ಕ್ಯಾಬ್ ಚಾಲನೆ ಮಾಡುತ್ತಾ ನಿದ್ರೆಗೆ ಜಾರಿದ ಚಾಲಕ, ಮುಂದೇನಾಯ್ತು?
ಪುಣೆ, ಮಾರ್ಚ್ 4: ಚಾಲಕ ಸ್ವಲ್ಪ ಎಚ್ಚರ ತಪ್ಪಿದರೆ ಪ್ರಾಣಾಪಾಯ ಆಗುವಂತಹ ಎಡವಟ್ಟುಗಳು ಸಂಭವಿಸುತ್ತೆ. ಕಾರು, ಬೈಕ್, ಸೇರಿದಂತೆ ವಾಹನಗಳನ್ನು ಚಾಲನೆ ಮಾಡುವಾಗ ಮೈಯೆಲ್ಲಾ ಕಣ್ಣಾಗಿಸಿಕೊಂಡಿರಬೇಕು.
ಅದರಲ್ಲೂ ರಾತ್ರಿ ಸಮಯ ವಾಹನ ಚಾಲನೆ ಮಾಡುವವರು ಇನ್ನು ಸ್ವಲ್ಪ ಹೆಚ್ಚು ಜಾಗೃತಿಯಿಂದ ಇರಬೇಕು. ರಾತ್ರಿ ಸಮಯ ವಾಹನ ಚಾಲನೆ ಮಾಡುವ ಚಾಲಕರು ನಿದ್ರೆಯನ್ನು ನಿಯಂತ್ರಣದಲ್ಲಿಟ್ಟುಕೊಂಡಿರಬೇಕು. ಆ ಕಡೆ ಈ ಕಡೆ ಸ್ವಲ್ಪ ನಿದ್ರೆಗೆ ಜಾರಿದರೂ ಅಥವಾ ನಿದ್ದೆಯ ಮಂಪರಿಗೆ ಸಿಲುಕಿದರೆ ಅನಾಹುತ ಆಗುವುದು ಪಕ್ಕಾ.
ಹೀಗೆ, ಕ್ಯಾಬ್ ಚಾಲನೆ ಮಾಡುತ್ತಿದ್ದ ಸಮಯದಲ್ಲಿ ಚಾಲಕನ ನಿದ್ರೆ ಜಾರಿದ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಆ ಕ್ಯಾಬ್ ನಲ್ಲಿ ಮಹಿಳೆಯೊಬ್ಬರು ಪ್ರಯಾಣಿಸುತ್ತಿದ್ದರು. ಅದೃಷ್ಟವಶಾತ್ ಆ ಮಹಿಳೆ ಎಚ್ಚರವಾಗಿದ್ದರಿಂದ ನಡೆಯಬಹುದಾದ ಅನಾಹುತವನ್ನು ತಪ್ಪಿಸಿದ್ದಾಳೆ. ಅಷ್ಟಕ್ಕೂ, ಆ ಮಹಿಳೆ ಮಾಡಿದ್ದೇನು? ಮುಂದೆ ಓದಿ...

ಅದು ಇಂಟರ್ ಸಿಟಿ ಕ್ಯಾಬ್
ಕಾರ್ಯಕ್ರಮದ ನಿಮಿತ್ತ ಪುಣೆಗೆ ಬಂದಿದ್ದ 28 ವರ್ಷದ ತೇಜಸ್ವಿನಿ ದಿವ್ಯಾ ಎಂಬ ಮಹಿಳೆ ಮುಂಬೈಗೆ ಹಿಂತಿರುಗಬೇಕಿತ್ತು. ಅದಕ್ಕಾಗಿ ಆನ್ ಲೈನ್ ಆಪ್ ಮೂಲಕ ಇಂಟರ್ ಸಿಟಿ ಕ್ಯಾಬ್ ಬುಕ್ ಮಾಡಿದ್ದಾಳೆ. ಬೆಳಿಗ್ಗಿನ ಸಮಯ ಪಿಕ್ ಪಾಯಿಂಟ್ ಬಳಿ ಕಾರು ಬಂದು ತುಲುಪಿತು. ತೇಜಸ್ವಿನಿ ಕೂಡ ಕ್ಯಾಬ್ ಹತ್ತಿದರು. ಆ ಚಾಲಕ ಪುಣೆಯಿಂದ ಮುಂಬೈ ಕಡೆ ಪ್ರಯಾಣ ಆರಂಭಿಸಿದ.

ಚಾಲಕನ ತೂಕಡಿಕೆ ಗಮನಿಸಿದ ಮಹಿಳೆ
ಪುಣೆಯಿಂದ ಪ್ರಯಾಣ ಆರಂಭಿಸಿದ ಮಹಿಳೆ ಕೆಲವೇ ಕಿಲೋ ಮೀಟರ್ ಸಾಗಿದ ನಂತರ ಚಾಲಕ ತೂಕಡಿಕೆಯಲ್ಲಿದ್ದಿದ್ದು ಗಮನ ಹರಿಸಿದ್ದಾಳೆ. ಸ್ವಲ್ಪ ದೂರು ಸಾಗುತ್ತಿದ್ದಂತೆ ಮತ್ತೆ ಮತ್ತೆ ತೂಕಡಿಕೆ ಮಾಡುತ್ತಿದ್ದ ಚಾಲಕನನ್ನು ಮಹಿಳೆ ಸೂಕ್ಷ್ಮವಾಗಿ ಗಮನಿಸಿದ್ದಾಳೆ. ನಿಖರವಾಗಿ ರಸ್ತೆಯ ಮೇಲೆ ಚಾಲಕ ಗಮನ ಕೊಡಲು ಸಾಧ್ಯವಾಗದಿದ್ದುದ್ದನ್ನು ಆ ಮಹಿಳೆ ನೋಡಿದ್ದಾಳೆ.

ಚಾಲಕನನ್ನು ಎಚ್ಚರಿಸಿದ ಮಹಿಳೆ
ಚಾಲಕನ ತೂಕಡಿಕೆ ಸ್ಥಿತಿ ಕಂಡು ಆತಂಕಕ್ಕೆ ಒಳಗಾದ ಮಹಿಳಾ ಪ್ರಯಾಣಿಕ, ಆತನನ್ನು ಎಚ್ಚರಿಸಿದ್ದಾಳೆ. ಗಮನ ರಸ್ತೆ ಮೇಲೆ ಇರಲಿ, ಇಲ್ಲವಾದಲ್ಲಿ ಅಪಾಯ ಆಗಬಹುದು ಎಂದು ಗರಂ ಆಗಿದ್ದಾಳೆ. ಆ ಬಳಿಕಯೂ ವಾಹನ ಚಾಲಿಸಲು ಚಾಲಕ ಕಷ್ಟಪಡುತ್ತಿದ್ದ. ಇದರಿಂದ ತೀವ್ರವಾಗಿ ಎಚ್ಚೆತ್ತುಕೊಂಡ ಆ ಮಹಿಳೆ, ಚಾಲಕನಿಗೆ ಕ್ಯಾಬ್ ನಿಲ್ಲಿಸಲು ಸೂಚಿಸಿದ್ದಾಳೆ. ''ಕಾರು ನಾನು ಚಾಲನೆ ಮಾಡುತ್ತೇನೆ, ನೀನು ಬೇಕಾದರೆ ಸ್ವಲ್ಪ ಸಮಯ ನಿದ್ರಿಸು'' ಎಂದು ಮನವೊಲಿಸಿದ್ದಾಳೆ.

ಮನೆ ತಲುಪುವ ಮುನ್ನ ಚಾಲಕ ಎಚ್ಚರ
ಹೀಗೆ, ಮಾರ್ಗಮಧ್ಯೆ ಚಾಲಕನಿಂದ ಕಾರು ಪಡೆದುಕೊಂಡ ಮಹಿಳೆ ಮುಂಬೈನ ಅಂಧೇರಿವರೆಗೂ ಖುದ್ದು ಚಾಲನೆ ಮಾಡಿಕೊಂಡು ಬಂದಿದ್ದಾಳೆ. ಮನೆ ತಲುಪುವ ಅರ್ಧ ಗಂಟೆಗೂ ಮುಂಚೆಯಷ್ಟೇ ಚಾಲಕ ಎಚ್ಚರಗೊಂಡನು ಎಂದು ತಿಳಿಸಿದ್ದಾಳೆ.

ಆಕ್ರೋಶ ಹಂಚಿಕೊಂಡ ತೇಜಸ್ವನಿ
ಪುಣೆಯಿಂದ ಮುಂಬೈಗೆ ಬರುವ ಮಧ್ಯೆ ಇಂತಹದೊಂದು ಕೆಟ್ಟ ಅನುಭವ ಹಾಗೂ ಅಪಾಯಕಾರಿ ಅನುಭವ ಆಗಿದ್ದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಉಬರ್ ಗ್ರಾಹಕ ಮತ್ತು ಸಂಸ್ಥೆಯ ಮಧ್ಯೆ ಯಾವುದೇ ನೇರ ಸಂಪರ್ಕ ಇಲ್ಲ. ಇಂತಹ ಸಂದರ್ಭಗಳು ಬಂದಾಗ ಏನು ಮಾಡುವುದು ಎಂದು ಪ್ರಶ್ನಿಸಿದ್ದಾರೆ. ಬಳಿಕ, ಉಬರ್ ಸಂಸ್ಥೆ ಈ ಕುರಿತು ಕ್ಷಮೆ ಕೇಳಿದೆ ಎಂದು ಕೂಡ ತಿಳಿಸಿದ್ದಾರೆ.












Click it and Unblock the Notifications