ಕೇಂದ್ರದ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ 'ನಾಟಕ' ಎಂದ ಲಾಲು ಯಾದವ್
ನವದೆಹಲಿ, ನವೆಂಬರ್ 4: ಕೇಂದ್ರ ಸರ್ಕಾರ ಘೋಷಿಸಿರುವ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತದಿಂದ ಜನರಿಗೆ ನಿಜವಾದ ಪರಿಹಾರ ಸಿಗುವುದಿಲ್ಲ ಮತ್ತು ವಿಧಾನಸಭಾ ಚುನಾವಣೆಯ ನಂತರ ಪೆಟ್ರೋಲಿಯಂ ಬೆಲೆಯನ್ನು ಮತ್ತೆ ಹೆಚ್ಚಿಸಲಾಗುವುದು ಎಂದು ಉತ್ತರ ಪ್ರದೇಶದಲ್ಲಿ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ಲಾಲು ಪ್ರಸಾದ್ ಯಾದವ್ ಬುಧವಾರ ಹೇಳಿದ್ದಾರೆ.
ತಪಾಸಣೆ ಮತ್ತು ಪರೀಕ್ಷೆಗಾಗಿ ಆರ್‌ಜೆಡಿ ನಾಯಕ ಬುಧವಾರ ದೆಹಲಿ ತಲುಪಿದ್ದು ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತ ಅಸಮರ್ಪಕವಾಗಿದೆ ಎಂದು ಹೇಳಿದರು. ಪೆಟ್ರೋಲ್ ಬೆಲೆಯನ್ನು 5 ರೂ. ಇಳಿಸುವ ನಾಟಕವನ್ನು ಮೋದಿ ಸರ್ಕಾರ ಮಾಡಿದೆ ಎಂದು ಆರೋಪಿಸಿದರು. "ಪ್ರತಿ ಲೀಟರ್‌ಗೆ ₹50 ದರವನ್ನು ಕಡಿಮೆ ಮಾಡಿದರೆ, ಅದು ಪರಿಹಾರವನ್ನು ತರುತ್ತದೆ. ಯುಪಿ ಚುನಾವಣೆಯ ನಂತರ ಪೆಟ್ರೋಲಿಯಂ ಬೆಲೆಯನ್ನು ಮತ್ತೆ ಹೆಚ್ಚಿಸಲಾಗುವುದು" ಎಂದು ಆರ್‌ಜೆಡಿ ನಾಯಕ ತಿಳಿಸಿದರು.
ಕೇಂದ್ರವು ಬುಧವಾರ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು 5 ರೂ. ಮತ್ತು ಡೀಸೆಲ್ ಮೇಲೆ 10 ರೂ. ಇಳಿಸಿದೆ. ಆರ್‌ಜೆಡಿ ನಾಯಕ ಮತ್ತು ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 70 ರೂ.ಕ್ಕಿಂತ ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. 'ಮೊದಲು ಲೀಟರ್ ಪೆಟ್ರೋಲ್‌ಗೆ 70ರೂ. ದುಬಾರಿ ಎಂದು ಭಾವಿಸಿದ ಬಿಜೆಪಿ ಈಗ 100ಕ್ಕಿಂತ ಹೆಚ್ಚು ಬೆಲೆ ಏರಿಕೆ ಮಾಡಿದ್ದಾರೆ, ಕನಿಷ್ಠ 70ರೊಳಗೆ ಪೆಟ್ರೋಲ್ ಬೆಲೆ ತರಬೇಕು' ಎಂದು ಒತ್ತಾಯಿಸಿದ್ದಾರೆ.
ಕೇಂದ್ರ ಸರ್ಕಾರವು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕ ಇಳಿಕೆ ಮಾಡಿದ್ದರಿಂದ ಪೆಟ್ರೋಲ್ 5 ರೂ, ಹಾಗೂ ಡೀಸೆಲ್ ಮೇಲೆ 10 ರೂ.ಇಳಿಕೆ ಆಗಿದೆ. ಗ್ರಾಹಕರ ಹಿತ ದೃಷ್ಟಿಯಿಂದ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ವ್ಯಾಟ್ ಕಡಿಮೆ ಮಾಡುವಂತೆ ರಾಜ್ಯಗಳನ್ನು ಒತ್ತಾಯಿಸಲಾಗುತ್ತಿತ್ತು. ಕಳೆದ ಕೆಲವು ತಿಂಗಳುಗಳಿಂದ ಪ್ರತಿ ದಿನವೂ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗುತ್ತಿತ್ತು. ಕಳೆದ 36 ದಿನಗಳಲ್ಲಿ 28 ರೂಪಾಯಿ ಏರಿಕೆಯಾಗಿದೆ. ಸತತ ಏಳು ದಿನಗಳ ಕಾಲ ಏರಿಕೆ ಕಂಡಿದ್ದ ಪೆಟ್ರೋಲ್ ದರದಲ್ಲಿ ನವೆಂಬರ್ 3ರಂದು ಯಾವುದೇ ಏರಿಳಿತ ಕಂಡು ಬಂದಿಲ್ಲ. ಪ್ರಮುಖ ಎಲ್ಲಾ ಮಹಾ ನಗರಗಳಲ್ಲಿಯೂ ಸಹ ಇಂದು ಪೆಟ್ರೋಲ್, ಡೀಸೆಲ್ ದರ ಸ್ಥಿರವಾಗಿದೆ.
ಈ 9 ಬಿಜೆಪಿ ಆಡಳಿತದ ರಾಜ್ಯದಲ್ಲಿ ಇಂಧನ ಬೆಲೆ ಹೆಚ್ಚುವರಿ ಕಡಿತ
ಜನರ ಅತ್ಯವಶ್ಯಕ ವಸ್ತುವಾಗಿರುವ ಇಂಧನ ದರ ಏರಿಕೆಯಿಂದ ಜನ ಜೀವನದ ಮೇಲೆ ಗಂಭೀರ ಪರಿಣಾಮ ಬೀರಿತ್ತು. ಇನ್ನೊಂದೆಡೆ ರಾಜ್ಯ ಹಾಗೂ ಕೇಂದ್ರಗಳು ಪೆಟ್ರೋಲ್, ಡೀಸೆಲ್ ಮೇಲೆ ವಿಧಿಸಿರುವ ಸುಂಕವನ್ನು ಕಡಿತಗೊಳಿಸುವಂತೆ ಅಲ್ಲಲ್ಲಿ ಪ್ರತಿಭಟನೆಗಳು ನಡೆಯುತ್ತಿದೆ. ಆದರೆ ಸುಂಕ ಕಡಿತಗೊಳಿಸುವುದಿಲ್ಲ ಎಂದು ಈಗಾಗಲೇ ಕೇಂದ್ರ ಸ್ಪಷ್ಟನೆ ನೀಡಿತ್ತು.
ಈ ಮಧ್ಯೆ ಪೆಟ್ರೋಲ್, ಡೀಸೆಲ್ ದರ ಸದ್ಯಕ್ಕೆ ಕಡಿಮೆಯಾಗುವ ಮಾತಿರಲಿ, ಅದು ಇನ್ನಷ್ಟು ಹೆಚ್ಚಾಗಲಿದೆ ಎಂದು ಜಾಗತಿಕ ಹಣಕಾಸು ಸಂಸ್ಥೆ ಗೋಲ್ಡ್‌ಮನ್ ಸ್ಯಾಚ್ಸ್ ತಿಳಿಸಿದೆ. ಕೇಂದ್ರ ಸರ್ಕಾರ ಪ್ರಸ್ತುತ ಪ್ರತಿ ಬ್ಯಾರೆಲ್‌ಗೆ 85 ಡಾಲರ್ ಇರುವ ಕಚ್ಚಾ ತೈಲ ದರ ಮುಂದಿನ ವರ್ಷ ಶೇ.30ರಷ್ಟು ಹೆಚ್ಚಳದೊಂದಿಗೆ 110 ಡಾಲರ್‌ಗೆ ಏರಿಕೆಯಾಗುವ ನಿರೀಕ್ಷೆ ಇದೆ ಎಂದು ಸಂಸ್ಥೆಯ ವರದಿ ತಿಳಿಸಿದೆ. ಇದೀಗ ಅಬಕಾರಿ ಸುಂಕ ಇಳಿಕೆ ಮಾಡಿರುವುದು ಗ್ರಾಹಕರಲ್ಲಿ ಸಂತಸ ಮೂಡಿದೆ.
ಪ್ರಸ್ತುತ ಬಿಜೆಪಿ ಆಡಳಿತವಿರುವ ಒಂಬತ್ತು ರಾಜ್ಯಗಳಾದ ಅಸ್ಸಾಂ, ತ್ರಿಪುರ, ಮಣಿಪುರ, ಕರ್ನಾಟಕ, ಗೋವಾ, ಉತ್ತರ ಪ್ರದೇಶ, ಗುಜರಾತ್, ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಅಧಿಕವಾಗಿ ಕಡಿತ ಮಾಡಲಾಗಿದೆ.