ಮಂತ್ರಾಲಯದಲ್ಲಿ ಉರುಳು ಸೇವೆ ಸಲ್ಲಿಸಿದ ರಾಘವೇಂದ್ರ ರಾಜಕುಮಾರ್
ರಾಯಚೂರು, ಜೂನ್ 13 : ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠಕ್ಕೆ ಡಾ.ರಾಜಕುಮಾರ್ ಕುಟುಂಬ ಭೇಟಿ ನೀಡಿತು. ಈ ವೇಳೆ ಉರುಳು ಸೇವೆ ಮಾಡಿ, ರಾಯರ ದರ್ಶನ ಪಡೆದರು ರಾಘವೇಂದ್ರ ರಾಜಕುಮಾರ್.
ರಾಘವೇಂದ್ರ ರಾಜಕುಮಾರ್ ಹಾಗೂ ವಿನಯ್ ರಾಜಕುಮಾರ್ ಮಠಕ್ಕೆ ಬಂದಿದ್ದರು. ರಾಯರ ದರ್ಶನದ ಬಳಿಕ ರಾಘವೇಂದ್ರ ರಾಜಕುಮಾರ್ ಮಾತನಾಡಿ, ರಾಘವೇಂದ್ರ ಸ್ವಾಮಿ ದರ್ಶನದಿಂದ ನನ್ನ ಆರೋಗ್ಯ ಸುಧಾರಿಸಿದೆ. ಕಳೆದ ಬಾರಿ ಮಠಕ್ಕೆ ಬಂದಾಗ ನನ್ನಿಂದ ನಡೆಯಲು ಆಗುತ್ತಿರಲಿಲ್ಲ. ಆದರೆ ಈ ಬಾರಿ ರಾಯರ ದರ್ಶನದಿಂದ ಉರುಳು ಸೇವೆ ಮಾಡಿದ್ದೇನೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಮಠದ ಅಂಗಳದಲ್ಲಿ ನಾನು ಓಡಾಡುತ್ತೇನೆ. ರಾಯರ ಆಶೀರ್ವಾದದಿಂದ ನಮ್ಮ ಕುಟುಂಬ ಬೆಳೆದಿದೆ. ತಂದೆಯವರ ಮಾರ್ಗದರ್ಶನದಂತೆಯೇ ನಾವು ಮಠಕ್ಕೆ ಪ್ರತಿ ವರ್ಷ ಬರುತ್ತೇವೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ನಾವು ಬೇಡಿಕೊಂಡಿದ್ದೇವೆ. ಹೊಸ ಕಾರ್ಯ ಆರಂಭಿಸುವಾಗ ಮಠಕ್ಕೆ ನಾವು ಬರುತ್ತೇವೆ ಎಂದರು.

ಪುನೀತ್ ರಾಜಕುಮಾರ್ ಕಾರು ಅಪಘಾತ ವಿಚಾರದ ಬಗ್ಗೆ ಮಾತನಾಡಿದ ವಿನಯ್, ಘಟನೆಯಲ್ಲಿ ಯಾರಿಗೂ ಏನೂ ಆಗಿಲ್ಲ. ಸಣ್ಣ ಅಪಘಾತ ನಡೆದಿದೆ. ಅಪ್ಪುಗೆ ಕಾರು ಅಪಘಾತದಲ್ಲಿ ಏನೂ ಆಗಿಲ್ಲ, ಚೆನ್ನಾಗಿದ್ದಾರೆ. ನೂತನ ಸಿನಿಮಾ ಸ್ಕ್ರಿಪ್ಟ್ ಪೂಜೆಗಾಗಿ ಮಂತ್ರಾಲಯಕ್ಕೆ ಬಂದಿದ್ದೇವೆ. ಪುನೀತ್ ಜೊತೆ ನಟಿಸುವ ಆಸೆಯಿದೆ, ಉತ್ತಮ ಕಥೆಗೆ ನಟಿಸುತ್ತೇವೆ ಎಂದು ಹೇಳಿದರು.
ನೂತನ ಸಿನಿಮಾ ಗ್ರಾಮಾಯಣ ಆಗಸ್ಟ್ ತಿಂಗಳಲ್ಲಿ ಸೆಟ್ಟೇರಲಿದೆ. ಹೀಗಾಗಿ ನಾಳೆ ಸಿನಿಮಾ ಸ್ಕ್ರಿಪ್ಟ್ ಪೂಜಾ ಕಾರ್ಯಕ್ರಮ ನಡೆಯಲಿದೆ. ಉತ್ತಮ ಕಥೆಗಳು ಸಿಕ್ಕಾಗ ನಟಿಸುವೆ, ಸದ್ಯ ಹೆಚ್ಚಿನ ಪ್ರಾಜಕ್ಟ್ ಗಳು ಇಲ್ಲ ಎಂದು ವಿನಯ್ ರಾಜಕುಮಾರ್ ಹೇಳಿದರು.












Click it and Unblock the Notifications