Breaking; ಗೋವಾ ಪಿಡಬ್ಲ್ಯುಡಿ ಸಚಿವ ರಾಜೀನಾಮೆ, ಪಕ್ಷೇತರನಾಗಿ ಕಣಕ್ಕೆ
ಪಣಜಿ, ಜನವರಿ 21; ಗೋವಾ ವಿಧಾನಸಭೆ ಚುನಾವಣೆಯ ಅಧಿಸೂಚನೆ ಶುಕ್ರವಾರ ಪ್ರಕಟವಾಗಿದೆ. ಫೆಬ್ರವರಿ 14ರಂದು ಚುನಾವಣೆ ನಡೆಯಲಿದೆ. ಲೋಕೋಪಯೋಗಿ ಸಚಿವ ದೀಪಕ್ ಪೌಸ್ಕರ್ ಶಾಸಕ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಸ್ಯಾನ್ವೋರ್ಡೆಮ್ ಕ್ಷೇತ್ರದ ಶಾಸಕ ದೀಪಕ್ ಪೌಸ್ಕರ್ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸಂಪುಟದಲ್ಲಿ ಲೋಕೋಪಯೋಗಿ ಸಚಿವರಾಗಿದ್ದರು. 2017ರ ಚುನಾವಣೆಯಲ್ಲಿ ಅವರು ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷ (ಎಂಜಿಪಿ)ದಿಂದ ಚುನಾವಣೆಯಲ್ಲಿ ಗೆದ್ದು ಬಂದಿದ್ದರು.
ಗೋವಾ ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬರದ ಕಾರಣ ಎಂಜಿಪಿ ಪಕ್ಷ ಸರ್ಕಾರ ರಚನೆ ಮಾಡಲು ಬಿಜೆಪಿಗೆ ಬೆಂಬಲ ನೀಡಿತ್ತು. ಇದರಿಂದಾಗಿ ಪಕ್ಷದ ಶಾಸಕ ದೀಪಕ್ ಪೌಸ್ಕರ್‌ಗೆ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಕ್ಕಿತ್ತು.

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ದೀಪಕ್ ಪೌಸ್ಕರ್ ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷ (ಎಂಜಿಪಿ) ದಿಂದಲೂ ಹೊರ ಬಂದಿದ್ದಾರೆ. ಫೆಬ್ರವರಿ 14ರಂದು ನಡೆಯಲಿರುವ ಚುನಾವಣೆಯಲ್ಲಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.
2017ರ ಚುನಾವಣೆಯಲ್ಲಿ ದೀಪಕ್ ಪೌಸ್ಕರ್ ಸ್ಯಾನ್ವೋರ್ಡೆಮ್ ಕ್ಷೇತ್ರದಲ್ಲಿ 14,575 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಬಿಜೆಪಿಯ ಗಣೇಶ್ ಚಂದ್ರ ಗಾಂವ್ಕರ್ 9,354 ಮತಗಳನ್ನು ಪಡೆದು 2ನೇ ಸ್ಥಾನಗಳಿಸಿದ್ದರು.
ಗುರುವಾರ ಬಿಜೆಪಿ ಗೋವಾ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಗಣೇಶ್ ಚಂದ್ರ ಗಾಂವ್ಕರ್ ಸ್ಯಾನ್ವೋರ್ಡೆಮ್ ಕ್ಷೇತ್ರಕ್ಕೆ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಆದರೆ ಈ ಬಾರಿ ದೀಪಕ್ ಪೌಸ್ಕರ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.












Click it and Unblock the Notifications