ಆರ್‌ಟಿಪಿಎಸ್‌ನ ನಾಲ್ಕು ಘಟಕ ಸ್ಥಗಿತ: ವಿದ್ಯುತ್ ಉತ್ಪಾದನೆ 430 ಮೆಗಾವಾಟ್‌ಗೆ ಇಳಿಕೆ
ರಾಯಚೂರು ಜುಲೈ 14: ಬೇಡಿಕೆ ಇಲ್ಲದ ಕಾರಣ ರಾಯಚೂರು ಶಾಖೋತ್ಪನ್ನ ಕೇಂದ್ರದಲ್ಲಿ ನಾಲ್ಕು ವಿದ್ಯುತ್ ಘಟಕಗಳು ಉತ್ಪಾದನೆಯನ್ನು ಸ್ಥಗಿತಗೊಳಿಸಿದ್ದು, ಒಟ್ಟು ಉತ್ಪಾದನೆಯಲ್ಲಿ ಗಣನೀಯ ಇಳಿಕೆಯಾಗಿದೆ. 1,720 ಮೆಗಾವಾಟ್ ವಿದ್ಯುತ್ ಉತ್ಪಾದನೆಯ ಪೈಕಿ 430 ಮೆಗಾವಾಟ್ ವಿದ್ಯುತ್ ಮಾತ್ರ ಉತ್ಪಾದನೆಯಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಶಾಖೋತ್ಪನ್ನ ಕೇಂದ್ರದಲ್ಲಿ 210 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡುವ ಒಂದು, ಎರಡು, ಮೂರು ಮತ್ತು ಆರನೇ ಘಟಕಗಳು ನಿಲುಗಡೆಯಾಗಿವೆ. 250 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ 8ನೇ ಘಟಕ ಸೇರಿದಂತೆ ಮೂರು ಘಟಕಗಳಿಂದ ಉತ್ಪಾದನೆ ಮಾಡಲಾಗುತ್ತಿದೆ. ಐದು ಮತ್ತು ಏಳನೇ ಘಟಕದಲ್ಲಿಯೂ ಪೂರ್ಣ ಪ್ರಮಾಣದ ವಿದ್ಯುತ್ ಉತ್ಪಾದನೆಯಾಗುತ್ತಿಲ್ಲ.

ಬಳ್ಳಾರಿ ಶಾಖೋತ್ಪನ್ನ ಕೇಂದ್ರದ ಮೂರು ಘಟಕ ಹಾಗೂ ವೈಟಿಪಿಎಸ್‌ನ ಎರಡು ಘಟಕಗಳಲ್ಲಿ ಪೂರ್ಣ ಪ್ರಮಾಣದ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಉಳಿದಂತೆ ಜಲ ವಿದ್ಯುತ್ ಘಟಕಗಳು ಬಹುತೇಕ ಸ್ಥಗಿತಗೊಂಡಿದ್ದರಿಂದ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ಗಣನೀಯ ಇಳಿಕೆಯಾಗಿದೆ.
11 ಸಾವಿರ ವಿದ್ಯುತ್ ಉತ್ಪಾದನಾ ಸಾಮರ್ಥ್ಯದಲ್ಲಿ 2,600 ಮೆಗಾವಾಟ್ ಮಾತ್ರ ವಿದ್ಯುತ್ ಉತ್ಪಾದನೆಯಾಗುತ್ತಿದೆ. ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮಳೆಯಾಗುತ್ತಿರುವುದರಿಂದ ವಿದ್ಯುತ್ ಬೇಡಿಕೆಯಲ್ಲಿ ಇಳಿಕೆ ಕಂಡಿದೆ. ಆರ್‌ಟಿಪಿಎಸ್‌ನ 8 ಘಟಕಗಳಿಗೆ ಅಗತ್ಯವಿರುವ ಕಲ್ಲಿದ್ದಲು ಶೇ.20 ಸಂಗ್ರಹವಿದೆ. ಬೇಡಿಕೆಯಂತೆ ಪೂರೈಕೆಗೆ ಎಂಸಿಎಲ್ ಸಿದ್ದವಿದೆ. ರಾಯಚೂರು, ಯರಮರಸ್ ಹಾಗೂ ಬಳ್ಳಾರಿ ಘಟಕಗಳಲ್ಲಿ 58 ದಿನಗಳಿಗೆ ಆಗುವಷ್ಟು ಕಲ್ಲಿದ್ದಲು ದಾಸ್ತಾನು ಸಂಗ್ರಹವಿದೆ ಮೂಲಗಳು ತಿಳಿಸಿವೆ.
'ವಿದ್ಯುತ್ ಘಟಕಗಳು ವರ್ಷಕ್ಕೊಮ್ಮೆ ಸ್ಥಗಿತಗೊಳ್ಳುತ್ತವೆ. ಅಂತೆಯೇ ಈ ಬಾರಿ 2ನೇ ಘಟಕ ಸ್ಥಗಿತಗೊಂಡಿದೆ. ಇನ್ನೊಂದು ತಿಂಗಳು ಕಾಲ ಅದರಲ್ಲಿ ಕಾರ್ಯ ನಿರ್ವಹಿಸಲು ಆಗುವುದಿಲ್ಲ' ಎಂದು ಶಾಖೋತ್ಪನ್ನ ಘಟಕದ ಯಂತ್ರ ಚಾಲಕ ರಂಗ ರೆಡ್ಡಿ ಆತಂಕ ವ್ಯಕ್ತಪಡಿಸಿದರು.
'ವಿದ್ಯುತ್ ಉತ್ಪಾದಿಸುವ 1ನೇ ಘಟಕದಲ್ಲಿ ಕಳೆದ ವರ್ಷ ಕಲ್ಲಿದ್ದಲು ಸಾಗಣೆ ಬಂಕರ್ ಕುಸಿದು ಬಿದ್ದು ಸ್ಥಗಿತಗೊಂಡಿದೆ. ಅದರಲ್ಲಿ ಸಂಪೂರ್ಣವಾಗಿ ಕೆಲಸ ಸ್ಥಗಿತಗೊಂಡಿದೆ. ಅದರ ದುರಸ್ತಿ ಕಾರ್ಯ ನಡೆಸಲು ಮೂರು ವರ್ಷಗಳು ಬೇಕಾಗಬಹುದು. ಈ ಬಾರಿ ಯಾವುದೇ ಕೊರತೆಯಿಂದ ವಿದ್ಯುತ್ ಘಟಕ ಸ್ಥಗಿತಗೊಂಡಿಲ್ಲ' ಎಂದರು.
'ವಿದ್ಯುತ್ ಘಟಕಗಳು ಸ್ಥಗಿತವಾಗಿರುವ ಹಿನ್ನೆಲೆಯಲ್ಲಿ ವೇತನ ಕಡಿತಗೊಳಿಸುವುದಾಗಿ ಹೇಳುತ್ತಿದ್ದಾರೆ. ನಾವು ಗುತ್ತಿಗೆ ಕಾರ್ಮಿಕರಾಗಿರುವುದರಿಂದ ಯಾವುದೇ ಭದ್ರತೆ ಇಲ್ಲ. ಈ ಹಿನ್ನೆಲೆಯಲ್ಲಿ ಕಾಯಂ ನೇಮಕಾತಿಗೆ ಒತ್ತಾಯಿಸಿದ್ದೇವೆ' ಎಂದು ಹೇಳಿದರು.
ಕಲ್ಲಿದ್ದಲಿನಿಂದ ವಿದ್ಯುತ್ ಉತ್ಪಾದನೆಗೆ ವೆಚ್ಚ ಅಧಿಕ. ಜಲಮೂಲದಿಂದ ವಿದ್ಯುತ್ ಉತ್ಪಾದನೆಗೆ ಒತ್ತುಕೊಟ್ಟಿರುವ ಕಾರಣ ಶಕ್ತಿನಗರದ ರಾಯಚೂರು ಬೃಹತ್ ಶಾಖೋತ್ಪನ್ನ ಕೇಂದ್ರ ( ಆರ್‌ಟಿಪಿಎಸ್)ದ ನಾಲ್ಕು ಘಟಕಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ವೈಟಿಪಿಎಸ್ ಮೂಲಗಳು ತಿಳಿಸಿವೆ.












Click it and Unblock the Notifications