ಪದವಿ ಇದೆ, ಪ್ರತಿಭೆ ಇದೆ; ಆದರೂ ಕೆಲಸ ಇಲ್ಲ! ಭಾರತದ ಯುವಕರ ಕಹಿ ವಾಸ್ತವ
ಬಾಹ್ಯಾಕಾಶ, ರಕ್ಷಣಾ ಮತ್ತು ಜಾಗತಿಕ ರಾಜಕೀಯ ವಿಶ್ಲೇಷಕರಾದ ಗಿರೀಶ್ ಲಿಂಗಣ್ಣ ಅವರ ವಿಶೇಷ ಬರಹ ಇಲ್ಲಿದೆ.
ಇಂದಿನ ಯುವಕರಿಗೆ ಭಾರತದಲ್ಲಿ ತಮ್ಮ ಮೊದಲ ಉದ್ಯೋಗ ಗಳಿಸುವುದು ನಿಜಕ್ಕೂ ಬಹುದೊಡ್ಡ ಕಷ್ಟವಾಗಿದೆ. ಇಂಡೀಡ್ ಸಂಸ್ಥೆಯ ಫ್ರೆಶರ್ ಹೈರಿಂಗ್ ವರದಿ ಪ್ರಕಾರ, ಬಹುತೇಕ 10 ಹೊಸಬರ ಪೈಕಿ ಏಳು ಜನರಿಗೆ ತಮ್ಮ ಮೊದಲ ಉದ್ಯೋಗವನ್ನು ಹೊಂದುವುದು ಅತ್ಯಂತ ಕಷ್ಟವಾಗಿದೆ. ಈ ಪರಿಸ್ಥಿತಿ ಕಳೆದ 3ರಿಂದ 5 ವರ್ಷಗಳ ಹಿಂದಿನ ಸ್ಥಿತಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಹಿಂದೆಲ್ಲ ಕಾಲೇಜು ವ್ಯಾಸಂಗ ಮುಗಿಸಿ, ಉದ್ಯೋಗಕ್ಕೆ ಸೇರುವುದು ಎನ್ನುವಷ್ಟು ಸರಳವಾಗಿದ್ದ ಪ್ರಕ್ರಿಯೆ ಇಂದು ಬಹಳ ದೀರ್ಘ ಮತ್ತು ತೊಂದರೆದಾಯಕವಾಗಿದೆ.
ಈ ತೊಂದರೆಗೆ ಕಾರಣವೇನು?
ಅನುಭವ! ಉದ್ಯೋಗ ಹುಡುಕುತ್ತಿರುವ ಶೇ.72 ಯುವ ಜನತೆಯ ಪ್ರಕಾರ, ತೀರಾ ಆರಂಭಿಕ ಹಂತದ ಬಹಳಷ್ಟು ಉದ್ಯೋಗಗಳಿಗೂ ಅನುಭವಿಗಳು ಬೇಕು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು 'ಎಕ್ಸ್‌ಪೀರಿಯನ್ಸ್ ಟ್ರ್ಯಾಪ್' ಎನ್ನುವ ಒಂದು ವಿಚಿತ್ರವಾದ ಪರಿಸ್ಥಿತಿಯನ್ನು ಹುಟ್ಟು ಹಾಕಿದೆ. ಅನುಭವ ಇಲ್ಲದ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಕಂಪನಿಗಳು ನಿರಾಕರಿಸುವಾಗ, ಹೊಸಬರಿಗೆ ಅನುಭವ ಲಭಿಸುವುದಾದರೂ ಹೇಗೆ? ಇದು ಸಾಲದೆಂಬಂತೆ, ಯುವಕರಿಗೆ ಇರುವ ಇಂಟರ್ನ್‌ಶಿಪ್ ಅವಕಾಶಗಳೂ ಈಗ ಸೀಮಿತವಾಗಿವೆ. ಶೇ.20 ಯುವಕರು ಮಾತ್ರವೇ ತಮಗೆ ವ್ಯಾಸಂಗದ ಅವಧಿಯಲ್ಲಿ ವೇತನ ಸಹಿತ ಇಂಟರ್ನ್‌ಶಿಪ್ ಅವಕಾಶ ಲಭಿಸಿತ್ತು ಎಂದರೆ, ಶೇ. 18 ಯುವಕರಿಗೆ ಇಂಟರ್ನ್‌ಶಿಪ್, ಪ್ರಾಜೆಕ್ಟ್‌ಗಳು, ಉದ್ಯೋಗ ನೇಮಕಾತಿ, ಅಥವಾ ಫ್ರೀಲಾನ್ಸ್ ಅವಕಾಶಗಳು ಯಾವುದೂ ಲಭಿಸಿರಲಿಲ್ಲ. ಇಂತಹ ಅವಕಾಶಗಳ ಹೊರತಾಗಿ, ಹೊಸಬರಿಗೆ ಉದ್ಯೋಗ ಮಾರುಕಟ್ಟೆಗೆ ಇಳಿಯುವ ಮುನ್ನ ಕೌಶಲಗಳನ್ನು ಅಭಿವೃದ್ಧಿ ಪಡಿಸುವುದು ಕಷ್ಟಕರವಾಗಿದೆ.

ಇನ್ನು ತಮ್ಮನ್ನು ಗುರುತಿಸುವಂತೆ ಮಾಡುವುದಂತೂ ಇನ್ನೊಂದು ಬಹುದೊಡ್ಡ ಸವಾಲು. ವರದಿಯ ಪ್ರಕಾರ, ನೈಜವಾದ ಕಷ್ಟಕರ ಕೆಲಸವೆಂದರೆ ಕೆಲಸಕ್ಕೆ ಅರ್ಜಿ ಹಾಕುವುದಲ್ಲ, ಬದಲಿಗೆ ಉದ್ಯೋಗದಾತರ ಗಮನ ಸೆಳೆಯುವುದು. ಬಹುತೇಕ ಶೇ.61ದಷ್ಟು ಈಗಷ್ಟೇ ವ್ಯಾಸಂಗ ಮುಗಿಸಿರುವ ಯುವ ಜನರು ತಮ್ಮ ಅರ್ಜಿ ಸಲ್ಲಿಸಿದ ಬಳಿಕ ಬಹುತೇಕ ಯಾವುದೇ ಪ್ರತಿಕ್ರಿಯೆ ಲಭಿಸುವುದೇ ಇಲ್ಲ ಎಂದಿದ್ದಾರೆ. ಪದೇ ಪದೇ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿ, ಅದಕ್ಕೆ ಯಾವುದೇ ಪ್ರತ್ಯುತ್ತರ ಬರದಿರುವ ಪರಿಸ್ಥಿತಿಯನ್ನು ಒಮ್ಮೆ ಊಹಿಸಿಕೊಳ್ಳಿ. ಅಂದಾಜು ಶೇ.49 ಯುವಕರು ಉದ್ಯೋಗಕ್ಕೆ ಶಾರ್ಟ್‌ಲಿಸ್ಟ್ ಆಗುವುದೇ ಬಹುದೊಡ್ಡ ಅಡ್ಡಿ ಎಂದಿದ್ದಾರೆ. ಕಂಪನಿಗಳ ಮೌನ ಯುವ ಜನರಲ್ಲಿ ಗೊಂದಲ ಮತ್ತು ನಿರುತ್ಸಾಹ ಮೂಡಿಸುತ್ತದೆ.
ಸಹಜವಾಗಿಯೇ ಇವೆಲ್ಲ ಬೆಳವಣಿಗೆಗಳು ಅವರಿಗೆ ಭಾವನಾತ್ಮಕವಾಗಿಯೂ ತೊಂದರೆ ಉಂಟುಮಾಡುತ್ತದೆ. ಅಂದಾಜು ಶೇ. 64 ಯುವಕರು ಪದೇ ಪದೇ ಇಂತಹ ಉದ್ಯೋಗ ನಿರಾಕರಣೆಗಳಿಂದ ತಮ್ಮ ಆತ್ಮವಿಶ್ವಾಸ ಮತ್ತು ಉತ್ಸಾಹ ಕುಂಠಿತಗೊಂಡಿದೆ ಎಂದಿದ್ದಾರೆ. ಕೇವಲ ಶೇ. 20 ಜನರು ಮಾತ್ರ ತಾವು ಔದ್ಯೋಗಿಕವಾಗಿ ಸರಿಯಾದ ಪಥದಲ್ಲಿ ಸಾಗುತ್ತಿದ್ದೇವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಣದ ಒತ್ತಡ ಮತ್ತು ಮೂಲಭೂತ ಅವಶ್ಯಕತೆ ಪೂರೈಸಿಕೊಳ್ಳಲು ಕೆಯ ಅನಿವಾರ್ಯತೆಯಿಂದಾಗಿ ಈಗಷ್ಟೇ ವ್ಯಾಸಂಗ ಮುಗಿಸಿ ಹೊರಬರುವ ಬಹಳಷ್ಟು ಯುವ ಜನರು ಕೇವಲ ಜೀವನೋಪಾಯಕ್ಕಾಗಿ ಕೆಲಸಗಳನ್ನು ಒಪ್ಪಿಕೊಳ್ಳುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಅವರು ತಮ್ಮ ಕನಸಿನ ಉದ್ಯೋಗಗಳನ್ನು ಆಯ್ಕೆ ಮಾಡುವುದು ಮತ್ತು ದೀರ್ಘಾವಧಿಯ ಗುರಿಗಳನ್ನು ಸಾಧಿಸುವುದು ಇಂದು ಕಷ್ಟವಾಗಿದೆ. ಇಂದು ಅವರ ಕನಸುಗಳ ಹಿಂದೆ ಹೋಗುವುದು ಕಷ್ಟವಾಗಿದ್ದು, ಉದ್ಯೋಗ ಪಡೆದುಕೊಳ್ಳುವುದೇ ಮೊದಲ ಆದ್ಯತೆಯಾಗಿದೆ.
ಇತ್ತೀಚಿನ ಒಂದು ವರದಿಯ ಪ್ರಕಾರ, ಇಂಡೀಡ್ ಸಂಸ್ಥೆಯ ಪ್ರತಿಭಾ ಕಾರ್ಯತಂತ್ರ ಸಲಹೆಗಾರರಾದ ರೋಹನ್ ಸಿಲ್ವೆಸ್ಟರ್ ಅವರು ಪ್ರಸ್ತುತ ಪರಿಸ್ಥಿತಿಯನ್ನು ಬಹಳಷ್ಟು ಸ್ಪಷ್ಟವಾಗಿ ವಿವರಿಸಿದ್ದಾರೆ. ಬಹಳಷ್ಟು ಯುವ ಜನರ ಪಾಲಿಗೆ ಕಾಲೇಜಿನಿಂದ ಹೊರ ನಡೆದು, ಉದ್ಯೋಗಕ್ಕೆ ಸೇರಿಕೊಳ್ಳುವುದು ಎನ್ನುವಷ್ಟು ಸರಳವಾಗಿ ಇಂದು ಮೊದಲ ಉದ್ಯೋಗ ಸಿಗುತ್ತಿಲ್ಲ. ಅದರ ಬದಲಿಗೆ, ಅವರು ದೀರ್ಘಕಾಲ ಅನಿಶ್ಚಿತ ಕಾಯುವಿಕೆಯನ್ನು ಎದುರಿಸಬೇಕಿದ್ದು, ಸಾಕಷ್ಟು ಒತ್ತಡಕ್ಕೆ ಒಳಗಾಗುತ್ತಾರೆ. ಇದರ ಪರಿಣಾಮವಾಗಿ, ಹೊಸಬರು ತಾವು ಎಂದೂ ಬಯಸಿರದಿದ್ದ ಉದ್ಯೋಗಗಳನ್ನು ಒಪ್ಪಿಕೊಳ್ಳಬೇಕಾಗುತ್ತದೆ.
ಇಷ್ಟಾದರೂ ಒಂದಷ್ಟು ಆಶಾಭಾವನೆಯಿದೆ. ಇದಕ್ಕೆ ಪರಿಹಾರ ಉದ್ಯೋಗದಾತರ ಬಳಿ ಇದೆ ಎಂದು ಸಿಲ್ವೆಸ್ಟರ್ ಅಭಿಪ್ರಾಯ ಪಡುತ್ತಾರೆ. ಕಂಪನಿಗಳು ಹೊಸಬರಿಗೆ ಸ್ಪಷ್ಟ ಮತ್ತು ಸರಳವಾದ ಮಾರ್ಗದಲ್ಲಿ ಉದ್ಯೋಗ ಸೇರ್ಪಡೆಗೆ ಅವಕಾಶ ನೀಡಬೇಕು. ಕೇವಲ ಅನುಭವಕ್ಕೆ ಆದ್ಯತೆ ನೀಡುವ ಬದಲು, ಅವರ ಪ್ರತಿಭೆ ಮತ್ತು ಹೊಸದನ್ನು ಕಲಿಯಲು ಅವರಿಗಿರುವ ಆಸಕ್ತಿಯನ್ನು ಗಮನಿಸಬೇಕು. ಇಂತಹ ಕ್ರಮಗಳನ್ನು ಕೈಗೊಳ್ಳುವ ಕಂಪನಿಗಳು ಭವಿಷ್ಯದಲ್ಲಿ ಒಂದು ಪ್ರಬಲ ಉದ್ಯೋಗಿಗಳ ಪಡೆಯನ್ನು ಹೊಂದಲು ಸಾಧ್ಯವಾಗುತ್ತದೆ.
ಸರಳವಾಗಿ ಹೇಳುವುದಾದರೆ, ಭಾರತದ ಯುವ ಪ್ರತಿಭೆಗಳು ಸಿದ್ಧರಾಗಿದ್ದು, ಕೆಲಸ ಮಾಡುವ ಇಚ್ಛಾಶಕ್ತಿ ಹೊಂದಿದ್ದಾರೆ. ಆದರೆ, ಅವರಿಗೆ ಒಂದು ನ್ಯಾಯಯುತವಾದ ಅವಕಾಶ, ಅವರ ಕುರಿತು ಸ್ವಲ್ಪ ಸಹನೆ, ಮತ್ತು ಅವರ ಸಾಮರ್ಥ್ಯ ಸಾಬೀತುಪಡಿಸಲು ಒಂದು ಮಾರ್ಗ ಬೇಕಾಗಿದೆ.
(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: [email protected])













Click it and Unblock the Notifications