ಫ್ರೆಂಚರ ನೆಮ್ಮದಿಗೆ ಬೆಂಕಿ ಹಚ್ಚಿದ ವೀಡಿಯೋ, ಪೊಲೀಸರು ಸಸ್ಪೆಂಡ್
ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಜನಾಂಗೀಯ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಯುರೋಪ್ ರಾಷ್ಟ್ರಗಳಲ್ಲಿ ಜನಾಂಗೀಯ ಹಿಂಸಾಚಾರದ ಜ್ವಾಲೆ ಭುಗಿಲೆದ್ದಿದೆ. ಇದೇ ರೀತಿ ಫ್ರಾನ್ಸ್‌ನಲ್ಲಿ ಆಫ್ರಿಕನ್-ಫ್ರೆಂಚ್ ವ್ಯಕ್ತಿಯನ್ನ ಪೊಲೀಸರು ಹಿಗ್ಗಾಮುಗ್ಗಾ ಥಳಿಸಿರುವ ವೀಡಿಯೋ ಫ್ರೆಂಚರ ನೆಮ್ಮದಿಗೆ ಬೆಂಕಿಯಿಟ್ಟಿದೆ. ಘಟನೆ ನಂತರ ಫ್ರಾನ್ಸ್‌ನಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಯುರೋಪ್ ಖಂಡದ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಫ್ರಾನ್ಸ್ ಅತಿಹೆಚ್ಚು ಉಗ್ರ ದಾಳಿಗೆ ಗುರಿಯಾಗಿರುವ ದೇಶ.
ಈ ಸಂದರ್ಭದಲ್ಲೇ ಸ್ಥಳೀಯ ಪೊಲೀಸರ ವಿರುದ್ಧ ಜನಾಂಗೀಯ ದೌರ್ಜನ್ಯದ ಆರೋಪ ಕೇಳಿಬಂದಿದೆ. ಕಾರಣವೇ ಇಲ್ಲದೆ ಆಫ್ರಿಕನ್-ಫ್ರೆಂಚ್ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಮಾಡಿರುವ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನ ಪೊಲೀಸರು, ಹಲ್ಲೆ ನಡೆಸುವುದನ್ನು ವೀಡಿಯೋ ಕೂಡ ಮಾಡಿದ್ದರು. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ಫ್ರಾನ್ಸ್ ಸರ್ಕಾರ, ಘಟನೆಯಲ್ಲಿ ಭಾಗಿಯಾಗಿದ್ದ ಪೊಲೀಸರನ್ನು ಅಮಾನತು ಮಾಡಿದೆ. ಜೊತೆಗೆ ಇಂತಹ ಘಟನೆಗಳು ಮರುಕಳಿಸಿದರೆ ಯಾರೇ ಆದರೂ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಗೊಳ್ಳುವುದಾಗಿ ವಾರ್ನಿಂಗ್ ಕೂಡ ರವಾನಿಸಿದೆ.
ಅಮೆರಿಕನ್ನರ ಚಾಳಿ ಜಗತ್ತಿಗೆಲ್ಲಾ..!
ಇಷ್ಟುದಿನ ಅಮೆರಿಕದಲ್ಲಿ ಜನಾಂಗೀಯ ಸಂಘರ್ಷಗಳು ಮಾಮೂಲಾಗಿದ್ದವು. ಆದರೆ ಈ ಚಾಳಿ ಇದೀಗ ಯುರೋಪ್ ರಾಷ್ಟ್ರಗಳಿಗೂ ಮೆತ್ತಿಕೊಂಡಿದೆ. ಯುರೋಪ್‌ನ ಹಲವು ರಾಷ್ಟ್ರಗಳಲ್ಲಿ ಜನಾಂಗೀಯ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚುತ್ತಾ ಸಾಗಿದೆ. ಅದರಲ್ಲೂ ಫ್ರೆಂಚರ ನಾಡಲ್ಲಿ ಜನಾಂಗೀಯ ಸಂಘರ್ಷಕ್ಕೆ ಮಿತಿಯೇ ಇಲ್ಲದಂತಾಗಿದೆ. ಅದರಲ್ಲೂ ಕಾನೂನು ಕಾಯಬೇಕಿರುವ ಫ್ರಾನ್ಸ್‌ನ ಪೊಲೀಸರ ವಿರುದ್ಧವೇ ಜನಾಂಗೀಯ ದೌರ್ಜನ್ಯದಂತಹ ಗಂಭೀರ ಆರೋಪಗಳು ಹೆಚ್ಚಾಗುತ್ತಿವೆ.
ಇದನ್ನೆಲ್ಲಾ ಗಂಭೀರವಾಗಿ ಪರಿಗಣಿಸಿರುವ ಫ್ರಾನ್ಸ್ ಸರ್ಕಾರ ಖಾಕಿ ಪಡೆಯ ಕ್ರೌರ್ಯಕ್ಕೆ ಬ್ರೇಕ್ ಹಾಕಲು ಮುಂದಾಗಿದೆ. ಹಲ್ಲೆ ನಡೆಸುವಾಗ ವೀಡಿಯೋ ಮಾಡುವುದು ಹಾಗೂ ಅದನ್ನು ಅಪ್ಲೋಡ್ ಮಾಡುವುದನ್ನ ಫ್ರಾನ್ಸ್ ನಿಷೇಧಿಸಿದೆ. ಹೀಗೆ ಮಾಡಿದರೆ ಅಂತಹ ಪೊಲೀಸ್ ಅಧಿಕಾರಿಗಳಿಗೆ ಕೆಲಸದಿಂದ ಗೇಟ್ ಪಾಸ್ ಸಿಗುವುದು ಗ್ಯಾರಂಟಿ.
ಅಮೆರಿಕ ಹೊತ್ತಿ ಉರಿದಿತ್ತು
ಇದೇ ರೀತಿ ಜನಾಂಗೀಯ ಜ್ವಾಲೆಯಲ್ಲಿ ಅಮೆರಿಕ ಧಗಧಗನೆ ಹೊತ್ತಿ ಉರಿದಿದ್ದನ್ನ ಕಂಡಿದ್ದೇವೆ. ಕೆಲವು ತಿಂಗಳ ಹಿಂದೆ ಅಮೆರಿಕದಲ್ಲಿ ಮೇಲಿಂದ ಮೇಲೆ ಆಫ್ರಿಕನ್-ಅಮೆರಿಕನ್ನರ ಮೇಲೆ ದೌರ್ಜನ್ಯ ನಡೆದಿತ್ತು. ಮೊದಲಿಗೆ ಜಾರ್ಜ್ ಫ್ಲಾಯ್ಡ್ ಎಂಬಾತನ ಹತ್ಯೆ ಅಮೆರಿಕದಾದ್ಯಂತ ಬಿರುಗಾಳಿಯನ್ನೇ ಎಬ್ಬಿಸಿತ್ತು. ಬಳಿಕ ಜೇಕಬ್ ಬ್ಲೇಕ್ ಮೇಲೆ ಪೊಲೀಸರ ಗುಂಡಿನ ದಾಳಿ ಕೂಡ ಬೆಂಕಿಗೆ ತುಪ್ಪ ಸುರಿದಿತ್ತು. ಮಕ್ಕಳ ಜೊತೆ ಕಾರ್‌ನಲ್ಲಿ ಹೋಗುವಾಗ ಇಬ್ಬರು ಮಹಿಳೆಯರ ಜಗಳ ಬಿಡಿಸಿದ್ದ ಜೇಕಬ್ ಬ್ಲೇಕ್. ಆದರೆ ಅಲ್ಲಿಗೆ ಬಂದ ವಿಸ್ಕಾನ್ಸಿನ್ ಪೊಲೀಸರು, ಅಲ್ಲಿ ಏನಾಗುತ್ತಿದೆ ಎಂಬುದನ್ನು ತಿಳಿಯದೆ ಅಮಾನುಷವಾಗಿ ಜೇಕಬ್ ಬ್ಲೇಕ್ ಮೇಲೆ ಹಲ್ಲೆ ಮಾಡಿದ್ದರು. ಅಲ್ಲದೆ ಬ್ಲೇಕ್ ಮೇಲೆ ಕೂದಲೆಳೆ ಅಂತರದಲ್ಲಿ, ಆತನ ಮಕ್ಕಳ ಎದುರೇ ಗುಂಡು ಹಾರಿಸಿದ್ದರು. ಇದೀಗ ಅಮೆರಿಕದ ಸಾಲಿಗೆ ಯುರೋಪ್ ರಾಷ್ಟ್ರಗಳು ನಿಲ್ಲುತ್ತಿರುವುದು ದುರಂತವೇ ಸರಿ.