ಡಿಕೆಶಿ ಅರ್ಪಿಸಲು ಮುಂದಾದ ಬೆಳ್ಳಿ ಖಡ್ಗ ತಿರಸ್ಕರಿಸಿದ ಮಂತ್ರಾಲಯ ಸ್ವಾಮೀಜಿ
ರಾಯಚೂರು, ಅಕ್ಟೋಬರ್ 21: ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಿನ್ನೆ(ಅಕ್ಟೋಬರ್ 21)ರಂದು ಭೇಟಿ ನೀಡಿದ್ದಾರೆ.
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನಿನ್ನೆ (ಅಕ್ಟೋಬರ್ 20) ರಾತ್ರಿ ಮಂತ್ರಾಲಯ ಮಠದಲ್ಲಿ ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನದ ದರ್ಶನ ಪಡೆದು, ಮಂತ್ರಾಲಯದಲ್ಲಿಯೇ ವಾಸ್ತವ್ಯ ಹೂಡಿದ್ದರು.
ರಾಹುಲ್ ಗಾಂಧಿ, ಭಾರತ್ ಜೋಡೋ ಪಾದಯಾತ್ರೆಯ ಮಾರ್ಗಮಧ್ಯೆ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭೇಟಿ ನೀಡಿ ವೃಂದಾವನ ದರ್ಶನ ಪಡೆದ ನಂತರ, ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಅವರ ಆಶೀರ್ವಾದ ಪಡೆದರು.

ಮಂತ್ರಾಲಯದಲ್ಲೇ ವಾಸ್ತವ್ಯ ಉಳಿದ ರಾಹುಲ್ ಗಾಂಧಿ
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆಗಮನದ ಹಿನ್ನೆಲೆಯಲ್ಲಿ ಮಂತ್ರಾಲಯದ ಸುತ್ತಮುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಅಲ್ಲದೇ ಮಂತ್ರಾಲಯ ಮಠದ ಹೊರಾಂಗಣ ಮತ್ತು ಪ್ರಾಕಾರದಲ್ಲಿ ಸೂಕ್ತ ರಕ್ಷಣಾ ವ್ಯವಸ್ಥೆ ಮಾಡಲಾಗಿತ್ತು. ಗಾಂಧಿ ಮನೆತನದಿಂದ ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭೇಟಿ ನೀಡುತ್ತಿರುವ ಮೊದಲಿಗ ರಾಹುಲ್ ಗಾಂಧಿಯಾಗಿದ್ದಾರೆ. ಈವರೆಗೂ ಗಾಂಧಿ ಮನೆತನದ ಯಾರೊಬ್ಬರು ಮಂತ್ರಾಲಯಕ್ಕೆ ಭೇಟಿ ನೀಡಿರಲಿಲ್ಲ. ರಾಹುಲ್ ಗಾಂಧಿ ರಾಯರ ದರ್ಶನ ಪಡೆದು, ಮಂತ್ರಾಲಯದಲ್ಲೇ ವಾಸ್ತವ್ಯ ಉಳಿದಿರುವುದು ಕೂಡಾ ಗಮನಾರ್ಹವಾಗಿದೆ.

ಬೆಳ್ಳಿ ಖಡ್ಗವನ್ನು ಸ್ಪರ್ಶಿಸದೇ ನಯವಾಗಿ ತಿರಸ್ಕರಿಸಿದ ಸ್ವಾಮೀಜಿ
ರಾಹುಲ್ ಗಾಂಧಿ ಅವರೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕೂಡ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿದ್ದರು. ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಅವರ ಆಶೀರ್ವಾದ ಪಡೆದ ಡಿ.ಕೆ.ಶಿವಕುಮಾರ್, ಪೀಠಾಧಿಪತಿ ಸುಬುಧೇಂದ್ರ ತೀರ್ಥರಿಗೆ ಬೆಳ್ಳಿ ಖಡ್ಗ ಅರ್ಪಿಸಲು ಮುಂದಾದರು. ಕಾಂಗ್ರೆಸ್ ನಾಯಕರು ನೀಡಿದ ಬೆಳ್ಳಿ ಖಡ್ಗ ಸ್ವೀಕರಿಸಲು ಒಪ್ಪದ ಸುಬುಧೇಂದ್ರ ತೀರ್ಥರು, ಅದನ್ನು ಸ್ಪರ್ಶಿಸದೇ ನಯವಾಗಿಯೇ ಬೇಡ ಎಂದು ತಿರಸ್ಕರಿಸಿದರು. ಸ್ವಾಮೀಜಿಗಳು ಸ್ವೀಕರಿಸದ ಕಾರಣ ಡಿ.ಕೆ ಶಿವಕುಮಾರ್ ಆಪ್ತರು ಬೆಳ್ಳಿ ಖಡ್ಗ ಹಿಂದಕ್ಕೆ ತೆಗೆದುಕೊಂಡು ಹೋಗಿದ್ದಾರೆ.

ಆಂಧ್ರಪ್ರದೇಶ ಗಡಿ ದಾಟಿದ ಭಾರತ್ ಜೋಡೋ
ರಾಹುಲ್ ಗಾಂಧಿ ನಾಯಕತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಪಾದಯಾತ್ರೆಯು ಇಂದಿನಿಂದ ರಾಯಚೂರಿನ ವಿವಿಧ ಭಾಗಗಳಲ್ಲಿ ನಡೆಯಲಿದೆ. ಇಂದು(ಅಕ್ಟೋಬರ್ 21) ಮಂತ್ರಾಲಯದಿಂದ ರಾಷ್ಟ್ರೀಯ ಹೆದ್ದಾರಿ 167ರ ಮೂಲಕ ಯಾತ್ರೆ ಆರಂಭವಾಗಿದೆ. ಬೆಳಗ್ಗೆ ಭಾರತ್ ಜೋಡೋ ಪಾದಯಾತ್ರೆ ಆಂಧ್ರಪ್ರದೇಶ ಗಡಿ ದಾಟಿ ಕರ್ನಾಟಕದ ರಾಯಚೂರು ಜಿಲ್ಲೆಗೆ ಪ್ರವೇಶಿಸಲಿದೆ. ಗಡಿಯಲ್ಲಿರುವ ತುಂಗಭದ್ರಾ ಸೇತುವೆ ಪಕ್ಕದ ರಾಯಚೂರು ತಾಲೂಕಿನ ಗಿಲ್ಲೇಸುಗೂರು ಗ್ರಾಮದಲ್ಲಿ ರಾಹುಲ್ ಗಾಂಧಿ ಅವರನ್ನು ಕಾಂಗ್ರೆಸ್ ಹಿರಿಯ ನಾಯಕರು ಸ್ವಾಗತಿಸಿದ್ದಾರೆ.

10-20 ಸಾವಿರ ಕಾರ್ಯಕರ್ತರು ಭಾಗಿಯಾಗುವ ನಿರೀಕ್ಷೆ
ರಾಯಚೂರು ಗ್ರಾಮೀಣ ವಿಧಾನಸಭೆ ಕ್ಷೇತ್ರದಲ್ಲಿ ಮೊದಲ ದಿನ 25 ಕಿಲೋಮೀಟರ್ ಭಾರತ್ ಜೋಡೋ ಪಾದಯಾತ್ರೆ ನಡೆಯಲಿದ್ದು, ಕಾಂಗ್ರೆಸ್ ನಾಯಕರು ಯರಗೇರಾ ಗ್ರಾಮದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನಾಳೆ (ಅಕ್ಟೋಬರ್ 22) ರಾಯಚೂರಿನ ಗ್ರಾಮೀಣ ಭಾಗದಿಂದ ನಗರಕ್ಕೆ ಯಾತ್ರೆ ತಲುಪಲಿದೆ.
ರಾಯಚೂರು ಜಿಲ್ಲೆಯಲ್ಲಿ ನಡೆಯಲಿರುವ ಭಾರತ್ ಜೋಡೋ ಪಾದಯಾತ್ರೆಯಲ್ಲಿ ಪ್ರತಿದಿನ 10ರಿಂದ 20 ಸಾವಿರ ಕಾರ್ಯಕರ್ತರು ಭಾಗಿಯಾಗುವ ನಿರೀಕ್ಷೆಯಿದೆ. ಅಕ್ಟೋಬರ್ 23ರ ಬೆಳಗ್ಗೆ ರಾಯಚೂರಿನಿಂದ ಕೃಷ್ಣಾ ನದಿ ಸೇತುವೆ ಮಾರ್ಗವಾಗಿ ಯಾತ್ರೆಯು ತೆಲಂಗಾಣಕ್ಕೆ ತೆರಳಲಿದೆ. ಈ ವೇಳೆ ರೈತರು, ಸ್ಥಳೀಯರು ಹಾಗೂ ಕೂಲಿ ಕಾರ್ಮಿಕರ ಜೊತೆಗೆ ರಾಹುಲ್ ಗಾಂಧಿ ಸಂವಾದ ನಡೆಸಲಿದ್ದಾರೆ.












Click it and Unblock the Notifications