ರಾಯಚೂರು; ಕಲುಷಿತ ನೀರು ಸೇವನೆ ಮಹಿಳೆ ಸಾವು, 40 ಜನರು ಅಸ್ವಸ್ಥ
ರಾಯಚೂರು, ಜು.4: ರಾಯಚೂರು ನಗರದಲ್ಲಿ ಕಲುಷಿತ ನೀರು ಸೇವಿಸಿ ಕಳೆದ ತಿಂಗಳು 7 ಜನರು ಮೃತಪಟ್ಟಿದ್ದರು. ಈಗ ಮತ್ತೆ ಇಂತಹ ಪ್ರಕರಣ ನಡೆದಿದೆ.
ಜಿಲ್ಲೆಯ ಮಾನ್ವಿ ತಾಲ್ಲೂಕಿನ ವಲ್ಕಂದಿನ್ನಿ ಮತ್ತು ಜೂಕೂರ ಗ್ರಾಮಗಳಲ್ಲಿ ಕಲುಷಿತ ನೀರು ಸೇವಿಸಿ ಓರ್ವ ಮಹಿಳೆ ಮೃತಪಟ್ಟಿದ್ದಾರೆ, 40 ಜನರು ಅಸ್ವಸ್ಥಗೊಂಡಿದ್ದಾರೆ. ಈ ಘಟನೆ ಗ್ರಾಮದ ಜನರಲ್ಲಿ ಆತಂಕ ಹುಟ್ಟಿಸಿದೆ.
ವಲ್ಕಂದಿನ್ನಿ ಮತ್ತು ಜೂಕೂರ ಗ್ರಾಮಗಳಲ್ಲಿ ಜನರು ಭಾನುವಾರ ಕಲುಷಿತ ನೀರು ಸೇವಿಸಿದ್ದರು. ಜೂಕೂರು ಗ್ರಾಮದ ಲಕ್ಷ್ಮೀ ಎಂಬ ಮಹಿಳೆ ಮೃತಪಟ್ಟಿದ್ದಾರೆ.

ಪಿಡಿಒ ಮತ್ತು ತಾ ಪಂ.ಇಒ ವಿರುದ್ಧ ಗ್ರಾಮಸ್ಥರ ಆಕ್ರೋಶ
ಮಾನ್ವಿ ತಾಲೂಕಿನ ವಲ್ಕಂದಿನ್ನಿ ಮತ್ತು ಜೂಕೂರು ಗ್ರಾಮದಲ್ಲಿ ಜೂನ್ 30ರಿಂದ ಕಲುಷಿತ ನೀರು ಸರಬರಾಜು ಆಗುತ್ತಿತ್ತು. ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಹೀಗಾಗಿ ಕಲುಷಿತ ನೀರು ಸೇವನೆ ಮಾಡಿದ ಜೂಕೂರು ಗ್ರಾಮದ ಲಕ್ಷ್ಮಿ ( 26) ಎಂಬ ಮಹಿಳೆಗೆ ವಾಂತಿ, ಭೇದಿ ಶುರುವಾಗಿದೆ. ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವೈದ್ಯರು ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿನ ರಿಮ್ಸ್ ಆಸ್ಪತ್ರೆ ಕರೆದುಕೊಂಡು ಹೋಗುವಂತೆ ಹೇಳಿದ್ದಾರೆ. ರಿಮ್ಸ್‌ಗೆ ಕರೆದುಕೊಂಡು ಹೋಗಲು ತಯಾರಿ ನಡಸುವಾಗಲೇ ಆಕೆ ಮೃತಪಟ್ಟಿದ್ದಾಳೆ. ನೀರು ಕುಡಿದು ಅಸ್ವಸ್ಥರಾದವರಲ್ಲಿ ಶಾಲಾ ಮಕ್ಕಳು ಸಹ ಸೇರಿದ್ದಾರೆ.

ಕಲುಷಿತ ನೀರಿನಿಂದಲೇ ಸಮಸ್ಯೆ
ವೆಲ್ಕಂದಿನ್ನಿ ಹಾಗೂ ಜೂಕೂರು ಗ್ರಾಮಕ್ಕೆ ನಿತ್ಯ ತುಂಗಭದ್ರಾ ನದಿಯ ನೀರು ಕಾಲುವೆ ಮೂಲಕ ಸರಬರಾಜು ಆಗುತ್ತದೆ. ಕಾಲುವೆ ಕಲುಷಿತಗೊಂಡಿದ್ದು, ಅದರಿಂದಲೇ ಗ್ರಾಮಗಳಲ್ಲಿ ವಾಂತಿ-ಬೇಧಿ ಶುರುವಾಗಿದೆ ಎಂಬುದು ಜನರ ಆರೋಪ. ಗ್ರಾಮ ಪಂಚಾಯತಿ ಪಿಡಿಒ ಮತ್ತು ಮಾನವಿ ತಾಲೂಕಾ ಪಂಚಾಯತಿ ಇಒಗಳ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಅರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮದ ಮನೆ- ಮನೆಗಳಿಗೆ ಭೇಟಿ ನೀಡಿ ನಲ್ಲಿಯಲ್ಲಿ ಸರಬರಾಜು ಆಗುವ ನೀರನ್ನು ಸೋಸಿ ಮತ್ತು ಕಾಯಿಸಿ ಕುಡಿಯುವಂತೆ ಜಾಗೃತಿ ಮೂಡಿಸುತ್ತಿದ್ದಾರೆ. ಜೊತೆಗೆ ವಲ್ಕಂದಿನ್ನಿ ಗ್ರಾಮದ ಸಮುದಾಯ ಭವನದಲ್ಲಿ ವೈದ್ಯರು ತಂಡವು ಜನರಿಗೆ ಚಿಕಿತ್ಸೆ ನೀಡಲು ಮುಂದಾಗಿದೆ.

ಅಧಿಕಾರಿಗಳು, ಶಾಸಕರ ನಡೆ ವಿರುದ್ಧ ಆಕ್ರೋಶ
ಕಲುಷಿತ ನೀರು ಸೇವಿಸಿ ಓರ್ವ ಮಹಿಳೆ ಸಾವನ್ನಪ್ಪಿದ ಬಳಿಕ ಎಚ್ಚತ್ತುಕೊಂಡ ಅಧಿಕಾರಿಗಳು ಹಾಗೂ ರಾಯಚೂರು ಡಿಎಚ್ ಒ ಡಾ. ಸುರೇಂದ್ರ ಬಾಬು ವಲ್ಕಂದಿನ್ನಿ ಮತ್ತು ಜೂಕೂರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮದಲ್ಲಿ ಮೊಬೈಲ್ ಆಸ್ಪತ್ರೆ ಮತ್ತು ಆಂಬುಲೆನ್ಸ್ ವ್ಯವಸ್ಥೆ ಸಹ ಮಾಡಿದ್ದಾರೆ. ಮಹಿಳೆ ಸಾವಿನ ಕಾರಣದ ಬಗ್ಗೆ ವರದಿಯನ್ನು ಸಹ ಅಧಿಕಾರಿಗಳು ಹೇಳಿದ್ದಾರೆ.
ಗ್ರಾಮ ಪಂಚಾಯತಿ ಸರಬರಾಜು ಮಾಡಿದ ನೀರು ಸೇವಿಸಿದ ಎರಡು ಗ್ರಾಮಗಳ ಜನರು ಈಗ ವಾಂತಿ, ಬೇಂಧಿಯಿಂದ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಆದರೆ ಜಿಲ್ಲಾ ಪಂಚಾಯತ್ ಸಿಇಒ ಹಾಗೂ ಜನಪ್ರತಿನಿಧಿಗಳು ಯಾರು ಗ್ರಾಮಕ್ಕೆ ಭೇಟಿ ನೀಡಿಲ್ಲ ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಯಚೂರಿನ ವಿವಿಧ ಆಸ್ಪತ್ರೆಗಳಿಗೆ ದಾಖಲು
ಅಸ್ವಸ್ಥಗೊಂಡಿರುವ ಜನರು ರಾಯಚೂರಿನ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿ ಗ್ರಾಮಗಳಿಗೆ ಧಾವಿಸಿ ಸಮುದಾಯ ಭವನಗಳಲ್ಲೇ ಹೊರರೋಗಿ ವಿಭಾಗ ಆರಂಭಿಸಿ ಚಿಕಿತ್ಸೆ ನೀಡಿ, ಕೆಲವರನ್ನು ಆಸ್ಪತ್ರೆಗಳಿಗೆ ರವಾನಿಸಿದ್ದಾರೆ.
"ನದಿಯಿಂದ ಪೂರೈಸಲಾದ ನೀರು ಕುಡಿದಿರುವುದರಿಂದ ಗ್ರಾಮಸ್ಥರಿಗೆ ವಾಂತಿ ಬೇಧಿಯಾಗಿ ಅಸ್ವಸ್ಥಗೊಳ್ಳಲು ಕಾರಣವಾಗಿದೆ. ವಲ್ಕಂದಿನ್ನಿಯಲ್ಲಿ 25 ಮತ್ತು ಜೂಕೂರಿನಲ್ಲಿ 15 ಜನರು ಅಸ್ವಸ್ಥಗೊಂಡಿದ್ದಾರೆ" ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಚಂದ್ರಶೇಖರಯ್ಯ ತಿಳಿಸಿದರು.












Click it and Unblock the Notifications