ಸನಾತನ ಧರ್ಮದ ಬಗ್ಗೆ ಮಾತನಾಡುವವರಿಗೆ ಏಡ್ಸ್, ಕುಷ್ಠರೋಗ ಬಂದಿದೆ - ಯತ್ನಾಳ್
ರಾಯಚೂರು, ಸೆಪ್ಟೆಂಬರ್ 10: ಸನಾತನ ಧರ್ಮಕ್ಕೆ ಏನೂ ಆಗಲ್ಲ. ಸನಾತನ ಧರ್ಮ ನಿರ್ಮೂಲನೆ ಕುರಿತು ಮಾತನಾಡುವವರಿಗೆ ಕುಷ್ಠರೋಗ ಹಾಗೂ ಏಡ್ಸ್ ಬಂದಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಾಗ್ದಾಳಿ ನಡೆಸಿದರು.
ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊಗಲರು ದೇಶ ಆಳಿದರು. ಔರಂಗಜೇಬನಂಥ ಒಬ್ಬ ಕ್ರೂರ ಮತಾಂಧನಿಗೂ ಭಾರತವನ್ನು ಇಸ್ಲಾಮೀಕರಣ ಮಾಡಲಾಗಲಿಲ್ಲ. ಮೊಹ್ಮದ್ ಘಜ್ನಿ, ಖಿಲ್ಜಿ ಸೇರಿ ಎಷ್ಟೋ ಮಂದಿ ಭಾರತದ ಮೇಲೆ ದಾಳಿ ಮಾಡಿದರು. ಆದರೆ, ನಮ್ಮ ಧರ್ಮಕ್ಕೆ ಏನೂ ಆಗಿಲ್ಲ ಎಂದು ಕಿಡಿಕಾರಿದರು.

ಸಾವಿರಾರು ವರ್ಷಗಳ ಇತಿಹಾಸ ಇರುವ ಧರ್ಮದ ಹುಟ್ಟು ಎಲ್ಲಿದೆ ಎಂದು ಒಬ್ಬ ಮಂತ್ರಿ ಪ್ರಶ್ನಿಸುತ್ತಾನೆ. ಅವರ ಹುಟ್ಟೇ ಅವರಿಗೆ ಗೊತ್ತಿಲ್ಲ. ತಾಕತ್ತಿದ್ದರೆ ಇಸ್ಲಾಂ, ಕ್ರೈಸ್ತ ಧರ್ಮದ ಹುಟ್ಟಿನ ಬಗ್ಗೆ ಪ್ರಶ್ನೆ ಮಾಡಲಿ ಎಂದು ಸವಾಲು ಹಾಕಿದರು.
ಕರುಣಾನಿಧಿ ಮೂಲತಃ ಕ್ರಿಶ್ಚಿಯನ್ ಅಲ್ಲ. ಇವರು ಮೂಲ ಯಾವ ಧರ್ಮಕ್ಕೆ ಸೇರಿದವರು? ಕೆಟ್ಟ ಹುಳಗಳು ಈಗ ಹೊರಗೆ ಬರುತ್ತಿವೆ. ಇವರ ನಾಶ ಸಮೀಪ ಇದೆ. ಡಿಎಂಕೆ ನಾಶವೂ ಸಮೀಪಿಸುತ್ತಿದೆ. ಸನಾತನ ಧರ್ಮಕ್ಕೆ ಯಾರೂ ಸ್ಥಾಪಕರಿಲ್ಲ. ಆದರೆ, ಸನಾತನ ಧರ್ಮ ಅನಂತ. ಮಹಾಭಾರತ ರಾಮಾಯಣಕ್ಕೂ ಮೊದಲು ಸನಾತನ ಧರ್ಮವಿದೆ. ಈಗ ಧರ್ಮದ ಬಗ್ಗೆ ಮಾಡುತ್ತಿರುವವರು ಕ್ಯಾನ್ಸರ್ ಇದ್ದ ಹಾಗೆ ಎಂದು ಟೀಕಿಸಿದರು.
ಕಾಂಗ್ರೆಸಿಗರು ಬ್ರಿಟಿಷರ ಏಜೆಂಟರಾಗಿ ಕೆಲಸ ಮಾಡುತ್ತ ಬಂದಿದ್ದಾರೆ. ಕಾಂಗ್ರೆಸ್ ಯಾವಾಗಲೂ ದೇಶದ ವಿರುದ್ಧವೇ ಕೆಲಸ ಮಾಡುತ್ತಿದೆ. ಭಾರತ ಎನ್ನುವುದು ನಮ್ಮ ದೇಶದ ಮೂಲ ಹೆಸರು. ದೇಶದ ಹೆಸರನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರೇ ಸಂವಿಧಾನದಲ್ಲಿ ಸೂಚಿಸಿದ್ದಾರೆ. ಸಾವಿರಾರು ವರ್ಷಗಳ ಹಿಂದೆಯೇ ಈ ಭೂಮಿಯನ್ನು ಭರತ ಭೂಮಿ ಎಂದು ಕರೆಯಲಾಗಿದೆ. ಭಾರತ ಎಂದು ಕರೆಯುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರೇ ಬೇರೆ ಇದ್ದಾರೆ. ಕಾಂಗ್ರೆಸ್‌ನವರು ನಿಜವಾದ ಹೋರಾಟಗಾರರಲ್ಲ. ಇವರೆಲ್ಲ ನಕಲಿ ಹೋರಾಟಗಾರರು. ಕಾಂಗ್ರೆಸ್ ಅಂದ್ರೆ ಯಾವಾಗಲೂ ಹಿಂದೂ ವಿರೋಧಿ. ನಮ್ಮ ಹಬ್ಬ ಹರಿ ದಿನಗಳ ಮೇಲೆ ಯಾರು ಯಾವ ನಿರ್ಬಂಧ ಹಾಕಿದರೂ ನಾವು ಕೇಳುವುದಿಲ್ಲ. ಈಗಲೂ ನಾವು ಗಣಪತಿ ಪ್ರತಿಷ್ಠಾಪಿಸಲು ಪೊಲೀಸ್ ಅನುಮತಿ ಪಡೆಯುವುದಿಲ್ಲ. ಡಾಲ್ಬಿ ಹಚ್ಚುತ್ತೇವೆ. ಮಂದಿರ ಬನಾಯೇಂಗೆ ಹಾಡನ್ನೂ ಹಚ್ಚುತ್ತೇವೆ. ಪೊಲೀಸರು ಎಷ್ಟು ಕೇಸ್ ಹಾಕ್ತಾರೋ ಹಾಕಲಿ. ಕಠಿಣ ಕಾನೂನು ತರುತ್ತೇವೆ ಅಂದರೆ, ಎಲ್ಲ ಧರ್ಮದವರಿಗೂ ತರಬೇಕು ಎಂದು ಹೇಳಿದರು.
ಗ್ಯಾರಂಟಿಗಳಿಗೆ ಅಕೌಂಟ್ ತೆಗೆದಿದ್ದೆ ಮೋದಿ. ಜನಧನ್ ಯೋಜನೆ ಮಾಡಿದ್ದು ನಾವೇ. 50 ವರ್ಷದಲ್ಲಿ ಸಾಮಾನ್ಯ ಮಹಿಳೆಗೆ ರಾಷ್ಟ್ರೀಯ ಬ್ಯಾಂಕ್‌ಗಳಲ್ಲಿ ಖಾತೆಯೇ ಇರಲಿಲ್ಲ. ಬಿಜೆಪಿ ಗ್ಯಾರಂಟಿ ಬಂದರೆ ಬೇರೆ ಯಾವ ಪಕ್ಷಗಳೂ ಉಳಿಯುವುದಿಲ್ಲ' ಎಂದು ತಿಳಿಸಿದರು.
ಜಗದೀಶ್ ಶೆಟ್ಟರ್ ವಿರುದ್ಧ ಯತ್ನಾಳ್ ಕಿಡಿ: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಂದ ಬಿಜೆಪಿಗೆ ಏನೂ ಲಾಭವಾಗಿಲ್ಲ. ನನ್ನಿಂದಾಗಿಯೇ ಲಿಂಗಾಯತರಿಗೆ ಒಳ್ಳೆಯದಾಯಿತು ಎಂದು ಸುಮ್ನೆ ಹೇಳುತ್ತಾರೆ. ಹಾಗೇನೂ ಆಗಿಲ್ಲ. ಆದರೆ, ಅವರು ಮಾತ್ರ ಸಾಕಷ್ಟು ದುಡ್ಡು ಮಾಡಿಕೊಂಡರು ಎಂದು ಯತ್ನಾಳ ಗಂಭೀರ ಆರೋಪ ಮಾಡಿದರು.
ಇಂಡಿಯಾ ಒಕ್ಕೂಟ ಕಳ್ಳರ ಗ್ಯಾಂಗ್- ಯತ್ನಾಳ್
ದೇಶದ ಎಲ್ಲ ವಿರೋಧ ಪಕ್ಷಗಳು ಒಗ್ಗೂಡಿ ಕಟ್ಟಿಕೊಂಡಿರುವ ಇಂಡಿಯಾ ಒಕ್ಕೂಟ ಕಳ್ಳರ ಗ್ಯಾಂಗ್ ಆಗಿದ್ದು, ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನ ಮಂತ್ರಿಯಾದರೆ ಅವರೆಲ್ಲರಿಗೂ ಜೈಲಿಗೆ ಹೋಗುತ್ತೇವೆಂಬ ಭಯ ಕಾಡುತ್ತಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವ್ಯಂಗ್ಯವಾಡಿದ್ದಾರೆ.
ಸಿಂಧನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಲಾಲೂ ಪ್ರಸಾದ್ ಯಾದವ, ಅಖಿಲೇಶ ಯಾದವ, ದೆಹಲಿಯ ಇಬ್ಬರು ಉಪ ಮುಖ್ಯಮಂತ್ರಿಗಳು ಜಾಮೀನಿನ ಮೇಲೆ ಹೊರಗಡೆ ಇದ್ದಾರೆ. ಮೋದಿ ದೇಶ ಒಡೆಯುವ ಕೆಲಸ ಮಾಡಿದ್ದಾರೆಂದು ಸುಳ್ಳು ಹೇಳುತ್ತಿದ್ದಾರೆ. ಆದರೆ ಜನರು ಇದನ್ನು ನಂಬುವಷ್ಟು ಮೂರ್ಖರಲ್ಲ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳಿಂದ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ಸ್ವತಃ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಎರಡು ವರ್ಷಗಳವರೆಗೆ ಯಾವುದೇ ಅಭಿವೃದ್ಧಿ ಕೆಲಸಗಳಿಗೆ ಹಣ ಕೇಳಬಾರದೆಂದು ಶಾಸಕರಿಗೆ ಹೇಳಿದ್ದಾರೆ. ಇದರಿಂದ ಶಾಸಕರು ಚುನಾವಣಾ ಸಮಯದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸದ ಸಂದಿಗ್ಧ ಸ್ಥಿತಿಯಲ್ಲಿದ್ದಾರೆ ಎಂದರು.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಿಂದ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ನಿಮಗೆ ಕಷ್ಟವಾಗಬಹುದೇ ಎಂದು ಸುದ್ದಿಗಾರರು ಪ್ರಶ್ನಿಸಿದ್ದಕ್ಕೆ ನಾವು ಅದಕ್ಕಿಂತ ಮಿಗಿಲಾದ ಗ್ಯಾರಂಟಿಗಳನ್ನು ಕೊಡುತ್ತೇವೆ ಎಂದ ಅವರು ದೇಶದ ಸುರಕ್ಷತೆ, ಹಿಂದುತ್ವ ರಕ್ಷಣೆ, ರೈತಪರ ಯೋಜನೆಗಳ ಜಾರಿ ಮತ್ತು ಇತರ ಪ್ರಮುಖ ವಿಷಯಗಳು ಮುನ್ನೆಲೆಗೆ ಬರುತ್ತವೆ ಎಂದು ಹೇಳಿದರು.












Click it and Unblock the Notifications