ಅಯ್ಯೋ..! ಮಟನ್ ತಿಂದು ಮಲಗಿದ ಒಂದೇ ಕುಟುಂಬದ ನಾಲ್ವರು ದಾರುಣ ಸಾವು
ರಾಯಚೂರು, ಆಗಸ್ಟ್ 02: ನಿನ್ನೆ ರಾತ್ರಿ ಮಟನ್ ಊಟ ಮಾಡಿ ಮಲಗಿದ್ದ ಒಂದೇ ಕುಟುಂಬದ ನಾಲ್ವರು ಮಲಗಿದಲ್ಲಿಯೇ ಮೃತಪಟ್ಟಿರುವ ಘಟನೆ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ನಡೆದಿದೆ.
ಕಲ್ಲೂರು ಗ್ರಾಮದ ಮನೆಯಲ್ಲಿದ್ದ ಗಂಡ-ಹೆಂಡತಿ ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಭೀಮಣ್ಣ (60), ಈರಮ್ಮ (57), ಮಲ್ಲೇಶ್ (21), ಪಾರ್ವತಿ (19) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಭೀಮಣ್ಣ ಅವರ ಮತ್ತೊಬ್ಬ ಪುತ್ರಿ ಮಲ್ಲಮ್ಮ (18) ತೀವ್ರ ಅಸ್ವಸ್ಥಗೊಂಡಿದ್ದು, ಆರೋಗ್ಯದ ಸ್ಥಿತಿ ಗಂಭೀರವಾಗಿದೆ. ಸದ್ಯ ಮಲ್ಲಮ್ಮಗೆ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಭೀಮಣ್ಣ ನಿನ್ನೆ ಮಟನ್ ತಂದಿದ್ದು, ಕುಟುಂಬಸ್ಥರು ನಿನ್ನೆ ರಾತ್ರಿ ಚೆನ್ನಾಗಿ ಊಟ ಮಾಡಿ ಮಲಗಿದ್ದಾರೆ. ಆದರೆ ಅದೆನಾಯ್ತೋ ರಾತ್ರೋ ರಾತ್ರಿ ನಾಲ್ವರು ಸಾವನ್ನಪ್ಪಿದ್ದಾರೆ. ಒಂದೆಡೆ ಮಟನ್ ತಿಂದವರಿಗೆ ಫುಡ್ ಪಾಯ್ಸನ್ ಆಗಿರುವ ಶಂಕೆ ವ್ಯಕ್ತವಾಗಿದ್ದು, ಮತ್ತೊಂದೆಡೆ ಮಟನ್ ಮಾಡುವ ವೇಳೆ ಅಡುಗೆಯಲ್ಲಿ ಹಲ್ಲಿ ಬಿದ್ದಿರುವ ಶಂಕೆ ವ್ಯಕ್ತವಾಗಿದೆ.
ಇನ್ನು ಭೀಮಣ್ಣನ ಮನೆಯವರು ಸಂಕಷ್ಟದಲ್ಲಿದ್ದು ಹೆಂಡತಿ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಗ್ರಾಮಸ್ಥರು ಕೂಡ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ನಾಲ್ವರ ಸಾವಿನ ಕುರಿತು ತನಿಖೆ ಬಳಿಕವೇ ಅಸಲಿ ಸತ್ಯ ಹೊರಬರಬೇಕಿದೆ. ಆದರೆ ರಾತ್ರಿ ಮಲಗಿದ್ದವರು ಬೆಳಗ್ಗೆ ಸಾವನ್ನಪ್ಪಿದ್ದಾರೆ ಎನ್ನುವ ಸುದ್ದಿ ಕೇಳಿ ಸಿರವಾರ ತಾಲೂಕಿನ ಕಲ್ಲೂರು ಗ್ರಾಮದ ಜನರು ಹೌಹಾರಿದ್ದಾರೆ.
ರಾಯಚೂರು ಜಿಲ್ಲೆಯ ಸಿರವಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಸಿರವಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಭೀಮಣ್ಣ, ಈರಮ್ಮ, ಮಲ್ಲೇಶ್ ಹಾಗೂ ಪಾರ್ವತಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು ಪ್ರಕರಣವನ್ನು ಕೈಗೆತ್ತಿಕೊಂಡಿದ್ದು, ಒಂದೇ ಕುಟುಂಬದ ನಾಲ್ವರ ಸಾವಿಗೆ ಕಾರಣ ಏನಿರಬಹುದು ಎನ್ನುವ ಸತ್ಯ ಪತ್ತೆ ಹಚ್ಚಲು ಮುಂದಾಗಿದ್ದಾರೆ.












Click it and Unblock the Notifications