ಆರ್‌ಜೆಡಿ ಅಧ್ಯಕ್ಷ ಸ್ಥಾನದಿಂದ ಲಾಲೂ ನಿವೃತ್ತಿ ಇಲ್ಲ: ರಾಬ್ರಿ ದೇವಿ ಸ್ಪಷ್ಟನೆ
ಪಾಟ್ನಾ ಫೆಬ್ರವರಿ 04: ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ರಾಷ್ಟ್ರೀಯ ಜನತಾ ದಳದ ಸಂಸ್ಥಾಪಕ ಲಾಲು ಪ್ರಸಾದ್ ಯಾದವ್ ಅವರ ನಿವೃತ್ತಿ ಸುದ್ದಿಯ ಊಹಾಪೋಹಗಳ ಬಗ್ಗೆ ಅವರ ಪತ್ನಿ ರಾಬ್ರಿ ದೇವಿ ಶುಕ್ರವಾರ ಸ್ಪಷ್ಟನೆ ನೀಡಿದ್ದಾರೆ. ಮುಂದಿನ ವಾರ ಪಾಟ್ನಾದಲ್ಲಿ ನಡೆಯಲಿರುವ ಪಕ್ಷದ ಕಾರ್ಯಕ್ರಮದಲ್ಲಿ ಲಾಲು ಪ್ರಸಾದ್ ಯಾದವ್ ಅವರು ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ವರದಿಗಳನ್ನು ಬಿಹಾರದ ಮಾಜಿ ಸಿಎಂ ರಾಬ್ರಿ ದೇವಿ ತಳ್ಳಿಹಾಕಿದ್ದಾರೆ. ಈ ಹೇಳಿಕೆಯನ್ನು ಸಂಪೂರ್ಣವಾಗಿ ಆಧಾರ ರಹಿತವಾಗಿದೆ ಎಂದು ಸ್ವತಃ ರಾಬ್ರಿ ದೇವಿ ಹೇಳಿಕೆ ನೀಡಿದ್ದಾರೆ.
ಬಿಹಾರ ಮುಖ್ಯಮಂತ್ರಿ ರಾಬ್ರಿ ದೇವಿ ಅವರು, ''ಲಾಲು ಪ್ರಸಾದ್ ಅವರು ಮುಂದಿನ ವಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ನಿವೃತ್ತಿ ಘೋಷಿಸುವ ಸಾಧ್ಯತೆಯಿಲ್ಲ'' ಎಂದು ಹೇಳಿದ್ದಾರೆಂದು ಪಿಟಿಐ ವರದಿ ಮಾಡಿದೆ. ಶುಕ್ರವಾರ, ರಾಬ್ರಿ ದೇವಿಯಿಂದ ಲಾಲು ಯಾದವ್ ರಾಜೀನಾಮೆ ವರದಿಯನ್ನು ಮತ್ತು ಲಾಲು ಕಿರಿಯ ಮಗನಿಗೆ ಉತ್ತರಾಧಿಕಾರಿಯನ್ನು ಹಸ್ತಾಂತರಿಸಬಹುದೇ? ಎಂದು ಮಾಧ್ಯಮಗಳು ಪ್ರಶ್ನಿಸಿದಾಗ, ರಾಬ್ರಿ ದೇವಿ ಉತ್ತರಿಸಿದ್ದು ಹೀಗೆ, ಸದ್ಯಕ್ಕೆ ಯಾವುದೇ ಸಾಧ್ಯತೆ ಇಲ್ಲ. ಲಾಲು ಪ್ರಸಾದ್ ಯಾದವ್ ಅವರು ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆನ್ನುವುದು ಸುಳ್ಳು ಸುದ್ದಿಗಳು ಎಂದಿದ್ದಾರೆ.
ಕಳೆದ ಎರಡು ತಿಂಗಳ ಹಿಂದೆ ತಮ್ಮ ತಂದೆಯನ್ನು ದಿಲ್ಲಿಯಲ್ಲಿ ಒತ್ತೆಯಾಳಾಗಿ ಇರಿಸಿಕೊಳ್ಳಲಾಗಿದೆ ಮತ್ತು ಪಕ್ಷದ ಅಧ್ಯಕ್ಷ ಸ್ಥಾನವನ್ನು ಆಕ್ರಮಿಸಿಕೊಳ್ಳಲು ಯಾರೋ ಪ್ರಯತ್ನಿಸುತ್ತಿದ್ದಾರೆ ಎಂದು ಬಿಹಾರ ಮಾಜಿ ಮುಖ್ಯಮಂತ್ರಿ ಹಾಗೂ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಹಿರಿ ಮಗ ತೇಜ್ ಪ್ರತಾಪ್ ಯಾದವ್ ಆರೋಪಿಸಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಮೇವು ಹಗರಣದ ಆರೋಪಿ ಲಾಲು ಪ್ರಸಾದ್ ಅವರಿಗೆ ರಾಂಚಿ ನ್ಯಾಯಾಲಯ ಜಾಮೀನು ನೀಡಿದ ಬಳಿಕ ಅವರು ದಿಲ್ಲಿಗೆ ಸ್ಥಳಾಂತರಗೊಂಡಿದ್ದರು. ಇತ್ತೀಚೆಗಷ್ಟೇ ಕಿರಿಯ ಸಹೋದರ ತೇಜಸ್ವಿ ಯಾದವ್ ವಿರುದ್ಧ ಮುನಿಸಿಕೊಂಡಿದ್ದ ತೇಜ್ ಪ್ರತಾಪ್ ಯಾದವ್, ತಮ್ಮನನ್ನು ಕುರಿತೇ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ.

ತಂದೆಯನ್ನು ಹೊಸದಿಲ್ಲಿಯಲ್ಲಿ ಬಂಧಿಸಿಡಲಾಗಿದೆ ಎಂಬ ಆರೋಪವನ್ನು ಬಿಹಾರ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ನಿರಾಕರಿಸಿದ್ದಾರೆ. ಒತ್ತೆಯಾಳು ಆರೋಪವು ಲಾಲು ಪ್ರಸಾದ್ ಅವರ ವ್ಯಕ್ತಿತ್ವಕ್ಕೆ ಹೊಂದಿಕೆಯಾಗುವುದಿಲ್ಲ ಎಂದು ಅಣ್ಣನ ವಿರುದ್ಧ ಗುಡುಗಿದ್ದರು.'ಲಾಲೂ ಅವರನ್ನು ಪಟ್ನಾಕ್ಕೆ ಬರಲು ಬಿಡುತ್ತಿಲ್ಲ. ಪಕ್ಷದ ಅಧ್ಯಕ್ಷರಾಗಲು ಕನಸು ಕಾಣುತ್ತಿರುವವರು ಅವರನ್ನು ದಿಲ್ಲಿಯಲ್ಲಿಯೇ ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ. ಏಪ್ರಿಲ್‌ನಲ್ಲಿ ಜೈಲಿನಿಂದ ಬಿಡುಗಡೆಯಾಗಿ ಹಲವು ತಿಂಗಳುಗಳನ್ನು ರಾಷ್ಟ್ರ ರಾಜಧಾನಿಯಲ್ಲಿ ಕಳೆದಿದ್ದರೂ ಆರ್‌ಜೆಡಿ ಮುಖ್ಯಸ್ಥರಿಗೆ ಪಟ್ನಾಗೆ ಬರಲು ಅವಕಾಶ ನೀಡುತ್ತಿಲ್ಲ. ನಾನು ಯಾರ ಹೆಸರನ್ನೂ ಹೇಳಲು ಬಯಸುವುದಿಲ್ಲ. ಏಕೆಂದರೆ ಪ್ರತಿಯೊಬ್ಬರಿಗೂ ಅವರು ಯಾರೆಂದು ಗೊತ್ತು' ಎಂದು ತೇಜ್ ಪ್ರತಾಪ್ ಹೇಳಿದ್ದರು.
'ಲಾಲು ಪ್ರಸಾದ್ ಯಾದವ್ ಅವರು ಬಿಹಾರದ ಮುಖ್ಯಮಂತ್ರಿಯಾಗಿದ್ದವರು. ಕೇಂದ್ರ ಸಚಿವರೂ ಆಗಿದ್ದರು. ಹಿಂದಿನ ಇಬ್ಬರು ಪ್ರಧಾನಿಗಳ ಚುನಾವಣೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅವರು ಬಿಜೆಪಿ ಹಿರಿಯ ಮುಖಂಡ ಲಾಲ್ ಕೃಷ್ಣ ಅಡ್ವಾಣಿ ಅವರ ಬಂಧನಕ್ಕೆ ಆದೇಶ ನೀಡಿದ್ದವರು ಕೂಡ. ಹೀಗಾಗಿ, ಇಂತಹ ಆರೋಪಗಳು ಆರ್‌ಜೆಡಿ ಮುಖ್ಯಸ್ಥರ ವ್ಯಕ್ತಿತ್ವಕ್ಕೆ ಹೊಂದಿಕೆಯಾಗುವುದಿಲ್ಲ' ಎಂದು ತೇಜಸ್ವಿ ಯಾದವ್ ಪ್ರತಿಕ್ರಿಯೆ ನೀಡಿದ್ದರು. ಹೀಗಾಗಿ ಲಾಲು ಪ್ರಸಾದ್ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆನ್ನುವ ಮಾತುಗಳು ಕೇಳಿ ಬಂದಿದ್ದವು.
ಸದ್ಯ ಈ ಮಾತುಗಳಿಗೆ ರಾಬ್ರಿ ದೇವಿ ತೆರೆ ಎಳೆದಿದ್ದಾರೆ. ಲಾಲು ಪ್ರಸಾದ್ ಯಾದವ್ ಅವರು ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ವರದಿಗಳನ್ನು ಬಿಹಾರದ ಮಾಜಿ ಸಿಎಂ ರಾಬ್ರಿ ದೇವಿ ನಿರಾಕರಿಸಿದ್ದಾರೆ.












Click it and Unblock the Notifications