Shakti yojana: ನಮ್ಗೆ ಜೆರಾಕ್ಸ್ ಬೇಡ, ಒರಿಜಿನಲ್ ದಾಖಲೆಗಳೇ ಬೇಕು: ರಾಯಚೂರು ಜಿಲ್ಲೆಯಲ್ಲಿ ಕಂಡಕ್ಟರ್‌ಗಳ ದಬ್ಬಾಳಿಕೆ
ರಾಯಚೂರು, ಜೂನ್ 15: ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆಯಡಿ ರಾಜ್ಯದೆಲ್ಲೆಡೆ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಹಸಿರು ನಿಶಾನೆ ತೋರಿದೆ. ಆದರೆ ಈ ಯೋಜನೆಯ ಪೂರ್ಣ ಮಾಹಿತಿ ಅರಿವಿನ ಕೊರತೆ ಹಾಗೂ ಕೆಲ ನಿರ್ಬಂಧದಿಂದ ಪಟ್ಟಣ ಪ್ರದೇಶಗಳಿಗೆ ಗುಳೆ ಹೊರಟ ಮಹಿಳೆಯರು ಬಸ್ ನಿಲ್ದಾಣದಲ್ಲಿ ಪರದಾಡುವಂತಾಗಿದೆ.
ತಾಲೂಕು ಕೇಂದ್ರದಿಂದ ಬೆಂಗಳೂರು, ಹಾಸನ, ಚಿಕ್ಕಮಗಳೂರು, ಮಂಗಳೂರು ಸೇರಿದಂತೆ ಪಟ್ಟಣ ಪ್ರದೇಶಗಳಿಗೆ ಪಡಿತರ ಚೀಟಿ, ಆಧಾರ್, ಚುನಾವಣಾ ಗುರುತಿನ ಚೀಟಿಗಳ ಜೆರಾಕ್ಸ್ ಪ್ರತಿ ಹಿಡಿದು ಖುಷಿಯಿಂದ ಬಸ್ ಹತ್ತುತ್ತಿದ್ದಾರೆ. ಆದರೆ ಉಚಿತ ಪ್ರಯಾಣಕ್ಕೆ ಅಸಲಿ ಕಾರ್ಡ್‌ಗಳನ್ನೇ ತೋರಿಸಬೇಕು ಎಂಬ ನಿಯಮ ಕಾರ್ಮಿಕ ಮಹಿಳೆಯರ ಆಸೆಗೆ ತಣ್ಣೀರು ಎರಚಿದಂತಾಗಿದೆ. ಅಸಲಿ ಕಾರ್ಡ್ ಇಲ್ಲದವರು ಬಸ್ ನಿಲ್ದಾಣಗಳಲ್ಲೇ ಕಾಲ ಕಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದ.

ಅಸಲಿ ಕಾರ್ಡ್ ತೋರಿಸಿ ಟಿಕೆಟ್ ಪಡೆಯಬೇಕು, ಇಲ್ಲವೇ ಬಸ್‌ನಿಂದ ಕೆಳಗೆ ಇಳಿಯುವಂತೆ ಕಂಡಕ್ಟರ್‌ಗಳು ಖಡಕ್ ಆಗಿ ಹೇಳುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿವೆ. ಅಲ್ಲದೆ ಸರಿಯಾದ ದಖಲೆ ಇಲ್ಲ ಅಂತಾ ಹೇಳಿ ಮಾರ್ಗದ ಮಧ್ಯದಲ್ಲೇ ಇಳಿಸಿ ಹೋಗುತ್ತಿರುವ ಘಟನೆಗಳು ಕೂಡ ನಡೆದಿವೆ. ಬೀದರ್, ಕಲಬುರಗಿ, ಯಾದಗಿರಿ, ವಿಜಯಪುರ, ಬಾಗಲಕೋಟೆ, ಹುಬ್ಬಳ್ಳಿ ಸೇರಿದಂತೆ ವಿವಿಧಡೆಗಳಿಂದ ಬರುವ ಬಸ್‌ಗಳಲ್ಲಿ ಶೇಕಡಾ 50ರಷ್ಟು ಮಹಿಳೆಯರು ಇದ್ದು, ಹೆಚ್ಚುವರಿ ಮಹಿಳೆಯರಿಗೆ ಅವಕಾಶವಿಲ್ಲ ಎಂದು ನಿರಾಕರಣೆ ಮಾಡಲಾಗುತ್ತಿದೆ.
ಕಾರ್ಡ್ ನೀಡಿ ಪ್ರಯಾಣಿಸುವ ಕುಟುಂಬಗಳಿಗೆ ಅವರ ಲಗೇಜ್ ನೋಡಿ ಬೇರೆ ಬಸ್‌ಗಳಿಗೆ ಬನ್ನಿ ಎಂದು ವಾಪಾಸ್ ಕಳುಹಿಸಿದ ಘಟನೆಗಳು ಕೂಡ ನಡೆದಿವೆ. ಇಂತಹ ನಿಯಮಗಳಿಂದ ಅನೇಕ ಮಹಿಳೆಯರು ಬಸ್ ನಿಲ್ದಾಣದಲ್ಲೇ ಉಳಿದುಕೊಳ್ಳುವುದು ಅನಿವಾರ್ಯವಾಗಿದೆ. ಬೇರೆ ಬೇರೆ ವಿಭಾಗಗಳಿಂದ ರಯಚೂರು ಕಡೆಗೆ ಪ್ರಯಾಣಿಸುವ ಬಹುತೇಕ ಸಾರಿಗೆ ಬಸ್‌ಗಳಲ್ಲಿ ಪಾಸ್ ಹೊಂದಿದ ಶಾಲಾ ಕಾಲೇಜು ಮಕ್ಕಳನ್ನು ದೂರವಿಡುವ ದುರುದ್ದೇಶದಿಂದ ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಬೇರೆ ರಾಜ್ಯಗಳ ನಾಮಫಲಕ ಅಳವಡಿಸುತ್ತಿದ್ದಾರೆ ಎನ್ನುವ ಆರೋಪ ಕೆಳಿಬಂದಿವೆ.
ಹೊರ ರಾಜ್ಯಗಳಿಗೆ ತೆರಳುವ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡದಿರುವುದರಿಂದ ಮಹಿಳೆಯರು ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಮತ್ತೊಂದೆಡೆ ಅವಿದ್ಯಾವಂತ, ಕೂಲಿ ಕಾರ್ಮಿಕ ಮಹಿಳೆಯರು ಕಾರ್ಡ್ ಒಯ್ದರೆ ಕೆಲಸ ಮಾಡುವ ವೇಳೆ ಕಳೆಯುತ್ತದೆ ಎಂಬ ಭಯದಿಂದ ಜೆರಾಕ್ಸ್ ಮಾಡಿಸಿಕೊಂಡು ಪ್ರಯಾಣಿಸುವುದು ಸಾಮಾನ್ಯವಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ನಿರ್ವಾಹಕರು ಮಹಿಳೆಯರನ್ನು ಬಸ್‌ಗೆ ಹತ್ತಿಸಿಕೊಳ್ಳದೆ ಹಾಗೆ ಹೋಗುತ್ತಿದ್ದಾರೆ.

ಈ ಬಗ್ಗೆ ಸ್ಥಳೀಯ ಬಸ್ ನಿಲ್ದಾಣದಲ್ಲಿ ವಿಚಾರಣೆಗೂ ಅವಕಾಶಗಳಿಲ್ಲ. ಯಾವ ಬಸ್ ಹೊರ ರಾಜ್ಯಕ್ಕೆ ತೆರಳುವ ಮಾಹಿತಿಯೂ ಗೊತ್ತಿಲ್ಲ. ಇಂತಹ ಸಮಸ್ಯೆಗಳಿಂದ "ಶಕ್ತಿ" ಯೋಜನೆ ಮಹಿಳೆಯರ ಪಾಲಿಗೆ ಕಹಿಯಾಗಿ ಪರಿಣಮಿಸಿದೆ. ಯಾವುದೇ ಬಸ್ ಇರಲಿ ಗಡಿ ಪ್ರದೇಶದತ್ತ ಜೆರಾಕ್ಸ್ ಪ್ರತಿ ಮೇಲೆ ಪ್ರಯಾಣಿಸಲು ಅವಕಾಶ ನೀಡಬೇಕು ಎಂದು ಮಹಿಳೆಯರು ಒತ್ತಾಯಿಸಿದ್ದಾರೆ.
ರಾಜ್ಯ ಸರ್ಕಾರ ಹೊಸದಾಗಿ ಮಹಿಳೆಯರಿಗೆ ಉಚಿತ ಪ್ರಯಾಣ ಶಕ್ತಿ ಯೋಜನೆ ಅನುಷ್ಠಾನಕ್ಕೆ ತಂದಿದೆ. ಈಗಾಗಲೇ ಅಸಲಿ ಬದಲು ಜೆರಾಕ್ಸ್ ಪ್ರತಿಯ ಕಾರ್ಡ್ ನಡೆಯುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ಹೊರ ರಾಜ್ಯ ಬಸ್‌ಗಳಲ್ಲಿ ಪ್ರಯಾಣ ಇತರೆ ಸಮಸ್ಯೆಗಳ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತರುತ್ತೇವೆ ಎಂದು ಇಲ್ಲಿನ ಸಾರಿಗೆ ಘಟಕ ವ್ಯವಸ್ಥಾಪಕ ರಾಹುಲ್ ಹೊನಸೊರೆ ಹೇಳಿದರು.
ರಾಯಚೂರು ಡಿಪೋದಿಂದ ಮಂತ್ರಾಲಯ, ಗದ್ವಾಲ್‌ಗೆ ತೆರಳುವ ಬಸ್‌ಗಳಲ್ಲಿ ನಮ್ಮ ರಾಜ್ಯದ ಮಹಿಳೆಯರು ಉಚಿತವಾಗಿ ಸಂಚರಿಸಲು ಅವಕಾಶವಿದೆ. ಆದರೆ ಬೇರೆ ತಾಲೂಕು, ಜಿಲ್ಲೆಗಳಿಂದ ಅಂತರ ರಾಜ್ಯದ ಊರುಗಳಿಗೆ ಬೋರ್ಡ್ ಹಾಕಿಕೊಂಡು ಬರುವ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶವಿಲ್ಲ. ಬಸ್‌ಗಳಿಗೆ ಮಾಹಿತಿಯುಳ್ಳ ಬೋರ್ಡ್ ಹಾಕಿದ್ದೇವೆ, ನೋಡಿ ಹತ್ತಬೇಕು ಎಂದು ರಾಯಚೂರು ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಎಸ್.ಚಂದ್ರಶೇಖರ್ ಹೇಳಿದರು.












Click it and Unblock the Notifications