ಎನ್‌ಡಿಎ ಸಭೆಗೂ ಮುನ್ನ ಸಂದಿಗ್ಧತೆಯಲ್ಲಿ ನಿತೀಶ್ ಕುಮಾರ್
ಪಾಟ್ನಾ, ನ 14: ಬಿಹಾರ ಅಸೆಂಬ್ಲಿ ಚುನಾವಣೆ ಗೆದ್ದಿರುವ ಎನ್‌ಡಿಎ ಮೈತ್ರಿಕೂಟದ ಶಾಸಕಾಂಗ ಪಕ್ಷದ ಸಭೆ, ಭಾನುವಾರ (ನ 15) ನಡೆಯಲಿದೆ. ಸಿಎಂ ಆಗಿ ಮತ್ತೆ ನಿತೀಶ್ ಕುಮಾರ್ ಅವರೇ ಅವಿರೋಧವಾಗಿ ಆಯ್ಕೆಯಾಗಲಿದ್ದಾರಾ ಅಥವಾ ನಿತೀಶ್ ಕುಮಾರ್ ಹಿಂದಕ್ಕೆ ಸರಿಯಲಿದ್ದಾರಾ ಎನ್ನುವುದು ಕುತೂಹಲಕ್ಕೆ ಎಡೆಮಾಡಿ ಕೊಟ್ಟಿದೆ.
ಚುನಾವಣೆಗೆ ಮುನ್ನ ಮತ್ತು ನಂತರವೂ ನಿತೀಶ್ ಕುಮಾರ್ ಅವರೇ ನಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಜೆಪಿ ಹೇಳಿದ್ದರೂ, ನಿತೀಶ್ ಕುಮಾರ್ ಸಂದಿಗ್ಧತೆಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
"ಬಿಜೆಪಿಗಿಂತ ಕಮ್ಮಿ ಸ್ಥಾನ ಪಡೆದರೂ, ನಿತೀಶ್ ಕುಮಾರ್ ಅವರಿಗೆ ಮತ್ತೆ ಮುಖ್ಯಮಂತ್ರಿಯಾಗಲು, ಅವರ ಆತ್ಮಸಾಕ್ಷಿ ಅದಕ್ಕೆ ಒಪ್ಪುತ್ತದಾ"ಎಂದು ಆರ್ಜೆಡಿ ಮೈತ್ರಿಕೂಟದ ಮುಖ್ಯಸ್ಥ ತೇಜಸ್ವಿ ಯಾದವ್ ಪ್ರಶ್ನಿಸಿದ್ದರು.

ತಮ್ಮಾಪ್ತರ ಜೊತೆ ನೋವು ತೋಡಿಕೊಂಡಿರುವ ನಿತೀಶ್ ಕುಮಾರ್, ಮುಖ್ಯಮಂತ್ರಿ ಹುದ್ದೆಯಿಂದ ಹಿಂದಕ್ಕೆ ಸರಿಯುವ ಬಗ್ಗೆ ಚರ್ಚಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಬಿಜೆಪಿ ಇದಕ್ಕೆ ಸುತರಾಂ ಒಪ್ಪಿಕೊಳ್ಳುತ್ತಿಲ್ಲ ಎನ್ನುವ ಮಾತೂ ಕೇಳಿಬರುತ್ತಿದೆ.
ಎಂದಿನಂತೆ ಫ್ರೀ ಹ್ಯಾಂಡ್ ನಿಮಗಿರಲಿದೆ, ಬಿಜೆಪಿಯ ಮುಖ್ಯಮಂತ್ರಿ ಆಯ್ಕೆ ಕೂಡಾ ನೀವೇ ಎಂದು ಖುದ್ದು ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಕೂಡಾ ನಿತೀಶ್ ಕುಮಾರ್ ಗೆ ಹೇಳಿದ್ದಾರೆ. ಚಿರಾಗ್ ಪಾಸ್ವಾನ್ ಪಕ್ಷದಿಂದ, ಜೆಡಿಯುಗೆ ಆದ ಹಿನ್ನಡೆಯ ಬಗ್ಗೆ ನಿತೀಶ್ ಬೇಸರಗೊಂಡಿದ್ದಾರೆ.
ಒಂದು ವೇಳೆ, ಮುಖ್ಯಮಂತ್ರಿಯಾದರೂ, ಕೇಂದ್ರದ ಮತ್ತು ರಾಜ್ಯ ಬಿಜೆಪಿ ನಾಯಕರನ್ನು ಓಲೈಸಿಕೊಂಡು ಆಡಳಿತ ನಡೆಸುವುದೇ ದೊಡ್ಡ ಕೆಲಸವಾಗಲಿದೆ ಎಂದು ನಿತೀಶ್ ಕುಮಾರ್ ತಮ್ಮ ಆಪ್ತರಲ್ಲಿ ನೋವು ತೋಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.












Click it and Unblock the Notifications