ಪ್ರಧಾನಿ ಮೋದಿ ಶಕ್ತಿಶಾಲಿಯಾಗಲು ಕಾಂಗ್ರೆಸ್ ಕಾರಣ: ಮಮತಾ ಬ್ಯಾನರ್ಜಿ
ಪಣಜಿ, ಅಕ್ಟೋಬರ್ 30: ಭಾರತದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಶಕ್ತಿಶಾಲಿ ಆಗುತ್ತಿರುವುದಕ್ಕೆ ಕಾಂಗ್ರೆಸ್ ಮಾಡುತ್ತಿರುವ ತಪ್ಪುಗಳೇ ಕಾರಣ ಎಂದು ತೃಣಮೂಲ ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಗೋವಾ ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ಗೋವಾ ಭೇಟಿ ನೀಡಿರುವ ಅವರು ಪಣಜಿಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. "ದೇಶದ ಹಳೆ ಪಕ್ಷವಾಗಿರುವ ಕಾಂಗ್ರೆಸ್ ರಾಜಕೀಯವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಕಾಂಗ್ರೆಸ್ ಪಕ್ಷದ ತಪ್ಪು ನಿರ್ಧಾರಗಳಿಂದಾಗಿ ನರೇಂದ್ರ ಮೋದಿ ಶಕ್ತಿಶಾಲಿ ಆಗುತ್ತಿದ್ದಾರೆ," ಎಂದು ಆರೋಪಿಸಿದ್ದಾರೆ.
'ಬಿಜೆಪಿ ವಿರುದ್ಧ ಹೋರಾಡದಿದ್ದರೆ, ದೇಶವನ್ನೇ ಮಾರುತ್ತಾರೆ': ಗೋವಾದಲ್ಲಿ ಮಮತಾ
ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿದ ಮಮತಾ ಬ್ಯಾನರ್ಜಿ, ಬಿಜೆಪಿ ಸರ್ಕಾರದ ದಾದಾಗಿರಿ ದೆಹಲಿ ಮಟ್ಟಕ್ಕಷ್ಟೇ ಸೀಮಿತವಾಗಿರಲಿ ಎಂದರು. ಕಾಂಗ್ರೆಸ್ ಪಕ್ಷವು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಆಗುತ್ತಿಲ್ಲ, ಇದರ ಪರಿಣಾಮ ದೇಶದ ರಾಜಕಾರಣದ ಮೇಲೆ ಬೀಳುತ್ತಿದೆ ಎಂದು ದೂರಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಮೋದಿ ಶಕ್ತಿಶಾಲಿ:
"ಅವರು ರಾಜಕಾರಣವನ್ನು ಗಂಭೀರವಾಗಿ ತೆಗೆದುಕೊಳ್ಳದ ಹಿನ್ನೆಲೆ ಈಗಲೇ ಎಲ್ಲವೂ ಸರಿ ಹೋಗುತ್ತದೆ ಎಂದು ನಾನು ಹೇಳುವುದಿಲ್ಲ. ಕಾಂಗ್ರೆಸ್ ಪಕ್ಷದಿಂದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮತ್ತಷ್ಟು ಶಕ್ತಿಶಾಲಿಯಾಗಿ ಬೆಳೆಯುತ್ತಿದ್ದಾರೆ. ಯಾರೋ ಒಬ್ಬರು ಸೂಕ್ತ ನಿರ್ಧಾರ ತೆಗೆದುಕೊಳ್ಳದಿದ್ದರೆ, ಅದಕ್ಕಾಗಿ ಇಡೀ ದೇಶ ಏಕೆ ಸಮಸ್ಯೆಗಳನ್ನು ಎದುರಿಸಬೇಕು," ಎಂದು ಮಮತಾ ಬ್ಯಾನರ್ಜಿ ಪ್ರಶ್ನೆ ಮಾಡಿದ್ದಾರೆ.
ಅವಕಾಶ ಕಳೆದುಕೊಂಡ ಕಾಂಗ್ರೆಸ್:
ಈ ಹಿಂದೆ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ವಿರುದ್ಧ ಹೋರಾಡುವುದಕ್ಕೆ ಉತ್ತಮ ಅವಕಾಶಗಳು ಸಿಕ್ಕಿದ್ದವು. ಬಿಜೆಪಿ ವಿರುದ್ಧ ಹೋರಾಡುವುದನ್ನು ಬಿಟ್ಟು, ನನ್ನ ಎದುರು ಸ್ಪರ್ಧಿಸುವುದಕ್ಕಾಗಿ ಪಶ್ಚಿಮ ಬಂಗಾಳಕ್ಕೆ ಬಂದರು. ಬಂಗಾಳದಲ್ಲಿ ಅವರು ಯಾವಾಗ ನನ್ನ ವಿರುದ್ಧ ಸ್ಪರ್ಧಿಸಿದರು, ಯಾವಾಗ ನನ್ನ ಪಕ್ಷದ ವಿರುದ್ಧ ಸ್ಪರ್ಧಿಸಿದರು ಎಂಬುದನ್ನು ಆಲೋಚಿಸಬೇಡವೇ," ಎಂದು ಪ್ರಶ್ನೆ ಮಾಡಿದ್ದಾರೆ.
ಗೋವಾದ 40 ಕ್ಷೇತ್ರಗಳಲ್ಲಿ ಟಿಎಂಸಿ ಸ್ಪರ್ಧೆ:
ವಿಧಾನಸಭೆ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಸೀಟು ಹಂಚಿಕೆ ಮಾಡುವುದರಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷವು ಹೆಚ್ಚು ನಂಬಿಕೆಯನ್ನು ಹೊಂದಿದೆ. ಗೋವಾದ 40 ವಿಧಾನಸಭೆ ಕ್ಷೇತ್ರಗಳಲ್ಲೂ ಟಿಎಂಸಿ ಕಣಕ್ಕಿಳಿಯುವ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧರಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಗೋವಾಗೆ ಬಂದಿರುವುದರ ಹಿಂದೆ ಅಧಿಕಾರ ದಾಹವಿಲ್ಲ:
"ಗೋವಾದಲ್ಲಿ ಅಧಿಕಾರ ಹಿಡಿಯುವ ಹಾಗೂ ಮುಖ್ಯಮಂತ್ರಿ ಆಗುವ ಉದ್ದೇಶ ನನಗೆ ಇಲ್ಲ. ಆದರೆ ಕೇಂದ್ರ ಸರ್ಕಾರವು ಗೋವಾದಲ್ಲಿ ದಾದಾಗಿರಿ ನಡೆಸುವುದಕ್ಕೆ ಟಿಎಂಸಿ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ. ಕೊಂಕಣಿ ಭಾಷೆಯಲ್ಲಿ ಮೊದಲು ಭಾಷಣ ಆರಂಭಿಸಿದ ಮಮತಾ ಬ್ಯಾನರ್ಜಿ, "ಡೆಲ್ಲಿಚಿ ದಾದಾಗಿರಿ ಅನಿಕ್ ನಾಕಾ,( ಇನ್ನು ಮುಂದೆ ದೆಹಲಿಯಿಂದ ದಬ್ಬಾಳಿಕೆ ಇರುವುದಿಲ್ಲ) ನಾನು ಹೊರಗಿನವರು ಅಲ್ಲ, ಗೋವಾ ಸಿಎಂ ಆಗುವುದು ನನಗೆ ಬೇಕಾಗಿಲ್ಲ, ಎಂದು ಹೇಳಿದರು.
"ನಾನು ಭಾರತೀಯಳು, ನಾನು ಎಲ್ಲಿಗೆ ಬೇಕಾದರೂ ಹೋಗಬಹುದು. ಬಂಗಾಳ ನನ್ನ ತಾಯಿನಾಡು ಎಂದಾದರೆ ಗೋವಾ ಕೂಡಾ ನನ್ನ ತಾಯಿ ನಾಡು ಆಗುತ್ತದೆ. ನಾನು ಗೋವಾಗೆ ಬರುತ್ತೇನೆ, ಈ ವೇಳೆ ಅವರು ನಮ್ಮ ಪೋಸ್ಟರ್ ಅನ್ನು ಹಾಳು ಮಾಡುತ್ತಾರೆ. ಬಿಜೆಪಿಯವರು ಮಾನಸಿಕ ಸ್ಥಿತಿ ಸರಿಯಾಗಿಲ್ಲ. ನನಗೆ ಅವರು ಕಪ್ಪು ಬಾವುಟ ತೋರಿಸಿದಾಗ ನಾನು ಅವರಿಗೆ ನಮಸ್ಕರಿಸಿದೆ," ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ದೀದಿ ಜೊತೆಗೆ ಲಿಯಾಂಡರ್ ಪೇಸ್:
ಪಣಜಿಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಸಮ್ಮುಖದಲ್ಲಿ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಶುಕ್ರವಾರ ಅಧಿಕೃತವಾಗಿ ಟಿಎಂಸಿಗೆ ಸೇರ್ಪಡೆಯಾದರು.