ಮಧ್ಯಾಹ್ನದ ಬಿಸಿಯೂಟ; ಮಕ್ಕಳ ಮನೆಗೆ ದಿನಸಿ ವಿತರಣೆ
ಪಾಟ್ನಾ, ಜುಲೈ 06 : ಕೊರೊನಾ ವೈರಸ್ ಸೋಂಕಿನ ಭೀತಿಯಿಂದಾಗಿ ಶಾಲೆಗಳು ಮುಚ್ಚಿವೆ. ಶಾಲೆಗಳು ಸದ್ಯಕ್ಕೆ ಆರಂಭವಾಗುವ ಸಾಧ್ಯತೆ ಕಡಿಮೆ ಇದೆ. ಶಾಲೆಗಳಲ್ಲಿ ಬಿಸಿಯೂಟ ಮಾಡುತ್ತಿದ್ದ ಮಕ್ಕಳ ಮನೆಗೆ ದಿನಸಿ ತಲುಪಿಸಲು ಸರ್ಕಾರ ಮುಂದಾಗಿದೆ.
ಸೋಮವಾರ ಬಿಹಾರದ ಶಿಕ್ಷಣ ಇಲಾಖೆ ಜಿಲ್ಲಾ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಈ ಕುರಿತು ನಿರ್ದೇಶನ ಕೊಟ್ಟಿದೆ. ಶಾಲೆಗಳಲ್ಲಿ ಬಿಸಿಯೂಟ ಮಾಡುತ್ತಿದ್ದ ಮಕ್ಕಳ ಮನೆಗೆ ದಿನಸಿ ಮತ್ತು ಹಣವನ್ನು ತಲುಪಿಸಲಾಗುತ್ತದೆ.

ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ 1 ರಿಂದ 5ನೇ ತರಗತಿ ವಿದ್ಯಾರ್ಥಿಗಳ ಮನೆಗೆ 8 ಕೆಜಿ ದಿನಸಿ ಮತ್ತು 358 ರೂ.ಗಳನ್ನು ನೀಡಲಾಗುತ್ತದೆ. 6 ರಿಂದ 8 ನೇ ತರಗತಿ ವಿದ್ಯಾರ್ಥಿಗಳಿಗೆ 12 ಕೆಜಿ ದಿನಸಿ ಮತ್ತು 536 ರೂ.ಗಳನ್ನು ನೀಡಲಾಗುತ್ತದೆ.
ಮೇ, ಜೂನ್ ಮತ್ತು ಜುಲೈ ತಿಂಗಳಿಗೆ ದಿನಸಿ ಮತ್ತು ಆಹಾರವನ್ನು ವಿತರಣೆ ಮಾಡಬೇಕು ಎಂದು ಶಿಕ್ಷಣ ಇಲಾಖೆ ಆದೇಶದಲ್ಲಿ ತಿಳಿಸಿದೆ. ಶಾಲೆಗಳು ಬಂದ್ ಆಗಿದ್ದು, ಮಧ್ಯಾಹ್ನದ ಊಟಕ್ಕಾಗಿ ಮಕ್ಕಳು ಪರದಾಡುತ್ತಿರುವ ಹಲವು ಪ್ರಕರಣಗಳು ರಾಜ್ಯದಲ್ಲಿ ಬೆಳಕಿಗೆ ಬಂದಿತ್ತು.
ಮಕ್ಕಳು ಶಾಲೆಗೆ ಬರುತ್ತಿದ್ದಾಗ ಮಧ್ಯಾಹ್ನದ ಬಿಸಿಯೂಟ ಸಿಗುತ್ತಿತ್ತು. ಆದರೆ, ಲಾಕ್ ಡೌನ್ ಪರಿಣಾಮ ಶಾಲೆಗಳು ಮುಚ್ಚಿದ್ದರಿಂದ ಮಧ್ಯಾಹ್ನದ ಬಿಸಿಯೂಟವಿಲ್ಲದೇ ಮಕ್ಕಳಿಗೆ ಪೌಷ್ಠಿಕವಾದ ಆಹಾರ ಸಿಗುತ್ತಿರಲಿಲ್ಲ. ಇದನ್ನು ಗಮನಿಸಿ ಮನೆಗೆ ದಿನಸಿ ಸರಬರಾಜು ಮಾಡಲು ಸೂಚನೆ ಕೊಡಲಾಗಿದೆ.
ಮನೆಯಲ್ಲಿಯೂ ಸರಿಯಾದ ಆಹಾರ ಸಿಗದೇ ಮಕ್ಕಳು ಭಿಕ್ಷಾಟನೆ, ಕಸ ಸಂಗ್ರಹದಂತಹ ಕೆಲಸದಲ್ಲಿ ತೊಡಗಿರುವ ವರದಿಗಳನ್ನು ಮಾಧ್ಯಮಗಳು ಪ್ರಸಾರ ಮಾಡಿದ್ದವು. ಆದ್ದರಿಂದ, ಸರ್ಕಾರ ಶಾಲೆ ಬಂದ್ ಆಗಿದ್ದರೂ ಮಕ್ಕಳ ಮನೆಗೆ ದಿನಸಿ ತಲುಪಿಸುವ ತೀರ್ಮಾನ ಕೈಗೊಂಡಿದೆ.












Click it and Unblock the Notifications