ಮಂತ್ರಾಲಯದಲ್ಲಿ ರಾಯರ ಆರಾಧನೆಗೆ ಭರದಿಂದ ಸಾಗುತ್ತಿದೆ ಸಿದ್ಧತೆ
ರಾಯಚೂರು, ಆಗಸ್ಟ್ 12: ಇದೇ ಆಗಸ್ಟ್ 14 ರಿಂದ 20ರವರೆಗೆ ಮಂತ್ರಾಲಯದ ಶ್ರೀ ರಾಘವೇಂದ್ರ ಸಾರ್ವಭೌಮರ 348ನೇ ಆರಾಧನಾ ಮಹೋತ್ಸವದಲ್ಲಿ ವೈಭವದ ಸಪ್ತ ರಾತ್ರೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಮಠದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ವೈಭವದ ರಾಯರ ಆರಾಧನೆಗೆ ಮಂತ್ರಾಲಯ ಸಜ್ಜು
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಆರಾಧನೆ ಅಂಗವಾಗಿ ಆ.14ರಂದು ಸಂಜೆ ಧ್ವಜಾರೋಹಣ, ಲಕ್ಷ್ಮೀ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆ ಉದ್ಘಾಟನೆ, ರಾಮದೇವರ ಪೂಜೆ, ಉತ್ಸವರಾಯರ ಅಲಂಕಾರ, ಮೆರವಣಿಗೆ ಹಾಗೂ ಪೂರ್ವದಂತೆ ಧಾನ್ಯ ಪೂಜೆ ನಡೆಯಲಿದೆ. ನಂತರ ಆ.15ರಂದು ನೈರ್ಮಲ್ಯ ವಿಸರ್ಜನೆ, ಪಂಚಾಮೃತ ಅಭಿಷೇಕ, ಮುದ್ರಾ ಧಾರಣೆ, ಮೂಲರಾಮರ ಪೂಜೆ ನಡೆಯಲಿದ್ದು, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ, ಶಾಖೋತ್ಸವ ಜರುಗಲಿದೆ" ಎಂದರು.

16ರಂದು ಗುರು ಸಾರ್ವಭೌಮರ ಪೂರ್ವಾರಾಧನೆ ಆರಂಭವಾಗಲಿದ್ದು ತಿರುಪತಿಯಿಂದ ಬರುವ ಶ್ರೀನಿವಾಸನ ಶೇಷವಸ್ತ್ರವನ್ನು ಮೆರವಣಿಗೆ ಮೂಲಕ ತಂದು ರಾಯರಿಗೆ ಸಮರ್ಪಣೆ ಮಾಡಲಾಗುತ್ತದೆ. ಪಂಚಾಮೃತ ಅಭಿಷೇಕ, ಶ್ರೀ ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರಧಾನ ಹಾಗೂ ವಿವಿಧ ಕ್ಷೇತ್ರಗಳ ಪ್ರಮುಖರಿಗೆ ಸನ್ಮಾನ ಕಾರ್ಯಕ್ರಮ ಜರುಗಲಿದೆ. ಬೆಂಗಳೂರಿನ ಚತುರ್ವೇದಿ ವೇದವಾಸಾಚಾರ್ ಹಾಗೂ ಹೈದರಾಬಾದ್ ನ ಶ್ರೀಪಾದ ಸುಬ್ರಮಣ್ಯಂ ಅವರಿಗೆ ಅನುಗ್ರಹ ಪ್ರಶಸ್ತಿ ನೀಡಲಾಗುತ್ತಿದೆ. ಈ ಪ್ರಶಸ್ತಿಯು 1 ಲಕ್ಷ ರೂಪಾಯಿಯನ್ನು ಒಳಗೊಂಡಿದೆ. 17ರಂದು ಮಧ್ಯಾರಾಧನೆ ಸಮಾರಂಭ ನಡೆಯಲಿದ್ದು, ಮೂಲ ಬೃಂದಾವನಕ್ಕೆ ವಿಶೇಷ ಪಂಚಾಮೃತ ಅಭಿಷೇಕ, ಮೂಲ ರಾಮದೇವರ ಪೂಜೆ ಹಾಗೂ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ ಎಂದರು.
ಮಂತ್ರಾಲಯದಲ್ಲಿ ಉರುಳು ಸೇವೆ ಸಲ್ಲಿಸಿದ ರಾಘವೇಂದ್ರ ರಾಜಕುಮಾರ್
18ರಂದು ಉತ್ತರಾರಾಧನೆ ನಿಮಿತ್ತವಾಗಿ ಮಹಾ ರಥೋತ್ಸವ ನಡೆಯಲಿದೆ. ಸಂಸ್ಕೃತ ಪಾಠಶಾಲೆಯಿಂದ ಪುರ ಬೀದಿಗಳಲ್ಲಿ ಉತ್ಸವ ನಡೆಯಲಿದ್ದು, ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಮಾಡಲಾಗುತ್ತದೆ. ನಂತರ ವಸಂತೋತ್ಸವ ನಡೆಯುತ್ತದೆ. 19ರಂದು ಸುಜ್ಞಾನೇಂದ್ರ ತೀರ್ಥರ ಆರಾಧನೆ ನಡೆಯಲಿದೆ. 20ರಂದು ಸಪ್ತ ರಾತ್ರೋತ್ಸವದ ಮುಕ್ತಾಯ ಸಮಾರಂಭ ನಡೆಯಲಿದ್ದು ಭಕ್ತರು ಸಹಸ್ರೋಪಾದಿಯಲ್ಲಿ ಆಗಮಿಸುವ ನಿರೀಕ್ಷೆಯಿದೆ ಎಂದರು.













Click it and Unblock the Notifications