ರಾಯಚೂರು ಜಿಲ್ಲೆಯ ವೃದ್ಧಾಶ್ರಮದ ವೃದ್ಧರ ಬಾಳಿಗೆ ಬೆಳಕಾದ 160 ಜನ ಪೊಲೀಸರು, ವೃತ್ತಿಯ ಜೊತೆ ಸಮಾಜಮುಖಿ ಕಾರ್ಯ
ರಾಯಚೂರು, ಏಪ್ರಿಲ್, 08: ಪೊಲೀಸರು ಜನರ ಜೊತೆ ಬೆರೆತು ಸಾಕಷ್ಟು ಜನಸ್ನೇಹಿ ಕೆಲಸ ಮಾಡುವುದನ್ನು ಕಾಣಬಹುದು. ಆದರೆ ರಾಯಚೂರಿನಲ್ಲಿ ಪೊಲೀಸರು ತಮ್ಮ ವೃತ್ತಿಯ ಜೊತೆಗೆ ಸಮಾಜಮುಖಿ ಕೆಲಸವನ್ನೂ ಮಾಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಸರ್ಕಾರಿ ಸೇವೆಗೆ ಸೇರಿದ ಸವಿನೆನಪಿಗೆ ಪೊಲೀಸ್ ಕಾನ್‌ಸ್ಟೇಬಲ್‌ಗಳು ಜಿಲ್ಲೆಯ ವೃದ್ಧರಿಗೆ ನೆರವಾಗುವ ಮೂಲಕ ಸಮಾಜಮುಖಿ ಕೆಲಸಕ್ಕೂ ಸೈ ಎನ್ನಿಸಿಕೊಂಡಿದ್ದಾರೆ. ತಮ್ಮ ಸಂಬಳದಲ್ಲಿ ಇಂತಿಷ್ಟು ಹಣವನ್ನು ವೃದ್ಧರ ಸೇವೆಗೆ ಅಂತಲೇ ಮೀಸಲಿಟ್ಟು ಮಾನವೀಯತೆ ಮೆರೆದಿದ್ದಾರೆ.

2005ರಲ್ಲಿ ಪೊಲೀಸ್ ಕಾನ್‌ಸ್ಟೇಬಲ್‌ಗಳಾಗಿ ಆಯ್ಕೆ
ರಾಯಚೂರು ಜಿಲ್ಲೆಯಲ್ಲಿ 2005ರಲ್ಲಿ 160 ಜನರು ಪೊಲೀಸ್ ಕಾನ್‌ಸ್ಟೇಬಲ್‌ಗಳಾಗಿ ಆಯ್ಕೆ ಆದರು. ಈ ಬ್ಯಾಚ್‌ನ ಸುಮಾರು 160 ಜನರು ಸರಕಾರಿ ಸೇವೆಗೆ ಒಟ್ಟಿಗೆ ಆರಂಭಿಸಿದ್ದರ ಸವಿನೆನಪಿಗೆ ಪ್ರತಿವರ್ಷ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಾರೆ. ತಮ್ಮ ಸಂಭ್ರಮಾಚರಣೆ ಸಮಾಜಮುಖಿ ಆಗಿರಲಿ ಎಂಬುದು ಇವರ ಉದ್ದೇಶವಾಗಿದೆ. ಸೇವೆಗೆ ಸೇರಿ 18 ವರ್ಷ ಕಳೆದಿರುವ ಹಿನ್ನೆಲೆ ಈ ವರ್ಷ ವೃದ್ಧಾಶ್ರಮದ ವೃದ್ಧರ ಸೇವೆಯ ಮೂಲಕ ವಾರ್ಷಿಕೋತ್ಸವ ಆಚರಿಸಿ ಗಮನ ಸೆಳೆದಿದ್ದಾರೆ.
ಕುಡಿಯುವ ನೀರಿನ ಘಟಕದ ವ್ಯವಸ್ಥೆ
ರಾಯಚೂರು ನಗರದ ಆಶಾಪುರ ರಸ್ತೆಯಲ್ಲಿರುವ ಲಲಿತಾ ಹಿರಿಯ ನಾಗರಿಕರ ಮನೆ ವೃದ್ಧಾಶ್ರಮದಲ್ಲಿನ ವೃದ್ಧರ ಕಷ್ಟಕ್ಕೆ ಸ್ಪಂದಿಸಿ 1 ಲಕ್ಷ 50 ಸಾವಿರ ರೂಪಾಯಿ ಮೌಲ್ಯದ 250 ಲೀಟರ್ ಸಾಮರ್ಥ್ಯದ ಶುದ್ಧ ಕುಡಿಯುವ ನೀರಿನ ಘಟಕವನ್ನು ಅಳವಡಿಸಿದ್ದಾರೆ. 160 ಜನ ಪೊಲೀಸ್ ಸಿಬ್ಬಂದಿಯಲ್ಲಿ ಸುಮಾರು 80 ಜನ ಕ್ರಿಯಾಶೀಲರಾಗಿದ್ದು, ಸರ್ಕಾರಿ ಸೇವೆ ಆರಂಭಿಸಿದ್ದರ ನೆನಪಿಗೆ ತಮ್ಮ ಸಂಬಳದ ಒಂದಿಷ್ಟು ಹಣವನ್ನು ಸಮಾಜಮುಖಿ ಕೆಲಸಗಳಿಗೆ ಮೀಸಲಿಟ್ಟಿದ್ದಾರೆ.
ಹೀಗೆ ಪ್ರತಿವರ್ಷ ಕಷ್ಟದಲ್ಲಿರುವವರಿಗೆ ಅಗತ್ಯ ಸಹಾಯ ಮಾಡುವ ಮೂಲಕ ವಾರ್ಷಿಕೋತ್ಸವ ಆಚರಿಸಲು ನಿರ್ಧರಿಸಿದ್ದಾರೆ. ರಾಯಚೂರು ನಗರದ ಲಲಿತಾ ಹಿರಿಯ ನಾಗರಿಕರ ಮನೆ ವೃದ್ಧಾಶ್ರಮದಲ್ಲಿ 45ಕ್ಕೂ ಹೆಚ್ಚು ಜನ ವೃದ್ಧರು ಕಳೆದ ಎರಡು ವರ್ಷಗಳಿಂದ ಆರ್ಶರಯ ಪಡೆದಿದ್ದಾರೆ. ಆದರೆ ಅಧಿಕಾರಿಗಳು, ಜನಪ್ರತಿನಿಧಿಗಳು ಭರವಸೆ ಕೊಟ್ಟಿದ್ದರೂ ಕೂಡ ಶುದ್ಧ ಕುಡಿಯುವ ನೀರಿನ ಕೊರತೆಯ ಸಮಸ್ಯೆ ಮಾತ್ರ ಬಗೆಹರಿದಿರಲಿಲ್ಲ.

ನಂತರ ಇದನ್ನೆಲ್ಲ ಗಮನಿಸಿದ ಜಿಲ್ಲೆಯ 160 ಜನ ಪೊಲೀಸ್ ಕಾನ್‌ಸ್ಟೇಬಲ್‌ಗಳ ಸಮಾಜಮುಖಿ ಕೆಲಕ್ಕೆ ಮುಂದಾಗಿ ವೃದ್ಧರ ಬಾಲಿಗೆ ಬೆಳಕಾಗಿದ್ದಾರೆ. ಇವರ ಈ ಸಮಾಜಮುಖಿ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ. ಅವರು ಪ್ರೋತ್ಸಾಹಿಸಿದ್ದು, ಕುಡಿಯುವ ನೀರಿನ ಶುದ್ಧೀಕರಣ ಘಟಕವನ್ನು ಉದ್ಘಾಟಿಸಿದ್ದಾರೆ.
2005ನೇ ಇಸವಿಯಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಆಗಿ ಸರ್ಕಾರಿ ಕೆಲಸಕ್ಕೆ ಸೇರಿದೆ. ನಮ್ಮ ಬ್ಯಾಚ್‌ನ ಸುಮಾರು 160 ಜನರು ಪ್ರತಿ ವರ್ಷ ಸಮಾಜಮುಖಿ ಕಾರ್ಯ ಮಾಡುವ ಮೂಲಕ ವಾರ್ಷಿಕೋತ್ಸವ ಆಚರಣೆ ಮಾಡುತ್ತಿದ್ದೇವೆ. ಅಲ್ಲದೆ ಸಮಾಜ ಸೇವೆಗಾಗಿ ಇಂತಿಷ್ಟು ಹಣ ತೆಗೆದು ಇಟ್ಟಿರುತ್ತೇವೆ ಎಂದು ಯಾದಗಿರಿ ಜೆಸ್ಕಾಂ ಜಾಗೃತ ದಳ ಪೊಲೀಸ್ ಠಾಣೆಯ ಸಿಪಿಐ ಸಾಬಯ್ಯ ಹೇಳಿದರು.
ಲಲಿತಾ ಹಿರಿಯರ ವೃದ್ಧಾಶ್ರಮದಲ್ಲಿ ಪ್ರಾರಂಭದಿಂದಲೂ ಕುಡಿಯುವ ನೀರಿನ ಸಮಸ್ಯೆ ಇತ್ತು. ಬೋರ್‌ವೆಲ್ ನೀರು ಕುಡಿಯುತ್ತಿರುವುದರಿಂದ ವೃದ್ಧರು ಆಗಾಗ ಕಾಯಿಲೆಯಿಂದ ನರಳುತ್ತಿದ್ದರು. ಇದೀಗ ಪೊಲೀಸರು ಉಚಿತವಾಗಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಿದ್ದು, ಇದರಿಂದ ದೊಡ್ಡ ಸಮಸ್ಯೆಯನ್ನು ತಪ್ಪಿದಂತಾಗಿದೆ ಎಂದು ರಾಯಚೂರು ವೃದ್ಧಾಶ್ರಮದ ಮೇಲ್ವಿಚಾರಕ ಮರಿಯಪ್ಪ ನಾಯಕ ಹೇಳಿದರು.












Click it and Unblock the Notifications