ಗೋವಾದಲ್ಲಿ ಟಿಎಂಸಿ ಜೊತೆ ಎಎಪಿ ಮೈತ್ರಿ ಮಾಡಿಕೊಳ್ಳುತ್ತಿಲ್ಲವೇಕೆ?
ಪಣಜಿ, ಡಿಸೆಂಬರ್ 12: ಮುಂಬರುವ ಗೋವಾ ವಿಧಾನಸಭಾ ಚುನಾವಣೆಗಾಗಿ ವಿವಿಧ ಪಕ್ಷಗಳು ಮೈತ್ರಿ ಸಾಧ್ಯತೆ ಬಗ್ಗೆ ತಲೆಕೆಡಿಸಿಕೊಂಡಿರುವ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷವು ಮಹತ್ವದ ಘೋಷಣೆಯನ್ನು ಭಾನುವಾರದಂದು ಹೊರಡಿಸಿದೆ. ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಹೇಳಿದೆ. ಮುಂದಿನ ವರ್ಷದ ಆರಂಭದಲ್ಲಿ ಕರಾವಳಿ ರಾಜ್ಯ ಗೋವಾದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.
''ಉತ್ತಮ ಅಭ್ಯರ್ಥಿಗಳೊಂದಿಗೆ ಗೋವಾ ಚುನಾವಣೆ ಎದುರಿಸಲಾಗುವುದು, ಹೊಸ ಪರ್ಯಾಯ ಸಾಧ್ಯತೆಯನ್ನು ಕಾಣಲಾಗುತ್ತಿದೆ ಮತ್ತು ಪ್ರಾಮಾಣಿಕ ಮತ್ತು ಭ್ರಷ್ಟಾಚಾರ ಮುಕ್ತ ಸರ್ಕಾರವನ್ನು ರಚಿಸಲು ಎಎಪಿ ನಿರ್ಧರಿಸಿದೆ,'' ಎಂದು ಪಕ್ಷದ ಗೋವಾ ಎಎಪಿ ಉಸ್ತುವಾರಿ ಅತಿಶಿ ಹೇಳಿದರು.
''ಟಿಎಂಸಿ ಜತೆ ಮೈತ್ರಿ ಇಲ್ಲ ಎಂದು ಸಂಪೂರ್ಣ ಜವಾಬ್ದಾರಿಯಿಂದ ಹೇಳುತ್ತೇನೆ. ಹಾಗಾಗಿ ಅವರೊಂದಿಗೆ ಮಾತುಕತೆ ನಡೆಸುವ ಪ್ರಶ್ನೆಯೇ ಇಲ್ಲ. ಗೋವಾದಲ್ಲಿ ಉತ್ತಮ ಅಭ್ಯರ್ಥಿಗಳೊಂದಿಗೆ ಹೊಸ ಪರ್ಯಾಯವನ್ನು ನೀಡಲು ಮತ್ತು ಪ್ರಾಮಾಣಿಕ ಭ್ರಷ್ಟಾಚಾರ ಮುಕ್ತ ಸರ್ಕಾರವನ್ನು ರಚಿಸಲು ನಾವು ನಿರ್ಧರಿಸಿದ್ದೇವೆ,'' ಎಂದು ಅತಿಶಿ ಟ್ವೀಟ್ ಮಾಡಿದ್ದಾರೆ.

ಎಎಪಿಯು ಗೋವಾದಲ್ಲಿ ಟಿಎಂಸಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಬಯಸುತ್ತಿದೆ ಮತ್ತು ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷವು ಈ ಪ್ರಸ್ತಾಪವನ್ನು ಇನ್ನೂ ನಿರ್ಧರಿಸಿಲ್ಲ ಎಂದು ಮಾಧ್ಯಮ ವರದಿಯನ್ನು ಉಲ್ಲೇಖಿಸಿದ ಪಶ್ಚಿಮ ಬಂಗಾಳ ಮೂಲದ ಲೇಖಕರ ಟ್ವೀಟ್‌ಗೆ ಅತಿಶಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಎರಡೂ ಕಡೆಯವರು ಈ ವಿಷಯದ ಬಗ್ಗೆ ಒಂದು ಸುತ್ತಿನ ಚರ್ಚೆ ನಡೆಸಿದ್ದಾರೆ.
ಗೋವಾ ವಿಧಾನಸಭೆ ಚುನಾವಣೆಯಲ್ಲಿ ಸ್ವಂತ ಬಲದಿಂದ ಸ್ಪರ್ಧಿಸಲು ಎಎಪಿ ನಿರ್ಧರಿಸಿದೆ. ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷವು 2017 ರ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿತ್ತು, ಆದರೆ ಒಂದೇ ಒಂದು ಸ್ಥಾನವನ್ನು ಗೆಲ್ಲಲು ಸಾಧ್ಯವಾಗಿರಲಿಲ್ಲ.
ಇನ್ನೊಂದೆಡೆ, ಗೋವಾ ವಿಧಾನಸಭೆಯ ಎಲ್ಲಾ 40 ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಇತ್ತೀಚೆಗೆ ಘೋಷಿಸಿರುವ ಟಿಎಂಸಿ, ಕರಾವಳಿ ರಾಜ್ಯದ ಅತ್ಯಂತ ಹಳೆಯ ಪ್ರಾದೇಶಿಕ ಸಂಘಟನೆಯಾದ ಮಹಾರಾಷ್ಟ್ರವಾದಿ ಗೋಮಾಂತಕ್ ಪಾರ್ಟಿಯೊಂದಿಗೆ ಮೈತ್ರಿ ಸಾಧಿಸಿದೆ.
2017 ರ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 17 ಸ್ಥಾನಗಳನ್ನು ಗೆಲ್ಲುವ ಮೂಲಕ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು, ಆದರೆ ಸರ್ಕಾರ ರಚಿಸಲು ವಿಫಲವಾಯಿತು. ನಂತರ, ರಾಜ್ಯದಲ್ಲಿ ಸರ್ಕಾರ ರಚಿಸಲು ಬಿಜೆಪಿ ಕೆಲವು ಪ್ರಾದೇಶಿಕ ಸಂಘಟನೆಗಳು ಮತ್ತು ಸ್ವತಂತ್ರರೊಂದಿಗೆ ಮೈತ್ರಿ ಮಾಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಎಎಪಿ ಭರವಸೆ: "ಮಹಿಳೆಯರಿಗೆ ಗೋವಾದಲ್ಲಿ ಗೃಹ ಆಧಾರ್ ಪ್ರಯೋಜನವನ್ನು ತಿಂಗಳಿಗೆ 1500 ರೂ.ನಿಂದ 2500 ರೂ.ಗೆ ಹೆಚ್ಚಿಸಲಾಗುವುದು. 18 ವರ್ಷ ಮೇಲ್ಪಟ್ಟ ಎಲ್ಲಾ ಮಹಿಳೆಯರಿಗೆ ತಿಂಗಳಿಗೆ 1000 ರೂ. ನೀಡಲಾಗುವುದು," ಎಂದು ಇತ್ತೀಚೆಗೆ ಗೋವಾಕ್ಕೆ ಭೇಟಿ ನೀಡಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದರು.
"ನಾವು ರಾಜ್ಯ ಎಲ್ಲಾ ಮಹಿಳೆಯರಿಗಾಗಿ ಈ ಯೋಜನೆಗಳನ್ನು ನೀಡುತ್ತೇವೆ. ಯಾರಿಗೆ ಈ ಹಣ ಬೇಕಾಗಿಲ್ಲ ಎಂದು ಅನಿಸುತ್ತದೆಯೋ ಅವರು ಈ ಯೋಜನೆಯಿಂದ ಹೊರಗೆ ಉಳಿಯಬಹುದು. ಗೋವಾದಲ್ಲಿ ಇಂತಹ ಯೋಜನೆಗಳಿಗೆ ಹಣ ನೀಡಲು ಹಣಕಾಸಿನ ಕೊರತೆ ಇಲ್ಲ," ಎಂದು ಅರವಿಂದ್ ಕೇಜ್ರಿವಾಲ್ ತಿಳಿಸಿದ್ದರು.
ಗೋವಾದಲ್ಲಿ ಮುಂದಿನ ವರ್ಷ ಅಂದರೆ 2022 ರ ಫೆಬ್ರವರಿಯಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಗೋವಾದಲ್ಲಿ ಒಟ್ಟು 40 ವಿಧಾನಸಭೆ ಸೀಟುಗಳು ಇದ್ದು, ಇದಕ್ಕಾಗಿ ಈಗ ಎಂಟು ಪಕ್ಷಗಳು ಸಮರ ಆರಂಭ ಮಾಡಿಕೊಂಡಿದೆ. ಈ 40 ವಿಧಾನಸಭೆ ಕ್ಷೇತ್ರದಲ್ಲಿಯೂ ನಮ್ಮ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆಗೆ ಇಳಿಯಲಿದ್ದಾರೆ ಎಂದು ಎಎಪಿ ಈಗಾಗಲೇ ಹೇಳಿಕೊಂಡಿದೆ. ಈ ನಡುವೆ ಬಿಜೆಪಿ, ಕಾಂಗ್ರೆಸ್, ಮಮತಾ ಬ್ಯಾನರ್ಜಿಯ ಟಿಎಂಸಿ, ಶಿವಸೇನೆ, ಸಿಪಿಐಎಂ, ಗೋವಾ ಫಾರ್ವಡ್ ಪಾರ್ಟಿ, ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿ ಇಲ್ಲಿ ತನ್ನ ವಿಸ್ತಾರವನ್ನು ಹೆಚ್ಚಿಸುವ ಪ್ರಯತ್ನದಲ್ಲಿ ತೊಡಗಿದೆ.












Click it and Unblock the Notifications