ಬಿಹಾರದಲ್ಲಿ ಒಂದೇ ಕುಟುಂಬದ ನಾಲ್ವರನ್ನು ಕೊಂದು ನೇಣು ಹಾಕಿದ ನಕ್ಸಲರು!
ಗಯಾ, ನವೆಂಬರ್ 15: ಬಿಹಾರದ ಗಯಾ ಜಿಲ್ಲೆಯ ಗ್ರಾಮವೊಂದರಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಒಂದೇ ಕುಟುಂಬದ ನಾಲ್ವರನ್ನು ಮಾವೋವಾದಿಗಳು ಕೊಂದು ಹಾಕಿದ್ದಾರೆ. ಅಲ್ಲದೇ ಅವರ ಮೃತದೇಹಗಳನ್ನು ಮನೆಯ ಅಂಗಳದಲ್ಲಿರುವ ದನದ ಕೊಟ್ಟಿಗೆಯಲ್ಲಿ ನೇಣು ಹಾಕಿದ್ದಾರೆ. ತದನಂತರ ನಕ್ಸಲರು ಬಾಂಬ್ ಬಳಸಿ ಅವರ ಮನೆಯನ್ನೂ ಸ್ಫೋಟಿಸಿದ್ದಾರೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿರುವ ಬಗ್ಗೆ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಎಡಿಜಿ, ಕಾನೂನು ಮತ್ತು ಸುವ್ಯವಸ್ಥೆ ಪ್ರಕಾರ, ಬಿಹಾರ-ಜಾರ್ಖಂಡ್ ಗಡಿಗೆ ಸಮೀಪವಿರುವ ದುಮಾರಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕಾನೂನುಬಾಹಿರ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಸದಸ್ಯರು ಶನಿವಾರ ತಡರಾತ್ರಿ ಸರಯು ಸಿಂಗ್ ಭೋಕ್ತಾ ಅವರ ಮನೆಯ ಮೇಲೆ ದಾಳಿ ಮಾಡಿದ್ದಾರೆ.
ನಕಲಿ ವೈದ್ಯಕೀಯ ಚಿಕಿತ್ಸಾಲಯಗಳ ಬಗ್ಗೆ ವರದಿ: ಬಿಹಾರ ಪತ್ರಕರ್ತನ ಹತ್ಯೆ
ಭೋಕ್ತಾ ಮತ್ತು ಅವರ ಕುಟುಂಬವು ಪೊಲೀಸ್ ಮಾಹಿತಿದಾರರು ಎಂದು ಆರೋಪಿಸಿ ಮಾವೋವಾದಿಗಳು ಕರಪತ್ರ ಬಿಟ್ಟು ಹೋಗಿದ್ದಾರೆ. ಇದೇ ಕುಟುಂಬ ನೀಡಿದ ಸುಳಿವಿನಿಂದಾಗಿ 2021ರ ಮಾರ್ಚ್ ತಿಂಗಳಿನಲ್ಲಿ ಎನ್‌ಕೌಂಟರ್ ನಡೆಸಲಾಗಿತ್ತು. ಸ್ಥಳೀಯ ಪೊಲೀಸರು ಮತ್ತು ಕೋಬ್ರಾ ಬೆಟಾಲಿಯನ್ ಜಂಟಿ ಕಾರ್ಯಾಚರಣೆಯಲ್ಲಿ ನಾಲ್ವರು ನಕ್ಸಲರನ್ನು ಹೊಡೆದುರುಳಿಸಲಾಗಿದ್ದು, ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಬೋಕ್ತಾ ಪುತ್ರರು ಮತ್ತು ಪತ್ನಿಯರ ಕೊಲೆ:
ಬಿಹಾರದ ಗಯಾ ಜಿಲ್ಲೆಯ ಗ್ರಾಮವೊಂದರಲ್ಲಿ ನಕ್ಸಲರು ದಾಳಿ ನಡೆಸಿದ ಸಮಯದಲ್ಲಿ ಭೋಕ್ತಾ ಅವರು ಮನೆಯಲ್ಲಿ ಇರಲಿಲ್ಲ. ಈ ವೇಳೆ ಮನೆಯಲ್ಲಿದ್ದ ಅವರ ಇಬ್ಬರು ಪುತ್ರರು ಹಾಗೂ ಪತ್ನಿಯರನ್ನು ದುಷ್ಕರ್ಮಿಗಳು ಕೊಂದು, ದನದ ಕೊಟ್ಟಿಗೆಯಲ್ಲಿರುವ ಬಿದಿರಿನ ಕಂಬಕ್ಕೆ ಶವಗಳನ್ನು ನೇತು ಹಾಕಿದ್ದಾರೆ. ತದನಂತರ ಸ್ಫೋಟಕಗಳನ್ನು ಬಳಸಿ ಮನೆಯನ್ನು ಸ್ಫೋಟಗೊಳಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ನಕ್ಸಲರ ಪತ್ತೆಗೆ ಶೋಧ ಕಾರ್ಯಾಚರಣೆ:
ಆರೋಪಿಗಳ ಪತ್ತೆಗಾಗಿ ಗಯಾ ಎಸ್‌ಎಸ್‌ಪಿ ಆದಿತ್ಯ ಕುಮಾರ್ ಘಟನಾ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಶೋಧ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದ್ದಾರೆ. ಕಳೆದ ನವೆಂಬರ್ 24ರಂದು ಈ ಪ್ರದೇಶದಲ್ಲಿ ನಡೆಯಲಿರುವ ಪಂಚಾಯತ್ ಚುನಾವಣೆಗೆ ಮುಂಚಿತವಾಗಿ ಬರುವ ನಕ್ಸಲ್ ಚಟುವಟಿಕೆಯನ್ನು ಗಮನದಲ್ಲಿಟ್ಟುಕೊಂಡು ಜಾರ್ಖಂಡ್‌ನ ಗಡಿಯಲ್ಲಿರುವ ಇತರ ಜಿಲ್ಲೆಗಳ ಪೊಲೀಸ್ ಮುಖ್ಯಸ್ಥರಿಗೆ ಕೂಂಬಿಂಗ್ ಕಾರ್ಯಾಚರಣೆಯನ್ನು ಪ್ರಾರಂಭಿಸಲು ತಿಳಿಸಲಾಗಿದೆ.
ಮಹಾರಾಷ್ಟ್ರದಲ್ಲಿ 26 ನಕ್ಸಲರ ಹತ್ಯೆ:
ಮುಂಬೈನಿಂದ 900 ಕಿಲೋ ಮೀಟರ್ ದೂರದಲ್ಲಿರುವ ಪೂರ್ವ ಮಹಾರಾಷ್ಟ್ರದ ಗಡ್‌ಚಿರೋಲಿ ಜಿಲ್ಲೆಯಲ್ಲಿ ಶನಿವಾರ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಕನಿಷ್ಠ 26 ನಕ್ಸಲರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವ ಬಗ್ಗೆ ಪಿಟಿಐ ವರದಿ ಮಾಡಿತ್ತು. "ನಾವು ಇದುವರೆಗೆ 26 ನಕ್ಸಲರ ಮೃತದೇಹಗಳನ್ನು ಅರಣ್ಯದಿಂದ ವಶಪಡಿಸಿಕೊಂಡಿದ್ದೇವೆ" ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಕಿತ್ ಗೋಯಲ್ ಹೇಳಿದ್ದರು.
"ಹೆಚ್ಚುವರಿ ಎಸ್ಪಿ ಸೌಮ್ಯಾ ಮುಂಡೆ ನೇತೃತ್ವದಲ್ಲಿ ಸಿ-60 ಪೊಲೀಸ್ ಕಮಾಂಡೋ ತಂಡವು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಮರ್ಡಿಂತೋಲಾ ಅರಣ್ಯ ಪ್ರದೇಶದ ಕೊರ್ಚಿಯಲ್ಲಿ ಬೆಳಗ್ಗೆ ಗುಂಡಿನ ಚಕಮಕಿ ನಡೆದಿದೆ," ಎಂದು ಗೋಯಲ್ ತಿಳಿಸಿದ್ದರು. ಪೊಲೀಸರು ನಡೆಸಿರುವ ಎನ್‌ಕೌಂಟರ್‌ನಲ್ಲಿ ಹತ್ಯೆಯಾದ 26 ಮಂದಿ ನಕ್ಸಲರ ಗುರುತು ಇನ್ನೂ ಪತ್ತೆಯಾಗಿಲ್ಲ. ಮೂಲಗಳ ಪ್ರಕಾರ ಅವರಲ್ಲಿ ಉನ್ನತ ಬಂಡಾಯ ನಾಯಕನೂ ಸೇನಿದ್ದಾನೆ ಎಂಬ ಶಂಕೆ ಕೂಡ ವ್ಯಕ್ತವಾಗಿದೆ.
ಹೆಲಿಕಾಪ್ಟರ್ ಮೂಲಕ ಗಾಯಗೊಂಡ ಸಿಬ್ಬಂದಿ ರವಾನೆ:
ಛತ್ತೀಸ್‌ಗಢದ ಗಡಿಯಲ್ಲಿ ಇರುವ ಗಡ್‌ಚಿರೋಲಿ ಜಿಲ್ಲೆಯಲ್ಲಿ ಶನಿವಾರ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿಯು ನಡೆಸಿರುವ ಕಾರ್ಯಾಚರಣೆಯಲ್ಲಿ ನಾಲ್ವರು ಪೊಲೀಸ್ ಸಿಬ್ಬಂದಿ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಹೀಗೆ ಗಾಯಕೊಂಡ ಪೊಲೀಸ್ ಸಿಬ್ಬಂದಿಯನ್ನು ಹೆಲಿಕಾಪ್ಟರ್ ಮೂಲಕ ನಾಗ್ಪುರಕ್ಕೆ ಕರೆದುಕೊಂಡು ಹೋಗಲಾಗಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.