ರಾಹುಲ್ ಯಾತ್ರೆ ಬಳಿಕ ತಬ್ಬಿಬ್ಬಾದ ರಾಯಚೂರು ಜಿಲ್ಲಾ ಬಿಜೆಪಿ: ಸಿಎಂ ಕರೆಯಿಸಿ ಶಕ್ತಿ ಪ್ರದರ್ಶನಕ್ಕೆ ಸಜ್ಜು
ರಾಯಚೂರು, ಅಕ್ಟೋಬರ್ 27: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನೇತೃತ್ವದ 'ಭಾರತ ಐಕ್ಯತಾ ಯಾತ್ರೆ' ವೇಳೆ ಕಂಡ ಜನಸಾಗರದಿಂದ ತಬ್ಬಿಬ್ಬಾಗಿರುವ ಜಿಲ್ಲೆಯ ಬಿಜೆಪಿ ಮುಖಂಡರು, ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಸಿಎಂ ಬಸವರಾಜ ಬೊಮ್ಮಾಯಿರನ್ನು ಕರೆಯಿಸಿ, ಬೃಹತ್ ಕಾರ್ಯಕ್ರಮ ಆಯೋಜಿಸುವ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.
ಕಳೆದ ಹಲವು ವರ್ಷಗಳಿಂದ ಆಡಳಿತಾರೂಢ ಸರಕಾರಗಳಿಂದ ಜಿಲ್ಲೆಯ ಕಡೆಗಣನೆ ಅವ್ಯಾಹತವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ನೇಮಕಾತಿಯಲ್ಲಿ ಅಸಡ್ಡೆ ಸೇರಿ ಪ್ರತಿ ಹಂತದಲ್ಲೂ ಜಿಲ್ಲೆಯನ್ನು ನಿರ್ಲಕ್ಷಿಸಲಾಗಿದೆ. ಮೂರ್ನಾಲ್ಕು ವರ್ಷಗಳಿಂದ ರಾಯಚೂರು ವಿಮಾನ ನಿಲ್ದಾಣ ನಿರ್ಮಾಣ ವಿಚಾರ ಚರ್ಚೆಯಲ್ಲಿದೆ. ಜಮೀನು ಗುರುತಿಸಲಾಗಿದೆ. ಅನುದಾನವೂ ಲಭ್ಯವಿದೆ. ಆದರೆ, ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ. ರಾಜ್ಯದ ಬಿಜೆಪಿ ಸರಕಾರವು ಭರವಸೆ ನೀಡುವುದರಲ್ಲಿಯೇ ಕಾಲಹರಣ ಮಾಡಿದೆ.
ರಾಜ್ಯ ಬಿಜೆಪಿ ನಾಯಕರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಪಾದಯಾತ್ರೆಯನ್ನು ಹಗುರವಾಗಿಯೇ ಪರಿಗಣಿಸಿದ್ದರು. ಆದರೆ, ಜಿಲ್ಲಾ ಕಾಂಗ್ರೆಸ್ ನಾಯಕರು ತಮ್ಮ ನಡುವಿನ ಅತೃಪ್ತಿ ಬದಿಗಿರಿಸಿ ಭಾರತ ಐಕ್ಯತಾ ಯಾತ್ರೆ ಯಶಸ್ವಿಗೊಳಿಸಿದ್ದಾರೆ. ಮೂವತ್ತು ಸಾವಿರಕ್ಕೂ ಹೆಚ್ಚಿನ ಜನ ಪಾದಯಾತ್ರೆಯುದ್ದಕ್ಕೂ ಹೆಜ್ಜೆ ಹಾಕಿದ್ದು, ಬಿಜೆಪಿಯಲ್ಲಿ ನಡುಕ ಮೂಡಿಸಿದೆ. ಮುಂದಿನ ಕೆಲವೇ ತಿಂಗಳಲ್ಲಿ ಚುನಾವಣೆ ನಡೆಯಲಿದ್ದು, ಪಾದಯಾತ್ರೆಯಲ್ಲಿ ಸೇರಿದ್ದ ಜನಸಾಗರ ಬಿಜೆಪಿಯವರ ನಿದ್ದೆಗೆಡಿಸಿದೆ.

ರಾಹುಲ್ ಅವರ ಪಾದಯಾತ್ರೆಗೂ ಮೊದಲೇ ಗಿಲ್ಲೆಸೂಗೂರನಲ್ಲಿ ತರಾತುರಿಯಲ್ಲಿ ಜನಸಂಕಲ್ಪ ಯಾತ್ರೆ ಆಯೋಜಿಸಿದ್ದ ಬಿಜೆಪಿ ನಾಯಕರಿಗೆ ಮತ್ತೊಂದು ಹಂತದ ಶಕ್ತಿ ಪ್ರದರ್ಶನಕ್ಕೆ ಗಂಭೀರ ಚಿಂತನೆ ನಡೆಸಿದ್ದಾರೆ. ರಾಯಚೂರು ವಿಮಾನ ನಿಲ್ದಾಣದ ಕನಸು ಬಿತ್ತಿದ್ದ ಬಿಜೆಪಿ ಸರಕಾರದ ನಾಯಕರು ಆನಂತರ ವಿನಾಕಾರಣ ನಿಧಾನಗತಿ ಅನುಸರಿಸುತ್ತ ಬಂದಿದ್ದರು. ಆದರೆ, ಇದೀಗ ಮೈಕೊಡವಿ ಏಳದೇ ವಿಧಿಯಿಲ್ಲ ಎಂಬುದು ಅವರಿಗೆ ಮನವರಿಕೆಯಾಗಿದೆ.
ಕಳೆದ ಆಗಸ್ಟ್‌ನಲ್ಲಿ ರಾಯಚೂರು ನಗರಕ್ಕೆ ಆಗಮಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ, ಸೆಪ್ಟೆಂಬರ್‌ನಲ್ಲಿ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸುವ ಭರವಸೆ ನೀಡಿ ವಾಪಸಾಗಿದ್ದರು. ಆದರೆ, ಅಕ್ಟೋಬರ್ ಕಳೆದರೂ ಶಂಕುಸ್ಥಾಪನೆ ಮಾಡಲಿಲ್ಲ. ಈಗ ರಾಯಚೂರು ವಿಮಾನ ನಿಲ್ದಾಣ ಮತ್ತಿತರೆ ಕಾಮಗಾರಿಗಳನ್ನು ಏಕಕಾಲಕ್ಕೆ ಶಂಕುಸ್ಥಾಪನೆ ಕೈಗೊಳ್ಳುವ ಕಾರ್ಯಕ್ರಮ ಆಯೋಜನೆಗೆ ಸಿದ್ಧತೆ ಆರಂಭಗೊಂಡಿದೆ. ವಿಮಾನ ನಿಲ್ದಾಣಕ್ಕೆ 210 ಕೋಟಿ ರೂ. ಅನುದಾನ, ಜಾಗೆ ಲಭ್ಯವಿದೆ. ದೊಡ್ಡ ಸಮಾವೇಶವೊಂದನ್ನು ಮತ್ತೆ ಆಯೋಜಿಸಿ ಶಕ್ತಿ ಪ್ರದರ್ಶನಕ್ಕೆ ಚಿಂತನೆ ನಡೆದಿದ್ದು ನವೆಂಬರ್‌ನಲ್ಲಿ ಈ ಕಾರ್ಯಕ್ರಮ ನಡೆಯುವುದು ಬಹುತೇಕ ಖಚಿತವಾಗಿದೆ.

ರಾಯಚೂರು ವಿಮಾನ ನಿಲ್ದಾಣ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಕಾರ್ಯಕ್ರಮ ಶೀಘ್ರ ಆಯೋಜಿಸಲಾಗುತ್ತಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಚಾಲನೆ ಕೊಡಲಿದ್ದಾರೆ ಎಂದು ಶಾಸಕ ಡಾ. ಶಿವರಾಜ್ ಪಾಟೀಲ್ ಮಾಹಿತಿ ನೀಡಿದ್ದಾರೆ.












Click it and Unblock the Notifications