ಬಿಹಾರ ವಿಧಾನಸಭಾ ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ
ಪಾಟ್ನಾ, ಜೂನ್.07: ನೊವೆಲ್ ಕೊರೊನಾ ವೈರಸ್ ಹಾವಳಿ ನಡುವೆ ಬಿಹಾರ ವಿಧಾನಸಭಾ ಚುನಾವಣೆಗೆ ಬಿಜೆಪಿ ರಣಕಹಳೆ ಮೊಳಗಿಸಿದೆ. ಲಾಕ್ ಡೌನ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಅನಿವಾರ್ಯತೆ ನಡುವೆ ತಂತ್ರಜ್ಞಾನ ಬಳಸಿಕೊಂಡು ಪಕ್ಷದ ಕಾರ್ಯಕರ್ತರು ಚುನಾವಣೆಗೆ ಅಣಿಯಾಗುವಂತೆ ಕರೆ ನೀಡಿದ್ದಾರೆ.
ನವದೆಹಲಿಯಲ್ಲೇ ಕುಳಿತುಕೊಂಡು ವಿಡಿಯೋ ಕಾನ್ಫರೆನ್ಸ್ ಮೂಲಕ ವರ್ಚುವಲ್ ರ್ಯಾಲಿಗೆ ಗೃಹ ಸಚಿವ ಅಮಿತ್ ಶಾ ಚಾಲನೆ ನೀಡಿದರು. ಅಕ್ಟೋಬರ್ ತಿಂಗಳಿನಲ್ಲಿ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಗೆ ಅಧಿಕೃತವಾಗಿ ಜನಸಂವಾದ ರ್ಯಾಲಿ ಮೂಲಕ ಚಾಲನೆ ನೀಡಲಾಯಿತು.
ಕೇಂದ್ರದಲ್ಲಿ ಕೊಡಲು ಬಂದ 'ಒಂದಕ್ಕೆ' ಪ್ರತಿಯಾಗಿ 'ಒಂದನ್ನೇ' ಕೊಟ್ಟರೆ ನಿತೀಶ್?
ಕೊರೊನಾ ವೈರಸ್ ವಿರುದ್ಧ ಹೋರಾಡಲು ಕೊರೊನಾ ವಾರಿಯರ್ಸ್ ತಮ್ಮ ಜೀವನವನ್ನೂ ಪಣಕ್ಕಿಟ್ಟಿದ್ದಾರೆ. ದೇಶವನ್ನು ಮಹಾಮಾರಿಯಿಂದ ರಕ್ಷಿಸಲು ಕೋಟ್ಯಂತರ ವೈದ್ಯರು, ಪೊಲೀಸರು ಹಾಗೂ ಇತರೆ ಸಿಬ್ಬಂದಿಗೆ ಶ್ರಮಿಸುತ್ತಿದ್ದು ಎಲ್ಲರಿಗೂ ಹೃದಯಪೂರ್ವಕ ಧನ್ಯವಾದ ಎಂದು ಗೃಹ ಸಚಿವ ಅಮಿತ್ ಶಾ ತಿಳಿಸಿದ್ದರು.
ಬಿಹಾರದಲ್ಲಿ ಬಹುಮತ ಗಳಿಸುವ ವಿಶ್ವಾಸ:
ಭಾರತದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ಹಾಗೂ ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರದ ಆಡಳಿತವು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟಕ್ಕೆ 2/3ರ ಬಹುಮತ ಸಿಗುವ ವಿಶ್ವಾಸವಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದರು.
ವಿರೋಧ ಪಕ್ಷಗಳಿಗೆ ಅಮಿತ್ ಶಾ ತಿರುಗೇಟು:
ಬಿಜೆಪಿ ನಡೆಸುತ್ತಿರುವ ಜನಸಂವಾದ ರ್ಯಾಲಿಯನ್ನು ವಿರೋಧಿಸಿದ ಕಾಂಗ್ರೆಸ್ ಹಾಗೂ ಆರ್ ಜೆಡಿ ಪಕ್ಷದ ನಾಯಕರಿಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ತಿರುಗೇಟು ನೀಡಿದರು. ಬಿಜೆಪಿಯ ಸಾಂಪ್ರದಾಯಿಕ ಸಮಾವೇಶವನ್ನು ಕೆಲವರು ವಿಭಿನ್ನವಾಗಿ ಸ್ವಾಗತಿಸುತ್ತಿದ್ದಾರೆ. ಕೆಲವು ಪಕ್ಷದವರು ಪಾತ್ರೆಗಳನ್ನು ಹಿಡಿದು ಬೀದಿಗಳಲ್ಲಿ ಬಾರಿಸಿದರು. ಕೊರೊನಾ ವೈರಸ್ ವಿರುದ್ಧ ಪ್ರಧಾನಮಂತ್ರಿ ನರೇಂದ್ರ ಮೋದಿ ಹೋರಾಟವನ್ನು ಕೊನೆಗೂ ಮೆಚ್ಚಿಕೊಂಡ ಅಂಥವರಿಗೆ ನಾನು ಧನ್ಯವಾದ ತಿಳಿಸುತ್ತೇನೆ ಎನ್ನುವ ಮೂಲಕ ಟಾಂಗ್ ಕೊಟ್ಟಿದ್ದಾರೆ.
ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ ಅಮಿತ್ ಶಾ ಉಲ್ಲೇಖ:
ಭಾರತದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜನಸ್ನೇಹಿತ ಕೆಲಸಗಳನ್ನು ಮಾಡುತ್ತಿದೆ. ಪೌರತ್ವ ತಿದ್ದುಪಡಿ ಕಾಯ್ದು, ಜಮ್ಮು-ಕಾಶ್ಮೀರದ 370ರ ವಿಶೇಷ ಸ್ಥಾನಮಾನ ರದ್ದು, ತ್ರಿವಳಿ ತಲಾಖ್ ರದ್ದು, ಬಡವರಿಗೆ ಶೌಚಾಲಯ, ಸಮರ್ಪಕ ವಿದ್ಯುತ್ ಪೂರೈಕೆ, ಪುಲ್ವಾಮಾ ಉಗ್ರರ ದಾಳಿಗೆ ತಕ್ಕ ಪ್ರತೀಕಾರದ ಬಗ್ಗೆ ಅಮಿತ್ ಶಾ ತಮ್ಮ ಮಾತುಗಳಲ್ಲಿ ಉಲ್ಲೇಖಿಸಿದರು.