಹೆ ನೀಡಿದರು.

'ನೈಸರ್ಗಿಕ ಸಂಪತ್ತು ಬಳಸಿಕೊಂಡರೆ ನಿರುದ್ಯೋಗ ಸಮಸ್ಯೆ ಇರುವುದಿಲ್ಲ'
'ಜಿಲ್ಲೆಯಲ್ಲಿ ಅನೇಕ ಸಮಸ್ಯೆಗಳಿವೆ. ಸಾಕಷ್ಟು ಸಂಪನ್ಮೂಲಗಳಿದ್ದರೂ ಅವುಗಳ ಲಾಭ ಬೇರೆ ಜನ ಪಡೆದು ಕೊಳ್ಳುತ್ತಿದ್ದಾರೆ. ಈ ಭಾಗದ ಎಲ್ಲ ಹೋರಾಟಗಳ ಬದುಕಿಗೆ ಮಾಧ್ಯಮ ಗಳು ಧ್ವನಿಯಾಗಿ ನಿಲ್ಲುತ್ತಿರುವುದು ನಮಗೆ ಸ್ಫೂರ್ತಿಯಾಗಿದೆ' ಎಂದು ಸಾಹಿತಿ ವೀರಹನುಮಾನ ಹೇಳಿದರು.
'ಜಿಲ್ಲೆಯಲ್ಲಿ ಸಮೃದ್ಧ ಸಂಪನ್ಮೂಲಗಳಿವೆ. ಎರಡು ನದಿಗಳು ಹರಿಯುತ್ತಿವೆ. ಆದರೂ ನೀರಿನ ದಾಹ ತೀರಿಸಲಾಗುತ್ತಿಲ್ಲ. ಏರುತ್ತಿರುವ ಬಿಸಿಲಿನ ತಾಪವಿದೆ, ಬತ್ತಿದ ಕೆರೆಗಳು, ಬಡತನ, ದಾರಿದ್ರ್ಯ ನಮ್ಮ ಜೊತೆಯಲ್ಲಿಯೇ ನೆಲೆಯಾಗಿವೆ. ಕೃಷಿಗೆ ಅದರಲ್ಲೂ ಹತ್ತಿ, ಭತ್ತಕ್ಕೆ ಹೆಸರಾದ ನಮ್ಮ ಜಿಲ್ಲೆ ಆ ಹೆಸರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿಲ್ಲ. ರೈತರ ಬಾಳನ್ನು ಹಸನು ಮಾಡುವ, ಆತ ಹೆಮ್ಮೆಯಿಂದ ಬಾಳುವ ಪರಿಸ್ಥಿತಿ ನಿರ್ಮಾಣ ಆಗಿಲ್ಲ' ಎಂದು ಕಳವಳ ವ್ಯಕ್ತಪಡಿಸಿದರು.
'ಜಿಲ್ಲೆಯ ಕೃಷಿ ಹಾಗೂ ಕೈಗಾರಿಕೆಗಳ ಬೆಳವಣಿಗೆಗೆ ಸೂಕ್ತ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಾಗಿದೆ. ನಮ್ಮಲ್ಲಿ ಚಿನ್ನ, ಗ್ರಾನೈಟ್, ಸುಣ್ಣ, ಬೆಣಚುಗಳು ಸಮೃದ್ಧ ಉಸುಕು ಇವೆಲ್ಲವೂ ನೈಸರ್ಗಿಕವಾಗಿ ನಮಗೆ ದೊರೆತಿರುವ ಸಂಪತ್ತು. ಇವುಗಳನ್ನು ಸದುಪಯೋಗ ಮಾಡಿಕೊಂಡಲ್ಲಿ ನಮಗೆ ನಿರುದ್ಯೋಗ ಸಮಸ್ಯೆ ಇರುವುದಿಲ್ಲ. ಕೃಷಿ ಅವಲಂಬಿತ ಉದ್ದಿಮೆಗಳು ಅಭಿವೃದ್ಧಿ ಆಗಬೇಕಾಗಿದೆ. ನಮ್ಮ ಉತ್ಪನ್ನಗಳಿಗೆ ಹಿಂದೆ ಇದ್ದ ಬೇಡಿಕೆಯನ್ನು ಮತ್ತೆ ಮರು ಸ್ಥಾಪಿಸಬೇಕಾಗಿದೆ. 371 (ಜೆ ) ಸಂಪೂರ್ಣ ಫಲ ಸಿಗುತ್ತಿಲ್ಲ. ಸರ್ಕಾರ ಮೀನಾಮೇಷಗಳನ್ನು ಎಣಿಸದೆ ಜನರ ಜೀವನ ಮಟ್ಟವನ್ನು ಹೆಚ್ಚಿಸುವ ಕ್ರಿಯಾಶೀಲತೆಯನ್ನು ತೋರಿಸಬೇಕಾಗಿದೆ' ಎಂದರು.

ರಾಯಚೂರು ಹಿಂದಿನಿಂದಲೂ ಸೌಹಾರ್ದತೆಯ ಭಾವೈಕ್ಯತೆಯ ಸಂಗಮ
'ಕನ್ನಡ ಸಾಹಿತ್ಯ ಸಮ್ಮೇಳನಗಳಿಗೆ ಜನ ಜಾತ್ರೆಯಂತೆ ಸೇರುತ್ತಾರೆ. ಅವು ಉತ್ಸವ, ಜಾತ್ರೆಗಳಾಗಿವೆ ಎಂಬ ಟೀಕೆಗಳಿವೆ. ಈ ಟೀಕೆಗಳು ಬರಬಾರದು ಎಂದರೆ ಸಮ್ಮೇಳನ ನಾಡಿನ ಚಿಂತಕರೊಂದಿಗೆ ಸೇರುವ ಜನಸಮುದಾಯಕ್ಕೆ ನಾಡು ನುಡಿಯ ಬಗ್ಗೆ, ಕನ್ನಡ ಸಂಸ್ಕೃತಿಯ ಬಗ್ಗೆ, ಕನ್ನಡ ಜ್ಞಾನದ ಬಗ್ಗೆ ಉಪನ್ಯಾಸಗಳು ಮಾಡಿದರೆ ಸಾಲದು. ನೆಲ-ಜಲ, ನಾಡು-ನುಡಿಯ ನಾಡವರ ಸಂಕಟಗಳೇನು? ಕಾರಣಗಳೇನು? ಅವುಗಳಿಗೆ ಪರಿಹಾರವೇನು? ಅದರಲ್ಲಿ ನಮ್ಮ ಜವಾಬ್ದಾರಿ ಏನೆಂಬುದನ್ನು ಮನದಟ್ಟು ಮಾಡಬೇಕಾಗಿದೆ' ಎಂದು ತಿಳಿಸಿದರು.
'ಪರಿಷತ್ತು ಇದರಲ್ಲಿ ಈಗಾಗಲೇ ಯಶಸ್ಸನ್ನು ಸಾಧಿಸುವ ಪ್ರಯತ್ನ ಮಾಡುತ್ತಿದೆ. ಇದು ಕನ್ನಡ ಜನಕ್ಕೆ ಒಂದು ಸಮಾಧಾನವನ್ನುಂಟು ಮಾಡುತ್ತಿದೆ. ಲಿಂಗಸೂಗೂರಿನಲ್ಲಿ ನಡೆಯುತ್ತಿರುವ ಈ ಸಮ್ಮೇಳನವು ಅದೇ ಆಶಯದಲ್ಲಿ ನಡೆಯುತ್ತಿದೆ' ಎಂದರು.
'ಜಿಲ್ಲೆ ಹಿಂದಿನಿಂದಲೂ ಸೌಹಾರ್ದತೆಯ ಭಾವೈಕ್ಯತೆಯ ಸಂಗಮ ಆಗಿದೆ. ಜಾತ್ರೆಗಳು, ಉರುಸುಗಳಲ್ಲಿ ಜಾತಿ, ಧರ್ಮ, ಬೇಧವಿಲ್ಲದೆ, ಸ್ನೇಹದಿಂದ ಆಚರಿಸಿಕೊಳ್ಳುವ ಸಂಪ್ರದಾಯ ನಮ್ಮಲ್ಲಿದ್ದುದು ಸಾಮಾಜಿಕ ನೆಮ್ಮದಿಗೆ ಕಾರಣವಾಗಿವೆ' ಎಂದು ಹೇಳಿದರು.
ಸ್ವಾಗತ ಸಮಿತಿ ಅಧ್ಯಕ್ಷರಾದ ಶಾಸಕ ಡಿ.ಎಸ್. ಹೂಲಗೇರಿ ರಾಷ್ಟ್ರಧ್ವಜ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಅಧ್ಯಕ್ಷ ರಂಗಣ್ಣ ಪಾಟೀಲ ಅಳ್ಳುಂಡಿ ಪರಿಷತ್ ಧ್ವಜ ಹಾಗೂ ತಾಲ್ಲೂಕು ಘಟಕ ಅಧ್ಯಕ್ಷ ಮಲ್ಲಿಕಾರ್ಜುನಗೌಡ ಗೌಡೂರು ಕನ್ನಡ ಧ್ವಜಾರೋಹಣ ನೆರವೇರಿಸಿದರು. ಸ್ಮರಣ ಸಂಚಿಕೆ, ಸಮ್ಮೇಳನಾಧ್ಯಕ್ಷರ ಕೃತಿ, ಕವನ ಸಂಕಲನ, ಕಥಾ ಸಂಕಲನಗಳ ಬಿಡುಗಡೆ ಮಾಡಲಾಯಿತು.
-
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು -
KD Song Controversy: ಸೆರಗ ಸರ್ಸೆ ಹಾಡು ವಿವಾದ: ಪ್ರೇಮ್ ವಿರುದ್ಧ ದೂರು, ನೋಟಿಸ್ ಬೆನ್ನಲ್ಲೇ ಹಿಂದಿ ಹಾಡು ಡಿಲೀಟ್ -
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಆಗ್ರಹ; ರಾಜ್ಯದ ಎಲ್ಲ ಸಂಸದರಿಗೆ ಪುರುಷೋತ್ತಮ ಬಿಳಿಮಲೆ ಪತ್ರ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
Bengaluru: ಬೆಂಗಳೂರಲ್ಲಿ ಟೀ ಶಾಪ್ನಲ್ಲಿ 10 ಭಾಷೆ ಮಾತನಾಡುವವರು ಸಿಗ್ತಾರೆ: ನಾರ್ಥಿ ಯುವತಿ ವೈರಲ್ ಪೋಸ್ಟ್ -
ನೈರುತ್ಯ ರೈಲ್ವೆ: 194 ಗೂಡ್ಸ್ ರೈಲು ಮ್ಯಾನೇಜರ್ ಹುದ್ದೆ; ಕನ್ನಡಿಗರಿಗೆ ಅನ್ಯಾಯ, ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದೇನು -
ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್ -
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
SSLC ಪರೀಕ್ಷೆ 2026: ವೇಳಾಪಟ್ಟಿ, ಸಮಯ, ಡ್ರೆಸ್ಕೋಡ್ ಹಾಗೂ ಪ್ರಮುಖ ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ -
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ












Click it and Unblock the Notifications