ಪದವೀಧರ ಕ್ಷೇತ್ರದ ಚುನಾವಣೆಗೆ ಕಾವೇರಿದ ರಂಗು: ಈಶಾನ್ಯ ಕ್ಷೇತ್ರದ ಸ್ಪರ್ಧಾಕಾಂಕ್ಷಿಗಳು ಯಾರ್ಯಾರು..?
ರಾಯಚೂರು, ಅಕ್ಟೋಬರ್ 17: ಮುಂದಿನ ವರ್ಷ ಮಾರ್ಚ್ ಅಥವಾ ಎಪ್ರಿಲ್‌ನಲ್ಲಿ ನಡೆಯಲಿರುವ ಪದವೀಧರ ಕ್ಷೇತ್ರಗಳ ಚುನಾವಣೆಗೆ ಈಶಾನ್ಯ ಕ್ಷೇತ್ರದಿಂದ ಸ್ಪರ್ಧಿಸಲು ವಿವಿಧ ಪಕ್ಷಗಳ ಅಭ್ಯರ್ಥಿಗಳು ಈಗಾಗಲೇ ತೆರೆಮರೆಯಲ್ಲಿ ತೀವ್ರ ಕಸರತ್ತು ನಡೆಸುತ್ತಿದ್ದಾರೆ.
ಬಿಜೆಪಿಯಿಂದ ರಾಯಚೂರಿನ ಡಾ.ಶರಣಬಸವ ಪಾಟೀಲ್ ಜೋಳದಹಡಗಿ , ಕಲಬುರಗಿಯ ಮಾಜಿ ಎಂಎಲ್‌ಸಿ ಅಮರನಾಥ ಪಾಟೀಲ್ , ಕೊಪ್ಪಳದ ಕೇಸರಹಟ್ಟಿ ಬೀರಪ್ಪ ಮತ್ತು ಬಳ್ಳಾರಿಯ ಕೆ.ಶ್ರೀಧರ ಅವರ ಹೆಸರು ಕೇಳಿ ಬರುತ್ತಿವೆ.

ಕಾಂಗ್ರೆಸ್‌ನಿಂದ ಹುಮನಬಾದ್‌ನ ಹಾಲಿ ಎಂಎಲ್‌ಸಿ ಚಂದ್ರಶೇಖರ ಪಾಟೀಲ್ , ಬಳ್ಳಾರಿಯ ನಾರಾ ಪ್ರತಾಪ ರೆಡ್ಡಿ , ಕೆ.ಬಿ ಶ್ರೀನಿವಾಸ , ಕೊಪ್ಪಳದ ದೇಶಮುಖ್ ಹಾಗೂ ತಿಮ್ಮಯ್ಯ ಪುರ್ಲಿ, ರಾಯಚೂರಿನಿಂದ ಡಾ.ರಜಾಕ್ ಉಸ್ತಾದ್ ಅವರ ಹೆಸರು ಮುಂಚೂಣಿಯಲ್ಲಿವೆ.
ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಕೆ.ಬಿ.ಶ್ರೀನಿವಾಸ್ , ಕಾಂಗ್ರೆಸ್‌ನಿಂದ ಚಂದ್ರಶೇಖರ ಪಾಟೀಲ್ , ಜೆಡಿಎಸ್ ನಿಂದ ನಾರಾ ಪ್ರತಾಪ ರೆಡ್ಡಿ , ಸ್ವತಂತ್ರ ಅಭ್ಯರ್ಥಿಯಾಗಿ ಡಾ.ರಜಾಕ್ ಉಸ್ತಾದ್ ಅವರು ಸ್ಪರ್ಧಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ ಪಾಟೀಲ್ ಅವರು 18,700 ಮತಗಳನ್ನು ಪಡೆದು ಗೆಲುವು ಸಾಧಿಸಿದರು.

ನಾರಾ ಪ್ರತಾಪ ರೆಡ್ಡಿ ಹಾಗೂ ಡಾ.ರಜಾಕ್ ಉಸ್ತಾದ್ ಅವರಿಬ್ಬರೂ ಕಾಂಗ್ರೆಸ್‌ನಲ್ಲಿದ್ದು ಟಿಕೆಟ್‌ಗೆ ತೀವ್ರ ಪೈಪೋಟಿ ಏರ್ಪಡುವ ಸಾಧ್ಯತೆಯಿದೆ. ಈಶಾನ್ಯ ಪದವೀಧರ ಕ್ಷೇತ್ರ ಕಲಬುರಗಿ , ಬೀದರ್ , ಯಾದಗಿರಿ , ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳನ್ನು ಒಳಗೊಂಡಿದೆ.
2018ರ ಅಂಕಿ ಅಂಶಗಳ ಪ್ರಕಾರ ಕಲಬುರಗಿಯಲ್ಲಿ 23,415 ಮತದಾರರು ಬಳ್ಳಾರಿ 20,737, ರಾಯಚೂರು 12,007, ಬೀದರ್ 11,416 , ಕೊಪ್ಪಳ 8,338 , ಯಾದಗಿರಿ 5,159 , ಹರಪನಹಳ್ಳಿ ( ಅಂದು ದಾವಣೆಗೆರೆ , ಈಗ ಬಳ್ಳಾರಿ ಜಿಲ್ಲೆ ವ್ಯಾಪ್ತಿ)1,252 ಮತದಾರರಿದ್ದಾರೆ.

ಕಳೆದ ಬಾರಿ ಚಲಾಯಿಸಿದ 55 ಸಾವಿರ ಮತಗಳಲ್ಲಿ 2 ಸಾವಿರ ಮತಗಳು ತಿರಸ್ಕೃತವಾಗಿದ್ದವು . ಮುಂದಿನ ಚುನಾವಣೆ ವೇಳೆಗೆ ಮತದಾರರ ಸಂಖ್ಯೆ ಗಣನೀಯವಾಗಿ ಹೆಚ್ಚುವ ಸಾಧ್ಯತೆಯಿದೆ. ಮತದಾನ ಹೆಚ್ಚಳದ ಮೇಲೆ ಆಕಾಂಕ್ಷಿಗಳು ಈಗಲೇ ವಿವಿಧ ತಂತ್ರಗಳನ್ನು ಹೆಣೆಯುತ್ತಿದ್ದಾರೆ.
ಪದವಿ ಮುಗಿದು ಮೂರು ವರ್ಷ ಕಳೆದ ವಿದ್ಯಾರ್ಥಿಗಳು ಮತದಾರರಾಗಲು ಅರ್ಹರಾಗಿದ್ದಾರೆ. ಇಂತಹ ಅರ್ಹ ಹೊಸ ಮತದಾರರಿಂದ ಅರ್ಜಿ ಭರ್ತಿ ಮಾಡಿಸಲು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ದುಂಬಾಲು ಬಿದ್ದಿದ್ದಾರೆ. ಸ್ನಾತಕೋತ್ತರ ಕೇಂದ್ರ , ನಾನಾ ಶಾಲಾ ಕಾಲೇಜುಗಳಿಗೆ ಭೇಟಿ ನೀಡುತ್ತಿರುವ ಆಕಾಂಕ್ಷಿಗಳು , ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿ , ಯುವಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿದ್ದಾರೆ.












Click it and Unblock the Notifications